
Entertainment
oi-Manohara M
ಟಾಲಿವುಡ್ ನಟ ಸೂಪರ್ ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟ ಮಹೇಶ್ ಬಾಬು ಒಡೆತನದ ಹಾಗೂ ಏಷಿಯನ್ ಸಿನಿಮಾಸ್ ಅವರ ಜಂಟಿ ಯೋಜನೆಯಾಗಿ ಆರಂಭಗೊಂಡಿರುವ ಹೈದರಾಬಾದ್ ಮೂಲದ ಎಎಂಬಿ ಸಿನಿಮಾಸ್ ಈಗ ಬೆಂಗಳೂರಿನಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಹೆಸರಾಂತ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲೇ ಈ ಎಎಂಬಿ ಸಿನಿಮಾಸ್ ತಲೆಯೆತ್ತಿದೆ. ಈ ಹಿನ್ನೆಲೆ ಮಹೇಶ್ ಬಾಬು ಬೆಂಗಳೂರಿಗೆ ಸರ್ಪ್ರೈಸ್ ಆಗಿ ಭೇಟಿ ನೀಡಿದ್ದಾರೆ.
ಚಿತ್ರಮಂದಿರಗಳಿಗೆ ಈ ಹಿಂದೆ ಖ್ಯಾತಿಯಾಗಿದ್ದ ಬೆಂಗಳೂರಿನ ಗಾಂಧಿನಗರದ ಪ್ರದೇಶದಲ್ಲಿ ಒಂದೊಂದೇ ಥಿಯೇಟರ್ಗಳು ಕಣ್ಮರೆಯಾಗುತ್ತಿರುವುದು ಗೊತ್ತೇ ಇದೆ. ಈಗ ಇದೇ ಜಾಗದಲ್ಲಿ ಪ್ರೀಮಿಯಂ ಮಲ್ಟಿಪ್ಲೆಕ್ಸ್ ಆರಂಭವಾಗಿದೆ. ಎಎಂಬಿ ಸಿನಿಮಾಸ್ ದಕ್ಷಿಣ ಭಾರತದ ಮೊದಲ ಡಾಲ್ಬಿ ಸ್ಕ್ರೀನ್ (Dolby Screen) ಅನ್ನು ಹೊಂದಿರುವುದರಿಂದ ವಿಶೇಷ ಗಮನಸೆಳೆದಿದೆ. ಅತ್ಯಾಧುನಿಕ ತಂತ್ರಜ್ಞಾನ, ಅದ್ಭುತ ಸೌಂಡ್ನೊಂದಿಗೆ ಚಿತ್ರಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.

ಕಪಾಲಿ ಹಿರಿಮೆ
ಇದೇ ಸ್ಥಳದಲ್ಲಿ ಹಿಂದೆ ಪ್ರಸಿದ್ಧ ಕಪಾಲಿ ಥಿಯೇಟರ್ (Kapali Theatre) ಕಾರ್ಯನಿರ್ವಹಿಸುತ್ತಿತ್ತು. ಅದು ತನ್ನ ಕಾಲದಲ್ಲಿ ತಂತ್ರಜ್ಞಾನ ಅಚ್ಚರಿ ಎಂದೇ ಪರಿಗಣಿಸಲಾಗಿತ್ತು. ಭಾರತದಲ್ಲೇ ಮೊದಲ ಸಿನಿರಾಮ ಸ್ಕ್ರೀನ್ (Cinerama Screen) ಹೊಂದಿದ್ದ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಕಪಾಲಿ, 1950ರ ದಶಕದಲ್ಲಿ ಮೂರು ಪ್ರೊಜೆಕ್ಟರ್ಗಳನ್ನು ಸಮನ್ವಯಗೊಳಿಸಿ ವಿಶಾಲ ಪರದೆ ಅನುಭವ ನೀಡುತ್ತಿದ್ದದ್ದು ವಿಶೇಷ. ಆ ಸಿನಿಮಾ ಪರಂಪರೆಯ ನೆನಪುಗಳನ್ನೇ ಹೊತ್ತ ಜಾಗದಲ್ಲಿ ಈಗ ಎಎಂಬಿ ಸಿನಿಮಾಸ್ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ.
ಜನವರಿಯಲ್ಲಿ ಈ ಹೊಸ ಮಲ್ಟಿಪ್ಲೆಕ್ಸ್ ಅದ್ಧೂರಿಯಾಗಿ ಉದ್ಘಾಟನೆಗೊಂಡಿತ್ತು. ಈ ಹಿನ್ನೆಲೆ ತಮ್ಮ ಹೊಸ ಹೂಡಿಕೆಯನ್ನು ಪರಿಶೀಲಿಸಲು ಮಹೇಶ್ ಬಾಬು ಸ್ವತಃ ಬೆಂಗಳೂರಿಗೆ ಆಗಮಿಸಿದ್ದು ಅಭಿಮಾನಿಗಳಿಗೆ ಅಚ್ಚರಿ ತಂದಿತು. ಅವರು ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ, ರಾಜಮೌಳಿ ನಿರ್ದೇಶನದ ವಾರಣಾಸಿ ಸಿನಿಮಾ ಶೂಟಿಂಗ್ನಲ್ಲಿದ್ದರೂ ಜನವರಿಯಲ್ಲಿ ಆರಂಭವಾದ ತಮ್ಮ 9-ಸ್ಕ್ರೀನ್ ಪ್ರೀಮಿಯಂ ಮಲ್ಟಿಪ್ಲೆಕ್ಸ್ಗೆ ಭೇಟಿ ನೀಡಿ ಪರಿಶೀಲಿಸಿದರು.
Experiencing South India’s first Dolby Vision at our @AMB_Cinemas Bengaluru was as special as meeting all the wonderful people who came from far and wide to welcome me …. Thank you Bengaluru. deeply humbled to see so much love fill the air🙏🙏🙏 And as always very proud of Team… pic.twitter.com/RXSTzPu79K
— Mahesh Babu (@urstrulyMahesh) February 21, 2026
ಬೆಂಗಳೂರು ಭೇಟಿ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮಹೇಶ್ ಬಾಬು, ದಕ್ಷಿಣ ಭಾರತದ ಮೊದಲ ಡಾಲ್ಬಿ ವಿಷನ್ ಅನುಭವವನ್ನು ನಮ್ಮ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪಡೆಯುವುದು ವಿಶೇಷ ಅನುಭವವಾಗಿತ್ತು. ದೂರದೂರಿನಿಂದ ಬಂದು ನನಗೆ ಆತ್ಮೀಯ ಸ್ವಾಗತ ನೀಡಿದ ಎಲ್ಲ ಅದ್ಭುತ ಜನರನ್ನು ಭೇಟಿ ಮಾಡಿದ್ದು ಇನ್ನಷ್ಟು ಸಂತೋಷ ನೀಡಿತು. ಧನ್ಯವಾದಗಳು ಬೆಂಗಳೂರು. ನಿಮ್ಮ ಪ್ರೀತಿ ಮತ್ತು ಆತ್ಮೀಯತೆ ನನ್ನನ್ನು ತುಂಬಾ ವಿನಮ್ರನನ್ನಾಗಿಸಿದೆ. ಹಾಗೆಯೇ, ಸದಾ ಹೆಮ್ಮೆಪಡುವಂತಹ ನಮ್ಮ ಟೀಂ ಎಎಂಬಿಗೆ ಅಭಿನಂದನೆಗಳು. ನಮ್ಮ ಕನಸುಗಳನ್ನು ಸಾಕಾರಗೊಳಿಸಲು ನೀವು ತೋರಿದ ಪರಿಶ್ರಮ ಮತ್ತು ಶ್ರಮಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸಂತಸ ಹಂಚಿಕೊಂಡಿದ್ದಾರೆ.

ಮಹೇಶ್ ಬಾಬು ನೋಡಲು ನೂಕುನುಗ್ಗಲು
ಗಾಂಧಿನಗರದ ಚಲನಚಿತ್ರ ಪರಂಪರೆಯನ್ನು ಹೊಸ ರೂಪದಲ್ಲಿ ಕೊಂಡೊಯ್ಯಲು, ಎಎಂಬಿ ಸಿನಿಮಾಸ್ ಹಳೆಯ ನೆನಪುಗಳು ಮತ್ತು ಹೊಸ ತಂತ್ರಜ್ಞಾನಗಳ ಸಂಯೋಜನೆಯಾಗಿ ಇದು ಬೆಂಗಳೂರಿನ ಸಿನಿ ಅಭಿಮಾನಿಗಳಿಗೆ ಹೊಸ ಅನುಭವ ನೀಡುತ್ತಿದೆ. ನಟ ಮಹೇಶ್ ಬಾಬು ಅವರ ಆಗಮನದ ಹಿನ್ನೆಲೆ ಗಾಂಧಿನಗರ ಪ್ರದೇಶವೇ ಅಭಿಮಾನಿಗಳಿಂದ ಕಿಕ್ಕಿರಿದಿತ್ತು. ತಮ್ಮ ಹೊಸ ಮಲ್ಟಿಪ್ಲೆಕ್ಸ್ಗೆ ಭೇಟಿ ನೀಡಿದ ಸಂದರ್ಭ, ದೂರದೂರಿನಿಂದ ಬಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಂಭ್ರಮ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಭಾರೀ ಜನಸ್ತೋಮ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಡ್ಡಾಯಗೊಳಿಸಲಾಗಿತ್ತು. ಭದ್ರತಾ ವ್ಯವಸ್ಥೆಯ ನಡುವೆ ಮಹೇಶ್ ಬಾಬು ನಗುಮುಖದಿಂದ ಅಭಿಮಾನಿಗಳತ್ತ ಕೈ ಬೀಸಿದರು. ಕೆಲ ಕ್ಷಣಗಳ ಕಾಲ ಅಭಿಮಾನಿಗಳತ್ತ ಮಾತುಕತೆ ನಡೆಸಿ, ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ನಂತರ ಅವರು ಮತ್ತೆ ಹೈದರಾಬಾದ್ಗೆ ವಾಪಸ್ ಆದರು. ಈ ಸಂದರ್ಭದ ವಿಡಿಯೋಗಳು ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/mahesh-babu-thanks-bengaluru-after-visiting-amb-cinemas-multiplex-in-gandhinagar-first-dolby-screen-444565.html. xn--babytilbehr-pgb.com does not claim ownership of this content. All rights remain with the original publisher.
