
Karnataka
oi-Pragathi S
ರಾಮನಗರ: ಉದ್ಯೋಗದ ನಿರೀಕ್ಷೆಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ರಾಮನಗರದ ಸುತ್ತಮುತ್ತಲಿನ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಇಲ್ಲೊಂದು ಭರ್ಜರಿ ಸಿಹಿಸುದ್ದಿ ಇದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಯುವಜನತೆಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಮಾರ್ಚ್ 5ರ ಗುರುವಾರದಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ರಾಮನಗರ ಟೌನ್ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಮಹತ್ವದ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗಾಕಾಂಕ್ಷಿಗಳು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಉದ್ಯೋಗ ಮೇಳದ ಮುಖ್ಯಾಂಶಗಳು
ಈಗಾಗಲೇ 171ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿವೆ. ಮೇಳದ ದಿನದ ವೇಳೆಗೆ ಸುಮಾರು 200ಕ್ಕೂ ಹೆಚ್ಚು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಬೃಹತ್ ಮೇಳದಲ್ಲಿ ಬರೋಬ್ಬರಿ 20,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿರುವುದು ವಿಶೇಷ.
ವಿದ್ಯಾರ್ಹತೆ ಏನು?
ಈ ಉದ್ಯೋಗ ಮೇಳವು ಕೇವಲ ಉನ್ನತ ವ್ಯಾಸಂಗ ಮಾಡಿದವರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾದವರು ಅಥವಾ ಅನುತ್ತೀರ್ಣರಾದವರಿಗೂ ಉದ್ಯೋಗ ಪಡೆಯುವ ಅವಕಾಶವಿದೆ. ಇವರ ಜೊತೆಗೆ ಐಟಿಐ, ಡಿಪ್ಲೊಮಾ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್), ಯಾವುದೇ ಪದವಿ (Degree) ಹಾಗೂ ಸ್ನಾತಕೋತ್ತರ ಪದವೀಧರರಿಗೂ (Post Graduates) ಸಾವಿರಾರು ಉದ್ಯೋಗಗಳು ಲಭ್ಯವಿವೆ.
ಲಭ್ಯವಿರುವ ಹುದ್ದೆಗಳು
1. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣರಿಗೆ: 1,221 ಹುದ್ದೆಗಳು
2. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪಾಸ್ ಆದ ಅಭ್ಯರ್ಥಿಗಳಿಗೆ: 3,118 ಹುದ್ದೆಗಳು
3. ಐಟಿಐ ಪೂರ್ಣಗೊಳಿಸಿದವರಿಗೆ: 3,482 ಹುದ್ದೆಗಳು
4. ಡಿಪ್ಲೊಮಾ ಅಭ್ಯರ್ಥಿಗಳಿಗೆ: 503 ಹುದ್ದೆಗಳು
5. ಐಟಿಐ ಮತ್ತು ಡಿಪ್ಲೊಮಾ ಒಟ್ಟಾಗಿ: 2,793 ಹುದ್ದೆಗಳು.
ಯಾವೆಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಲಭ್ಯ?
ಉತ್ಪಾದನಾ ವಲಯ (Manufacturing), ಬ್ಯಾಂಕಿಂಗ್ (Banking), ಮಾರಾಟ (Sales), ಮಾಹಿತಿ ತಂತ್ರಜ್ಞಾನ (IT), ಗಾರ್ಮೆಂಟ್ಸ್, ಸೇವಾ ವಲಯ, ಪ್ರವಾಸೋದ್ಯಮ, ಹಣಕಾಸು (Finance) ಹಾಗೂ ನಿರ್ವಹಣಾ ಕ್ಷೇತ್ರ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಅಭ್ಯರ್ಥಿಗಳು ತಮ್ಮ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಭಾಗವಹಿಸುವುದು ಹೇಗೆ?
18 ವರ್ಷ ಮೇಲ್ಪಟ್ಟ ಯಾವುದೇ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಮೇಳದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಮೊದಲೇ ಗೂಗಲ್ ಫಾರ್ಮ್ (Google Form) ಮೂಲಕ ಪೂರ್ವ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಆನ್ಲೈನ್ ಮೂಲಕ ನೋಂದಣಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು, ಮಾರ್ಚ್ 5ರಂದು ನೇರವಾಗಿ ಉದ್ಯೋಗ ಮೇಳ ನಡೆಯುವ ಸ್ಥಳಕ್ಕೆ ತಮ್ಮ ಎಲ್ಲಾ ಶೈಕ್ಷಣಿಕ ದಾಖಲಾತಿಗಳು ಹಾಗೂ ರೆಸ್ಯೂಮ್ನೊಂದಿಗೆ ಹಾಜರಾಗಿ, ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು, “ರಾಮನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಯುವಜನತೆಗೆ ಉದ್ಯೋಗದ ದಾರಿಯನ್ನು ತೆರೆದಿಡುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮಗೆ ಸೂಕ್ತವಾದ ಉದ್ಯೋಗವನ್ನು ಪಡೆದುಕೊಳ್ಳಬೇಕು” ಎಂದು ಕರೆ ನೀಡಿದ್ದಾರೆ. ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/ramanagara-mega-job-fair-on-march-5-thousands-of-opportunities-for-sslc-puc-and-degree-graduates-445775.html. xn--babytilbehr-pgb.com does not claim ownership of this content. All rights remain with the original publisher.
