
Karnataka
oi-Pragathi S
ಬೆಂಗಳೂರು: ರಾಜ್ಯದಲ್ಲಿ ತಮ್ಮ ಮಕ್ಕಳ ಶಾಲಾ ದಾಖಲಾತಿಯ ಬಗ್ಗೆ ತೀವ್ರ ಚಿಂತೆಯಲ್ಲಿದ್ದ ಲಕ್ಷಾಂತರ ಪೋಷಕರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಒಂದನೇ ತರಗತಿಗೆ (1st Standard) ದಾಖಲಾಗಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಸರ್ಕಾರ ಕೊಂಚ ಸಡಿಲಿಕೆ ಮಾಡಿದ್ದು, ವಯೋಮಿತಿಯಲ್ಲಿ 60 ದಿನಗಳ (ಎರಡು ತಿಂಗಳು) ವಿನಾಯಿತಿಯನ್ನು ಘೋಷಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಿನ್ನೆ (ಮಾರ್ಚ್ 26) ವಿಧಾನಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪೋಷಕರ ಆತಂಕಕ್ಕೆ ಸಿಕ್ತು ಮುಕ್ತಿ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನ್ವಯ 1ನೇ ತರಗತಿಗೆ ಸೇರಲು ಮಗುವಿಗೆ 6 ವರ್ಷ ಪೂರ್ಣಗೊಂಡಿರಬೇಕು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಜೂನ್ 1ನೇ ತಾರೀಖಿನೊಳಗೆ 6 ವರ್ಷ ತುಂಬದಿದ್ದರೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಇದರಿಂದಾಗಿ, ಎಲ್ಕೆಜಿ (LKG) ಮತ್ತು ಯುಕೆಜಿ (UKG) ಮುಗಿಸಿ 1ನೇ ತರಗತಿಗೆ ಹೋಗಲು ಸಿದ್ಧರಾಗಿದ್ದ, ಆದರೆ ವಯಸ್ಸಿನಲ್ಲಿ ಕೆಲವೇ ದಿನಗಳ ಕೊರತೆ ಇದ್ದ ಮಕ್ಕಳ ಪೋಷಕರು ಕಂಗಾಲಾಗಿದ್ದರು. ಕೇವಲ 15 ದಿನ, ಒಂದು ತಿಂಗಳು ಅಥವಾ 40 ದಿನಗಳ ವಯಸ್ಸಿನ ಕೊರತೆಯಿಂದಾಗಿ ಮಕ್ಕಳು ತಮ್ಮ ಶೈಕ್ಷಣಿಕ ವರ್ಷದಲ್ಲಿ ಒಂದು ವರ್ಷವನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಬಗ್ಗೆ ಪೋಷಕರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು.

ಈ ಗಂಭೀರ ಸಮಸ್ಯೆಯನ್ನು ವಿಧಾನಸಭೆಯ ಅಧಿವೇಶನದಲ್ಲಿ ಹಲವು ಶಾಸಕರು ಪ್ರಸ್ತಾಪಿಸಿದ್ದರು. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನಿಯಮವನ್ನು ಸಡಿಲಿಸುವಂತೆ ಆಗ್ರಹಿಸಿದ್ದರು. ಸದಸ್ಯರ ಕಳಕಳಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಯುಕೆಜಿ ಪೂರ್ಣಗೊಳಿಸಿ, ಜೂನ್ 1ರ ಬದಲಾಗಿ ಆಗಸ್ಟ್ 1ರೊಳಗೆ 6 ವರ್ಷ ಪೂರೈಸುವ ಮಕ್ಕಳಿಗೂ 1ನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗುವುದು” ಎಂದು ಭರವಸೆ ನೀಡಿದರು. ಶೀಘ್ರದಲ್ಲೇ ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿಯಮ ಸಡಿಲಿಕೆಯ ಲಾಭವೇನು?
ಈ 60 ದಿನಗಳ (ಎರಡು ತಿಂಗಳ) ಗ್ರೇಸ್ ಪಿರಿಯಡ್ ಅಥವಾ ವಿನಾಯಿತಿಯಿಂದಾಗಿ, ಜೂನ್ ಮತ್ತು ಜುಲೈ ತಿಂಗಳಲ್ಲಿ ಹುಟ್ಟಿದ ಮಕ್ಕಳಿಗೂ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ. ಕೇವಲ ಕೆಲವೇ ದಿನಗಳ ಅಂತರದಲ್ಲಿ 6 ವರ್ಷ ತುಂಬಿಲ್ಲ ಎಂಬ ಕಾರಣಕ್ಕೆ 1ನೇ ತರಗತಿ ಪ್ರವೇಶ ವಂಚಿತರಾಗುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಈಗ ತಮ್ಮ ವಿದ್ಯಾಭ್ಯಾಸವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಬಹುದು. ಒಂದು ವೇಳೆ ಮಗುವಿಗೆ ಜೂನ್ 1ಕ್ಕೆ 5 ವರ್ಷ 10 ತಿಂಗಳು ಆಗಿದ್ದರೂ, 60 ದಿನಗಳ ವಿನಾಯಿತಿಯಡಿ ಆ ಮಗು 1ನೇ ತರಗತಿಗೆ ಸೇರಲು ಅರ್ಹತೆ ಪಡೆಯುತ್ತದೆ.
ಒಟ್ಟಾರೆಯಾಗಿ, ಸರ್ಕಾರದ ಈ ದಿಟ್ಟ ಮತ್ತು ವಿದ್ಯಾರ್ಥಿಪರ ನಿರ್ಧಾರದಿಂದಾಗಿ ರಾಜ್ಯಾದ್ಯಂತ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಈ ಗೊಂದಲ ಬಗೆಹರಿದಿರುವುದು ಶಾಲಾ ಆಡಳಿತ ಮಂಡಳಿಗಳಿಗೂ ದಾಖಲಾತಿ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಸಹಕಾರಿಯಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-1st-standard-admission-age-limit-relaxed-by-60-days-minister-madhu-bangarappa-update-448485.html. xn--babytilbehr-pgb.com does not claim ownership of this content. All rights remain with the original publisher.
