
International
oi-Hitesh Y
Iran Vs America, Israel: ಅಮೆರಿಕ, ಇಸ್ರೇಲ್ Vs ಇರಾನ್ ದೇಶಗಳ ನಡುವಿನ ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇಷ್ಟು ವರ್ಷಗಳ ಕಾಲ ಇರಾನ್ ಹಾಗೂ ಇಸ್ರೇಲ್ನ ನಡುವೆ ನಡೆಯುತ್ತಿದ್ದ ಯುದ್ಧ – ಸಂಘರ್ಷವು ಇದೀಗ ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯ ನಂತರ ಇನ್ನುಳಿದ ದೇಶಗಳಿಗೂ ವ್ಯಾಪಿಸಿದೆ. ಈ ಯುದ್ಧವು ಎಷ್ಟು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ ಎಂದರೆ, ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದೆ. ಅತ್ತ ಯುರೋಪ್ ರಾಷ್ಟ್ರಗಳಲ್ಲೂ ಸಂಕಷ್ಟ ಶುರುವಾಗಿದೆ. ಈಗ ಇರುವ ಪರಿಸ್ಥಿತಿಯಲ್ಲಿ ಇರಾನ್ ದೇಶವು ಬಹುತೇಕ ಒಬ್ಬಂಟಿಯಾದಂತಾಗಿದೆ. ಅಮೆರಿಕ, ಇಸ್ರೇಲ್ Vs ಇರಾನ್ ನಡುವಿನ ಯುದ್ಧ ತೀವ್ರಗೊಂಡಿದ್ದು ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು ಇಲ್ಲಿವೆ.
1. ನಾಲ್ಕು ವಾರಗಳ ಕಾಲ ಮುಂದುವರಿಯುವ ಸಾಧ್ಯತೆ: ಇಸ್ರೇಲ್ – ಅಮೆರಿಕ, ಇರಾನ್ ಯುದ್ಧವು ಇನ್ನೂ ನಾಲ್ಕು ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ನಾವು ನಿಖರವಾದ ಗುರಿಯನ್ನು ಸಾಧಿಸಿದ್ದೇವೆ. ಆದರೆ ಎಲ್ಲವೂ ಮುಕ್ತಾಯವಾಗಿಲ್ಲ. ಇನ್ನು ನಾಲ್ಕು ವಾರಗಳಲ್ಲಿ ಯುದ್ಧ ಮುಗಿಯಬಹುದು ಅಥವಾ ಅದಕ್ಕೂ ಮೊದಲೇ ಮುಗಿದರೂ ಮುಗಿಯಬಹುದು ಎಂದೂ ಟ್ರಂಪ್ ಹೇಳಿದ್ದಾರೆ.

2. ಕುವೈತ್ನಲ್ಲಿ ಫೈಟರ್ ಜೆಟ್ ಅಪಘಾತ: ಕುವೈತ್ನಲ್ಲಿ ಫೈಟರ್ ಜೆಟ್ವೊಂದನ್ನು ಹೊಡೆದುರುಳಿಸಲಾಗಿದೆ. ಇರಾನ್ಸೇನೆಯು ಕುವೈತ್ ನಗರದ ಪಶ್ಚಿಮಕ್ಕೆ 32 ಕಿ.ಮೀ ದೂರದಲ್ಲಿರುವ ಕುವೈತ್ನ ಅಲ್ ಜಹ್ರಾ ನಗರದಲ್ಲಿ ಅಮೆರಿಕದ ಫೈಟರ್ ಜೆಟ್ಗೆ ಹಾನಿ ಮಾಡಿದೆ. ಇದು ಯುಎಸ್ಎಫ್ -15 ಜೆಟ್ ಆಗಿದೆ.
3. ಇರಾನ್ ಮುಂದಿನ ಮುಖ್ಯಸ್ಥ ಯಾರು: ಇನ್ನು ಅಮೆರಿಕ, ಇಸ್ರೇಲ್ vs ಇರಾನ್ನ ನಡುವಿನ ಯುದ್ಧದಲ್ಲಿ ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯ ನಂತರ ಇರಾನ್ನ ಮುಂದಿನ ಮುಖ್ಯಸ್ಥ ಯಾರು ಎನ್ನುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಖಮೇನಿಯವರ ಉತ್ತರಾಧಿಕಾರಿಗಳು ಸಹ ಮೃತಪಟ್ಟಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಅವರೇ ಖಚಿತಪಡಿಸಿದ್ದಾರೆ. ಹೀಗಾಗಿ, ಇರಾನ್ನ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಈಗ ಎದುರಾಗಿದೆ.

4. ಕತಾರ್ ವಿಮಾನ ಹಾರಾಟ ರದ್ದು: ಇನ್ನು ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು. ಕತಾರ್ ಏರ್ವೇಸ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ದೇಶದ ವಾಯುಪ್ರದೇಶವನ್ನು ಮುಚ್ಚುತ್ತಿರುವುದರಿಂದ ತನ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು ಕತಾರ್ ಹೇಳಿದೆ. ಕತಾರ್ ವಾಯುನೆಲೆಗಳಿಗೆ ಹಾನಿಯಾಗಿವೆ ಎಂದು ಹೇಳಲಾಗಿದೆ.
5. ಯುಎಸ್ ರಾಯಭಾರ ಕಚೇರಿ ಎಚ್ಚರಿಕೆ: ಅಮೆರಿಕದ ಸಹಾಯದಿಂದಲೇ ಈ ಬಾರಿ ಇರಾನ್ನ ಮೇಲೆ ಇಸ್ರೇಲ್ದಾಳಿ ಮಾಡಿದೆ. ತನ್ನ ಸರ್ವೋಚ್ಛ ನಾಯಕನನ್ನು ಕೊಂದ ಆಕ್ರೋಶವನ್ನು ಇರಾನ್ – ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ತೋರಿಸುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ತೀವ್ರಗೊಂಡಿದೆ. ಕ್ಷಿಪಣಿ ಮತ್ತು ಡ್ರೋನ್ ಬೆದರಿಕೆಗಳ ಬಗ್ಗೆ ಕುವೈತ್ನಲ್ಲಿರುವ ಯುಎಸ್ ರಾಯಭಾರ ಕಚೇರಿ ಎಚ್ಚರಿಸಿದೆ. ದೇಶದ ಮೇಲೆ ಕ್ಷಿಪಣಿ ಮತ್ತು ಯುಎವಿ ದಾಳಿಯ ನಿರಂತರ ಬೆದರಿಕೆ ಇದೆ ಎಂದು ಕುವೈತ್ನಲ್ಲಿರುವ ಯುಎಸ್ ರಾಯಭಾರ ಕಚೇರಿ ಹೇಳಿದೆ. ಅಲ್ಲದೆ ಇರಾನ್ ದಾಳಿಯನ್ನು ಗಂಭೀರವಾಗಿ ಪರಿಗಣಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

6. ಸೌದಿ ಅರೇಬಿಯಾದ ಮೇಲೆ ದಾಳಿ: ಇರಾನ್ ಸೇನಾ ಪಡೆಗಳು ಸೌದಿ ಅರೇಬಿಯಾದ ಮೇಲೆ ದಾಳಿ ಮಾಡಿವೆ. ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ಮಾಡಲಾಗಿದ್ದು, ಈ ಭಾಗದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ಇರಾನ್ ದೇಶವು ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ದಾಳಿಯನ್ನು ಗಲ್ಫ್ ರಾಷ್ಟ್ರಗಳು ಈಗಾಗಲೇ ತೀವ್ರವಾಗಿ ಖಂಡಿಸಿವೆ.
7. ಅಮೆರಿಕ – ಇಸ್ರೇಲ್ ಜಂಟಿ ದಾಳಿ: ಇನ್ನು ಇರಾನ್ ವಿವಿಧ ದೇಶಗಳಲ್ಲಿರುವ ಅಮೆರಿಕದ ಸೇನಾ ಹಾಗೂ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವಾಗಲೇ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ನ ಮೇಲೆ ಮುಗಿಬಿದ್ದು ದಾಳಿ ನಡೆಸಿವೆ. ಇರಾನ್ನ ರಾಜಧಾನಿ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸಿದೆ.
8. ಅಮೆರಿಕ ಜೊತೆ ಮಾತುಕತೆ ಇಲ್ಲ: ತೀವ್ರ ದಾಳಿಯ ನಡುವೆಯು ಯಾವುದೇ ಮಾತುಕತೆಗೆ ನಾವು ಸಿದ್ಧವಾಗಿಲ್ಲ ಎಂದು ಇರಾನ್ ಹೇಳಿದೆ. ಅಮೆರಿಕದೊಂದಿಗೆ ನಾವು ಈಗ ಯಾವುದೇ ಮಾತುಕತೆಗೆ ಸಿದ್ಧವಾಗಿಲ್ಲ ಎಂದು ಇರಾನ್ ಅಧಿಕಾರಿ ಹೇಳಿದ್ದಾರೆ. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಕುವೈತ್ ಮೇಲೆ ಫೈಟರ್ ಜೆಟ್ ಪತನಗೊಂಡಿರುವುದು ವರದಿಯಾಗಿದೆ.
9. ಶಾಂತಿಯುತ ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಇರಾನ್ – ಇಸ್ರೇಲ್ ಶಾಂತಿಯುತವಾಗಿ, ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಇರಾನ್ ದೇಶವು ಯುಎಇ ಮೇಲೆ ಮಾಡಿರುವ ದಾಳಿಯು ಖಂಡನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
10. ಅಮೆರಿಕದ ಮೇಲೆ ದಾಳಿ ಮಾಡಿದರೆ ಎಚ್ಚರ: ಇನ್ನು ಅಮೆರಿಕದ ಮೇಲೆ ದಾಳಿ ಮಾಡಿದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಮೇಲೆ ಭೀಕರ ದಾಳಿಗಳನ್ನು ನಡೆಸಲಿದ್ದೇವೆ ಎಂದು ಇರಾನ್ ಹೇಳಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಂಭೀರವಾದ ಎಚ್ಚರಿಕೆ ರವಾನಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/us-israel-vs-iran-war-escalates-crisis-spreads-to-gulf-10-major-developments-that-shock-world-445663.html. xn--babytilbehr-pgb.com does not claim ownership of this content. All rights remain with the original publisher.
