ಕೆಂಪು ಚಿನ್ನದ ಘಾಟು: ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಡಗಿ ಮೆಣಸಿನಕಾಯಿ ದರ 90,000 ರೂಪಾಯಿ | Byadgi Chilli Price Hits Record High: Gadag Youth Farmer Sells Yield at Rs 90,000 Per Quintal

Karnataka

oi-Shankrappa Parangi

ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಬ್ಯಾಡಗಿ ಮೆಣಸಿನಕಾಯಿ ಬಿತ್ತನೆ ಈ ವರ್ಷ ಅಷ್ಟಾಗಿ ಆಗಿಲ್ಲ. ಆದರೆ ಬೆಳೆದ ರೈತರಿಗೆ ಉತ್ತಮ ಇಳುವರಿ ಬಂದಿದ್ದು, ಬೇಡಿಕೆ ಹೆಚ್ಚಿರುವ ಕಾರಣ ಬ್ಯಾಡಗಿ ಮೆಣಸಿನಕಾಯಿಗೆ ಐತಿಹಾಸಿಕ ದಾಖಲೆಯ ಗರಿಷ್ಠ ದರ ಲಭಿಸಿದೆ. ರೋಣ ತಾಲೂಕಿನ ಸವಡಿ ಗ್ರಾಮದ ಯುವ ರೈತರ ಬ್ಯಾಡಗಿ ಮೆಣಸಿನಕಾಯಿ ಬೆಳೆದು ಬಂಗಾರದ ಬೆಲೆ ಪಡೆದಿದ್ದಾರೆ.

ಯುವ ರೈತ ವಿಜಯಕುಮಾರ್ ಪ್ರಕಾಶ ಸಜ್ಜನರ ಅವರು ಬೆಳೆದ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ದರವು ಕ್ವಿಂಟಲ್‌ಗೆ ಬರೋಬ್ಬರಿ 90,000 ರೂಪಾಯಿಗೆ ಮಾರಾಟವಾಗಿದೆ. 23 ವರ್ಷದ ಯುವ ಪದವೀಧರ ಪ್ರಕಾಶ್ ಭರ್ಜರಿ ಆದಾಯ ಗಳಿಸಿದ್ದಾರೆ. ಇಷ್ಟು ಗರಿಷ್ಠ ದರ ಈವರೆಗೆ ದಾಖಲಾಗಿರಲಿಲ್ಲ. ಮತ್ತೊಂದೆಡೆ ಈರುಳ್ಳಿ ಬೆಳೆಗಾರರು ದರ ಕುಸಿತದಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ‘ಕನ್ನಡಪ್ರಭ’ ವರದಿ ಮಾಡಿದೆ.

Byadgi Chilli Price

ಗದಗ, ಹಾವೇರಿ, ಧಾರವಾಡದಲ್ಲಿ ಉತ್ಪಾದನೆ ಅಧಿಕ

ಇದಕ್ಕೂ ಮುನ್ನ ಲಕ್ಕುಂಡಿ ಗ್ರಾಮದಲ್ಲಿ ಫೆಬ್ರವರಿ ಮೊದಲ ವಾರದ ಗರಿಷ್ಠ ದರ ಲಭಿಸಿತ್ತು. ಆಗ ಪ್ರತಿ ಕ್ವಿಂಟಾಲ್ ಗೆ ರೂಪಾಯಿ 74,099 ದರ ಸಿಕ್ಕಿತ್ತು. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿರುವ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನಾನಾ ಕಡೆಗಳಿಂದ ಮೆಣಸಿನಕಾಯಿ ಬರುತ್ತದೆ. ಬ್ಯಾಡಗಿ ಮೆಣಸಿನಕಾಯಿಯನ್ನು ಸಾಮಾನ್ಯವಾಗಿ ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ವರ್ಷ ಇಲ್ಲೂ ಸಹ ಉತ್ಪಾದನೆ ಕಡಿಮೆ ಆಗಿದೆ. ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಮಾರುಕಟ್ಟೆಗೆ ಲಕ್ಷಾಂತರ ಚೀಲಗಳು ಆವಕವಾಗುತ್ತವೆ.

ವರ್ಷವಾರು ಮೆಣಸಿನಕಾಯಿ ದರ ವಿವರ

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬ್ಯಾಡಗಿ ಮೆಣಸಿನಕಾಯಿಗೆ ಬೇಡಿಕೆ ಇದೆ. ಕಳೆದ 2021ರಿಂದ ದರ ನೋಡುವುದಾದರೆ ಪ್ರತಿ ಕ್ವಿಂಟಾಲ್ ಬ್ಯಾಡಗಿ ಮೆಣಸಿನಕಾಯಿಗೆ 36,000 ರೂಪಾಯಿ, 2022ರಲ್ಲಿ 50,000-70,000 ರೂಪಾಯಿ, 2023ರಲ್ಲಿ 35,000-44,000 ರೂಪಾಯಿ, 2024ರಲ್ಲಿ 30,000 ರಿಂದ 40,000 ರೂಪಾಯಿ ಹಾಗೂ 2025ರಲ್ಲಿ 35,000 ರೂಪಾಯಿ ಇತ್ತು. ಈ ಬಾರಿ ಬರೋಬ್ಬರಿ 90,000 ರೂಪಾಯಿಗೆ ಒಂದು ಕ್ವಿಂಟಾಲ್ ಮೆಣಸಿನಕಾಯಿ ಮಾರಾಟವಾಗಿದೆ.

ಸಾವಯವ ರೀತಿಯಲ್ಲಿ ಮೆಣಸಿನಕಾಯಿ ಬೆಳೆ ಬಳೆಯಲಾಗಿತ್ತು. ಇದಕ್ಕೆ ಉತ್ತಮ ಬೆಲೆ ಸಿಗುವ ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಅದರಂತೆ ಹೆಚ್ಚಿನ ದರಕ್ಕೆ ಬೆಳೆ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಒಂದು ಕ್ವಿಂಟಾಲ್ ಮೆಣಸಿನಕಾಯಿ ದರವು ಬರೋಬ್ಬರಿ ಒಂದು ಲಕ್ಷ ರೂಪಾಯಿಗೆ ಹೆಚ್ಚಾಗಲಿದೆ ಎಂದು ಅವರು ಯುವ ರೈತ ವಿಜಯಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಮೆಣಸಿನಕಾಯಿ ಪೂರೈಕೆ ಕೊರತೆ

ಈ ವರ್ಷ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನೀರಿಕ್ಷಿತ ಪ್ರಮಾಣದಲ್ಲಿ ಮೆಣಸಿನಕಾಯಿಗಳು ಚೀಲಗಳು ಬಂದಿರಲಿಲ್ಲ. ಪ್ರತಿ ವರ್ಷ ಡಿಸೆಂಬರ್‌ನಿಂದ ಮಾರ್ಚ್ ವೇಳೆಗೆ ಲಕ್ಷಾಂತರ ಚೀಲಗಳಿಂದ ತುಂಬಿರುವ ಮಾರುಕಟ್ಟೆ ಮೆಣಸಿನಕಾಯಿ ಇಲ್ಲದೇ ಬಣಗುಡುತ್ತಿತ್ತು. ಕಾರಣ, ಕಳೆದ ವರ್ಷ ಮೆಣಸಿನಕಾಯಿಗೆ ಸೂಕ್ತ ದರ ಸಿಗದ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸಿದ್ದರು. ಹೀಗಾಗಿ ಈ ವರ್ಷ ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದಾರೆ. ಮೆಣಸಿನಕಾಯಿ ಬದಲಾಗಿ ಬೇರೆ ಬೇರೆ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆದಿದ್ದಾರೆ. ಹೀಗಾಗಿ ಕೊರತೆ ಉಂಟಾಗಿದೆ. ಮೆಣಸಿನಕಾಯಿ ಪೂರೈಕೆ ಕಡಿಮೆ ಆಗುತ್ತಿದ್ದಂತೆ ಬೇಡಿಕೆ ಮತ್ತು ಬೆಲೆ ಸಹ ಏರಿಕೆ ಆಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/byadgi-chilli-price-hits-record-high-gadag-youth-farmer-sells-yield-at-rs-90-000-per-quintal-444387.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo