
Sports
oi-Madhusudhan KR
IPL 2026: ಕಳೆದ ಬಾರಿ ಅಂದರೆ 2025ರಲ್ಲಿ ಆರ್ಸಿಬಿ ಐಪಿಎಲ್ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟ ಹಿನ್ನೆಲೆ ಬೆಂಗಳೂರಿನಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಆಗಿನಿಂದ ಇಲ್ಲಿ ಯಾವುದೇ ಪಂದ್ಯ ನಡೆಸದಂತೆ ಆದೇಶ ಹೊರಡಿಸಲಾಗಿತ್ತು.
ಆದರೆ, ಇದೀಗ ರಾಜ್ಯ ಸರ್ಕಾರ ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದು ಆರ್ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.

ಗೊಂದಲಕ್ಕೆ ತೆರೆ
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರಿನಲ್ಲಿ ಪಂದ್ಯಗಳ ಆಯೋಜನೆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆರ್ಸಿಬಿ ಕೆಎಸ್ಸಿಎ, ರಾಜ್ಯ ಸರ್ಕಾರದ ನಡುವಿನ ಚರ್ಚೆಗಳು ನಡೆದಿದ್ದು, ಇದೀಗ ಆ ಗೊಂದಲಕ್ಕೆ ತೆರೆ ಬಿದ್ದು ಇಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಒಪ್ಪಿಗೆ ಸಿಕ್ಕಿದೆ.
ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಆರ್ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಆರ್ಸಿಬಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದ್ದು, ತಮ್ಮ ನೆಚ್ಚಿನ ತಂಡವನ್ನು ತವರು ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸುವ ಅವಕಾಶ ಮತ್ತೆ ದೊರೆಯಲಿದೆ. ಶೀಘ್ರದಲ್ಲೇ ಪಂದ್ಯಗಳ ವೇಳಾಪಟ್ಟಿ ಹಾಗೂ ಟಿಕೆಟ್ ವಿವರಗಳನ್ನು ಐಪಿಎಲ್ ಆಯೋಜಕರು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಷರತ್ತಿನೊಂದಿಗೆ ಅನುಮತಿ: ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಪ್ರತಿ ಪಂದ್ಯಕ್ಕೂ ಗರಿಷ್ಠ 35,000ಕ್ಕಿಂತ ಹೆಚ್ಚು ಪ್ರೇಕ್ಷಕರು ಸೇರಬಾರದು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರ ನೇತೃತ್ವದ ಸಮಿತಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಆರ್ಸಿಬಿ ತಂಡದ ಮಂಡಳಿ ಸದಸ್ಯರ ನಡುವೆ ಮಹತ್ವದ ಸಭೆ ನಡೆದಿತ್ತು. ಈ ಸಭೆಯಲ್ಲಿ ಭದ್ರತೆ ಮತ್ತು ಮೂಲಸೌಕರ್ಯ ಸಂಬಂಧಿತ ಅಂಶಗಳ ಕುರಿತು ಚರ್ಚೆ ನಡೆಸಲಾಗಿದೆ.
ಗೃಹ ಇಲಾಖೆಯ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ಆಧಾರವಾಗಿಸಿಕೊಂಡು ಪಂದ್ಯ ಆಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆ ಸಂಬಂಧ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ವರದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಎಸ್ಸಿಎ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.
ಮಾರ್ಗಸೂಚಿಗಳ ವಿವರ: ಅಂಬುಲೆನ್ಸ್ ಸಂಚಾರಕ್ಕೆ ಸೂಕ್ತ ಜಾಗ, ವಾಹನ ನಿಲುಗಡೆ ವ್ಯವಸ್ಥೆ, ತುರ್ತು ನಿರ್ಗಮನ ದ್ವಾರಗಳು, ಅಗಲವಾದ ಪ್ರವೇಶ ಮತ್ತು ನಿರ್ಗಮನ ಗೇಟ್ಗಳು, ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಸೇರಿದಂತೆ ಅಗತ್ಯ ಮಾರ್ಗಸೂಚಿಗಳನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಈ ಕ್ರಮಗಳು ಪೂರ್ಣಗೊಂಡ ಬಳಿಕವೇ ಪಂದ್ಯಗಳ ಆಯೋಜನೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಐಪಿಎಲ್ ಪಂದ್ಯ ಆಡಿಸಲು ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅಲ್ಲದೆ, ಆರ್ಸಿಬಿ ಪಂದ್ಯಗಳ ವೀಕ್ಷಣೆಗಾಗಿ ಕಾತರದಿಂದ ಕಾದಿದ್ದಾರೆ. ಐಪಿಎಲ್ 19ನೇ ಆವೃತ್ತಿಯು ಮಾರ್ಚ್ 26, 2026ರಿಂದ ಆರಂಭ ಆಗಲಿದ್ದು, ಮೇ 31ರವರೆಗೆ ನಡೆಯಲಿದೆ ಎನ್ನುವ ಮಾಹಿತಿ ಈಗಾಗಲೇ ಲಭ್ಯವಾಗಿತ್ತು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-karnataka-government-grants-permission-to-host-matches-at-m-chinnaswamy-stadium-bengaluru-443491.html. xn--babytilbehr-pgb.com does not claim ownership of this content. All rights remain with the original publisher.
