ಶಿವಮೊಗ್ಗ: ಕ್ರಿಕೆಟ್ ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಹತ್ಯೆ; 15 ಲಕ್ಷ ರೂ. ಪರಿಹಾರ ಘೋಷಣೆ | Shivamogga SSLC Student Murder While Stopping Cricket Fight CM 15 Lakh Compensation Announced

Karnataka

-Manohara M

ಶಿವಮೊಗ್ಗ: ನಗರದ ಹೊರವಲಯದ ಊರಗಡೂರಿನಲ್ಲಿ ಕ್ರಿಕೆಟ್ ಆಟದ ಸಣ್ಣ ವಿಚಾರವು ರಕ್ತಪಾತಕ್ಕೆ ಕಾರಣವಾಗಿದ್ದು, ಜಗಳ ಬಿಡಿಸಲು ಹೋದ 15 ವರ್ಷದ ಅಮಾಯಕ ವಿದ್ಯಾರ್ಥಿ ಸಂಕೇತ್ ಪ್ರಾಣ ಕಳೆದುಕೊಂಡಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಯಲ್ಲಿದ್ದ ವಿದ್ಯಾರ್ಥಿಯ ಕೊಲೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಸೂಳೆಬೈಲಿನ ದುರ್ಗಮ್ಮನ ಬೀದಿ ನಿವಾಸಿಯಾದ ಸಂಕೇತ್, ಸೋಮವಾರ ರಾತ್ರಿ ಶಾಲೆಯಲ್ಲಿ ನಡೆಯುತ್ತಿದ್ದ ಎಸ್ಸೆಸ್ಸೆಲ್ಸಿ ವಿಶೇಷ ತರಗತಿಯನ್ನು ಮುಗಿಸಿ ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.

ಈ ವೇಳೆ ಎರಡು ದಿನಗಳ ಹಿಂದೆ ನಡೆದಿದ್ದ ಕ್ರಿಕೆಟ್ ಪಂದ್ಯಾವಳಿಯ ಹಳೆಯ ಜಗಳವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಏಳು ಮಂದಿ ಬಾಲಕರ ಗುಂಪು ಇವರನ್ನು ಅಡ್ಡಗಟ್ಟಿದೆ. ಗುಂಪು ಸಂಕೇತ್‌ನ ಸ್ನೇಹಿತನ ಮೇಲೆ ಹಲ್ಲೆಗೆ ಮುಂದಾದಾಗ, ಜಗಳ ಬಿಡಿಸಲು ಸಂಕೇತ್ ಮಧ್ಯಪ್ರವೇಶಿಸಿದ್ದ. ಈ ವೇಳೆ ಕಿಡಿಗೇಡಿಗಳು ಸಂಕೇತ್‌ನ ಎದೆಯ ಭಾಗಕ್ಕೆ ತೀವ್ರವಾಗಿ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

SSLC Student Murder

ಏಳು ಮಂದಿ ಬಾಲಕರು ವಶಕ್ಕೆ

ಈ ಕೃತ್ಯ ಎಸಗಿದ ಏಳು ಮಂದಿ ಬಾಲಕರು ಸಂಕೇತ್ ಓದುತ್ತಿದ್ದ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದು, ಪ್ರಸ್ತುತ ಶಾಲೆ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯ ಸಮಯದಲ್ಲಿ ಬಾಲಕರು ಗಾಂಜಾ ಸೇವಿಸಿರುವ ಶಂಕೆ ವ್ಯಕ್ತವಾಗಿದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಈಗಾಗಲೇ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮುಗಿದ ನಂತರ, ಸಂಕೇತ್‌ನ ಮೃತದೇಹವನ್ನು ಮೆರವಣಿಗೆಯ ಮೂಲಕ ಊರಿಗೆ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಖಂಡನೆ: ಪರಿಹಾರ ಘೋಷಣೆ

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಶಿವಮೊಗ್ಗ ನಗರದ ಸಮೀಪದ ಊರುಗಡೂರಿನಲ್ಲಿ ಶಾಲಾ ವಿದ್ಯಾರ್ಥಿಯನ್ನು ಥಳಿಸಿ, ಹತ್ಯೆಗೈದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವಾಗುವುದರ ಜೊತೆಗೆ, ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆಯಾಗುವಂತೆ ಕ್ರಮವಹಿಸಿ, ಆತನ ಸಾವಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

SSLC Student Murder

ಕೊಲೆಯಲ್ಲಿ ಭಾಗಿಯಾದವರು ಇನ್ನೂ ಚಿಕ್ಕಪ್ರಾಯದ ಹುಡುಗರು ಎಂದು ಕೇಳಿ ದಿಗ್ಭ್ರಮೆಯಾಯಿತು. ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಂಡು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ ಎಂದು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಕೊಲೆಯ ಹಿಂದಿನ ಉದ್ದೇಶವೇನೇ ಇರಲಿ, ಕೊಲೆಗೈದವರು ಯಾರೇ ಆಗಿರಲಿ, ಅವರನ್ನು ಕಾನೂನಿನ ಮೂಲಕ ಹೆಡೆಮುರಿ ಕಟ್ಟಿ, ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಎಸಗುವ ಮುನ್ನ ನೂರು ಬಾರಿ ಯೋಚಿಸಬೇಕಾದಂತಹ ಸ್ಥಿತಿ ನಿರ್ಮಾಣ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಬಾಲ್ಯದಲ್ಲೇ ದ್ವೇಷ, ಹಿಂಸೆ, ಅಪರಾಧ ಕೃತ್ಯಗಳ ದುರ್ಬುದ್ದಿ ಬೆಳೆಸಿಕೊಳ್ಳುವುದು ಅತ್ಯಂತ ಅಪಾಯಕಾರಿ. ಇಂತಹ ಮನಸ್ಥಿತಿಯಿರುವವರು ದುಶ್ಚಟಗಳಿಗೆ ದಾಸರಾದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಪೋಷಕರು ಸಹ ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು, ಮಕ್ಕಳು ಹಾದಿ ತಪ್ಪಿದ್ದರೆ ತಿದ್ದಿ ಬುದ್ದಿ ಹೇಳಬೇಕು ಎಂದಿದ್ದಾರೆ.

ಶಾಲೆಯ ಸುತ್ತಮುತ್ತ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಆಡಳಿತ ಮಂಡಳಿ ನಿಗಾ ವಹಿಸಬೇಕು. ಅಗತ್ಯಬಿದ್ದರೆ ಪೊಲೀಸರ ನೆರವನ್ನು ಪಡೆಯಬೇಕು. ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬವನ್ನು ಸಂತೈಸುವ ಉದ್ದೇಶದಿಂದ ಮೃತನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದಿದ್ದಾರೆ.

ಈ ದುಷ್ಕೃತ್ಯ ಎಸಗಿದ ಎಲ್ಲರನ್ನೂ ಈಗಾಗಲೇ ಬಂಧಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ವಾಗ್ದಾನವನ್ನು ಕೂಡ ಆ ನೊಂದ ಕುಟುಂಬಕ್ಕೆ ಈ ವೇಳೆ ನೀಡುತ್ತಿದ್ದೇನೆ. ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ, ಶಾಂತಿ – ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಕೃತ್ಯದಲ್ಲಿ ತೊಡಗುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/shivamogga-sslc-student-murder-while-stopping-cricket-fight-cm-15-lakh-compensation-announced-011-445049.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo