94ನೇ ವಯಸ್ಸಿನಲ್ಲೂ ಸಿಂಗೀತಂ ಶ್ರೀನಿವಾಸ್ ರಾವ್‌ ನಿರ್ದೇಶನ; ಸಿನಿಮಾ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ: ಚೇತನ್‌ ನಾಡಿಗೇರ್‌ | 94-Year-Old Director Singeetam Srinivasa Rao Begins New Film Inspires Generations Chetan Nadiger

Entertainment

oi-Manohara M

ಭಾರತೀಯ ಚಿತ್ರರಂಗದ ಅಪರೂಪದ ಪ್ರತಿಭೆ ಸಿಂಗೀತಂ ಶ್ರೀನಿವಾಸ ರಾವ್ ತಮ್ಮ 94ನೇ ವಯಸ್ಸಿನಲ್ಲೂ ಹೊಸ ಚಿತ್ರ ನಿರ್ದೇಶನಕ್ಕೆ ಕೈ ಹಾಕಿರುವುದು ಸಿನಿಪ್ರೇಮಿಗಳಿಗೆ ಅಚ್ಚರಿಯ ಜೊತೆಗೆ ಅಪಾರ ಸಂತೋಷವನ್ನುಂಟುಮಾಡಿದೆ. ಏಳು ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ಸೃಜನಾತ್ಮಕ ಪಯಣ ನಡೆಸಿದ ಈ ಲೆಜೆಂಡರಿ ನಿರ್ದೇಶಕರ ಸಿನಿಮಾ ಪ್ರೀತಿ ಮತ್ತು ಜೀವನೋತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸಿನಿಮಾ ಪತ್ರಕರ್ತ ಚೇತನ್ ನಾಡಿಗೇರ್. ಅವರ ಬರಹ ಇಲ್ಲಿದೆ.

‘ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್‍ ಹೊಸ ದಾಖಲೆ ಮಾಡುವುದಕ್ಕೆ ಹೊರಟಿದ್ದಾರೆ. ತಮ್ಮ 94ನೇ ವಯಸ್ಸಿನಲ್ಲಿ ಹೊಸ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇದಕ್ಕೂ ಮೊದಲು ಭಾರತೀಯ ಚಿತ್ರರಂಗದ ಅತ್ಯಂತ ಹಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಕನ್ನಡದ ಎಸ್‍.ಕೆ.ಭಗವಾನ್‍ (ದೊರೈ-ಭಗವಾನ್‍ ಜೋಡಿಯ) ಪಾತ್ರರಾಗಿದ್ದರು’.

Singeetam Srinivasa Rao

‘ಅವರು ತಮ್ಮ 86ನೇ ವಯಸ್ಸಿನಲ್ಲಿ ‘ಆಡುವ ಗೊಂಬೆ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಆ ದಾಖಲೆಯನ್ನು ಮುರಿದವರು ಶ್ಯಾಮ್‍ ಬೆನೆಗಲ್‍. ಅವರು ತಮ್ಮ 89ನೇ ವಯಸ್ಸಿನಲ್ಲಿ ‘ಮುಜೀಬ್‍ – ದಿ ಮೇಕಿಂಗ್‍ ಆಫ್‍ ಎ ನೇಷನ್‍’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಈ ದಾಖಲೆಯನ್ನು ಸಿಂಗೀತಂ ಶ್ರೀನಿವಾಸ ರಾವ್‍ ಮುರಿಯುವುದಕ್ಕೆ ಹೊರಟಿದ್ದಾರೆ’.

‘ಸಿಂಗೀತಂ ತಮ್ಮ 94ನೇ ವಯಸ್ಸಿನಲ್ಲಿ ತಮ್ಮ 61ನೇ ಚಿತ್ರವನ್ನು ನಿರ್ದೇಶಿಸುವುದಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ವೈಜಯಂತಿ ಮೂವೀಸ್‍ ಬ್ಯಾನರ್‍ ಅಡಿ ನಾಗ್‍ ಅಶ್ವಿನ್‍ ನಿರ್ಮಿಸುತ್ತಿದ್ದಾರೆ. ನಾಗ್‍ ಅಶ್ವಿನ್‍ ಇದಕ್ಕೂ ಮೊದಲು ಪ್ರಭಾಸ್‍, ದೀಪಿಕಾ ಪಡುಕೋಣೆ ಅಭಿನಯದ ‘ಕಲ್ಕಿ 2898 AD’ ಚಿತ್ರವನ್ನು ನಿರ್ದೇಶಿಸಿದವರು. ಆ ಚಿತ್ರಕ್ಕೆ ಸಿಂಗೀತಂ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು. ಈಗ ಸಿಂಗೀತಂ ನಿರ್ದೇಶನದಲ್ಲಿ ಚಿತ್ರ ನಿರ್ಮಿಸುವುದಕ್ಕೆ ಹೊರಟಿದ್ದಾರೆ ನಾಗ್‍ ಅಶ್ವಿನ್‍. ಈಗಾಗಲೇ ಚಿತ್ರದ ಕೆಲಸಗಳು ಪ್ರಾರಂಭವಾಗಿವೆ. ಹೆಸರು? ಯಾರೆಲ್ಲಾ ನಟಿಸುತ್ತಾರೆ? ಯಾವಾಗ ಬಿಡುಗಡೆ? ಇವೆಲ್ಲಾ ಇನ್ನಷ್ಟೇ ಗೊತ್ತಾಗಬೇಕಿದೆ’.

‘ತಮ್ಮ 94ನೇ ವಯಸ್ಸಿನಲ್ಲಿ ಚಿತ್ರ ನಿರ್ದೇಶಿಸುವ ಮೂಲಕ ಭಾರತದ ಅತ್ಯಂತ ಹಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆ ಮತ್ತು ಖ್ಯಾತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವಿಶ್ವ ಸಿನಿಮಾದಲ್ಲಿ ಇಂಥ ಎರಡು ಪ್ರಯತ್ನಗಳಾಗಿವೆ. ಪೋರ್ಚುಗಲ್‍ ನಿರ್ದೇಶಕ ಮಾನೊಯೆಲ್‍ ಡಿ ಆಲಿವೇರಾ ತಮ್ಮ 104ನೇ ವಯಸ್ಸಿನಲ್ಲಿ ‘ಗೆಬೋ ಆ್ಯಂಡ್‍ ದಿ ಶ್ಯಾಡೋ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಮೂಲಕ ಜಗತ್ತಿನ ಅತ್ಯಂತ ಹಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಮೂಕಿ ಯುಗದಿಂದ ಡಿಜಿಟಲ್‍ ಯುಗದವರೆಗೂ ಚಿತ್ರರಂಗದ ಹಲವು ಆಯಾಮಗಳನ್ನು ನೋಡಿದ್ದ ಆಲಿವೇರಾ, ತಮ್ಮ 104ನೇ ವಯಸ್ಸಿನಲ್ಲಿ ಪೂರ್ಣಪ್ರಮಾಣದ ಚಿತ್ರ ಮಾಡಿದ್ದರು. ಅದಾದ ಮೇಲೆ ಅವರು ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳನ್ನು ಮಾಡಿ, ತಮ್ಮ 106ನೇ ವಯಸ್ಸಿನಲ್ಲಿ ನಿಧನರಾಗಿದ್ದರು’.

‘ಅವರ ನಂತರ ಅತ್ಯಂತ ಹಿರಿಯ ನಿರ್ದೇಶಕರೆಂದನಿಸಿಕೊಂಡಿದ್ದು ಕ್ಲಿಂಟ್‍ ಈಸ್ಟ್ವುಡ್‍. ಅವರು ತಮ್ಮ 94ನೇ ವಯಸ್ಸಿನಲ್ಲಿ ‘ಜ್ಯೂರರ್‍ #2’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಆ ದಾಖಲೆಯನ್ನು ಸಿಂಗೀತಂ ಮುರಿಯುವುದರ ಜೊತೆಗೆ, ಹೊಸ ದಾಖಲೆ ಬರೆಯುವುದಕ್ಕೆ ಹೊರಟಿದ್ದಾರೆ.

ಸಿಂಗೀತಂ ಶ್ರೀನಿವಾಸ ರಾವ್‍ ಅವರದ್ದು ಚಿತ್ರರಂಗದಲ್ಲಿ ಸುಧೀರ್ಘ ಪಯಣ. ಏಳು ದಶಕಗಳಿಗೂ ಹೆಚ್ಚು ಸಮಯ ಚಿತ್ರರಂಗದ ಹಲವು ಮಜಲುಗಳನ್ನು ಕಂಡವರು ಅವರು. ಹಾಗೆ ನೋಡಿದರೆ, ಅವರು ಚಿತ್ರ ನಿರ್ದೇಶಕರಾಗಿದ್ದು ಬಹಳ ತಡವಾಗಿ. 25ಕ್ಕೆ ನಿರ್ದೇಶಕರಾಗಿ, 30ಕ್ಕೆ ಮಾಯವಾಗುವ ಇಂದಿನ ಹಲವು ನಿರ್ದೇಶಕರಿಗೆ ಹೋಲಿಸಿದರೆ, ಸಿಂಗೀತಂ ನಿರ್ದೇಶಕರಾಗಿದ್ದು ತಮ್ಮ 41ನೇ ವಯಸ್ಸಿನಲ್ಲಿ. 1972ರಲ್ಲಿ ಬಿಡುಗಡೆಯಾದ ‘ನೀತಿ ನಿಜಾಯತಿ’ ಎಂಬ ಚಿತ್ರದ ಮೂಲಕ ಅವರು ನಿರ್ದೆಶಕರಾದರು. ಆದರೆ, ಅದಕ್ಕೂ ಮೊದಲು ಅವರು 15 ವರ್ಷಗಳ ಕಾಲ ಸಹಾಯಕ, ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು’.

‘ಸಿಂಗೀತಂ ಕೆಲಸ ಮಾಡಿದ ಮೊದಲ ಚಿತ್ರವೆಂದರೆ, ಅದು ತೆಲುಗಿನ ‘ಮಾಯಾಬಜರ್‍’. ಈ ಚಿತ್ರಕ್ಕೆ ಅವರು ನಿರ್ದೇಶಕ ಕೆ.ವಿ.ರೆಡ್ಡಿ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಗೆ ಶುರುವಾದ ಅವರ ಪಯಣ, ಇಲ್ಲಿಯವರೆಗೂ ನಿರಂತರವಾಗಿ ಮುಂದುವರೆದಿದೆ. ಬರೀ ವಯಸ್ಸು ಅಥವಾ ಚಿತ್ರರಂಗದಲ್ಲಿ ಸುಧೀರ್ಘ ಸಮಯ ಕೆಲಸ ಮಾಡಿದರು ಎಂಬ ಕಾರಣಕ್ಕೆ ಸಿಂಗೀತಂ ಮುಖ್ಯವಾಗುವುದಿಲ್ಲ. ಬಹುಶಃ ಅವರಷ್ಟು versatile ಆದ ನಿರ್ದೇಶಕರನ್ನು ಭಾರತೀಯ ಚಿತ್ರರಂಗ ನೋಡಿಲ್ಲ’.

‘ನಟಿ ಸುಧಾ ಚಂದ್ರನ್‍ ಅವರ ಜೀವನವನ್ನಾಧರಿಸಿ ‘ಮಯೂರಿ’ ಚಿತ್ರ ಮಾಡಿದ್ದರು. ಈ ಚಿತ್ರವು ದಾಖಲೆಯ 14 ನಂದಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಸಿಂಗೀತಂ ಮಾಡಿದ ಪ್ರಯೋಗಗಳೇ ಹಾಗಿತ್ತು. ಮೊದಲ ಒಂದಿಷ್ಟು ವರ್ಷಗಳ ಕಾಲ ಸಾಮಾಜಿಕ ಕಳಕಳಿ ಬೀರುವ, ಕೌಟುಂಬಿಕ ಮತ್ತು ಮನರಂಜನಾತ್ಮಕ ಚಿತ್ರಗಳನ್ನು ಮಾಡುತ್ತಿದ್ದ ಅವರು, ಒಂದು ಹಂತದಲ್ಲಿ ಬೆರಗಾಗುವಷ್ಟು ಪ್ರಯೋಗಗಳನ್ನು ಮಾಡಿದರು. ಮಾತು ಜೋರಾಗಿದ್ದ ಕಾಲದಲ್ಲಿ ಮಾತಿಲ್ಲದ ‘ಪುಷ್ಪಕ ವಿಮಾನ’ ಮಾಡಿದರು. ‘ಅಪೂರ್ವ ಸಹೋದರಗಳ್‍’ ಚಿತ್ರದಲ್ಲಿ ಕಮಲ್‍ ಹಾಸನ್‍ ಅವರನ್ನು ಕುಬ್ಜನಾಗಿ ತೋರಿಸಿದರೆ, ‘ಮೈಕಲ್‍ ಮದನ್‍ ಕಾಮರಾಜನ್‍’ ಚಿತ್ರದಲ್ಲಿ ಕಮಲ್‍ ಹಾಸನ್‍ರ ನಾಲ್ಕು ಅವತಾರಗಳನ್ನು ಬಿಚ್ಚಿಟ್ಟರು. ‘ಆದಿತ್ಯ 369′, ಭಾರತದ ಮೊದಲ ಟೈಂ ಮೆಷೀನ್‍ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’.

‘ಭೈರವ ದ್ವೀಪಂ’, 50ರ ದಶಕದ ‘ಪಾತಾಳ ಭೈರವಿ’ಯಂತ ಫ್ಯಾಂಟಸಿ ಚಿತ್ರಗಳನ್ನು ನೆನಪಿಸುವಂತಹ ಚಿತ್ರವಾಗಿತ್ತು. ‘ಶ್ರೀ ಕೃಷ್ಣಾರ್ಜುನ ವಿಜಯಂ’ ಚಿತ್ರದಲ್ಲಿ ಮಹಾಭಾರತದ ಕಥೆಯೊಂದನ್ನು ಅವರು ಹೇಳಿದ್ದರು. ‘ಲಿಟಲ್‍ ಜಾನ್‍’ ಎಂಬ ಫ‍್ಯಾಂಟಸಿ ಚಿತ್ರವನ್ನು ಏಕಕಾಲದಲ್ಲಿ ತಮಿಳು ಮತ್ತು ಇಂಗ್ಲೀಷ್‍ ಭಾಷೆಗಳಲ್ಲಿ ನಿರ್ದೇಶಿಸಿದರು. ಅನಿಮೇಷನ್‍ ಅಂಬೆಗಾಲಿಡುತ್ತಿದ್ದ ಸಮಯದಲ್ಲಿ ‘ಸನ್‍ ಆಫ್‍ ಅಲಾದಿನ್‍’ ಮತ್ತು ‘ಘಟೋತ್ಕಚ್‍’ ಎಂಬ ಪೂರ್ಣಪ್ರಮಾಣದ ಅನಿಮೇಟೆಡ್‍ ಚಿತ್ರಗಳನ್ನು ನಿರ್ದೇಶಿಸಿದರು. ‘ವೆಲ್‍ಕಮ್‍ ಒಬಾಮಾ’ ಎಂಬ ಚಿತ್ರದಲ್ಲಿ ಬಾಡಿಗೆ ತಾಯ್ತನದ ಬಗ್ಗೆ ಹೇಳಿದರು. ಇದಲ್ಲದೆ, ಇನ್ನೂ ತಮ್ಮ ಚಿತ್ರಗಳ ಮೂಲಕ ಹಲವು ಪ್ರಯೋಗಗಳನ್ನು ಸಿಂಗೀತಂ ಮಾಡಿದ್ದಾರೆ. ಅವರು ಮಾಡಿದ ಚಿತ್ರಗಳು ಮತ್ತು ಪ್ರಯೋಗಗಳ ಬಗ್ಗೆ ಬರೆಯುತ್ತಾ ಹೋದರೆ, ಅದೇ ಪ್ರತ್ಯೇಕ ಲೇಖನವಾಗುತ್ತದೆ. ಇಲ್ಲಿ ಪ್ರಾತಿನಿಧಿಕವಾಗಿ ಕೆಲವು ಚಿತ್ರಗಳನ್ನು ಮಾತ್ರ ಹೆಸರಿಸಲಾಗಿದೆ ಅಷ್ಟೇ’.

Singeetam Srinivasa Rao

‘ಭಾರತದಲ್ಲಿ ಹೊಸ ಅಲೆಯ ನಿರ್ದೇಶಕರ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಸತ್ಯಜಿತ್‍ ರೇ, ಶ್ಯಾಮ್‍ ಬೆನಗಲ್‍, ಮೃಣಾಲ್‍ ಸೇನ್‍, ಋತ್ವಿಕ್‍ ಘಟಕ್‍, ಗಿರೀಶ್‍ ಕಾಸರವಳ್ಳಿ, ಅಡೂರು ಗೋಪಾಲಕೃಷ್ಣನ್‍, ಬುದ್ಧದೇಬ್‍ ದಾಸ್‍ಗುಪ್ತ ಸೇರಿದಂತೆ ಹಲವು ನಿರ್ದೇಶಕರ ಕೆಲಸಗಳ ಬಗ್ಗೆ ಸಾಕಷ್ಟು ಕಾರ್ಯಾಗಾರ, ವಿಚಾರಸಂಕಿರಣ, ಮಾಸ್ಟರ್‍ ಕ್ಲಾಸ್‍ಗಳು ಆಗಿವೆ. ಅಲ್ಲಿ ಅವರ ಕಾರ್ಯವೈಖರಿ, ತಂತ್ರಗಾರಿಕೆ, ಕಥೆ ಹೇಳುವ ಶೈಲಿ, ಆಲೋಚನಾ ಕ್ರಮ ಮುಂತಾದ ಹಲವು ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ಮತ್ತು ಅಧ್ಯಯನಗಳಾಗಿವೆ. ಆದರೆ, ಕಮರ್ಷಿಯಲ್‍ ನಿರ್ದೇಶಕರ ಕುರಿತಾಗಿ ಇದೇ ವಿಷಯ ಹೇಳುವಂತಿಲ್ಲ. ಹಲವಾರು ಕಮರ್ಷಿಯಲ್ ಅಥವಾ ಮನರಂಜನಾತ್ಮಕ ಚಿತ್ರಗಳ ನಿರ್ದೇಶಕರ ಕೆಲಸವನ್ನು, ಅವರು ಮಾಡಿದ ಪ್ರಯೋಗಗಳ ಬಗ್ಗೆ ಚರ್ಚೆ ಆಗಿದ್ದು ಕಡಿಮೆಯೇ. ಅಂತಹವರಲ್ಲಿ ಸಿಂಗೀತಂ ಪ್ರಮುಖರು’.

‘ಸಿಂಗೀತಂ ನಿರ್ದೇಶನದ ಹಲವು ಚಿತ್ರಗಳ ಹಿಂದೆ ಹಲವು ಕಥೆಗಳಿವೆ. ಕೆಲವನ್ನು ಅವರೇ ಹೇಳಿಕೊಂಡಿದ್ದಾರೆ. ಇನ್ನೂ ಕೆಲವು ಚರ್ಚೆಯೇ ಆಗಿಲ್ಲ. ‘ಅಪೂರ್ವ ಸಹೋದರಗಳ್‍’ ಚಿತ್ರದಲ್ಲಿ ಕಮಲ್‍ ಹಾಸನ್‍ ಅವರನ್ನು ಕುಬ್ಜನನ್ನಾಗಿ ತೋರಿಸಿದ್ದು ಹೇಗೆ? ಹಾಗೆ ತೋರಿಸಿದ ಹಿಂದಿನ ತಂತ್ರಗಳ ಬಗ್ಗೆ ಹೆಚ್ಚು ವಿಷಯಗಳು ಬೆಳಕಿಗೆ ಬಂದಿಲ್ಲ. ಅದೇ ರೀತಿ, ‘ಮೈಕಲ್‍ ಮದನ್‍ ಕಾಮರಾಜನ್’ ಚಿತ್ರವು ಕೇವಲ ಒಂದು slapstick comedy ಎಂದು ಕಡೆಗಣಿಸುವಂತಿಲ್ಲ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಾಲ್ವರು ಕಮಲ್‍ ಹಾಸನ್‍ರನ್ನು ನೋಡಬಹುದು. ಒಬ್ಬರು ಒರಿಜಿನಲ್ ಆದರೆ, ಮೂವರು dupeಗಳು. ಈ ನಾಲ್ವರನ್ನು ಇಟ್ಟುಕೊಂಡು, ದೃಶ್ಯ ಕಟ್ಟಿದ ರೀತಿ ಇದೆಯೆಲ್ಲಾ, ಪ್ರತಿಯೊಬ್ಬ ಸಿನಿಮಾ ವಿದ್ಯಾರ್ಥಿಯೂ ಅಭ್ಯಸಿಸಬೇಕು. ಈ ದೃಶ್ಯ ಚಾರ್ಲಿ ಚಾಪ್ಲಿನ್‍ರ ‘ಗೋಲ್ಡ್ ರಶ್‍’ ಚಿತ್ರದಿಂದ ಸ್ಫೂರ್ತಿಪಡೆಯಲಾಗಿದೆಯಾದರೂ, ಅದನ್ನು ಸೃಷ್ಟಿಸುವುದು ಸುಲಭವಲ್ಲ. ಒಳಾಂಗಣ, ಹೊರಾಂಗಣವನ್ನು ಮ್ಯಾಚ್‍ ಮಾಡುತ್ತಾ, ನಾಲ್ವರು ಕಮಲ್‍ಗಳ shot divide ಮಾಡುತ್ತಾ, ನಗಿಸುತ್ತಲೇ ಕಥೆ ಹೇಳುವುದು ಸುಲಭವಲ್ಲ. ಇದು ಒಂದು ಉದಾಹರಣೆ ಅಷ್ಟೇ. ಇಂತಹ ಹಲವು ಉದಾಹರಣೆಗಳನ್ನು ಸಿಂಗೀತಂ ಚಿತ್ರಗಳಿಂದ ಹೆಕ್ಕಬಹುದು. ಆದರೆ, ಯಾಕೋ ಸಿಂಗೀತಂ ಚಿತ್ರಗಳ ಕುರಿತು ಹೆಚ್ಚು ಚರ್ಚೆಯಾಗಿಲ್ಲ’.

‘ಹೀಗಿರುವಾಗಲೇ, 2024ರಲ್ಲಿ ಚೆನ್ನೈನಲ್ಲಿ ‘ಅಪೂರ್ವ ಸಿಂಗೀತಂ’ ಎಂಬ ಚಿತ್ರೋತ್ಸವವನ್ನು ಕಮಲ್‍ ಹಾಸನ್‍, ಚೆನ್ನೈನಲ್ಲಿ ಆಯೋಜಿಸಿದ್ದರು. ಈ ಚಿತ್ರೋತ್ಸವದಲ್ಲಿ ಸಿಂಗೀತಂ ಶ್ರೀನಿವಾಸ ರಾವ್‍ ನಿರ್ದೇಶನದ, ಕಮಲ್‍ ಹಾಸನ್‍ ಅಭಿನಯದ ನಾಲ್ಕು ಪ್ರಮುಖ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಆ ಚಿತ್ರೋತ್ಸವದಲ್ಲಿ ‘ರಾಜ ಪಾರ್ವೈ’, ‘ಪೇಸುಂ ಪಾಡಂ’ (ಪುಷ್ಪಕ ವಿಮಾನ), ‘ಅಪೂರ್ವ ಸಹೋದರಗಳ್‍’ ಮತ್ತು ‘ಮುಂಬೈ ಎಕ್ಸ್ಪ್ರೆಸ್‍’ ಚಿತ್ರಗಳನ್ನು ಪ್ರದರ್ಶಿಸಲಾಯಿತು ಮತ್ತು ಆ ಚಿತ್ರಗಳು ಹೇಗೆ ರೂಪುಗೊಂಡವು ಎಂಬುದನ್ನು ಸಿಂಗೀತಂ, ಕಮಲ್‍ ಹಾಸನ್‍ ಮತ್ತು ಆ ಚಿತ್ರಗಳಲ್ಲಿ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಿಕ್ಕಂತೆ, ಸಿಂಗೀತಂ ಕೆಲಸ ಮತ್ತು ತಂತ್ರಗಾರಿಕೆಯ ಬಗ್ಗೆ ಚರ್ಚೆಯಾಗದ ಹಲವು ವಿಷಯಗಳಿವೆ’.

‘ಇನ್ನು, ಕನ್ನಡ ಚಿತ್ರರಂಗ ಮತ್ತು ಸಿಂಗೀತಂ ಒಡನಾಟ ದೊಡ್ಡದಿದೆ. ಕನ್ನಡ ಚಿತ್ರರಂಗದೊಂದಿಗಿನ ಒಡನಾಟ ಶುರುವಾಗಿದ್ದು, 1970ರಲ್ಲಿ ಬಿಡುಗಡೆಯಾದ ‘ಸಂಸ್ಕಾರ’ ಚಿತ್ರದ ಮೂಲಕ. ಈ ಚಿತ್ರಕ್ಕೆ ಅವರು ಕಾರ್ಯಾಕಾರಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ನಂತರ 80ರ ದಶಕದಲ್ಲಿ ಡಾ. ರಾಜಕುಮಾರ್‍ ಅಭಿನಯದ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’, ‘ಜ್ವಾಲಾಮುಖಿ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಶ್ರುತಿ ಸೇರಿದಾಗ’ ಮತ್ತು ‘ದೇವತಾ ಮನುಷ್ಯ’ ಚಿತ್ರಗಳನ್ನು ನಿರ್ದೇಶಿಸಿದರು. ಬರೀ ರಾಜಕುಮಾರ್ ಅಷ್ಟೇ ಅಲ್ಲ, ಅವರ ಮಕ್ಕಳನ್ನೂ ಚಿತ್ರರಂಗಕ್ಕೆ ಪರಿಚಯಿಸಿದರು. ‘ಆನಂದ್‍’ ಮೂಲಕ ಶಿವರಾಜಕುಮಾರ್‍ ಮತ್ತು ‘ಚಿರಂಜೀವಿ ಸುಧಾಕರ್‍’ ಮೂಲಕ ರಾಘವೇಂದ್ರ ರಾಜಕುಮಾರ್‍ ಅವರನ್ನು ಹೀರೋಗಳಾಗಿ ಮಾಡಿದರು’.

‘ಇದಲ್ಲದೆ, ‘ಚಲಿಸುವ ಮೋಡಗಳು’ ಮತ್ತು ‘ಎರಡು ನಕ್ಷತ್ರಗಳು’ ಚಿತ್ರಗಳಲ್ಲಿ ಪುನೀತ್‍ ರಾಜಕುಮಾರ್‍ ಅಭಿನಯಿಸಿದ್ದರು. ಈ ಮೂಲಕ ಡಾ. ರಾಜಕುಮಾರ್‍ ಮತ್ತು ಅವರ ಮೂವರೂ ಮಕ್ಕಳನ್ನು ನಿರ್ದೇಶಿಸಿದ ಮೊದಲ ನಿರ್ದೇಶಕರಾದರು. ಇದಲ್ಲದೆ ಅವರು ಕನ್ನಡದಲ್ಲಿ’ಪುಷ್ಪಕ ವಿಮಾನ’, ‘ಕ್ಷೀರ ಸಾಗರ’, ‘ಟುವ್ವಿ ಟುವ್ವಿ ಟುವ್ವಿ’ ಸೇರಿದಂತೆ ಕೆಲವು ಚಿತ್ರಗಳನ್ನು ಮಾಡಿದರು. ಜಗ್ಗೇಶ್‍ ಅಭಿನಯದ ಮತ್ತು ನಿರ್ಮಾಣದ ‘ಮೇಕಪ್‍’, ಕನ್ನಡದಲ್ಲಿ ಸಿಂಗೀತಂ ನಿರ್ದೇಶಿಸಿದ ಕೊನೆಯ ಚಿತ್ರವಾಗಿದೆ’.

ಕ’ನ್ನಡದಲ್ಲಿ ಸಿಂಗೀತಂ ಚಿತ್ರ ನಿರ್ದೇಶನ ಮಾಡಿ ಕೆಲವು ವರ್ಷಗಳಾದರೂ, ನಿರ್ದೇಶನದಿಂದ ದೂರವಾಗಿಲ್ಲ. ಆಗಾಗ ಚಿತ್ರ ಮಾಡುತ್ತಲೇ ಇದ್ದಾರೆ. ಇದೀಗ 94ರ ವಯಸ್ಸಿನಲ್ಲಿ ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ. ಈ ಚಿತ್ರ ಹೇಗಿರಬಹುದು? ಏನಾಗಬಹುದು? ಎಂಬುದೆಲ್ಲಾ ನಂತರದ ಮಾತು. ಆದರೆ, ಅವರ ಜೀವನೋತ್ಸಾಹ ಮತ್ತು ಸಿನಿಮಾ ಪ್ರೀತಿಗೆ ಮಾತ್ರ ಬೆಲೆ ಕಟ್ಟಲು ಸಾಧ್ಯವೇ ಇಲ್ಲ’ ಎಂದು ಬರೆದುಕೊಂಡಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/94-year-old-director-singeetam-srinivasa-rao-begins-new-film-inspires-generations-chetan-nadiger-443665.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo