
India
oi-Pragathi S
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿರುವ 2026-2027ನೇ ಸಾಲಿನ ಕೇಂದ್ರದ ಆಯ-ವ್ಯಯವು (Union Budget) ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರಶಂಸಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು, ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಎರಡು ಪ್ರಮುಖ ಹಾಗೂ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಬುಧವಾರ ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರದ ಪ್ರಮುಖ ಬಂದರುಗಳನ್ನು ಬೆಸೆಯುವ ಉದ್ದೇಶದಿಂದ ‘ಬೆಂಗಳೂರಿನಿಂದ – ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್’ ವಿಸ್ತರಣೆ ಮಾಡಬೇಕು ಹಾಗೂ ದಕ್ಷಿಣ ಭಾರತದ ಪ್ರಮುಖ ಬೆಳೆಗಳಾದ ಹಲಸು, ಹುಣಸೆ ಮತ್ತು ನೇರಳೆ ಹಣ್ಣುಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಕೈಗಾರಿಕಾ ಕಾರಿಡಾರ್ ವಿಸ್ತರಣೆಯ ಅಗತ್ಯತೆ
ಈಗಾಗಲೇ ಕೇಂದ್ರ ಸರ್ಕಾರವು ಚೆನ್ನೈನಿಂದ ಬೆಂಗಳೂರು ಮತ್ತು ಹೈದರಾಬಾದ್ನಿಂದ ಬೆಂಗಳೂರು ನಡುವಿನ ಪ್ರಮುಖ ಬಂದರುಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ ದೇವೇಗೌಡರು, ಇದೇ ಮಾದರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿನವರೆಗೆ ಈ ಕೈಗಾರಿಕಾ ಕಾರಿಡಾರ್ ಅನ್ನು ವಿಸ್ತರಿಸಿದರೆ ರಾಜ್ಯದ ಕರಾವಳಿ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಭಾರಿ ಅನುಕೂಲವಾಗಲಿದೆ ಎಂದು ವಿವರಿಸಿದರು.

ಮಂಗಳೂರು ಕೂಡ ರಾಷ್ಟ್ರದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಹೀಗಾಗಿ, ವಿಶಾಖಪಟ್ಟಣ, ಚೆನ್ನೈ ಹಾಗೂ ಮಂಗಳೂರು ಬಂದರುಗಳನ್ನು ಒಟ್ಟಾಗಿ ಜೋಡಿಸುವ ನಿಟ್ಟಿನಲ್ಲಿ ಕಾರಿಡಾರ್ ವಿಸ್ತರಣೆಯಾದರೆ, ಇಡೀ ರಾಷ್ಟ್ರದ ಕೈಗಾರಿಕಾಭಿವೃದ್ದಿಗೆ ಒಂದು ವೇಗ ಸಿಗಲಿದೆ. ಇದರಿಂದ ಆಮದು ಮತ್ತು ರಫ್ತು ವಹಿವಾಟುಗಳು ಸುಲಭವಾಗಿ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಅವರು ಸದನದ ಗಮನ ಸೆಳೆದರು.
ಹಲಸು, ಹುಣಸೆ, ನೇರಳೆ ಮಂಡಳಿ ರಚನೆಗೆ ಆಗ್ರಹ
ರಾಜ್ಯಸಭೆಯಲ್ಲಿ ಕೃಷಿ ವಲಯದ ಕುರಿತು ವಿಶೇಷ ಒಲವು ತೋರಿದ ದೇವೇಗೌಡರು, ಬಿಹಾರದಲ್ಲಿ ಜನಪ್ರಿಯವಾಗಿರುವ ‘ಮಖಾನಾ ಮಂಡಳಿ’ಯ (Makhana Board) ಮಾದರಿಯಲ್ಲಿಯೇ ದಕ್ಷಿಣ ಭಾರತದ ಬೆಳೆಗಳಿಗೂ ಪ್ರತ್ಯೇಕ ಮಂಡಳಿ ಸ್ಥಾಪಿಸುವಂತೆ ಮನವಿ ಮಾಡಿದರು. ಕರ್ನಾಟಕವೂ ಸೇರಿದಂತೆ ನೆರೆಯ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಹಲಸು, ಹುಣಸೆ ಮತ್ತು ನೇರಳೆ ಬೆಳೆಗಳಿಗೆ ಉತ್ತೇಜನ ನೀಡಲು ರಾಷ್ಟ್ರೀಯ ಮಟ್ಟದ ಮಂಡಳಿಯನ್ನು ರಚಿಸಬೇಕು. ಈ ಮೂರು ಬೆಳೆಗಳು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿವೆ ಮತ್ತು ಕಡಿಮೆ ಮಳೆಯಾಗುವ, ಒಣ ಭೂಮಿಯಲ್ಲೂ ಸುಲಭವಾಗಿ ಬೆಳೆಯಬಲ್ಲ ರೈತಸ್ನೇಹಿ ಬೆಳೆಗಳಾಗಿವೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರವೇ ಮಂಡಳಿ ರಚನೆಗೆ ಅಗತ್ಯ ಕ್ರಮ ವಹಿಸುತ್ತಾರೆ ಎಂಬ ದೃಢವಾದ ನಂಬಿಕೆಯನ್ನು ದೇವೇಗೌಡರು ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ಗೆ ಮುಕ್ತಕಂಠದ ಶ್ಲಾಘನೆ
ಎನ್ಡಿಎ (NDA) ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾಗಿರುವ ಜೆಡಿಎಸ್ ಪರವಾಗಿ ಮಾತನಾಡಿದ ದೇವೇಗೌಡರು, ಈ ಬಾರಿಯ ಬಜೆಟ್ ಅನ್ನು ಮುಕ್ತಕಂಠದಿಂದ ಸ್ವಾಗತಿಸಿದರು. ಆಯವ್ಯಯದಲ್ಲಿ ಅಡಗಿರುವ ಅನೇಕ ಜನಪರ ಮತ್ತು ಅಭಿವೃದ್ಧಿಪರ ಅಂಶಗಳನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು. ದೇಶೀಯ ಉತ್ಪಾದನಾ ವಲಯ, ಎಂಎಸ್ಎಂಇ (MSME) ಕ್ಷೇತ್ರಗಳು, ಕೈಗಾರಿಕಾ ಮೂಲಸೌಕರ್ಯ ಮತ್ತು ರಫ್ತು ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಶ್ಲಾಘನೀಯ.
ಆರ್ಥಿಕ ಅನಿಶ್ಚಿತತೆಯನ್ನು ಕಡಿಮೆ ಮಾಡಿ, ದೀರ್ಘಾವಧಿಯ ವಿದೇಶಿ ಹಾಗೂ ಸ್ವದೇಶಿ ಹೂಡಿಕೆಯನ್ನು ಆಕರ್ಷಿಸುವ ಸರ್ಕಾರದ ಉದ್ದೇಶವು ಮುಂಗಡಪತ್ರದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಇದು ಜಾಗತಿಕ ಮೌಲ್ಯ ಸರಪಳಿಯಲ್ಲಿ (Global Value Chain) ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನಕ್ಕೆ ಭಾರಿ ಶಕ್ತಿ ತುಂಬಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತೆರಿಗೆ ಸರಳೀಕರಣ ಮತ್ತು ಕೃಷಿ ಅನುದಾನ ಹೆಚ್ಚಳಕ್ಕೆ ಸಲಹೆ
ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ತೆರಿಗೆ ವ್ಯವಸ್ಥೆಯನ್ನು ಸಾಕಷ್ಟು ಸರಳೀಕರಣ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ. ತೆರಿಗೆದಾರರ ವಿಶ್ವಾಸವನ್ನು ಗಳಿಸುವುದು ಯಾವುದೇ ಸರ್ಕಾರಕ್ಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂದರು. ಇದೇ ವೇಳೆ, ಕರಾವಳಿ ಕರ್ನಾಟಕ ಸೇರಿದಂತೆ ಇತರ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗುವ ತೆಂಗು, ಶ್ರೀಗಂಧ, ಕೋಕೋ ಮತ್ತು ಗೋಡಂಬಿಯಂತಹ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಬಜೆಟ್ನಲ್ಲಿ ದೊಡ್ಡ ಮಟ್ಟದ ಉತ್ತೇಜನ ನೀಡಿರುವುದು ಉತ್ತಮ ಹೆಜ್ಜೆ.
ತೆಂಗು ‘ಕಲ್ಪವೃಕ್ಷ’ ಎಂದು ಪ್ರಸಿದ್ಧವಾಗಿದ್ದು, ಎಲ್ಲ ವಯಸ್ಸಿನ ಜನರಿಗೆ ಪೋಷಣೆ ನೀಡುವ ಅದ್ಭುತ ಬೆಳೆಯಾಗಿದೆ. ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಇದು ರೈತರ ಜೀವನಾಡಿಯಾಗಿದೆ. ಕೃಷಿ ಕ್ಷೇತ್ರಕ್ಕೆ ಬಜೆಟ್ನಲ್ಲಿ ಶೇಕಡಾ 3ರಷ್ಟು ಅನುದಾನವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹವಾದರೂ, ದೇಶದ ಬೆನ್ನೆಲುಬಾಗಿರುವ ಕೃಷಿ ವಲಯದ ಪ್ರಗತಿಗಾಗಿ ಈ ಪ್ರಮಾಣವನ್ನು ಶೇಕಡಾ 5ಕ್ಕೆ ಹೆಚ್ಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸರ್ಕಾರಕ್ಕೆ ಹೇಳಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/hd-deve-gowda-urges-extension-of-bengaluru-mangaluru-industrial-corridor-new-jackfruit-board-443349.html. xn--babytilbehr-pgb.com does not claim ownership of this content. All rights remain with the original publisher.
