Ravi Basrur: 35 ಲಕ್ಷದ ವಾಚ್‌ ಗಿಫ್ಟ್‌ ಕೊಟ್ಟ ತೆಲುಗು ನಟ: 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದನ್ನು ನೆನೆದ ರವಿ ಬಸ್ರೂರ್ | Ravi Basrur Gets 35 Lakh Worth Rolex Gift from Telugu Actor Vishwak Sen Recalls Suicide Attempts

Entertainment

oi-Manohara M

ಕೆಜಿಎಫ್‌ನ “ಸಲಾಂ ರಾಕಿ ಭಾಯ್” ಎನ್ನುವ ಹಾಡಿನ ಮೂಲಕ ದೇಶದಾದ್ಯಂತ ಸಿನಿಪ್ರಿಯರನ್ನು ಹುಚ್ಚೆದ್ದು ಕುಣಿಸಿದ್ದ ಸಂಗೀತದ ಮಾಂತ್ರಿಕ ರವಿ ಬಸ್ರೂರ್‌ ಈಗ ಅತ್ಯಂತ ಬೇಡಿಕೆಯಲ್ಲಿರುವ ಸಂಗೀತ ನಿರ್ದೇಶಕ. ಇದಕ್ಕೆ ಸಾಕ್ಷಿ ಎನ್ನುವಂತೆ ರವಿ ಬಸ್ರೂರ್‌ ಅವರ ಪ್ರತಿಭೆ ಮೆಚ್ಚಿ ಟಾಲಿವುಡ್‌ ನಟ ವಿಶ್ವಕ್‌ ಸೇನ್‌ ಬರೋಬ್ಬರಿ 35 ಲಕ್ಷ ಬೆಲೆ ಬಾಳುವ ದುಬಾರಿ ರೋಲೆಕ್ಸ್ ವಾಚ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ತಮ್ಮ ವೃತ್ತಿಜೀವನಕ್ಕೂ ಮುನ್ನ ಬದುಕಿನಲ್ಲಿ ಕಂಡಿದ್ದ ಏಳುಬೀಳುಗಳ ಬಗ್ಗೆ ಬಸ್ರೂರ್‌ ಹೇಳಿಕೊಂಡಿದ್ದಾರೆ. ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರವನ್ನೂ ಭಾವುಕವಾಗಿ ಬಿಚ್ಚಿಟ್ಟಿದ್ದಾರೆ.

ತೆಲುಗು ಚಿತ್ರ “ಕಲ್ಟ್‌” ಟೀಸರ್ ಬಿಡುಗಡೆ ಸಮಾರಂಭದಲ್ಲಿ ರವಿ ಬಸ್ರೂರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ವೇಳೆ ನಟ-ನಿರ್ದೇಶಕ ವಿಶ್ವಕ್‌ ಸೇನ್‌ ಅಚ್ಚರಿಯಾಗಿ ರೋಲೆಕ್ಸ್ ಗಡಿಯಾರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ಈ ಅನಿರೀಕ್ಷಿತ ಸನ್ಮಾನದಿಂದ ರವಿ ಬಸ್ರೂರ್‌ ಭಾವುಕರಾಗಿ ಕಣ್ಣೀರು ತಡೆಯಲಾರದೆ ನೋವುಗಳನ್ನು ಹೇಳಿಕೊಂಡಿದ್ದಾರೆ.

Ravi Basrur

“ಇದು ಕೇವಲ ಗಡಿಯಾರವಲ್ಲ, ಇದು ಸಂಗೀತಗಾರರ ಆತ್ಮಕ್ಕೆ ದೊರೆತ ಗೌರವ” ಎಂದು ಮಾತನಾಡಿದ ರವಿ, ತಮ್ಮ 25 ವರ್ಷದ ಸಂಗೀತ ಪಯಣವನ್ನು ನೆನಪಿಸಿಕೊಂಡರು. “ನಾನು ಯಾವಾಗಲೂ ಒಳ್ಳೆಯ ಜನರಿಗೆ ಒಳ್ಳೆಯ ಸಂಗೀತ ನೀಡಲು ಪ್ರಯತ್ನಿಸಿದ್ದೇನೆ. ಇಂದು ಅವರು ನನ್ನ ಆತ್ಮವನ್ನು ಗುರುತಿಸಿದ್ದಾರೆ” ಎಂದು ಧನ್ಯವಾದ ತಿಳಿಸಿದ್ದಾರೆ.

“18ನೇ ವಯಸ್ಸಿನಲ್ಲಿ ಆತ್ಮಹತ್ಯೆ ಯತ್ನ”

“18ನೇ ವಯಸ್ಸಿನಲ್ಲೇ ನಾನು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಈ ಜೀವನ ಬೇಡವೆಂದುಕೊಂಡಿದ್ದೆ. ಆದರೆ ಎರಡೂ ಬಾರಿ ನಾನು ಉಳಿಯುವಂತಾಯಿತು” ಎಂದು ರವಿ ಆ ಸಂಕಷ್ಟದ ದಿನಗಳನ್ನು ನೆನೆದಿದ್ದಾರೆ. “ಎರಡನೇ ಬಾರಿ ನನ್ನನ್ನು ಉಳಿಸಿದ ವ್ಯಕ್ತಿ ನನ್ನ ಸಂಗೀತವನ್ನು ಕೇಳಿ, ನನಗೆ ಒಂದು ಕೀಬೋರ್ಡ್ ಕೊಟ್ಟರು. ಜೊತೆಗೆ ₹35,000 ಸಹ ನೀಡಿದರು. ಆ ದಿನದಿಂದಲೇ ನನ್ನ ಜೀವನ ಬದಲಾಯಿತು. ನನ್ನ ಪ್ರಾಣ ಉಳಿಸಿದ ಆ ವ್ಯಕ್ತಿಯ ಹೆಸರೇ ‘ರವಿ’. ಅದಕ್ಕಾಗಿ ನನ್ನ ಹೆಸರನ್ನು ‘ರವಿ’ ಎಂದು ಬದಲಿಸಿಕೊಂಡೆ” ಎಂದೂ ಹೇಳಿದ್ದಾರೆ.

Ravi Basrur

ಆ ತಿರುವು ಅವರ ಬದುಕನ್ನೇ ಬದಲಿಸಿತು. ನಂತರ ಅವರು ಕೆಜಿಎಫ್‌, ಕೆಜಿಎಫ್‌-2, ಸಲಾರ್‌, ಕಬ್ಜ ಮುಂತಾದ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿದರು. ಇನ್ನು ವಿಶ್ವಕ್ ಸೇನ್ ಕುರಿತು ಮಾತನಾಡಿದ ರವಿ, “ನನ್ನ ಜೀವ ಉಳಿಸಿದ ಆ ವ್ಯಕ್ತಿಯ ನಂತರ, ನನ್ನ ಪಯಣವನ್ನು ಮತ್ತು ಆತ್ಮವನ್ನು ಗುರುತಿಸಿದವರು ವಿಶ್ವಕ್ ಸೇನ್. ನಾನು ಅವರಿಗೆ ಜೀವನಪೂರ್ತಿ ಋಣಿಯಾಗಿರುತ್ತೇನೆ” ಎಂದು ಕೃತಜ್ಞತೆ ಸಲ್ಲಿಸಿದರು. ‘ಕಲ್ಟ್’ ಸಿನಿಮಾದಲ್ಲಿ ವಿಶ್ವಕ್ ಸೇನ್ ಜೊತೆಗೆ ಗಾಯತ್ರಿ ಭಾರದ್ವಾಜ್ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ರಿಲೀಸ್ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಟಾಕ್ಸಿಕ್‌ನಲ್ಲೂ ಬಸ್ರೂರ್‌ ಮೋಡಿ

ಸದ್ಯ ರವಿ ಬಸ್ರೂರು ಅವರು ಯಶ್‌ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್‌ ಸಿನಿಮಾಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯಶ್‌ ಅಭಿನಯದ ಈ ಚಿತ್ರವನ್ನು ಗೀತು ಮೋಹನ್‌ದಾಸ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಕುರೇಶಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತದ ಮೂಲಕ ಎಲ್ಲರನ್ನೂ ತಿರುಗಿ ನೋಡುವಂತೆ ಮಾಡಿರುವ ಬಸ್ರೂರ್‌ ಅವರು ಕತ್ತಲಿನಿಂದ ಬೆಳಕಿನತ್ತ ಸಾಗಿದ ಪಯಣ ಇಂದು ಅನೇಕರಿಗೆ ಪ್ರೇರಣೆಯಾಗಿದೆ.‌


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/ravi-basrur-gets-35-lakh-worth-rolex-gift-from-telugu-actor-vishwak-sen-recalls-suicide-attempts-444655.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo