
Karnataka
oi-Pragathi S
ಬೆಂಗಳೂರು: ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಫ್ಲಿಪ್ಕಾರ್ಟ್ (Flipkart) ಸಂಸ್ಥೆ ಕೇವಲ 1 ರೂಪಾಯಿಗೆ 1 ಲೀಟರ್ ಹಾಲು ಮಾರಾಟ ಮಾಡಲು ಮುಂದಾಗಿರುವುದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಫ್ಲಿಪ್ಕಾರ್ಟ್ನ ಇಷ್ಟು ದೊಡ್ಡ ಮಟ್ಟದ ‘ಡಿಸ್ಕೌಂಟ್’ ನಡೆಯ ವಿರುದ್ಧ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದು, ಇದು ರೈತ ಸಮುದಾಯವನ್ನು ನಾಶಮಾಡುವ ಹುನ್ನಾರ ಎಂದು ಗುಡುಗಿದ್ದಾರೆ.
ಶನಿವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಫ್ಲಿಪ್ಕಾರ್ಟ್ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ ದೂರು ನೀಡುವುದಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವುದಾಗಿ ಎಚ್ಚರಿಸಿದ್ದಾರೆ.

ಸ್ಪರ್ಧಾ ಆಯೋಗಕ್ಕೆ ದೂರು ಮತ್ತು ಪ್ರಧಾನಿಗೆ ಪತ್ರ
“ಹಣ ಮಾಡುವ ಭರದಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆ ಕೇವಲ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದೆ. ಇದು ರೈತ ಸಮುದಾಯವನ್ನು ಧ್ವಂಸ ಮಾಡುವಂತಹ ಕೃತ್ಯ. ಈ ಕುರಿತು ನವದೆಹಲಿಯಲ್ಲಿರುವ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾಗೆ ಸೆಕ್ಷನ್ 19/1 ಎ (Section 19/1A) ಅಡಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲಾಗುತ್ತಿದೆ. ಜತೆಗೆ, ಈ ಗಂಭೀರ ವಿಚಾರವನ್ನು ಪ್ರಧಾನಿ ಮೋದಿಯವರಿಗೆ ಇ-ಮೇಲ್ ಮುಖಾಂತರ ಕಳುಹಿಸುತ್ತಿದ್ದೇನೆ,” ಎಂದು ಡಿ.ಕೆ. ಸುರೇಶ್ ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಕೂಡಲೇ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ಬಂಡವಾಳಶಾಹಿಗಳಿಂದ ಸಹಕಾರಿ ವ್ಯವಸ್ಥೆ ನಾಶದ ಯತ್ನ
ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ದುರುದ್ದೇಶದಿಂದ ನಡೆಸುತ್ತಿರುವ ಈ ಬೆಲೆ ಸಮರದಿಂದ ನೇರವಾಗಿ ರೈತರಿಗೆ ಬಲವಾದ ಹೊಡೆತ ಬೀಳುತ್ತದೆ. ಗ್ರಾಹಕರನ್ನು ಆಕರ್ಷಿಸಲು ಸಾರ್ವಜನಿಕರ ಷೇರಿನ ಹಣವಾಗಿರುವ ಸುಮಾರು 2 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಇದು ಸೂಕ್ತವಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಬೆಳೆದುಬಂದಿರುವ ಹಾಲು ಒಕ್ಕೂಟಗಳನ್ನು ಮತ್ತು ಸಹಕಾರಿ ವ್ಯವಸ್ಥೆಯನ್ನು ನಾಶ ಮಾಡುವ ಪ್ರಕ್ರಿಯೆ ಇದಾಗಿದೆ. ಬಹುರಾಷ್ಟ್ರೀಯ ಕಂಪನಿಗಳು (MNC) ರೈತರ ಹಿತವನ್ನು ಹಾಳು ಮಾಡುತ್ತಿವೆ. ಕಡಿಮೆ ದರಕ್ಕೆ ಎಷ್ಟು ದಿನ ಹಾಲನ್ನು ನೀಡುತ್ತಾರೆ ಎಂದು ಅವರು ಜಾಹೀರಾತಿನಲ್ಲಿ ಸ್ಪಷ್ಟವಾಗಿ ತಿಳಿಸಬೇಕು. ಈ ಕೂಡಲೇ ಫ್ಲಿಪ್ಕಾರ್ಟ್ ಸಂಸ್ಥೆ ಈ ಯೋಜನೆಯಿಂದ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದರು.
ಬಮೂಲ್ ಮಾರಾಟದಲ್ಲಿ ದಿಢೀರ್ ಕುಸಿತ
ಫ್ಲಿಪ್ಕಾರ್ಟ್ನ ಈ 1 ರೂಪಾಯಿ ಆಫರ್ನಿಂದಾಗಿ ಈಗಾಗಲೇ ಬರೋಬ್ಬರಿ 14.5 ಲಕ್ಷ ಲೀಟರ್ ಹಾಲು ಮಾರಾಟವಾಗಿದೆ. ಗ್ರಾಹಕರನ್ನು ಸೆಳೆಯಲು ಎಲ್ಲೆಡೆ ವ್ಯಾಪಕವಾಗಿ ಜಾಹೀರಾತುಗಳನ್ನು ನೀಡಲಾಗುತ್ತಿದೆ. ಈ ನಡೆಯಿಂದಾಗಿ ಬಮೂಲ್ ಒಕ್ಕೂಟದ ಹಾಲಿನ ಮಾರಾಟದಲ್ಲಿ ದಿನಕ್ಕೆ 40 ರಿಂದ 50 ಸಾವಿರ ಲೀಟರ್ನಷ್ಟು ಕುಸಿತ ಕಂಡಿದೆ. “ಆ ಕಂಪನಿಯವರು ಕಡಿಮೆ ದರಕ್ಕೆ ಎಷ್ಟು ದಿನ ಹಾಲು ಕೊಡುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು. ಮಾರುಕಟ್ಟೆಯಲ್ಲಿ ನಂದಿನಿ ಮಾತ್ರವಲ್ಲ, ಅನೇಕ ಕಂಪನಿಗಳಿವೆ. ಆದರೆ ವ್ಯಾಪಾರದ ಹೆಸರಿನಲ್ಲಿ ರೈತ ಸಂಕುಲಕ್ಕೆ ಬೆಂಕಿ ಇಡುವುದು ಎಷ್ಟರಮಟ್ಟಿಗೆ ಸರಿ? ದೇಶದ ಒಳಗೆ ಇರುವವರೇ ಹೀಗೆ ಮಾಡುವುದು ಎಷ್ಟು ಸರಿ?” ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಹಾಲಿನ ಗುಣಮಟ್ಟದ ಬಗ್ಗೆ ಅನುಮಾನ – ಲ್ಯಾಬ್ಗೆ ರವಾನೆ
“ರೈತರಿಂದ ಹಾಲು ಖರೀದಿಸುವಾಗ ಒಕ್ಕೂಟಗಳು ಪ್ರತಿ ಲೀಟರ್ಗೆ 38, 39, 40 ರೂಪಾಯಿ ಹಣವನ್ನು ಪಾವತಿಸುತ್ತಿವೆ. ಹೀಗಿರುವಾಗ ಫ್ಲಿಪ್ಕಾರ್ಟ್ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಕೊಡಲು ಹೇಗೆ ಸಾಧ್ಯ? ಅವರು ಯಾರಿಂದ ಹಾಲು ಖರೀದಿಸುತ್ತಿದ್ದಾರೆ? ಎಲ್ಲಿಂದ ಬರುತ್ತಿದೆ? ಎಂಬುದರ ಬಗ್ಗೆ ತನಿಖೆಯಾಗಬೇಕಿದೆ. ಒಂದುವೇಳೆ ಹಾಲಿಗೆ ಹಾಲಿನ ಪುಡಿ (Milk Powder) ಬೆರೆಸುತ್ತಿದ್ದಾರೆಯೇ ಎನ್ನುವ ಅನುಮಾನವೂ ಇದೆ. ಹೀಗಾಗಿ ಆ ಹಾಲಿನ ಸ್ಯಾಂಪಲ್ ತರಿಸಿ, ಲ್ಯಾಬ್ನಲ್ಲಿ ಗುಣಮಟ್ಟದ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಡಿ.ಕೆ. ಸುರೇಶ್ ಮಾಹಿತಿ ನೀಡಿದರು.
ರೈತರು ಯಾರಿಗೆ ಹಾಲು ಮಾರಾಟ ಮಾಡುತ್ತಾರೆ ಎಂಬುದು ನಿಖರವಾಗಿ ತಿಳಿಯುವುದಿಲ್ಲ. ಬಲ್ಕ್ ಮಿಲ್ಕ್ ಉತ್ಪಾದಕರಿಂದಲೂ ಅವರು ಖರೀದಿಸುತ್ತಿರಬಹುದು. ಆದರೆ, ಸಹಕಾರಿ ಸಂಘಗಳು ಒಮ್ಮೆ ಮುಗ್ಗರಿಸಿದರೆ ಅದರ ನೇರ ಹಾಗೂ ಭೀಕರ ಪರಿಣಾಮ ರೈತರ ಮೇಲೆಯೇ ಬೀಳುತ್ತದೆ. ಆದ್ದರಿಂದ ಮಾಧ್ಯಮಗಳು ಈ ವಿಚಾರವಾಗಿ ರಾಷ್ಟ್ರದ ಗಮನ ಸೆಳೆಯಬೇಕು. ರೈತರ ಪರವಾಗಿ ನಿಲ್ಲಬೇಕು ಹಾಗೂ ರೈತರು ಹೋರಾಟಕ್ಕೆ ಇಳಿಯಬೇಕು ಎಂದು ಬಮೂಲ್ ಅಧ್ಯಕ್ಷರು ಕರೆ ನೀಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bamul-president-dk-suresh-slams-flipkart-over-1-rupee-milk-offer-files-complaint-with-cci-today-447131.html. xn--babytilbehr-pgb.com does not claim ownership of this content. All rights remain with the original publisher.
