
India
oi-Manohara M
ಸಾಹಿತ್ಯ ಲೋಕದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಯು ಈ ಬಾರಿ ವಿವಾದದ ಸುಳಿಗೆ ಸಿಲುಕಿದೆ. 2026ರ ಸಾಲಿನ ಪ್ರಶಸ್ತಿಗೆ ತಮಿಳು ಸಾಹಿತಿ ವೈರಮುತ್ತು ಅವರು ಆಯ್ಕೆಯಾಗಿರುವುದು ಮಹಿಳಾ ಪರ ಹೋರಾಟಗಾರರು ಹಾಗೂ ಸಾಹಿತ್ಯಾಸಕ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಮೀಟೂ ಚಳವಳಿಯ ಸಂದರ್ಭದಲ್ಲಿ ಲೈಂಗಿಕ ಕಿರುಕುಳದ ಗಂಭೀರ ಆರೋಪ ಎದುರಿಸಿದ್ದ ವ್ಯಕ್ತಿಗೆ ಇಂತಹ ಗೌರವ ನೀಡುವುದು ಸಂಸ್ಥೆಯ ಮೌಲ್ಯಗಳಿಗೆ ಕುಂದು ತರುತ್ತದೆ ಎಂಬ ವಾದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಲೇಖಕ ಅರುಣ್ ಜೋಳದಕೂಡ್ಲಿಗಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
‘ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ ಎಂದು ಕರೆದಿರುವ ಅರುಣ್ ಜೋಳದಕೂಡ್ಲಿಗಿ, ತಮಿಳು ಸಾಹಿತಿ ಕವಿ ವೈರಮುತ್ತು ಅವರಿಗೆ 2026ರ ಜ್ಞಾನಪೀಠ ಘೋಷಣೆ ಆಗಿದೆ. ಕವಿಯಾಗಿ ಒಳ್ಳೆಯ ಕವಿ ಇರಬಹುದು, ಆದರೆ ಆತ ಒಳ್ಳೆಯ ಮನುಷ್ಯನಲ್ಲ. ಹೆಣ್ಣುಮಕ್ಕಳ ಬಗ್ಗೆ ಗೌರವವಿಲ್ಲದ, ಮಹಿಳೆಯರ ಜತೆ ಘನತೆಯಿಂದ ನಡೆದುಕೊಳ್ಳದ ಈತ ಒಬ್ಬ ಹೆಣ್ಣುಬಾಕ. ಈತನಕ 18 ಮಹಿಳೆಯರು ವೈರಮುತ್ತು ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡಿದ ಬಗೆಗಿನ ಆರೋಪಗಳು ವರದಿಯಾಗಿವೆ. ಈ ಬಗೆಗಿನ ಹತ್ತಾರು ವೀಡಿಯೋಗಳು ಲಭ್ಯವಿವೆ’.

ಅಪ್ಪಟ ಪಿತೃಪ್ರಧಾನ ವ್ಯವಸ್ಥೆಯ ನೀಚ ಗಂಡಸು
‘ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripada) ಅವರಂತೂ ಈತನ ನೀಚತನವನ್ನು ಬಯಲಿಗೆಳೆದು, ಆತನಿಗೆ ಶಿಕ್ಷೆ ಆಗಬೇಕೆಂದು ನಿರಂತರವಾಗಿ ಹೋರಾಡುತ್ತಿದ್ದಾರೆ. ಆದರೆ ವೈರಮುತ್ತು ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು/ರಜನಿಕಾಂತ ಅವರಂತಹ ದೊಡ್ಡ ದೊಡ್ಡ ನಟರ ಬೆಂಬಲದಿಂದ ಈ ತನಕ ಅಬ್ಬರಿಸುತ್ತಲೇ ಇದ್ದಾನೆ. ಈತ ಅಪ್ಪಟ ಪಿತೃಪ್ರಧಾನ ವ್ಯವಸ್ಥೆಯ ನೀಚ ಗಂಡಸು’.
‘ನಿನ್ನೆ ವೈರಮುತ್ತು ಅವರಿಗೆ ಜ್ಞಾನಪೀಠ ಘೋಷಣೆಯಾದ ನಂತರ ತಮಿಳುನಾಡಿನ ರಾಜಕೀಯ ನಾಯಕರು ಮತ್ತು ಚಲನಚಿತ್ರ ನಟರಿಂದ ಅಭಿನಂದನೆಗಳು ಬರುತ್ತಿದ್ದಂತೆಯೇ, ತಮಿಳಿನ ಕಲಾವಿದರು, ಸಾಹಿತಿಗಳು ವೈರಮುತ್ತು ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. 2018 ರಲ್ಲಿ ಮೀಟೂ ಚಳವಳಿಯಲ್ಲಿ ವೈರಮುತ್ತು ಬಗೆಗೆ ಬಂದ ಆರೋಪಗಳನ್ನು ಚರ್ಚಿಸಲಾಗುತ್ತಿದೆ’.
‘ಗಾಯಕಿ ಚಿನ್ಮಯಿ ಶ್ರೀಪಾದ ಅವರು ಪ್ರತಿಕ್ರಿಯಿಸಿ “ಚಿಕ್ಕ ಹುಡುಗಿಯರಿಂದ ಮೊದಲುಗೊಂಡು ವಿವಿಧ ವಯೋಮಾನದ ಅನೇಕ ಮಹಿಳೆಯರು ವೈರಮುತ್ತು ವಿರುದ್ಧದ ‘ಲೈಂಗಿಕ ಕಿರುಕುಳ’ದ ಬಗ್ಗೆ ಬಹಿರಂಗವಾಗಿ ಆರೋಪಿಸಿದ್ದಾರೆ. ಇಂತಹ ಆರೋಪ ಹೊತ್ತ ವ್ಯಕ್ತಿಯನ್ನು ‘ಜ್ಞಾನಪೀಠ’ದಂತಹ ದೇಶದ ಅತ್ಯುನ್ನತ ಸಾಹಿತ್ಯ ಗೌರವಕ್ಕೆ ಆಯ್ಕೆ ಮಾಡಿರುವುದು ವಿಶಾದಕರ. ಇದು ಜ್ಞಾನಪೀಠಕ್ಕೆ ಕಪ್ಪು ಚುಕ್ಕೆ’ ಎಂದಿದ್ದಾರೆ. 2002ರಲ್ಲಿ ಜ್ಞಾನಪೀಠ ಪಡೆದ ತಮಿಳು ಸಾಹಿತಿ ಜಯಕಾಂತನ್ ಅವರ ಮಗಳು ನನ್ನ ತಂದೆ ಬರೆಯದ ತನ್ನ ಬಗೆಗಿನ ಮೆಚ್ಚುಗೆಯ ಪತ್ರವನ್ನು ವೈರಮುತ್ತು ನಕಲಿ ಮಾಡಿದ್ದಾನೆ ಎಂದು ಆರೋಪಿಸಿದ್ದನ್ನು ನೆನಪಿಸಿಕೊಂಡಿದ್ದಾರೆ’.
ಲೇಖಕಿ ಮೀನಾ ಕಂದಸಾಮಿ ವೈರಮುತ್ತು ಅವರ ಪ್ರಶಸ್ತಿ ಆಯ್ಕೆಯ ಬಗ್ಗೆ ಟೀಕಿಸುತ್ತಾ, 2023ರ ಎಕ್ಸ್‌ನಲ್ಲಿ ಬರೆದಿದ್ದ ತಮ್ಮ ಪೋಸ್ಟ್ ಅನ್ನು ಮರು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ವೈರಮುತ್ತು ಅವರ ಉನ್ನತ ರಾಜಕಾರಣಿಗಳ ಜತೆಗಿನ ಒಡನಾಟದ ವಿರುದ್ಧ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವೈರಮುತ್ತು ಅವರನ್ನು ಅಭಿನಂದಿಸಿದ ಹಿನ್ನೆಲೆಯಲ್ಲಿ ಬರೆದ ಹಿಂದಿನ ಹೇಳಿಕೆಯಲ್ಲಿ, “ಪೆರಿಯಾರ್ ಇ.ವಿ.ರಾಮಸಾಮಿ ಅವರಿಂದ ನಾನು ಕಲಿತ ಒಂದು ವಿಷಯವೆಂದರೆ, ಎಂದಿಗೂ ಸ್ವಾಭಿಮಾನವನ್ನು ಕಳೆದುಕೊಳ್ಳದಿರುವುದು. ಲೈಂಗಿಕ ಕಿರುಕುಳದ ಗಂಭೀರ ಆರೋಪ ಹೊತ್ತವರೊಂದಿಗೆ ನೀವು ಗುರುತಿಸಿಕೊಳ್ಳುವುದು ನಿಮ್ಮ ಸಾರ್ವಜನಿಕ ಇಮೇಜ್‌ಗೆ ದಕ್ಕೆಯಾಗಿದೆ. ಅದು ನಿಮ್ಮ ಪಕ್ಷದಲ್ಲಿನ ಮಹಿಳೆಯರನ್ನು ಅವಮಾನಿಸಿದಂತಾಗಿದೆ, ದಯವಿಟ್ಟು ಇದರ ಬಗ್ಗೆ ಯೋಚಿಸಿ” ಎಂದು ಹೇಳಿದ್ದಾರೆ.
ಬರಹಗಾರ್ತಿ ಮತ್ತು ಅನುವಾದಕಿ ಸುಚಿತ್ರಾ ಅವರು ಈ ಆಯ್ಕೆ ಸ್ವಾಗತಾರ್ಹವಲ್ಲ. ಜ್ಞಾನಪೀಠಕ್ಕೆ ಬೇರೆ ಭಾಷೆಗಳಲ್ಲಿ ಘನತೆ ಇರುವವರನ್ನು ಆಯ್ಕೆ ಮಾಡಿರಬಹುದು. ಆದರೆ ತಮಿಳಿನಲ್ಲಿ ಹಾಗಾಗಿಲ್ಲ ಜಯಕಾಂತನ್ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಕಳಪೆ ಆಯ್ಕೆ. ವೈರಮುತ್ತುಗೆ ಬಂದ ಪ್ರಶಸ್ತಿಯೂ ಕೂಡ ಲಾಬಿಯಿಂದ ಬಂದಿರಬಹುದು. ಕಾರಣ ವೈರಮುತ್ತುಗಿಂತ ತಮಿಳು ಸಾಹಿತ್ಯದಲ್ಲಿ ಇನ್ನೂ ಘನವಾದ ಸಾಹಿತಿಗಳಿದ್ದಾರೆ’ ವೈರಮುತ್ತು ಒಬ್ಬ ‘Bambastic Poetaster’ ‘ಅಗ್ಗದ ಜನಪ್ರಿಯ ಕವಿ” ಎಂದು ಕರೆದಿದ್ದಾರೆ.
‘ನಿಜಕ್ಕೂ ಭಾರತದಲ್ಲಿ ಮಹಿಳಾ ಚಳವಳಿ ಜೀವಂತವಾಗಿದ್ದರೆ ಈ ವೈರಮುತ್ತುಗೆ ನೀಡಿದ ಜ್ಞಾನಪೀಠ ಪ್ರಶಸ್ತಿಯನ್ನು ಹಿಂಪಡೆಯಿರಿ ಎಂದು ಜ್ಞಾನಪೀಠ ಪ್ರಶಸ್ತಿ ನೀಡುವ ಸಂಸ್ಥೆಯ ವಿರುದ್ದ ದೇಶದಾದ್ಯಾಂತ ಪ್ರತಿರೋಧ ವ್ಯಕ್ತವಾಗಬೇಕು. ವೈರಮುತ್ತು ಕನ್ನಡದ ಹಿರಿಯ ಚಿಂತಕರಾದ ಪುರುಷೋತ್ತಮ ಬಿಳಿಮಲೆ ಅವರ ಸ್ನೇಹಿತರಂತೆ. ಕನ್ನಡದಲ್ಲಿ ಅವರ ಬಗ್ಗೆ ಈ ಬಗೆಯ ಚರ್ಚೆ ಆಗುತ್ತಿರುವ ಬಗ್ಗೆ ಗಮನಸೆಳೆಯಲಿ’ ಎಂದು ಅರುಣ್ ಜೋಳದಕೂಡ್ಲಿಗಿ ಬರೆದುಕೊಂಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/jnanpith-award-row-vairamuthu-selection-sparks-criticism-from-writers-and-activists-arun-joladakudli-447217.html. xn--babytilbehr-pgb.com does not claim ownership of this content. All rights remain with the original publisher.
