
Karnataka
oi-Madhusudhan KR
Government Officials Transfer: ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಆಗಾಗ ಮೇಜರ್ ಸರ್ಜರಿ ಮಾಡುತ್ತಲಿರುತ್ತದೆ. ಕೆಲವರನ್ನು ಹುದ್ದೆ ತೋರಿಸದೆ ವರ್ಗಾವಣೆ ಮಾಡಿದ ಆರೋಪಗಳು ಕೇಳಿಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೈಕೋರ್ಟ್ ವಿಭಾಗೀಯ ಪೀಠವು ಅಧಿಕಾರಿಗಳ ವರ್ಗಾವಣೆ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಹುದ್ದೆ ನಿಗದಿಪಡಿಸದೆ ಅಥವಾ ಸ್ಪಷ್ಟವಾಗಿ ಹೊಸ ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ರೀತಿಯ ಅಸ್ಪಷ್ಟ ವರ್ಗಾವಣೆ ಕ್ರಮಗಳು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತೆರಿಗೆದಾರರ ಹಣ ದುರುಪಯೋಗ
ಹುದ್ದೆ ನೀಡದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ, ಅವರು ಕಾರ್ಯನಿರ್ವಹಿಸದೆ ಮನೆಯಲ್ಲಿ ಉಳಿದರೂ ಸಂಬಳ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ತೆರಿಗೆದಾರರ ಹಣ ದುರುಪಯೋಗವಾಗುತ್ತದೆ ಎಂದು ತಿಳಿಸಿದೆ.
ಸಾರ್ವಜನಿಕ ಹಣದ ಸಮರ್ಪಕ ಬಳಕೆ ಸರ್ಕಾರದ ಹೊಣೆಗಾರಿಕೆ ಎಂಬುದನ್ನು ನೆನಪಿಸಿದ ನ್ಯಾಯಾಲಯ, ಹುದ್ದೆ ತೋರಿಸುವವರೆಗೆ ಅಧಿಕಾರಿಗಳನ್ನು ಹಿಂದಿನ ಹುದ್ದೆಯಿಂದ ಬಿಡುಗಡೆ ಮಾಡಬಾರದು. ಆಡಳಿತಾತ್ಮಕ ಕ್ರಮಗಳಲ್ಲಿ ಸ್ಪಷ್ಟತೆ ಮತ್ತು ಹೊಣೆಗಾರಿಕೆ ಅಗತ್ಯವಿದೆ ಎಂಬ ಸಂದೇಶವನ್ನು ಈ ಆದೇಶ ನೀಡಿದೆ.
‘ವರ್ಗಾವಣೆ ಆದೇಶ ಹೊರಡಿಸಿದವರೇ ಜವಾಬ್ದಾರರು’
ಹುದ್ದೆ ನೀಡದೇ ವರ್ಗಾವಣೆ ಆದೇಶ ಹೊರಡಿಸಿದರೆ ಸಂಬಂಧಿತ ಇಲಾಖೆಯ ಮುಖ್ಯಸ್ಥರೇ ಅದರ ಹೊಣೆಗಾರರಾಗಬೇಕಾಗುತ್ತದೆ. ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ಪೀಠ, ಹುದ್ದೆ ನೀಡದೇ ಕಾಯುವಿಕೆಯಲ್ಲಿ ಇರಿಸಿದ ಅವಧಿಗೆ ನೀಡಲಾದ ವೇತನವನ್ನು ಕಾರಣಕರ್ತ ಅಧಿಕಾರಿಯಿಂದಲೇ ವಸೂಲು ಮಾಡಬೇಕು ಎಂದು ಆದೇಶಿಸಿದೆ.
ಜವಾಬ್ದಾರಿ ಮತ್ತು ಪಾರದರ್ಶಕತೆ ಕಡ್ಡಾಯ
ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ. ಅರುಣ್ ಕುಮಾರ್ ಅವರನ್ನು 2025ರ ಜನವರಿ 29ರಂದು ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ನಂತರ ಅವರಿಗೆ ಯಾವುದೇ ಹೊಸ ಹುದ್ದೆ ನೀಡದ ಹಿನ್ನೆಲೆಯಲ್ಲಿ ಅವರು ಪೋಸ್ಟಿಂಗ್ ಕೋರಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಪೀಠ, ಸ್ಪಷ್ಟ ಹುದ್ದೆ ನೀಡದೇ ವರ್ಗಾವಣೆ ಮಾಡುವುದು ಸರಿಯಲ್ಲ. ಆಡಳಿತಾತ್ಮಕ ಕ್ರಮಗಳಲ್ಲಿ ಜವಾಬ್ದಾರಿ ಮತ್ತು ಪಾರದರ್ಶಕತೆ ಕಡ್ಡಾಯ ಎಂದು ಮತ್ತೊಮ್ಮೆ ಒತ್ತಿ ಹೇಳಿದೆ.
ವರ್ಗಾವಣೆ ನಿಯಮ, ಪ್ರಕ್ರಿಯೆಗಳು
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಆಡಳಿತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದೆ. ಸೇವಾ ಅವಶ್ಯಕತೆ, ಸಾರ್ವಜನಿಕ ಹಿತಾಸಕ್ತಿ, ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶ ಮತ್ತು ಸಮನ್ವಯ ಸಾಧನೆಗಾಗಿ ವರ್ಗಾವಣೆಗಳನ್ನು ಮಾಡಲಾಗುತ್ತದೆ. ಆದರೆ ಈ ಪ್ರಕ್ರಿಯೆ ಸ್ಪಷ್ಟ ನಿಯಮಾವಳಿಗಳಡಿ ನಡೆಯಬೇಕು ಎಂಬುದು ನ್ಯಾಯಾಂಗವೂ ಹಲವು ಬಾರಿ ಒತ್ತಿ ಹೇಳುತ್ತಲೇ ಇದೆ.
ಹುದ್ದೆ ತೋರಿಸಿ ವರ್ಗಾಹಿಸುವುದು ಏಕೆ ಮುಖ್ಯ?
ವರ್ಗಾವಣೆ ಆದೇಶ ಹೊರಡಿಸುವಾಗ ಅಧಿಕಾರಿಗೆ ಹೊಸ ಹುದ್ದೆಯನ್ನು ಸ್ಪಷ್ಟವಾಗಿ ತಿಳಿಸಬೇಕು. ಹುದ್ದೆ ಸೂಚನೆ ಇಲ್ಲದೆ ವರ್ಗಾವಣೆ ಮಾಡಿದರೆ ಆಡಳಿತದಲ್ಲಿ ಗೊಂದಲ ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಧಿಕಾರಿಗಳು ಹೊಸ ಪೋಸ್ಟಿಂಗ್ ಸಿಗುವವರೆಗೆ ಕೆಲಸವಿಲ್ಲದೆ, ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಸರ್ಕಾರಕ್ಕೆ ಅನಾವಶ್ಯಕ ಆರ್ಥಿಕ ಭಾರವೂ ಬೀಳಬಹುದು.
ಕಾನೂನುಬದ್ಧ ಅಂಶಗಳು
ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ವರ್ಗಾವಣೆ ಸರ್ಕಾರದ ಹಕ್ಕಾಗಿದ್ದರೂ, ಅದು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರಬೇಕು. ನಿಯಮ ಉಲ್ಲಂಘನೆಯಾದರೆ ಸಂಬಂಧಿಸಿತ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲು ಏರಬಹುದು. ನ್ಯಾಯಾಲಯಗಳು ಸಾಮಾನ್ಯವಾಗಿ ಸಾರ್ವಜನಿಕ ಹಣದ ದುರುಪಯೋಗವಾಗದಂತೆ ಹಾಗೂ ಆಡಳಿತದ ಜವಾಬ್ದಾರಿ ಖಚಿತವಾಗುವಂತೆ ಮಾರ್ಗಸೂಚಿ ನೀಡುತ್ತವೆ.
ಇನ್ನೂ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ನಿಯಮ ಪಾಲನೆ ಕಡ್ಡಾಯವಾಗಿದೆ. ಸ್ಪಷ್ಟ ಹುದ್ದೆ, ವರದಿ ಮಾಡುವ ಅಧಿಕಾರಿಯನ್ನು ಸೂಚಿಸುವುದು ಉತ್ತಮ ಆಡಳಿತದ ಲಕ್ಷಣವೆಂದು ಪರಿಗಣಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಕ್ರಮವು ಕೇವಲ ಆಡಳಿತಾತ್ಮಕ ಕ್ರಮವಲ್ಲ. ಅದು ಸಾರ್ವಜನಿಕ ಹಣದ ಸಮರ್ಪಕ ಬಳಕೆಯೊಂದಿಗೆ ನೇರ ಸಂಪರ್ಕ ಹೊಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/government-officials-karnataka-high-court-rules-against-transfer-of-officials-without-assigned-post-444647.html. xn--babytilbehr-pgb.com does not claim ownership of this content. All rights remain with the original publisher.
