ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ ತಮನ್ನಾ 2 ವರ್ಷ ರಾಯಭಾರಿ, 2 ಕಡೆ ಹೊಸ ಘಟಕ ಸ್ಥಾಪನೆ: ಎಂಬಿ ಪಾಟೀಲ್ | Mysore Sandal Soap: Actress Tamannaah Bhatia Named Brand Ambassador; 2 New Units to be Set Up

Karnataka

oi-Shankrappa Parangi

ಬೆಂಗಳೂರು: ಪಾರಂಪರಿಕ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ನಕಲು ತಡೆಗಟ್ಟಿರುವ ರಾಜ್ಯ ಸರ್ಕಾರ ಇದೀಗ ಈ ಉತ್ಪನ್ನ ತಯಾರಿಕೆಯ ಎರಡು ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಹೊಸ ರೂಪ ಪಡೆದ ಈ ಉತ್ಪನ್ನದ ಪ್ರಚಾರದ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಈ ಹಿಂದೆ ಬಹುಕೋಟಿ ವೆಚ್ಚದಲ್ಲಿ (6.20) ಬಹುಭಾಷಾ ನಟಿ ತಮನ್ನಾ ಅವರನ್ನು ಕನ್ನಡದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದಾಗ ಸಾಕಷ್ಟು ಪರ ವಿರೋಧದ ಚರ್ಚೆಗಳು ಶುರುವಾಗಿದ್ದವು. ಕನ್ನಡದ ನಟಿಮಣಿಯರು ಇರಲಿಲ್ಲವೇ ಎಂಬ ಮಾತುಗಳು ಕೇಳಿ ಬಂದಿದ್ದವು.

Mysore Sandal Soap

ಇದೀಗ ಸರ್ಕಾರಿ ಅಧೀನದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ.ಎಸ್.ಡಿ.ಎಲ್) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಖ್ಯಾತ ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು 2 ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ಸಚಿವರು ಅಧಿಕೃತ ಮಾಹಿತಿ ನೀಡಿದರು.

ಸೋಪ್‌ನ ಹೊಸ ರೂಪ ಇಂದು ಬಿಡುಗಡೆ

ರಾಯಭಾರಿ ಅವರ ಪ್ರಚಾರದ ಕೆಲಸವು ಮಂಗಳವಾರದಿಂದ (ಫೆ.10) ವಿಧ್ಯುಕ್ತವಾಗಿ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಪಾರಂಪರಿಕ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪ್‌ನ ನವನವೀನ ರೂಪದಿಂದಿಗೆ ಬಿಡುಗಡೆ ಮಾಡಲಾಗುವುದು ಎಂದರು.

ಮೈಸೋಪು ಸೇರಿದಂತೆ ಸಂಸ್ಥೆಯ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥವಾಗಿ ಸಿದ್ಧಪಡಿಸಿರುವ ವಿಡಿಯೋ ಇತ್ಯಾದಿಗಳನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗುವುದು.

ಎರಡು ಜಿಲ್ಲೆಗಳಲ್ಲಿ ಹೊಸ ಘಟಕ ಸ್ಥಾಪನೆ

ದಶಕಗಳ ಇತಿಹಾಸ ಹೊಂದಿರುವ ಮತ್ತು ಹೊಸ ರೂಪ ಪಡೆದ ಈ ಸೋಪಿನ ತಯಾರಿಕೆ ಹೆಚ್ಚಾಗಲಿದೆ. ಈ ಸಂಬಂಧ ವಿಜಯಪುರ ಮತ್ತು ಡಾಬಸಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಈಗ 25-30 ಕೋಟಿ ರೂ. ಆಸುಪಾಸಿನಲ್ಲಿರುವ ರಫ್ತು ವಹಿವಾಟನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.

5,000 ಕೋಟಿ ವಹೀವಾಟಿನ ಗುರಿ

ಕೆ.ಎಸ್.ಡಿ.ಎಲ್. ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030ರ ಹೊತ್ತಿಗೆ 5,000 ಕೋಟಿ ರೂ.ಗಳ ಮಟ್ಟಕ್ಕೆ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯುವಜನಾಂಗವನ್ನು ತಲುಪಲು ವ್ಯಾಪಕ ಪ್ರಸಾರ ಆಂದೋಲವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ, ಸೋಶಿಯಲ್ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಗಳನ್ನು ಹೊಂದಿರುವ ತಾರಾ ವರ್ಚಸ್ಸಿನ ನಟಿ ತಮನ್ನಾ ಅವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉತ್ತರ ಭಾರತದಲ್ಲಿ ಕೂಡ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಸಹಿತ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೆ.ಎಸ್.ಡಿ.ಎಲ್ ಸಂಸ್ಥೆಗೆ ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಇದೆ. ಇದು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್.ಜಿ.ಶಾಸ್ತಿ (ಸೋಪ್ ಶಾಸ್ತ್ರಿ) ಅವರ ದೂರದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಉದ್ಯಮವಾಗಿದೆ. ಒಳ್ಳೆಯ ವಹಿವಾಟು ಮತ್ತು ಲಾಭವನ್ನು ಕಾಣುತ್ತಿರುವ ಸಂಸ್ಥೆಯು ಹೋದ ತಿಂಗಳು ಸಾಬೂನು, ಮಾರ್ಜಕ ಮತ್ತು ಸೌಂದರ್ಯವರ್ಧಕ ಈ ಮೂರು ವಿಭಾಗಗಳಲ್ಲೂ ಸಾರ್ವಕಾಲಿಕ ಉತ್ಪಾದನೆ ಮಾಡಿದೆ.

ಸಂಸ್ಥೆಯಲ್ಲಿ ಈಗ ಒಟ್ಟು 57 ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಮೈಸೂರು ಸ್ಯಾಂಡಲ್ ಸೋಪಿನಿಂದ ಹಿಡಿದು ಕುಡಿಯುವ ನೀರಿನವರೆಗೂ ವ್ಯಾಪ್ತಿ ಇದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಕೆಎಸ್ಡಿಎಲ್ ಉತ್ಪನ್ನಗಳ ಪ್ರಸಾರ ಜಾಹೀರಾತು, ಕಾರ್ಯಕ್ರಮ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರು ಉಳಿದ ಖಾಸಗಿ ಕಂಪನಿಗಳ ಇದೇ ತರಹದ ಉತ್ಪನ್ನಗಳ ಪ್ರಚಾರಾರ್ಥ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಐರೋಪ್ಯ ದೇಶಗಳ ಮಾರುಕಟ್ಟೆಗೂ ಉತ್ಪನ್ನ ವಿಸ್ತರಣೆ

ಕೆಎಸ್ ಡಿಎಲ್ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಸಿ ಎಸ್ ಅಪ್ಪಾಜಿ ನಾಡಗೌಡ ಅವರು, ‘ಯಾವುದೇ ಹೊಸ ಸಾಧನ ಸಲಕರಣೆಗಳನ್ನು ಖರೀದಿಸದೆ, ಹಳೆಯ ಯಂತ್ರೋಕರಣಗಳನ್ನು ಬಳಸಿಕೊಂಡೇ ಸಂಸ್ಥೆಯಲ್ಲಿ ಉತ್ಪಾದನಾ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಕಟ್ಟುನಿಟ್ಟಾಗಿ ದಿನಕ್ಕೆ ಮೂರು ಪಾಳಿಯ ಕೆಲಸದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಯೂರೋಪ್ ಮತ್ತು ಮಧ್ಯ ಪ್ರಾಚ್ಯದ ದೇಶಗಳ ಮಾರುಕಟ್ಟೆಯೂ ನಮ್ಮ ಗಮನಲ್ಲಿದೆ. ಜತೆಗೆ ಅನಿವಾಸಿ ಕನ್ನಡಿಗರಿಗೂ ಸಂಸ್ಥೆಯ ಉತ್ಪನ್ನಗಳನ್ನು ತಲುಪಿಸುವ ಹಾಗೆ ನೋಡಿಕೊಳ್ಳಲಾಗುವುದು’ ಎಂದಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪಿನ ನಕಲನ್ನು ಮಟ್ಟ ಹಾಕಲಾಗಿದೆ. ನಮ್ಮ ಉತ್ಪನ್ನಗಳು ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಮಾರುಕಟ್ಟೆ ವಿಸ್ತರಣೆಗೆ ದೆಹಲಿ, ಮಧ್ಯ ಭಾರತ ಮುಂತಾದ ಭಾಗಗಳ ಮೇಲೆ ಹೆಚ್ಚಿನ ಒತ್ತು ಕೊಡಲಾಗಿದೆ. 2025-26ರಲ್ಲಿ ಸಂಸ್ಥೆಯ ವಹಿವಾಟು 2 ಸಾವಿರ ಕೋಟಿ ರೂಪಾಯಿ ಮುಟ್ಟುವ ನಿರೀಕ್ಷೆ ಇದೆ ಎಂದು ಕೆಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಅವರು ತಿಳಿಸಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/mysore-sandal-soap-actress-tamannaah-bhatia-named-brand-ambassador-2-new-units-to-be-set-up-443173.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo