
Entertainment
oi-Manohara M
ಉದಯಪುರದ ಐಟಿಸಿ ಮೆಮೆಂಟೋಸ್ (ITC Mementos) ರೆಸಾರ್ಟ್‌ನಲ್ಲಿ ನಡೆದ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹವು ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದಾಗಿ ದಾಖಲಾಗಿದೆ. ಈ ವಿವಾಹದಲ್ಲಿ ರಶ್ಮಿಕಾ ಮಂದಣ್ಣ ಧರಿಸಿದ್ದ ಉಡುಪು, ಅದರಲ್ಲೂ ವಿಶೇಷವಾಗಿ ಅವರು ಮುಖದ ಮೇಲಿನ ತೆಳು ವಸ್ತ್ರ (Veil) ಎಲ್ಲರ ಗಮನ ಸೆಳೆದಿದೆ.
ರಶ್ಮಿಕಾ ಅವರ ಮದುವೆಯ ಉಡುಪಿನ ಅತ್ಯಂತ ಭಾವನಾತ್ಮಕ ಮತ್ತು ಆಕರ್ಷಕ ಭಾಗವೆಂದರೆ ಅವರ ತಲೆಯ ಮೇಲಿದ್ದ ಆ ತಿಳಿ ಬಂಗಾರ ಬಣ್ಣದ ತೆಳು ವಸ್ತ್ರ. ಇದರ ಅಂಚಿನಲ್ಲಿ ಅತ್ಯಂತ ನಾಜೂಕಾದ ಕೈಕುಸುರಿ ಕೆಲಸದ ಮೂಲಕ “In Every Lifetime” ಎಂಬ ಸಾಲನ್ನು ಬರೆಯಲಾಗಿತ್ತು. ಇದು ವಿಜಯ್ ದೇವರಕೊಂಡ ಅವರಿಗೆ ಅವರು ನೀಡಿದ ಒಂದು ಭರವಸೆಯಂತೆ ಕಂಡುಬಂದಿತು. ಜೊತೆಗೆ ಈ ವಸ್ತ್ರದ ಮೇಲೆ ದೇವಾಲಯದ ಕೆತ್ತನೆಗಳಿಂದ ಪ್ರೇರಿತವಾದ ಕಮಾನುಗಳು, ಸ್ತಂಭಗಳು ಮತ್ತು ಪವಿತ್ರ ಲಾಂಛನಗಳನ್ನು ಚಿನ್ನದ ದಾರದಿಂದ ಹೊಳೆಯುವಂತೆ ವಿನ್ಯಾಸಗೊಳಿಸಲಾಗಿತ್ತು.

ಅನಾಮಿಕಾ ಖನ್ನಾ ಕೈಚಳಕ
ಖ್ಯಾತ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ರಶ್ಮಿಕಾ ಅವರ ವಿವಾಹದ ಸೀರೆಯು ಹೈದರಾಬಾದ್‌ನ ಐತಿಹಾಸಿಕ ವಾಸ್ತುಶಿಲ್ಪದಿಂದ ಪ್ರೇರಿತವಾಗಿತ್ತು. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಖನ್ನಾ, ರಶ್ಮಿಕಾ ಅವರ ವಿವಾಹದ ಉಡುಪು ಒಂದು ಪವಿತ್ರ ಕಲಾಕೃತಿಯಂತಿದೆ. ಸಮೃದ್ಧವಾದ ರಸ್ಟ್ ಬಣ್ಣದ ಸೀರೆಗೆ ಆಕರ್ಷಕವಾದ ಗಾಢ ಕೆಂಪು ಬಣ್ಣದ ಬಾರ್ಡರ್ ವೈಭವವನ್ನು ತಂದಿದೆ. ಹೈದರಾಬಾದ್‌ನ ಐತಿಹಾಸಿಕ ಪರಂಪರೆ ಮತ್ತು ದೇವಾಲಯಗಳ ಗರ್ಭಗುಡಿಯ ಕೆತ್ತನೆಗಳಿಂದ ಪ್ರೇರಿತವಾದ ‘ಟೆಂಪಲ್-ಹೌಸ್’ ಮೋಟಿಫ್‌ಗಳನ್ನು ಸೀರೆಯುದ್ದಕ್ಕೂ ಅತ್ಯಂತ ನಾಜೂಕಾಗಿ ಕಸೂತಿ ಮಾಡಲಾಗಿದೆ ಎಂದಿದ್ದಾರೆ.
ಪುರಾತನ ಚಿನ್ನದ ದಾರದಿಂದ ಮಾಡಿದ ವಿವರವಾದ ಕೈಕುಸುರಿ ಕೆಲಸವು ಸೀರೆಗೆ ಹೆಚ್ಚಿನ ಹೊಳಪು ಮತ್ತು ಗಾಂಭೀರ್ಯವನ್ನು ನೀಡಿದೆ. ಇದು ಕೇವಲ ಒಂದು ಸೀರೆಯಾಗಿರದೆ, ಭಕ್ತಿ ಮತ್ತು ಕರಕುಶಲತೆಯ ಕ್ಯಾನ್ವಾಸ್‌ನಂತೆ ಭಾಸವಾಗುತ್ತದೆ ಎಂದು ವಿವರಿಸಿದ್ದಾರೆ. ಈ ಉಡುಪು ಸ್ತ್ರೀ ಶಕ್ತಿ ಮತ್ತು ಸಂಪ್ರದಾಯದ ಬೇರುಗಳನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಂಡಿದೆ ಎಂದು ವಿವರಿಸಿದ್ದಾರೆ.
ವನಸಿಂಗಾರಂ ಶೈಲಿಯಲ್ಲಿ ವಿಜಯ್‌ಗೆ ರಾಯಲ್ ಲುಕ್
ಇನ್ನು ವಿಜಯ್ ದೇವರಕೊಂಡ ಅವರಿಗೂ ಇವರೇ ವಿಶೇಷವಾಗಿ ವಸ್ತ್ರವಿನ್ಯಾಸ ಮಾಡಿದ್ದು, ಹೈದರಾಬಾದ್ ಪರಂಪರೆಯ ಸಂಕೇತ ಎಂದಿದ್ದಾರೆ. ವಿಜಯ್ ದೇವರಕೊಂಡ ಅವರ ವಿವಾಹದ ಉಡುಪು ಹೈದರಾಬಾದ್‌ನ ಜವಳಿ ಪರಂಪರೆಯ ಶಕ್ತಿಯನ್ನು ಎತ್ತಿಹಿಡಿಯುವಂತಿದೆ. ಅವರು ಧರಿಸಿರುವ ಉಡುಪು ಪ್ರಸಿದ್ಧ ‘ವನಸಿಂಗಾರಂ’ (Vanasingaram) ನೇಯ್ಗೆಯ ಶೈಲಿಯಿಂದ ಪ್ರೇರಿತವಾಗಿದೆ. ಐವರಿ (Ivory) ಬಣ್ಣದ ಧೋತಿಯೊಂದಿಗೆ, ಆಕರ್ಷಕವಾದ ಸಿಂಧೂರ ಕೆಂಪು (Vermillion) ಬಣ್ಣದ ಅಂಗವಸ್ತ್ರವನ್ನು ಧರಿಸಿದ್ದರು.

ಈ ಅಂಗವಸ್ತ್ರದ ಮೇಲೆ ಅರಣ್ಯ ಮತ್ತು ದೇವಾಲಯಗಳ ಪ್ರೇರಿತ ವಿನ್ಯಾಸಗಳನ್ನು ಕಸೂತಿ ಮಾಡಲಾಗಿದೆ. ಇವು ಅಧಿಕಾರ, ವಂಶಾವಳಿ ಮತ್ತು ಪವಿತ್ರ ವಾಸ್ತುಶಿಲ್ಪದ ಸಂಕೇತಗಳಾಗಿ ಮಿಂಚುತ್ತಿವೆ. ಈ ಜೋಡಿಯ ಉಡುಪುಗಳು ಅವರ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಅವರಿಗಿರುವ ಗೌರವವನ್ನು ಎತ್ತಿ ತೋರಿಸಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಅನಾಮಿಕಾ ಖನ್ನಾ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-veil-in-every-lifetime-love-message-for-vijay-deverakonda-at-udaipur-wedding-445307.html. xn--babytilbehr-pgb.com does not claim ownership of this content. All rights remain with the original publisher.
