
India
oi-Pragathi S
ನವದೆಹಲಿ: ದೇಶಾದ್ಯಂತ ಮಕ್ಕಳಲ್ಲಿ ಬೋರ್ಡ್ ಪರೀಕ್ಷೆಗಳ ಜ್ವರ ಏರುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅಂಕಗಳ ಬೆನ್ನೇರಿ ಓಡುತ್ತಿರುವ ಈ ಸಮಯದಲ್ಲಿ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಳ್ಳಲಾದ ಒಂದು ಪೋಸ್ಟ್ ಈಗ ಎಲ್ಲರ ಕಣ್ತೆರೆಸುವಂತೆ ಮಾಡಿದೆ. ಅಂಕಗಳೇ ಜೀವನದ ಮಾನದಂಡ ಎಂದು ಭಾವಿಸಿರುವವರಿಗೆ, ದೇಶದ ಪ್ರಮುಖ ಐಟಿ ಕಂಪನಿಯೊಂದರ ಮಾಜಿ ಮುಖ್ಯಸ್ಥರು ತಮ್ಮ ಸ್ವಂತ ಅನುಭವದ ಮೂಲಕ ಹೊಸ ಭರವಸೆ ತುಂಬಿದ್ದಾರೆ.
ಎಚ್ಸಿಎಲ್ ಟೆಕ್ನಾಲಜೀಸ್ನ (HCL Technologies) ಮಾಜಿ ಸಿಇಒ ಮತ್ತು ಸದ್ಯ ಸಂಪರ್ಕ್ ಫೌಂಡೇಶನ್ನ ಅಧ್ಯಕ್ಷರಾಗಿರುವ ವಿನೀತ್ ನಾಯರ್ ಅವರು ಹಂಚಿಕೊಂಡಿರುವ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. “ಒಂದು ವೇಳೆ ಬೋರ್ಡ್ ಪರೀಕ್ಷೆಗಳೇ ಜೀವನವನ್ನು ನಿರ್ಧರಿಸುವಂತಿದ್ದರೆ, ಜಗತ್ತಿನ ಅರ್ಧದಷ್ಟು ಸಿಇಒಗಳು (CEO) ನಿರುದ್ಯೋಗಿಗಳಾಗಿರುತ್ತಿದ್ದರು. ಈ ಮಾತನ್ನು ಆಳವಾಗಿ ಯೋಚಿಸಿ,” ಎಂದು ಅವರು ಬರೆದುಕೊಂಡಿದ್ದಾರೆ.

1979ರ ಆ ಒಂದು ದಿನ…
ತಮ್ಮ ಹಳೆಯ ನೆನಪಿನ ಬುತ್ತಿ ಬಿಚ್ಚಿಟ್ಟಿರುವ ವಿನೀತ್ ನಾಯರ್, 1979ರಲ್ಲಿ ತಾವು ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. ಅಂದು ರಸಾಯನಶಾಸ್ತ್ರ (Chemistry) ಪರೀಕ್ಷೆ ನಡೆದಿತ್ತು. ಪರೀಕ್ಷಾ ಕೊಠಡಿಯಿಂದ ಹೊರಬಂದ 17 ವರ್ಷದ ವಿನೀತ್ ಸಂಪೂರ್ಣ ಆತಂಕದಲ್ಲಿದ್ದರು. “ನಾನು ಪರೀಕ್ಷೆಯನ್ನು ಸರಿಯಾಗಿ ಬರೆದಿರಲಿಲ್ಲ, ಫೇಲ್ ಆಗುವುದು ಖಚಿತ ಎಂದು ನನಗೆ ಅನ್ನಿಸಿತ್ತು,” ಎಂದು ಅವರು ಹೇಳಿಕೊಂಡಿದ್ದಾರೆ.
ಆಗ ಅವರ ನೆರವಿಗೆ ಬಂದಿದ್ದು ಅವರ ಸಹೋದರ. ಆತ ಕೇಳಿದ ಒಂದೇ ಒಂದು ಪ್ರಶ್ನೆ ವಿನೀತ್ ಅವರ ದೃಷ್ಟಿಕೋನವನ್ನೇ ಬದಲಿಸಿತು. “ಒಂದು ವೇಳೆ ನೀನು ಫೇಲ್ ಆದರೆ ಸತ್ತು ಹೋಗುತ್ತೀಯಾ?” ಎಂದು ಆತ ಕೇಳಿದ. ಅದಕ್ಕೆ ವಿನೀತ್, “ಇಲ್ಲ” ಎಂದು ಉತ್ತರಿಸಿದರು. “ಹಾಗಾದರೆ, ಇದನ್ನೇಕೆ ಸಾವು ಮತ್ತು ಬದುಕಿನ ಪ್ರಶ್ನೆಯಂತೆ ನೋಡುತ್ತಿದ್ದೀಯಾ?” ಎಂಬ ಮರುಪ್ರಶ್ನೆ ವಿನೀತ್ ಅವರನ್ನು ಈ ಬಗ್ಗೆ ಆಲೋಚಿಸುವಂತೆ ಮಾಡಿತು.
ಭಯ ಹೋದರೆ ಗೆಲುವು ಖಚಿತ
ಈ ಘಟನೆ ನಡೆದ ಎರಡು ದಿನಗಳ ನಂತರ ಗಣಿತ (Mathematics) ಪರೀಕ್ಷೆ ಇತ್ತು. ಸಹೋದರನ ಮಾತಿನಿಂದ ಧೈರ್ಯ ತಂದುಕೊಂಡ ವಿನೀತ್, ಯಾವುದೇ ಭಯವಿಲ್ಲದೆ ಶಾಂತಚಿತ್ತರಾಗಿ ಪರೀಕ್ಷೆ ಬರೆದರು. ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಕೆಮಿಸ್ಟ್ರಿಯಲ್ಲಿ ಫೇಲ್ ಆಗುತ್ತೇನೆ ಎಂದುಕೊಂಡಿದ್ದ ಅವರು, ಗಣಿತದಲ್ಲಿ ಬರೋಬ್ಬರಿ 94 ಅಂಕಗಳನ್ನು ಗಳಿಸಿದ್ದರು. ಅವರ ಒಟ್ಟು ಫಲಿತಾಂಶ ಶೇ. 71 ರಷ್ಟಿತ್ತು. ತಮ್ಮ ಹಳೆಯ ಮಾರ್ಕ್ಸ್ ಕಾರ್ಡ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಕೇವಲ ಒಂದು ಪರೀಕ್ಷೆಯ ಅಂಕಗಳು ಒಬ್ಬ ವ್ಯಕ್ತಿಯ ಸಂಪೂರ್ಣ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
https://x.com/vineetnayar/status/2022172373588594859?s=20
“ಪರೀಕ್ಷೆ ನೆನಪಿನ ಶಕ್ತಿಯನ್ನು ಅಳೆಯುತ್ತೆ, ಜೀವನ ಧೈರ್ಯವನ್ನು ಅಳೆಯುತ್ತೆ”
ವಿನೀತ್ ನಾಯರ್ ಅವರ ಈ ಸಾಲುಗಳು ಈಗ ಸಾವಿರಾರು ವಿದ್ಯಾರ್ಥಿಗಳಿಗೆ ಮಂತ್ರದಂತಾಗಿದೆ. “ಬೋರ್ಡ್ ಪರೀಕ್ಷೆಗಳು ವಿಡಿಯೋ ಗೇಮ್ನ ಒಂದು ಹಂತವಿದ್ದಂತೆ ಹೊರತು, ಅದೇ ಪೂರ್ಣ ಆಟವಲ್ಲ,” ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿರುವ ಅವರು, “ಚೆನ್ನಾಗಿ ನಿದ್ದೆ ಮಾಡಿ, ಕಷ್ಟಪಟ್ಟು ಓದಿ, ಅತ್ಯುತ್ತಮ ಪ್ರಯತ್ನ ಪಡಿ, ಬರುವ ಫಲಿತಾಂಶವನ್ನು ಒಪ್ಪಿಕೊಳ್ಳಿ. ಇದು ಜೀವನ ಮತ್ತು ಸಾವಿನ ಪ್ರಶ್ನೆಯಲ್ಲ. ಭಯಪಡಬೇಡಿ,” ಎಂದು ಸಲಹೆ ನೀಡಿದ್ದಾರೆ. ಕೊನೆಯಲ್ಲಿ, “ಅಪ್ಪಾ, ಆಮ್ಲೆಟ್ ಮತ್ತು ಮ್ಯಾಂಗೋ ಶೇಕ್ ರೆಡಿ ಮಾಡಿ” ಎಂದು ತಮಾಷೆಯಾಗಿ ಬರೆಯುವ ಮೂಲಕ ಪರೀಕ್ಷೆಯ ಒತ್ತಡವನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ವಿನೀತ್ ಅವರ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಇದನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು ಮಧ್ಯಮ ವರ್ಗದ ಕುಟುಂಬಗಳಿಗೆ ಅಂಕಗಳೇ ಆಧಾರ ಎಂದು ಕಾಮೆಂಟ್ ಮಾಡಿದ್ದಾರೆ. “ಆ ಕಾಲದಲ್ಲಿ ಶೇ. 71 ಅಂಕ ಪಡೆಯುವುದು ಮತ್ತು ಗಣಿತದಲ್ಲಿ 94 ಅಂಕ ಗಳಿಸುವುದು ಸಾಮಾನ್ಯ ಸಂಗತಿಯಲ್ಲ, ಅದು ಇಂದಿನ ಡಿಸ್ಟಿಂಕ್ಷನ್ಗೆ ಸಮ,” ಎಂದು ಒಬ್ಬರು ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/ex-hcl-ceo-vineet-nayar-viral-post-on-class-12-marks-if-board-exams-decided-life-443649.html. xn--babytilbehr-pgb.com does not claim ownership of this content. All rights remain with the original publisher.
