ನಟಿ ಅದಿತಿ ಪ್ರಭುದೇವ ವೈರಲ್ ವಿಡಿಯೋ: ನಮ್ಮ ಪುಟ್ಟ ದೇವತೆಗೂ; ಅವಳ ಅಮ್ಮನಿಗೂ: ಕುಸುಮಾ ಆಯರಹಳ್ಳಿ ಬರಹ | Aditi Prabhu Deva’s Viral Video: A Little Goddess, a Grateful Mother | Written by Kusuma Ayarahalli

Karnataka

oi-Hitesh Y

Aditi Prabhu Deva’s Viral Video: ನಟಿ ಅದಿತಿ ಪ್ರಭುದೇವ ಅವರು ಅವರ ಪುಟ್ಟ ಮಗಳೊಂದಿಗೆ ಕಳೆದ ಸುಂದರ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋದ ಬಗ್ಗೆ ಲೇಖಕಿ, ಅಂಕಣಕಾರ್ತಿ ಪಿ. ಕುಸುಮಾ ಆಯರಹಳ್ಳಿ ಅವರ ಬರಹ ಇಲ್ಲಿದೆ.

ಬಹುಶಃ ಅದೊಂದು ತಿನ್ನಿಸುವ ಆಟ. ಎರಡು ಬೌಲ್ ಅಕ್ಕಪಕ್ಕ ಉಲ್ಟಾ ಮಾಡಿಟ್ಟು ‘ಇದನ್ನು ತೆಗೆ’ ಅಂತ ಪುಟಾಣಿ ಮಗಳಿಗೆ ಹೇಳುತ್ತಾಳೆ ತಾಯಿ. ಆ ಕೂಸು ಹಾಗೆ ಮಾಡುತ್ತದೆ. ಅದರೊಳಗೆ ಮ್ಯಾಜಿಕ್ಕಿನಂತೆ ಕಡಲೆ ಬೀಜದಂತಾ ಎರಡು ಸಣ್ಣ ನಟ್ಸ್ ಇರುತ್ತವೆ. ತಾಯಿ; ‘ಅಯ್ಯೋ ಅಮ್ಮಂಗಿಲ್ಲ. ಖಾಲಿ. ನಿನಗೆ ಮಾತ್ರ. ತಿನ್ನು’ ಅನ್ನುವಂತೆ ನಾಟಕ ಮಾಡುತ್ತಾಳೆ. ಆ ಮಗು ಒಂದನ್ನು ತಾನು ಎತ್ತಿಕೊಂಡು, ಇನ್ನೊಂದು ಬೀಜವನ್ನು ಟೇಬಲ್ ಮೇಲಿಟ್ಟು ಅದರ ಮೇಲೆ ಬೌಲ್ ಮುಚ್ಚಿ ಅಮ್ಮನ ಕೈ ಹಿಡಿದು ಬೌಲ್ ಮುಂದಕ್ಕೆ ಎಳೆದು ತಂದು, ‘ಈಗ ತೆಗೆ’ ಅನ್ನುವಂತೆ ಮುಖ ಮಾಡುತ್ತದೆ. ಇವಳು ತೆಗೆದು ‘ಓ…ನನಗೂ ಸಿಕ್ತು’ ಎಂಬಂತೆ ಕಣ್ಣರಳಿಸುತ್ತಾಳೆ. ಆ ಕೂಸು ತನ್ನ ಪಾಲಿನದನ್ನು ಬಾಯಿಗೆ ಹಾಕಿಕೊಳ್ತಾ ಅಮ್ಮನ ಪಾಲಿನ ಇನ್ನೊಂದನ್ನೆತ್ತಿ ಅಮ್ಮನ ಬಾಯಿಗೆ ತಿನ್ನಿಸುತ್ತಾಳೆ. ಅಮ್ಮನಿಗೆ ಪರಮಾನಂದ. ಖುಷಿಪಡುತ್ತಾಳೆ. ಹಿಂದೆಯೇ, ‘ಅಯ್ಯೋ ಮಗುವೇ’ ಅನ್ನುತ್ತಾ, ಆ ಮಗುವಿನ ನಡೆಗೆ ಮನಸು ತುಂಬಿ ಬಂದು ಅತ್ತುಬಿಡುತ್ತಾಳೆ.

Aditi Prabhu Deva s Viral Video

ಅಳುವಿನ ಜೊತೆಗೇ ತನಗೇ ಗೊತ್ತಿಲ್ಲದೇ ತಾನು ಹೆತ್ತ ಮಗುವಿಗೆ ತಾನೇ ಎರಡೂ ಕೈಜೋಡಿಸಿ, ಕೈಮುಗಿಯುತ್ತಾ ಸಾಕ್ಷಾತ್ ದೇವರಿಗೇ ಹೇಳುವಂತೆ ಥ್ಯಾಂಕ್ಯೂ ಥ್ಯಾಂಕ್ಯು ಅನ್ನುತ್ತಾಳೆ. ಖುಷಿ, ಅಳು, ಧನ್ಯವಾದ ಎಲ್ಲ ಒಟ್ಟೊಟ್ಟಿಗೇ. ಯಾವ ಪೂರ್ವತಯಾರಿ ಇಲ್ಲದೇ ಕೆಲವು ಸೆಕೆಂಡುಗಳಲ್ಲಿ ಬಂದು ಹೋಗುವ ಈ ಭಾವಪರವಶತೆಯ ಕ್ಷಣಗಳನ್ನು ಮತ್ತೆಮತ್ತೆ ನೋಡಿದೆ.

ಆ ತಾಯಿ ನಮ್ಮ ಕನ್ನಡದ ನಟಿ ಅಧಿತಿ ಪ್ರಭುದೇವ. ಆಕೆಯ ಎಲ್ಲ ವಿಡಿಯೋಗಳೂ ಬಹಳ ಅರ್ಥಪೂರ್ಣ. ಉಪಯುಕ್ತ. ಈ ವಿಡಿಯೋ ಹೀಗಾಗಬೇಕು ಅಂತ ಶೂಟಿಂಗಿನಂತೆ ಮುಂಚೆಯೇ ಯೋಚಿಸಿಕೊಂಡಿರದ, ತಂತಾನೇ ಜರುಗಿ ಸೆರೆಯಾದ ಅಪೂರ್ವ ಘಟನೆ ಇದು. ಮಕ್ಕಳು ದೇವರು. ಆ ಹೆಣ್ಣುಮಗುವಿನೊಳಗೆ ತಾಯಿ ಗುಣವನ್ನು , ಅದರ ನಡೆಯಲ್ಲಿ ಸಾಕ್ಷಾತ್ ದೇವರನ್ನೂ ಕಂಡಂತಾಗಿ ಏನು ಮಾಡಬೇಕು ತೋಚದೇ ಅಳುತ್ತಾ, ತನ್ನ ಮಗುವಿಗೆ ತಾನೇ ಕೈಮುಗಿದುಬಿಟ್ಟಳು ತಾಯಿ.

ಎಫ್ಸ್ಟೀನ್ ಫೈಲ್ಸ್ ಜಗತ್ತನ್ನೆ ಬೆಚ್ಚಿಬೀಳಿಸಿದೆ.

ಸಣ್ಣ ಸಣ್ಣ ಮಕ್ಕಳನ್ನು ಆ ದುಷ್ಟನೂ, ಅವನ ಮೂಲಕ ಶ್ರೀಮಂತರೂ ಪ್ರಭಾವಿಗಳೂ ಹಿಂಸಿಸಿ ಬಳಸಿ, ಕೊಂದ ಕೃತ್ಯದ ಲಕ್ಷ ಲಕ್ಷ ಪುಟಗಳ ಕತೆಗಳು ಅರಗಿಸಿಕೊಳ್ಳಲಿಕ್ಕೇ ಸಾಧ್ಯವಾಗುತ್ತಿಲ್ಲ. ಹೂಪಕಳೆಯಂತಾ ಪುಟ್ಟಕಂದಗಳನ್ನು ಹೊಸಕಿದ, ಹೃದಯ ಕೇವಲ ಒಂದು ಆರ್ಗನ್ ಆದ ಆ ಪಾಪಿಗಳಿಗೆ ನಮ್ಮೆಲ್ಲರ ಶಾಪವಿರಲಿ. ಆ ಮಕ್ಕಳು ಅನುಭವಿಸಿದ ಯಾತನೆಗೆ ಮನುಷ್ಯರಾದವರೆಲ್ಲ ತಲೆತಗ್ಗಿಸಬೇಕಾಗಿದೆ. ಇಂತಾ ಹೊತ್ತಲ್ಲಿ ಸಿಕ್ಕ ಈ ವಿಡಿಯೋ ನೋಡಿ ಮೂಕಳಾದೆ. ಪುರಾಣದ ಕತೆಗಳು ನಿಜವೇ ಆಗಿ, ಹೆಣ್ಣು ಶಕ್ತಿಸ್ವರೂಪಿಣಿಯಾಗಿ ಇಂತಾ ರಕ್ಕಸರೆಲ್ಲರ ರುಂಡ ಚೆಂಡಾಡಲಿ. ಕ್ರೂರ ಕೈಗಳಿಗೆ ಸಿಕ್ಕು ಎಂದೆಂದೂ ನೋಯದಿರಲಿ ಪುಟ್ಟ ದೇವತೆಯರು. ಅವರಿಗೆಲ್ಲಾ ಒಳಿತೇ ಆಗಲಿ. ಈ ನಮ್ಮ ಪುಟ್ಟ ದೇವತೆಗೂ. ಅವಳ ಅಮ್ಮನಿಗೂ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/aditi-prabhu-devas-viral-video-a-little-goddess-a-grateful-mother-written-by-kusuma-ayarahalli-443225.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo