ರಕ್ಷಣಾ ಉತ್ಪಾದನೆಯ ರಾಜಧಾನಿಯಾಗಲಿದೆ ಬೆಂಗಳೂರು: 300 ಎಕರೆಯಲ್ಲಿ ಹೊಸ ಕೈಗಾರಿಕಾ ಪಾರ್ಕ್‌ ಘೋಷಣೆ | Karnataka to Set Up 200-Acre Defense and 100-Acre Sensor Parks: Fly Taxi Service Soon: MB Patil

Karnataka

oi-Shankrappa Parangi

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಶಿನ್ ಟೂಲ್ಸ್ ಕ್ಷೇತ್ರದಲ್ಲಿ ವರ್ಷಕ್ಕೆ ಬರೋಬ್ಬರಿ 36,500 ಕೋಟಿ ರೂ. ವಹಿವಾಟು ನಡೆದಿದೆ. ಕೈಗಾರಿಕಾ ರಂಗದಲ್ಲಿ ಇದು ಒಳ್ಳೆಯ ಬೆಳವಣಿಗೆ. ಇದರ ಉತ್ತೇಜನಕ್ಕೆಂದೇ ನಾವು ಬೃಹತ್ ಪ್ರಮಾಣದ ಪ್ರದರ್ಶನ ಮೇಳಗಳನ್ನು ನಡೆಸಿದ್ದೇವೆ. ಇದೀಗ ರಾಜ್ಯದಲ್ಲಿ 200 ಎಕರೆಯಲ್ಲಿ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಪಾರ್ಕ್ ಮತ್ತು 100 ಎಕರೆಯಲ್ಲಿ ಏವಿಯಾನಿಕ್ಸ್-ಸೆನ್ಸರ್ ಪಾರ್ಕ್ ಸ್ಥಾಪನೆಗೆ ಚಿಂತನೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದರು.

ಬೆಂಗಳೂರಿನ ಖನಿಜ ಭವನದಲ್ಲಿ ಮಂಗಳವಾರ ದಿನಪೂರ್ತಿ ಮಹತ್ವದ ಸಭೆ ನಡೆಯಿತು. ಈ ವೇಳೆ ಪ್ರಮುಖ ಉದ್ಯಮಿಗಳು ಹಾಗೂ ಉದ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಸಚಿವರು ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಐಕೆಎಫ್ ಸಿಇಒ ಜೋತ್ಸ್ನಾ, ಉದ್ಯೋಗ ಮಿತ್ರ ಎಂಡಿ ದೊಡ್ಡ ಬಸವರಾಜು ಹಾಗೂ ಉದ್ಯಮಗಳ ಮಧ್ಯ ಕೈಗಾರಿಕೆ, ಹೂಡಿಕೆ, ಹೊಸ ಉದ್ಯಮ ಪಾರ್ಕ್ ಸ್ಥಾಪನೆ ಕುರಿತು ಮಹತ್ವ ಚರ್ಚೆಗಳು ನಡೆದವು.

Karnataka Industrial Park

ಈ ವೇಳೆ ಸಚಿವ ಎಂಬಿ ಪಾಟೀಲರು ಮಾತನಾಡಿ, ಕರ್ನಾಟಕವು ರಕ್ಷಣಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯ ರಾಜಧಾನಿಯಾಗಬೇಕು. ಇದಕ್ಕಾಗಿ 200 ಎಕರೆಯಲ್ಲಿ ಪ್ರತ್ಯೇಕ ಪಾರ್ಕ್ ಸ್ಥಾಪಿಸಬೇಕು. ಇದೇ ರೀತಿಯಲ್ಲಿ 100 ಎಕರೆಯಲ್ಲಿ ಏವಿಯಾನಿಕ್ಸ್ ಮತ್ತು ಸೆನ್ಸರ್ ಪಾರ್ಕ್ ಆರಂಭಿಸಬೇಕು ಎಂಬುದರ ಪ್ರಸ್ತಾಪವಾಗಿದೆ. ವಿಶೇಷ ಹೂಡಿಕೆ ವಲಯ ಅಸ್ತಿತ್ವಕ್ಕೆ ಬಂದಮೇಲೆ ಇವುಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಬೇಕಾದ ಭೂಮಿಗೆ ಯಾವ ತೊಂದರೆಯೂ ಇಲ್ಲ ಎಂದು ಅವರು ನುಡಿದಿದ್ದಾರೆ.

ಬೆಂಗಳೂರಲ್ಲಿ ಫ್ಲೈ ಟ್ಯಾಕ್ಸಿ ಸೇವಾರಂಭಕ್ಕೆ ನೀತಿ

ಇಡೀ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಪಾನಿನಲ್ಲಿ 2028ರ ಹೊತ್ತಿಗೆ ಸುಝುಕಿ ಮತ್ತು ಟೊಯೊಟಾ ಕಂಪನಿಗಳು ಏರಿಯಲ್ ಟ್ಯಾಕ್ಸಿ ಸೇವೆ ಆರಂಭಿಸುತ್ತಿವೆ. ಅದಕ್ಕೆ ಬೆಂಗಳೂರಿನ ಸಾಸ್ಮೋಸ್ ಕಂಪನಿಯೇ ವಿದ್ಯುತ್ ಸಾಧನ-ಸಲಕರಣೆಗಳನ್ನು ಪೂರೈಸುತ್ತಿದೆ. ನಮ್ಮಲ್ಲೂ ಸಹ ‘ಫ್ಲೈ-ಟ್ಯಾಕ್ಸಿ’ ಸೇವೆಗೆ ಸಂಬಂಧಿಸಿದಂತೆ ಸಮರ್ಪಕ ನೀತಿ ರೂಪಿಸಿ, ಇಲ್ಲೂ ಅಂತಹ ಸೇವೆಯನ್ನು ಆರಂಭಿಸಬಹುದು ಎಂದು ಉದ್ಯಮಿಗಳು ತಿಳಿಸಿದ್ದು, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ.

ನಾನಾ ಕೈಗಾರಿಕಾ ವಲಯಗಳ ಭವಿಷ್ಯದ ಹಾದಿ ಹೇಗಿರಬೇಕು ಮತ್ತು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಸ್ವರೂಪ ಯಾವುದಾಗಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶ ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣೆ, ಮಶಿನ್ ಟೂಲ್ಸ್, ಆಟೋ/ಇ.ವಿ, ಮತ್ತು ಪರಿಸರಸ್ನೇಹಿ ಇಂಧನ ವಲಯಗಳ ವಿಷನ್ ಗ್ರೂಪ್ ಗಳೊಂದಿಗೆ ಇಂದಿನ ಸಭೆ ಆಯೋಜಿಸಲಾಯಿತು ಎಂದು ತಿಳಿಸಿದರು.

6 ಜಿಲ್ಲೆಗಳಲ್ಲಿ ರಕ್ಷಣಾ ಕಾರಿಡಾರ್

ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದ ಕೈಗಾರಿಕೆಗಳಿಗೆ ಅಗತ್ಯವಾದ ಪರೀಕ್ಷಾ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಸ್ಥಾಪಿಸುವ ಬಗ್ಗೆ ಚರ್ಚೆ ಆಗಿದ್ದು, ಸೌಲಭ್ಯಗಳನ್ನು ಒದಗಿಸಲಾಗುವುದು. ನಾವು ಈ ಕ್ಷೇತ್ರಗಳ ಬೆಳವಣಿಗೆಗೆ ಅಗತ್ಯವಾದ ನೀಲನಕ್ಷೆ ತಯಾರಿಸಬೇಕೆಂಬ ಸಲಹೆ ಕೇಳಿ ಬಂದಿದೆ. ನಾವು ಈಗಾಗಲೇ ಬೆಂಗಳೂರು ಉತ್ತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಧಾರವಾಡ-ವಿಜಯಪುರ-ಬೆಳಗಾವಿ ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಕೇಂದ್ರ ಸರ್ಕಾರದ ಬಳಿ ಕೇಳಿದ್ದೇವೆ. ಇವುಗಳ ಜೊತೆಗೆ ಬೆಂಗಳೂರು ಮತ್ತು ಮೈಸೂರು ನಡುವೆ ಕೂಡ ಇಂತಹ ಕಾರಿಡಾರ್ ಬೆಳವಣಿಗೆಗೆ ಸದಾವಕಾಶ ಇದೆ ಎಂದು ಉದ್ಯಮಿಗಳು ಸರ್ಕಾರದ ಗಮನಕ್ಕೆ ತಂದರು ಎಂದರು.

ರಾಜ್ಯದಲ್ಲಿ ಮಶೀನ್ ಟೂಲ್ಸ್ ಕ್ಷೇತ್ರದಲ್ಲಿ ವಾರ್ಷಿಕ 36,500 ಕೋಟಿ ರೂ. ವಹಿವಾಟು ನಡೆದಿದ್ದು, ಒಳ್ಳೆಯ ಬೆಳವಣಿಗೆ ಇದೆ. ಇದರ ಉತ್ತೇಜನಕ್ಕೆಂದೇ ನಾವು ಬೃಹತ್ ಪ್ರಮಾಣದ ಪ್ರದರ್ಶನ ಮೇಳಗಳನ್ನು ನಡೆಸಿದ್ದೇವೆ. ಇದಾದ ಮೇಲೆ ಈ ಕ್ಷೇತ್ರದಲ್ಲಿ ವಿಪರೀತ ಬೇಡಿಕೆ ಕಂಡುಬರುತ್ತಿದೆ. ಬೃಹತ್ ಯಂತ್ರಗಳಿಗೆ ಬೇಕಾದ ಕಂಟ್ರೋಲ್ ಸಿಸ್ಟಂ ನಮ್ಮಲ್ಲೇ ಇರುವಂತೆ ನಾವು ಸುಧಾರಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾದ ಒಂದು ಪರೀಕ್ಷಾರ್ಥ ಘಟಕ ಈಗ ಬೆಂಗಳೂರಿನಲ್ಲಿದೆ. ಮತ್ತೊಂದು ಘಟಕವನ್ನು ತುಮಕೂರಿನಲ್ಲಿ ತೆರೆಯಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ವೃತ್ತಿ ತರಬೇತಿ ಸಂಸ್ಥೆಗಳನ್ನು ಹೆಚ್ಚು ಮಾಡುವ ಆಲೋಚನೆ ಇದೆ ಎಂದು ಪಾಟೀಲ ಹೇಳಿದ್ದಾರೆ.

ಇವಿ ವಾಹನಗಳ ಪರೀಕ್ಷಾ ಘಟಕ

ಆಟೋ ಮತ್ತು ಇ.ವಿ. ವಲಯದಲ್ಲಿ ಡ್ರೈಪೋರ್ಟ್ ಜಾಲದ ಅಗತ್ಯವಿದೆ ಎಂದು ವಿಷನ್ ಗ್ರೂಪ್ ಸದಸ್ಯರು ಗಮನಕ್ಕೆ ತಂದಿದ್ದಾರೆ. ಇ.ವಿ. ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುವುದು. ಈಗ ಟಾಟಾ ಸಮೂಹದವರು ಧಾರವಾಡದಲ್ಲಿ ಇ.ವಿ. ಬಸ್ ಗಳನ್ನು ತಯಾರಿಸುತ್ತಿದ್ದು, ಇಲ್ಲಿಂದಲೇ ದೇಶದಾದ್ಯಂತ ಪೂರೈಸುತ್ತಿದ್ದಾರೆ. ಈಗ ಅದೇ ಸಮೂಹವು ಮಿನಿ ಎಸ್ಕವೇಟರ್ ಉತ್ಪಾದನೆಗೆ ಸಜ್ಜಾಗಿದೆ. ಇದರ ರಫ್ತಿಗೆ ಸೂಕ್ತ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಜತೆಗೆ ದ್ವಿಚಕ್ರ ಇ.ವಿ. ವಾಹನಗಳ ಪರೀಕ್ಷಾ ಘಟಕ ಅಗತ್ಯವೆಂದು ಹೇಳಿದ್ದು, ಇವುಗಳನ್ನು ಪರಿಶೀಲಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಹಸಿರು ಇಂಧನ ಕ್ಷೇತ್ರದಲ್ಲಿ ಬ್ಯಾಟರಿಗಳಲ್ಲಿ ವಿದ್ಯುತ್ ಸಂಗ್ರಹಕ್ಕೆ ಸಮರ್ಪಕ ನೀತಿ ಬೇಕೆಂದು ಉದ್ಯಮಿಗಳು ಸಲಹೆ ನೀಡಿದ್ದಾರೆ. ಡೇಟಾ ಸೆಂಟರ್‌ಗಳ ಸ್ಥಾಪನೆಯ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಇವೆಲ್ಲವನ್ನೂ ಕುರಿತು ಸರಕಾರ ಗಂಭೀರವಾಗಿ ಆಲೋಚಿಸಿ, ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ಹೇಳಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-to-set-up-200-acre-defense-and-100-acre-sensor-parks-fly-taxi-service-soon-mb-patil-445015.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo