
International
oi-Malathesha M
ಗಾಜಾ ಈಗಷ್ಟೇ ಶಾಂತವಾಗುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಅಶಾಂತಿಗೆ ಸಿಲುಕಿ ಒದ್ದಾಡಿಬಿಟ್ಟಿದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಶುರುವಾಗಿದ್ದ ಯುದ್ಧವೇ ಇಡೀ ಗಾಜಾ ಪಟ್ಟಿಯನ್ನ ಧೂಳ್ ಧೂಳ್ ಮಾಡಿದೆ. ಹಮಾಸ್ ವಿರುದ್ಧದ ಯುದ್ಧದಲ್ಲಿ ಅಮಾಯಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ, ಹೀಗೆ ಅಮಾಯಕರಿಗೆ ತೊಂದರೆ ಮಾಡಲಾಗಿದೆ ಎಂದು ಇಸ್ರೇಲ್ ವಿರುದ್ಧ ಆಕ್ರೋಶ ಕೂಡ ಮೊಳಗುತ್ತಿದೆ. ಇದೇ ಸಮಯದಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡಿ, ಭರ್ಜರಿ ಪ್ಲಾನ್ ಒಂದನ್ನ ಮುಂದಿಟ್ಟಿತ್ತು. ಆ ಯೋಜನೆ ಪ್ರಕಾರವೇ ಇದೀಗ ಗಾಜಾ ಮರುನಿರ್ಮಾಣ ಕಾರ್ಯಕ್ಕೆ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಮುಂದಾಗಿದೆ.
ಗಾಜಾ ಪಟ್ಟಿಯಲ್ಲಿ ಎಲ್ಲಿ ನೋಡಿದರೂ ಬರೀ ಕುಸಿದು ಬಿದ್ದ ಕಟ್ಟಡಗಳು ಹಾಗೂ ಛಿದ್ರ ಛಿದ್ರವಾದ ಭೂಮಿಯೇ ಕಾಣುತ್ತಿದೆ. ಅದರಲ್ಲೂ ಆಸ್ಪತ್ರೆ ಮತ್ತು ಶಾಲಾ ಕಟ್ಟಡಗಳು ಕೂಡ ಯುದ್ಧಕ್ಕೆ ಸಿಲುಕಿ, ತೀವ್ರ ಹಾನಿಗೆ ಒಳಗಾಗಿವೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ಇದೀಗ ಗಾಜಾ ಶಾಂತಿ ಸ್ಥಾಪನೆಗೆ ಡೊನಾಲ್ಡ್ ಟ್ರಂಪ್ ಅವರು ಪ್ರತ್ಯೇಕ ಮಂಡಳಿಯನ್ನೇ ಸ್ಥಾಪನೆ ಮಾಡಿದ್ದರು. ಅಲ್ಲದೆ ಈ ಮಂಡಳಿ ಮೂಲಕ ಸಂಕಷ್ಟದಲ್ಲಿ ಒದ್ದಾಡುತ್ತಿರುವ ಗಾಜಾ ಪಟ್ಟಿಗೆ ನೆರವು ನೀಡಲು ಮುಂದಾಗಿದ್ದರು. ಇದೀಗ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಗಾಜಾ ಶಾಂತಿ ಮಂಡಳಿ ಮಹತ್ವದ ತೀರ್ಮಾನ ಒಂದನ್ನ ಕೈಗೊಂಡಿದೆ. ಗಾಜಾ ಮರುನಿರ್ಮಾಣಕ್ಕೆ 5 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾಗಿದೆ.

45 ಸಾವಿರ ಕೋಟಿ ರೂಪಾಯಿ ಹಣ
ಅಂದಹಾಗೆ ಗಾಜಾ ಪುನರ್ ನಿರ್ಮಾಣಕ್ಕಾಗಿ 5 ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಲು ಈಗ ಶಾಂತಿ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರ ಜೊತೆ ಹಮಾಸ್ ಅನ್ನ ನಿಶ್ಯಸ್ತ್ರಗೊಳಿಸಲು ಕರೆ ನೀಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಜಾ ಪುನರ್ ನಿರ್ಮಾಣ ವಿಚಾರಕ್ಕೆ ಮಹತ್ವದ ಚರ್ಚೆ ನಡೆಸಿ, ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಶಾಂತಿ ಮಂಡಳಿ ಸದಸ್ಯ ರಾಷ್ಟ್ರಗಳು ಗಾಜಾದ ಪುನರ್ ನಿರ್ಮಾಣಕ್ಕೆ ಈ ಮೂಲಕ ಸಹಾಯಧನ ನೀಡಲಿವೆ.
ಟ್ರಂಪ್ ಅವರು ರಚಿಸಿರುವ ಗಾಜಾ ಶಾಂತಿ ಮಂಡಳಿ ಸಭೆ ಫೆಬ್ರವರಿ 19ಕ್ಕೆ ವಾಷಿಂಗ್ಟನ್‌ನಲ್ಲಿ ನಡೆಯುತ್ತೆ, ಆದರೆ ಈ ಸಭೆ ನಡೆಯುವ ಮೊದಲೇ ಮಹತ್ವದ ಘೋಷಣೆ ಹೊರಬಿದ್ದಿದೆ. ಬರೋಬ್ಬರಿ 5 ಬಿಲಿಯನ್ ಡಾಲರ್ ಹಣವನ್ನ ಇದೀಗ ಗಾಜಾ ಸಹಾಯಕ್ಕೆ ನೀಡಲು ನಿರ್ಧರಿಸಲಾಗಿದೆ, ಎಂದರೆ ಸುಮಾರು 45 ಸಾವಿರ ಕೋಟಿ ರೂಪಾಯಿ ಈ ಮೂಲಕ ಗಾಜಾಗೆ ಸಿಗಲಿದೆ. ಈ ಹಣದಲ್ಲಿ ಗಾಜಾ ಪಟ್ಟಿಯನ್ನ ಮತ್ತೆ ನಿರ್ಮಾಣ ಮಾಡಲು ಶಾಂತಿ ಮಂಡಳಿಯ ಸದಸ್ಯ ರಾಷ್ಟ್ರಗಳು ತೀರ್ಮಾನ ಕೈಗೊಂಡಿವೆ.
ಹಮಾಸ್ ನಿಶ್ಯಸ್ತ್ರೀಕರಣ ಯೋಜನೆಗೂ ಪ್ಲಾನ್
ಅಕ್ಟೋಬರ್ 2023 ಇಸ್ರೇಲ್ ಇತಿಹಾಸದಲ್ಲಿ ಮರೆಯಲು ಆಗದ ತಿಂಗಳು, ಏಕೆಂದರೆ ಇದೇ ತಿಂಗಳು ಹಮಾಸ್ ಭೀಕರವಾಗಿ ದಾಳಿ ಮಾಡಿತ್ತು. ಇಸ್ರೇಲ್ ಮೇಲೆ ಹಮಾಸ್ ಮಾಡಿದ್ದ ದಾಳಿ ಮುಂದೆ ಗಾಜಾ ಯುದ್ಧಕ್ಕೆ ಕಿಚ್ಚು ಹೊತ್ತಿಸಿತ್ತು, ಹೀಗಿದ್ದಾಗ ಇಸ್ರೇಲ್ ಮತ್ತು ಹಮಾಸ್ ನಡುವೆ ಈಗ ಸಂಧಾನ ಕೂಡ ನಡೆದಿದ್ದು, ಮುಂದೆ ಯಾವುದೇ ಕಾರಣಕ್ಕೂ ಭವಿಷ್ಯದಲ್ಲಿ ಮತ್ತೆ ತಿಕ್ಕಾಟಗಳು ನಡೆಯದ ರೀತಿ ಈಗ ಕ್ರಮ ಜರುಗಿಸಲು ಅಮೆರಿಕ ಪ್ಲಾನ್ ಮಾಡಿದೆ. ಇದೇ ಕಾರಣಕ್ಕೆ ಹಮಾಸ್ ನಿಶ್ಯಸ್ತ್ರೀಕರಣ ಯೋಜನೆಗೆ ಟ್ರಂಪ್ ಅವರು ಒತ್ತಡ ಹೇರುತ್ತಿದ್ದಾರೆ. ಇದು ಸಕ್ಸಸ್ ಆಗುವ ಲಕ್ಷಣ ಕೂಡ ಇದೀಗ ಗೋಚರಿಸುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧ ನಿಲ್ಲುವ ನಿರೀಕ್ಷೆ ಮೂಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/gaza-peace-deal-nearing-and-board-of-peace-pledges-5-billion-dollar-for-gaza-reconstruction-443865.html. xn--babytilbehr-pgb.com does not claim ownership of this content. All rights remain with the original publisher.
