ಭಾರತ ತಂಡದ ಕುಲ್ದೀಪ್‌ ಯಾದವ್‌, ಹಾರ್ದಿಕ್ ಪಾಂಡ್ಯ ನಡುವೆ ಗಲಾಟೆ: ಕಾರಣ ಇಲ್ಲಿದೆ ತಿಳಿಯಿರಿ | Hardik Pandya, Suryakumar Yadav’s On-Field Reaction After Kuldeep Yadav’s Missed Catch Goes Viral

Sports

oi-Madhusudhan KR

Team India Players: ಕೊಲೊಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ 2026 ಗುಂಪು ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 61 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಟೀಂ ಇಂಡಿಯಾ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಆದರೆ, ಪಂದ್ಯ ಮುಕ್ತಾಯವಾದ ಬಳಿಕ ಮೈದಾನದಲ್ಲಿ ಕಂಡುಬಂದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ ತಂಡದ ಕೊನೆಯ ವಿಕೆಟ್ ಬೀಳುತ್ತಿದ್ದಂತೆ ಭಾರತದ ಆಟಗಾರರು ಸಂಭ್ರಮದಲ್ಲಿ ತೊಡಗಿದ್ದರು. ಮತ್ತೊಂದೆಡೆ, ಇದೇ ವೇಳೆ ಹಾರ್ದಿಕ್ ಪಾಂಡ್ಯ ಮಾತ್ರ ಕುಲ್ದೀಪ್ ಯಾದವ್ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ದೃಶ್ಯ ಕಂಡುಬಂದಿತು. ಆಗ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಕುಲ್ದೀಪ್ ಬಳಿ ತೆರಳಿ ಏನನ್ನೋ ಹೇಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಯಿತು. ಪರಿಸ್ಥಿತಿ ಗಂಭೀರ ಆಗುವುದನ್ನು ಗಮನಿಸಿದ ರಿಂಕು ಸಿಂಗ್ ಮಧ್ಯ ಪ್ರವೇಶಿಸಿ ಇದನ್ನು ಶಾಂತಗೊಳಿಸಲು ಯತ್ನಿಸಿದರು. ತಿಲಕ್ ವರ್ಮಾ ಸಹ ಕೋಪಗೊಂಡಂತೆ ಕಾಣಿಸಿಕೊಂಡರು.

Hardik Pandya Suryakumar Yadav s On-Field Reaction After Kuldeep Yadav s Missed Catch Goes Viral

ತಂಡದಲ್ಲಿ ಅಸಮಾಧಾನಕ್ಕೆ ಕಾರಣ ಏನು?

ಈ ಅಸಮಾಧಾನಕ್ಕೆ ಕಾರಣ ಮಿಸ್‌ ಫೀಲ್ಡಿಂಗ್ ಎನ್ನಲಾಗಿದೆ. ಪಂದ್ಯದ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಹೊಡೆದ ಚೆಂಡು ಲಾಂಗ್ ಆನ್ ಕಡೆಗೆ ಹಾರಿತು. ಅಲ್ಲಿದ್ದ ಕುಲ್ದೀಪ್ ಯಾದವ್ ಸುಲಭ ಕ್ಯಾಚ್ ಹಿಡಿಯುವ ಅವಕಾಶವನ್ನು ಕೈಚೆಲ್ಲಿದರು. ಕೈಯಿಂದ ಜಾರಿದ ಚೆಂಡು ಬೌಂಡರಿ ದಾಟಿ ಸಿಕ್ಸರ್ ಆಗಿದ್ದು, ಇದರಿಂದ ಹಾರ್ದಿಕ್ ಪಾಂಡ್ಯ ಹಾಗೂ ನಾಯಕ ಸೂರ್ಯ ಅಸಮಾಧಾನಗೊಂಡರು ಎನ್ನಲಾಗಿದೆ.

ಈ ಗೆಲುವು ತಂಡದ ಶ್ರಮದ ಫಲ ಎಂದ ಸೂರ್ಯ

ಪಂದ್ಯದ ಬಳಿಕ ಈ ಕುರಿತು ಮಾತನಾಡಿದ ಸೂರ್ಯಕುಮಾರ್ ಯಾದವ್, “ನಾವು ನಮ್ಮ ಸಾಮರ್ಥ್ಯವನ್ನು ಚೆನ್ನಾಗಿ ಬಳಸಿಕೊಂಡು ಆಟ ಆಡಿದೆವು. ಇಶಾನ್ ಕಿಶನ್ ತಮ್ಮ ಉತ್ತಮ ಫಾರ್ಮ್ ಅನ್ನು ಇಲ್ಲಿ ಕೂಡ ಮುಂದುವರಿಸಿದ್ದಾರೆ. ಇನ್ನೂ ಈ ಗೆಲುವು ಸಂಪೂರ್ಣ ತಂಡದ ಶ್ರಮದ ಫಲ,” ಎಂದು ಹೇಳಿದರು. ಈ ಗೆಲುವಿನೊಂದಿಗೆ ಭಾರತ ಮುಂದಿನ ಹಂತಕ್ಕೆ ಕಾಲಿಟ್ಟಿದ್ದು, ಪಾಕಿಸ್ತಾನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲ್ಲಲೇಬೇಕಾದ ಪರಿಸ್ಥಿತಿಗೆ ಬಂದು ನಿಂತಿದೆ. ಇದರಲ್ಲಿ ಒಂದು ವೇಳೆ ಸೋತರೆ ಪಾಕ್‌ ಟೂರ್ನಿಯಿಂದ ಹೊರಬೀಳುವುದಂತೂ ಗ್ಯಾರಂಟಿ ಎನ್ನುವಂತಾಗಿದೆ.

ಟೀಂ ಇಂಡಿಯಾ ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಯುಎಸ್‌ಎ 4 ಪಂದ್ಯಗಳಲ್ಲಿ 2 ಜಯಗಳಿಸಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಮೂರರಲ್ಲಿ ಎರಡು ಗೆಲುವಿನೊಂದಿಗೆ 4 ಅಂಕಗಳನ್ನು ಹೊಂದಿದ್ದರೂ, ಕಡಿಮೆ ನೆಟ್‌ ರನ್‌ ರೇಟ್‌ನಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನಕ್ಕಿಂತ ಉತ್ತಮ ನೆಟ್ ರನ್‌ ರೇಟ್ (0.788) ಹೊಂದಿರುವ ಯುಎಸ್‌ಎಗೆ ಹೋಲಿಸಿದರೆ, ಪಾಕ್ ತಂಡದ ನೆಟ್ ರನ್‌ ರೇಟ್ -0.403ಕ್ಕೆ ಕುಸಿದಿದೆ.

ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಇದ್ದು, ನಮೀಬಿಯ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಯಾವುದೇ ಲೆಕ್ಕಾಚಾರವಿಲ್ಲದೆ ಸೂಪರ್ 8 ಹಂತಕ್ಕೇರಲಿದೆ. ಒಂದು ವೇಳೆ ಪಂದ್ಯ ರದ್ದಾದರೂ, ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗುವುದರಿಂದ ಪಾಕಿಸ್ತಾನ 5 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಒಂದು ವೇಳೆ ನಮೀಬಿಯ ವಿರುದ್ಧ ಪಾಕಿಸ್ತಾನ ಸೋಲು ಕಂಡರೆ, ಅಂಕಗಳು ಸಮನಾಗಿದ್ದರೂ ಉತ್ತಮ ನೆಟ್ ರನ್‌ ರೇಟ್ ಹೊಂದಿರುವ ಯುಎಸ್‌ಎ ತಂಡಕ್ಕೆ ಸೂಪರ್ 8 ಪ್ರವೇಶ ಪಡೆಯಲಿದೆ. ಆದ್ದರಿಂದ ಫೆಬ್ರವರಿ 18ರಂದು ನಡೆಯಲಿರುವ ಈ ಪಂದ್ಯವು ಪಾಕಿಸ್ತಾನದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಆಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/hardik-pandya-suryakumar-yadav-s-on-field-reaction-after-kuldeep-yadav-s-missed-catch-goes-viral-443979.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo