ನಟಿ ತ್ರಿಷಾ ಜತೆ ವಿಜಯ್ ಅಫೇರ್- ಡಿವೋರ್ಸ್‌ಗೆ ಮುಂದಾದ ದಳಪತಿ ಪತ್ನಿ – ಟಿವಿಕೆ ಪಕ್ಷದಲ್ಲಿ ತಳಮಳ.. | Vijay Trisha Debate Sparks Extramarital Rumours Raises Questions tn Political Impact: Shobhamalavalli

India

oi-Hitesh Y

Vijay: ತಮಿಳುನಾಡು ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣಾ ಕಣದಲ್ಲಿ ಹಲವು ಹೊಸ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಅದರಲ್ಲಿ ನಟ, ರಾಜಕಾರಣಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಪ್ರಮುಖವಾಗಿದೆ. ಆದರೆ, ನಟ ವಿಜಯ್ ಅವರಿಗೆ ಮೇಲಿಂದ ಮೇಲೆ ಸವಾಲುಗಳು ಎದುರಾಗುತ್ತಿವೆ. ನಟಿ ತ್ರಿಷಾ ಅವರೊಂದಿಗಿನ ಸ್ನೇಹ ರಾಜಕೀಯದಲ್ಲಿ ವಿಜಯ್‌ಗೆ ಮುಳುವಾಗುತ್ತಿದೆ. ತಮಿಳುನಾಡು ರಾಜಕೀಯ ಚದುರಂಗದಲ್ಲಿ ಯಾರು, ಯಾವ ತಂತ್ರರೂಪಿಸುತ್ತಿದ್ದಾರೆ ಎನ್ನುವ ಬಗ್ಗೆ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ಅವರ ಬರಹ ಇಲ್ಲಿದೆ.

ತಮಿಳುನಾಡು ರಾಜಕೀಯ ಪ್ರವೇಶಿಸಿ, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸ್ಥಾಪಕ, ನಟ ದಳಪತಿ ವಿಜಯ್, ಎಲೆಕ್ಷನ್‌ಗೂ ಮುನ್ನವೇ ಹೊಸ ಟೆನ್ಷನ್ ಎದುರಾಗಿದೆ. ವಿಜಯ್ ಅವರಿಂದ ಡಿವೋರ್ಸ್ ಕೋರಿ ಪತ್ನಿ ಸಂಗೀತಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ವರ್ಷದಿಂದ ಸುದ್ದಿಯಲ್ಲಿದ್ದ ವಿಚ್ಛೇದನ ‌ಸುದ್ದಿ ಖಚಿತವಾಗಿದೆ.

Vijay Trisha Debate

ಡಿವೋರ್ಸ್‌ಗೆ ಕಾರಣ, ನಟಿಯೊಬ್ಬಳ ಜತೆ ವಿಜಯ್ ಅಫೇರ್ ಹೊಂದಿದ್ದಾರೆ ಅಂತ ನೇರ ಆರೋಪ ಮಾಡಿದ್ದಾರೆ ಸಂಗೀತಾ. 2022ರಿಂದ ಆ ನಟಿಯ ಜತೆ ವಿಜಯ್ ರಿಲೇಷನ್ ಶಿಪ್‌ನಲ್ಲಿದ್ದರು. ಸಂಧಾನದ ಮೂಲಕ ಸಂಬಂಧ ಕಡಿದುಕೊಳ್ಳುವ ಭರವಸೆ ನೀಡಿದ್ದರೂ, ತಮ್ಮ ದಾಂಪತ್ಯ ಹಳಿಗೆ ಮರಳಿಲ್ಲ ಅಂತ ಆರೋಪಿಸಿರೋ ಸಂಗೀತಾ, 26 ವರ್ಷಗಳ ತಮ್ಮ ದಾಂಪತ್ಯ ಮುರಿದುಕೊಳ್ಳಲು ಮುಂದಾಗಿದ್ದಾರೆ. ಇದು ಬರೀ ಕೌಟುಂಬಿಕ ‌ವಿಚಾರ ಅಷ್ಟೇ ಅಲ್ಲ. ತಮಿಳುನಾಡು ರಾಜಕೀಯ ಚರಿತ್ರೆ ಗೊತ್ತಿದ್ದವರಿಗೆ, ದಳಪತಿ ವಿಜಯ್‌ಗೆ ಇದೆಂಥಾ ದೊಡ್ಡ ಹೊಡೆತ ಎಂಬುದು ಅರ್ಥವಾಗಿಯೇ ಇರುತ್ತೆ.

ಕ್ಲೀನ್ ಇಮೇಜ್ ಕಾಪಾಡಿಕೊಂಡಿದ್ದ ಜೋಸೆಫ್‌ ವಿಜಯ್, ಇಂದಿಗೂ ಟಾಲಿವುಡ್ ಸೂಪರ್‌ಸ್ಟಾರ್. ಆತನ ಅಭಿಮಾನಿ ಬಳಗ ದೊಡ್ಡದು. ಬೆನ್ನಿಗೆ ಜಾತಿಯೂ ಇದೆ. ಇದೆಲ್ಲ ಲೆಕ್ಕಾಚಾರದೊಂದಿಗೆ ರಾಜಕೀಯಕ್ಕೆ ಧುಮುಕಿದ ವಿಜಯ್‌ಗೆ ಅಸಲಿ ಆಟ ಶುರುವಾಗಿದ್ದು ಗೊತ್ತೇ ಆಗಲಿಲ್ಲ. ವಿಜಯ್ ರ‍್ಯಾಲಿಗಳಿಗೆ ಜನಸಾಗರವೇ ಹರಿದು ಬರುತ್ತಿರುವುದನ್ನು ಕಂಡು ಕ್ಷಣ ವಿಚಲಿತವಾದ ಡಿಎಂಕೆ, ತನ್ನ ಚಾಣಾಕ್ಷ ರಾಜಕೀಯ ತಂತ್ರಗಾರಿಕೆಯಿಂದ ವಿಜಯ್‌ಗೆ ಹೊಡೆತ ಕೊಡುತ್ತಲೇ ಬಂದಿದೆ. ಕರೂರು ಕಾಲ್ತುಳಿತ ಘಟನೆ ಬಳಸಿಕೊಂಡು ವಿಜಯ್ ನನ್ನು ಕಾನೂನು ಬಲೆಯಲ್ಲಿ ಸಿಲುಕಿಸಿತು. ಅತ್ತ ಆತನ ಕೊನೆಯ ಸಿನಿಮಾ ಜನನಾಯಗನ್ ಬಿಡುಗಡೆಯೇ ಆಗದಂತೆ ಸೆನ್ಸಾರ್ ಸಮಸ್ಯೆ ಬಿಗಡಾಯಿಸಿತು.

ಡಿಎಂಕೆಯಲ್ಲಿ ಸ್ಟಾಲಿನ್, ಮಗ ಉದಯನಿಧಿ, ಅಗ್ರೆಸಿವ್ ಆಗಿ ಪ್ರಚಾರಕ್ಕಿಳಿದುಬಿಟ್ಟರು. ಮಹಿಳೆಯರ ಅಕೌಂಟ್‌ಗೆ ಐದು ಸಾವಿರ ರೂ. ಹಾಕಿ, ಹಲವು ಭರವಸೆ ನೀಡಿ ಬಿಟ್ಟಿತು. ಪಾಪ.. ವಿಜಯ್, ಬರೀ ರ‍್ಯಾಲಿಯಲ್ಲಿ ಭಾಷಣವನ್ನೇ ಜೀವಾಳ ಮಾಡಿಕೊಂಡಿದ್ದು ಬಿಟ್ಟರೆ, ಪ್ರತಿ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲರಾಗಿಬಿಟ್ಟರು ಅಂತಿದ್ದಾರೆ ತಮಿಳುನಾಡು ರಾಜಕೀಯ ವಿಶ್ಲೇಷಕರು. ಇದರ ಮಧ್ಯೆ, ಜಯಲಲಿತಾರ ಎಐಎಡಿಎಂಕೆ ಪಕ್ಷ ಒಡೆದು ಹೋಳಾಗಿದೆ. ನಿನ್ನೆಯಷ್ಟೇ ಮಾಜಿ ಸಿಎಂ ಪನ್ನೀರ್ ಸೆಲ್ವಂ, ಎಐಎಡಿಎಂಕೆ ತೊರೆದು ಸ್ಟಾಲಿನ್ ಜತೆ ಕೈ ಜೋಡಿಸಿದ್ದಾರೆ. ಅತ್ತ ನಟ ಕಮಲ್ ಹಾಸನ್ ಸಹ ಬುದ್ಧಿವಂತಿಕೆಯಿಂದ ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆ ಸದಸ್ಯರಾಗಿ ಬಿಟ್ರು.

ಬಿಜೆಪಿ ಅಣ್ಣಾಮಲೈ ‌ಬಿಟ್ಟು ವಿಜಯ್‌ಗೆ ಗಾಳ ಹಾಕುತ್ತಿದ್ದರೂ, ಸ್ಪಷ್ಟ ನಿರ್ಧಾರ ಪ್ರಕಟಿಸಲಿಲ್ಲ. ತಮಿಳುನಾಡಿನ ಕುಟುಂಬ ರಾಜಕಾರಣವನ್ನು ಅರಿಯುವಲ್ಲಿ ವಿಜಯ್ ವಿಫಲರಾದಂತೆ ಕಾಣ್ತಿದ್ದಾರೆ. ಇದೆಲ್ಲದರ ನಡುವೆ, ವಿಜಯ್ ಯಾವಾಗ ರಾಜಕೀಯಕ್ಕೆ ಎಂಟ್ರಿಕೊಟ್ಟರೋ, ಅಂದಿನಿಂದಲೇ ತ್ರಿಷಾ ಜತೆಗಿನ ಆಫೇರ್‌ ಸುದ್ದಿ ಮತ್ತೆ ಮುನ್ನಲೆಗೆ ಬಂತು. ವಿಜಯ್, ತ್ರಿಷಾ ಜತೆ ಎಲ್ಲೆಲ್ಲಿಗೆ ಹೋಗಿದ್ರು, ಎಲ್ಲಿ, ಯಾವಾಗ ಜತೆಗಿದ್ದರು ಅನ್ನೋ ಸುದ್ದಿ ಫೋಟೋ ಸಾಕ್ಷಿ ಸಹಿತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿತು. ಈ ಬಗ್ಗೆ ಒಮ್ಮೆಯೂ‌ ವಿಜಯ್ ಆಗಲಿ, ತ್ರಿಷಾ ಆಗಲಿ ಸ್ಪಷ್ಟನೆ ಕೊಡಲಿಲ್ಲ.

ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಅಂದ್ರೆ ಕಳೆದ ವಾರವಷ್ಟೇ ಬಿಜೆಪಿ ಅಧ್ಯಕ್ಷ ನಾಗೇಂದ್ರ, ವಿಜಯ್, ರಾಜಕೀಯದಲ್ಲಿ ಅನುಭವ ಪಡೆಯಲು ಮತ್ತು ಯಶಸ್ಸು ಸಾಧಿಸಲು ಮೊದಲು ನಟಿ ತ್ರಿಷಾ ಮನೆಯಿಂದ ಹೊರಬರಬೇಕು ಎನ್ನೋ ಹೇಳಿಕೆ, ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡಿತು. ಆಗಲೂ ವಿಜಯ್ ಬಾಯ್ಬಿಡಲಿಲ್ಲ. ಆಮೇಲೆ‌ ಬಿಜೆಪಿ ಅಧ್ಯಕ್ಷ ‌ಕ್ಷಮೆ ಕೇಳಿದರೂ, ವಿಜಯ್ ಮನೆಯೊಳಗೆ ಬಿರುಗಾಳಿ ಎದ್ದಿತು. ವಿಜಯ್ ತೊರೆದು ಲಂಡನ್ ವಾಸ ಮಾಡ್ತಿರೋ ಸಂಗೀತಾ,‌ ಇದೀಗ ಅಧಿಕೃತವಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ.

ಡಿಎಂಕೆಗೆ ತಾನೊಬ್ಬನೇ ಪ್ರತಿಸ್ಪರ್ಧಿ, ತಾನೇ ಸಿಎಂ ಅಭ್ಯರ್ಥಿ ಎಂದು ಬೀಗುತ್ತಿದ್ದ ವಿಜಯ್‌ಗೆ ದಾಂಪತ್ಯ ಬದುಕಿನಲ್ಲಾದ ಒಡಕು ದೊಡ್ಡ ತಲೆನೋವಾಗಿದೆ. ಅಭಿಮಾನಿಗಳಲ್ಲೂ ತಳಮಳ ಮೂಡಿಸಿದೆ. ರಾಜಕೀಯ ಮಹತ್ವಾಕಾಂಕ್ಷೆಯಿಂದ, ಕೆರಿಯರ್‌ನ ಉತ್ತುಂಗದಲ್ಲಿದ್ದಾಗಲೇ ತಮಿಳು ಚಿತ್ರರಂಗ ಬಿಟ್ಟು, ಚುನಾವಣಾ ರಾಜಕೀಯಕ್ಕಿಳಿದ ಜೋಸೆಫ್‌ ವಿಜಯ್‌ಗೆ, ರಾಜಕಾರಣದ ಒಳಸುಳಿ ಈಗ ಅರ್ಥವಾಗುತ್ತಿರಬಹುದು.

ಚುನಾವಣಾ ಸಮೀಕ್ಷೆಗಳಲ್ಲೂ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದರೂ, ವಿಜಯ್ ಪಕ್ಷ ಅಧಿಕಾರ ಗದ್ದುಗೆ ಏರುವುದು ಕಷ್ಟ ಸಾಧ್ಯ ಎಂದೇ ಸಮೀಕ್ಷೆಗಳು ವಿವರಿಸಿದ್ದವು. ಇಷ್ಟೆಲ್ಲ ರಾಜಕೀಯ ಹೋರಾಟದ ಮಧ್ಯೆ ವಿಜಯ್- ಸಂಗೀತಾ ವಿಚ್ಛೇದನ ಸುದ್ದಿ, ರಾಜಕೀಯ ಪಕ್ಷಗಳಿಗೆ ಭರ್ಜರಿ ಭೋಜನ ಸಿಕ್ಕಂತಾಗಿದೆ. ಇದನ್ನೇ ದಾಳವಾಗಿಸಿಕೊಂಡು ವಿಜಯ್ ಹಣಿಯಬಹುದು, ಅಭಿಮಾನಿಗಳಿಗೂ, ತಮ್ಮ ಆರಾಧ್ಯ ದೈವನ ಖಾಸಗಿ ಬದುಕು ಬೀದಿಗೆ ಬಂದಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಬಹುದು. ಏನೇ ಆದರೂ, ತಮಿಳುನಾಡು ರಾಜಕೀಯದ ರಂಗೇ ಬೇರೆ ಬಿಡಿ. ಎಲೆಕ್ಷನ್ ಹೊತ್ತಿಗೆ ಇನ್ನೆಷ್ಟು ತಿರುವು ಪಡೆಯುತ್ತೋ ಏನೋ

– ಶೋಭಾ ಮಳವಳ್ಳಿ, ಹಿರಿಯ ಪತ್ರಕರ್ತೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/vijay-trisha-debate-sparks-extramarital-rumours-raises-questions-tn-political-impact-shobhamalavalli-445653.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo