Rishab Shetty: ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪ: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಿಷಬ್‌ ಶೆಟ್ಟಿ ದಂಪತಿ | Rishab Shetty Celebrates Wedding Anniversary with Wife Pragathi Shetty Emotional Post Goes Viral

Entertainment

oi-Manohara M

“ಕಾಂತಾರ” ಚಿತ್ರದ ಮೂಲಕ ದೇಶವ್ಯಾಪಿ ಹೆಸರು ಮಾಡಿರುವ ಸ್ಯಾಂಡಲ್‌ವುಡ್ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ವಿಶೇಷ ದಿನದ ಅಂಗವಾಗಿ, ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣದಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳ ಜೊತೆಗೆ ರಿಷಬ್ ಶೆಟ್ಟಿ ಬರೆದಿರುವ ಭಾವನಾತ್ಮಕ ಬರಹ ಇದೀಗ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

ಸೌಭಾಗ್ಯ ದೇವತೆಗೆ ಶುಭಾಶಯ

“ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸ-ವಿರಸಗಳಿವೆ… ಎಲ್ಲವನ್ನು ತೂಗುವ ಸಮರಸವಿದೆ. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ” ಎಂದು ತಮ್ಮ ದಾಂಪತ್ಯ ಜೀವನದ ಸೌಂದರ್ಯವನ್ನು ವರ್ಣಿಸಿದ್ದಾರೆ. “ಆ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ. ನನ್ನ ಸತಿಯಾಗಿ, ಸಾಥಿಯಾಗಿ, ಸೌಭಾಗ್ಯ ದೇವತೆಯಾಗಿ, ಹಿಡಿಯಷ್ಟಿದ್ದ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಪತ್ನಿಗೆ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Rishab Shetty

“ನನ್ನನ್ನು ಮುನ್ನಡೆಸುವ ಶಕ್ತಿಗೆ, ನಾನು ಅವಲಂಬಿಸಿರುವ ಶಕ್ತಿಗೆ, ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಮಹಾಶಕ್ತಿ. ನೀವು ನನ್ನ ಕೈ ಹಿಡಿದಾಗ ಜೀವನವು ಉತ್ತಮವಾಗಿರುತ್ತದೆ” ಎಂದು ಬರೆದು ಪ್ರಗತಿ ಶೆಟ್ಟಿ ತಮ್ಮ ಜೀವನದ ಶಕ್ತಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ರಿಷಬ್ ಶೆಟ್ಟಿ ಅವರ ಈ ಹೃದಯಸ್ಪರ್ಶಿ ಬರಹ ಮತ್ತು ದಾಂಪತ್ಯದ ಆತ್ಮೀಯ ಕ್ಷಣಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮತ್ತು ಸಿನಿ ಗಣ್ಯರು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. “ರಿಯಲ್ ಲೈಫ್ ಕಾಂತಾರ” ಜೋಡಿ, “ಪವರ್ ಕಪಲ್” ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾ, ಅವರ ದಾಂಪತ್ಯ ಜೀವನಕ್ಕೆ ಹರಸುತ್ತಿದ್ದಾರೆ.

ರಿಷಬ್‌ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್‌ ಶೆಟ್ಟಿ. ಇವರು ಉಡುಪಿ ಜಿಲ್ಲೆಯ ಕುಂದಾಪುರದವರಾಗಿದ್ದು, ತಂದೆ ಭಾಸ್ಕರ್ ಶೆಟ್ಟಿ ಮತ್ತು ತಾಯಿ ರತ್ನಾವತಿ ಶೆಟ್ಟಿ ಅವರ ಕುಟುಂಬದಿಂದ ಬಂದವರು. 2017ರಲ್ಲಿ ಪ್ರಗತಿ ಶೆಟ್ಟಿ ಅವರೊಂದಿಗೆ ವಿವಾಹವಾದ ಇವರಿಗೆ, ರನ್ವಿತ್‌ (ಮಗ) ಮತ್ತು ರಾಧ್ಯಾ (ಮಗಳು) ಎಂಬ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಪ್ರಗತಿ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ಕಾಂತಾರ ಚಾಪ್ಟರ್‌-1 ಸಿನಿಮಾಗೂ ಪ್ರಗತಿ ಅವರೇ ಕಾಸ್ಟ್ಯೂಮ್‌ ಡಿಸೈನ್‌ ಆಗಿ ತಮ್ಮ ಕೈಚಳಕ ತೋರಿದ್ದರು.

ರಿಷಬ್‌ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ ಕಾಂತಾರ: ಚಾಪ್ಟರ್ 1 ಕಳೆದ ಅಕ್ಟೋಬರ್ 2ರಂದು ಬಿಡುಗಡೆಯಾಗಿತ್ತು. ಇದಾದ ಬಳಿಕ, ಅವರು ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಚಿತ್ರದಲ್ಲಿ ನಟಿಸಲಿದ್ದು, ಈ ಚಿತ್ರಕ್ಕೆ ಆರು ತಿಂಗಳ ಡೇಟ್ಸ್ ನೀಡಿದ್ದಾರೆ. ಇದರ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನ ಆಧಾರಿತ 2027ರಲ್ಲಿ ಬಿಡುಗಡೆಯಾಗಲಿರುವ ಬಾಲಿವುಡ್ ಚಿತ್ರದಲ್ಲೂ ಅವರು ನಟಿಸಲಿದ್ದಾರೆ ಎಂದು ವರದಿಯಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rishab-shetty-celebrates-wedding-anniversary-with-wife-pragathi-shetty-emotional-post-goes-viral-443075.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo