
Karnataka
oi-Madhusudhan KR
ಬೆಂಗಳೂರು, ಫೆಬ್ರವರಿ 23: ಪ್ರಿಯಾಂಕ್ ಖರ್ಗೆ ಅವರಿಗೆ ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಯಾವುದೇ ಹೋರಾಟ ಮಾಡಿಲ್ಲ. ಅಂಬೇಡ್ಕರ್ ಹೆಸರು ಹೇಳುತ್ತಾರೆ ಅಷ್ಟೇ. ಆದರೆ, ದಲಿತತ್ವ ಅವರ ಕುಟುಂಬದಲ್ಲೇ ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದರು. ಇದಕ್ಕೆ ಇದೀಗ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ರಾಜಕೀಯದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು, ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ. ಅವರು ಫೇಸ್ಬುಕ್ ಖಾತೆಯಲ್ಲಿ ಏನು ಬರೆದುಕೊಂಡಿದ್ದಾರೆಯೋ ಅದನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ ತಿಳಿಯಿರಿ.

ನಾರಾಯಣಸ್ವಾಮಿಗೆ ಗೌರವಯುತ ರಾಜಕಾರಣದ ಪಾಠ
ಮಾನ್ಯ ಛಲವಾದಿ ನಾರಾಯಣಸ್ವಾಮಿಯವರು ನನ್ನ ಬಗ್ಗೆ ಬಗೆಬಗೆಯ ಮಾತುಗಳನ್ನಾಡಿದ್ದಾರೆ. ಬಹುಶಃ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಗ್ಗೆ ಮಾತನಾಡುವುದು ಅವರಿಗೆ ಅನಿವಾರ್ಯ. ನನ್ನ ಕುರಿತು ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯದ ಕೊನೆಯ ದಿನವಾಗುತ್ತದೆ. ಆರ್ಎಸ್ಎಸ್ನವರ ಚಡ್ಡಿಗಳನ್ನು ತಲೆ ಮೇಲೆ ಹೊತ್ತು ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬದಲು, ನನ್ನ ತಂದೆಯವರ ಸೈದ್ಧಾಂತಿಕ ನೆರಳಿನಲ್ಲಿ ಮುಂದುವರೆಯುವುದು ಅತ್ಯಂತ ಗೌರವಯುತ ರಾಜಕಾರಣ,” ಎಂದು ಭಾವಿಸಿದ್ದೇನೆ.
ನಾರಾಯಣಸ್ವಾಮಿಗೆ ಪ್ರಿಯಾಂಕ್ ಖರ್ಗೆ ಸವಾಲು
ವಂಶಪರಂಪರೆಯ ರಾಜಕಾರಣದ ಬಗ್ಗೆ ಮಾತನಾಡಲೇಬೇಕು ಅಂತಾ ಅಂದುಕೊಂಡಿದ್ದರೆ, ತಮ್ಮದೇ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಅರವಿಂದ್ ಬೆಲ್ಲದ್ ಅವರಿಂದ ಮಾತನಾಡಲು ಶುರು ಮಾಡಲಿ, ಆ ಧೈರ್ಯ ನಾರಾಯಣಸ್ವಾಮಿಯವರಿಗಿದೆಯೇ? ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ.
ದಲಿತತ್ವ ಎಂದರೆ ಸ್ವಾಭಿಮಾನ, ದಲಿತತ್ವ ಎಂದರೆ ಅನ್ಯಾಯಕ್ಕೆ ಪ್ರತಿರೋಧ, ದಲಿತತ್ವ ಎಂದರೆ ಆತ್ಮಬಲ. ದಲಿತತ್ವದ ಸ್ವಾಭಿಮಾನವನ್ನು ಆರ್ಎಸ್ಎಸ್ನವರ ಚಡ್ಡಿಗಳಿಗೆ ಅಡ ಇಟ್ಟವರು, ದಲಿತತ್ವದ ಪಾಠ ಹೇಳುವುದು ಕುಚೋದ್ಯವಲ್ಲದೆ ಇನ್ನೇನು? ಎಂದು ಪ್ರಶ್ನಿಸುವ ಮೂಲಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಸಚಿವ ಪ್ರಿಯಾಂಕ್ ಅವರಿಗೆ ಮಾಡಲು ಬೇರೇನೂ ಕೆಲಸವಿಲ್ಲ. ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಹೋರಾಡಿಲ್ಲ. ಅಂಬೇಡ್ಕರ್ ಹೆಸರು ಹೇಳುತ್ತಾರೆಯೇ ಹೊರತು ದಲಿತತ್ವ ಅವರ ಕುಟುಂಬದಲ್ಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಿಯಾಂಕ್ ಅವರು ರಾಜಕಾರಣಿಯೇ ಅಲ್ಲ. ಅಪ್ಪನ ನೆರಳಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಬದ್ಧತೆಯೂ ಇಲ್ಲ. ಅವರ ತಳಬುಡ ಎಲ್ಲಾ ನನಗೆ ಗೊತ್ತಿದೆ ಎಂದು ಹೇಳಿದ್ದರು.
ನಮ್ಮ ಅಪ್ಪ ರಾಜಕಾರಣಿಯಲ್ಲ. ಓದು ಬರಹ ತಿಳಿದವರಲ್ಲ
ಕೆಣಕಿದರೆ ಕೊಣಕುವುದಾಗಿ ಹಲವು ಬಾರಿ ಹೇಳಿರುವುದಾಗಿ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದರು. ನಮ್ಮ ಅಪ್ಪ ರಾಜಕಾರಣಿ ಅಲ್ಲ. ಓದು ಬರಹ ತಿಳಿದವರಲ್ಲ. ಹಳ್ಳಿಯಲ್ಲಿ ಹುಟ್ಟಿ ಇವತ್ತು ಸ್ವಯಾರ್ಜಿತವಾಗಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಅವರದು ಪಿತ್ರಾರ್ಜಿತ ರಾಜಕಾರಣ. ನಾನು ಬಿಜೆಪಿಯುಲ್ಲಿ ಈ ಮಟ್ಟಕ್ಕೆ ಬೆಳೆದಿರುವುದನ್ನು ಸಹಿಸದೇ ಪ್ರಿಯಾಂಕ್ ಅವರು ಟೀಕೆ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪರ ಕೆಲಸ ಮಾಡಿಲ್ಲ. ಚಾಮರಾಜನಗರ, ಮೈಸೂರು. ರಾಯಚೂರು, ಕಲಬುರಗಿಯಲ್ಲಿ ಅವರ ಫೋಟೊಗೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದಾರೆ. ಈ ಸರ್ಕಾರ ದಲಿತರ 39 ಸಾವಿರ ಕೋಟಿ ರು. ನುಂಗಿದರೂ ಒಂದು ಮಾತನಾಡದೆ ಸಮರ್ಥಿಸಿಕೊಂಡರು. ಒಳ ಮೀಸಲಾತಿ ಬಗ್ಗೆ ಚಲಾರ ಎತ್ತಲಿಲ್ಲ. ಒಳಮೀಸಲಾತಿ ವಿಚಾರದಲ್ಲಿ ಜನಾಂಗಗಳ ಲೋಪ ಇಲ್ಲ. ಅದು ಸರ್ಕಾರದ ಲೋಪವಾಗಿದ್ದು, ಸರ್ಕಾರವೇ ಸರಿಪಡಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/priyank-kharge-hits-back-at-chalavadi-narayanaswamy-over-family-politics-remark-know-details-444823.html. xn--babytilbehr-pgb.com does not claim ownership of this content. All rights remain with the original publisher.
