
Entertainment
oi-Madhusudhan KR
Vijay Deverakonda Scholarship: ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗಷ್ಟೇ ವಿವಾಹ ಸಾಗಿದ್ದಾರೆ. ಮದುವೆಯ ಬಳಿಕ ಮೊದಲ ಬಾರಿಗೆ ವಿಜಯ್ ದೇವರಕೊಂಡ ಅವರ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ನಾಗರ್‌ಕರ್ನೂಲ್ ಜಿಲ್ಲೆಯ ಬಲ್ಮೂರು ಮಂಡಲದಲ್ಲಿರುವ ತುಮ್ಮನ್‌ಪೇಟೆ ಗ್ರಾಮಕ್ಕೆ ದಂಪತಿ ಆಗಮಿಸಿದ್ದ ವೇಳೆ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದರು. ಹೂಮಳೆ, ವಾದ್ಯಘೋಷಗಳೊಂದಿಗೆ ನವಜೋಡಿಯನ್ನು ಬರಮಾಡಿಕೊಂಡರು. ಇದರ ಬೆನ್ನಲ್ಲೇ ವಿಜಯ್ ಅವರು ತಮ್ಮ ಹುಟ್ಟೂರಿನ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ ಮಾಡಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರಾಮ ಪ್ರವೇಶದ ಬಳಿಕ ಮನೆಯಲ್ಲೇ ಸಾಂಪ್ರದಾಯಿಕವಾಗಿ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಸತ್ಯನಾರಾಯಣ ಸ್ವಾಮಿ ವ್ರತವೂ ನೆರವೇರಿಸಲಾಯಿತು. ಸಾಂಪ್ರದಾಯಿಕ ಉಡುಪಿನಲ್ಲಿದ್ದ ದಂಪತಿಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಬಳಿಕ ಇಡೀ ಗ್ರಾಮದ ಜನರಿಗಾಗಿ ಭೋಜನ ವ್ಯವಸ್ಥೆ ಇಟ್ಟುಕೊಳ್ಳಲಾಗಿದ್ದು, ಸಾವಿರಾರು ಜನ ಭಾಗವಹಿಸಿ ನವಜೋಡಿಗೆ ಶುಭಾಶಯ ಕೋರಿದರು.

ಇದೇ ವೇಳೆ ವಿಜಯ್ ದೇವರಕೊಂಡ ಅವರು ಮಹತ್ವದ ಘೋಷಣೆಯನ್ನು ಮಾಡಿದರು. ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಅಚ್ಚಂಪೇಟೆ ವಿಭಾಗದ ವ್ಯಾಪ್ತಿಗೆ ಬರುವ 44 ಸರ್ಕಾರಿ ಶಾಲೆಗಳ 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಪ್ರಕಟಿಸಿದರು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
‘ಈ ಮಣ್ಣಿನ ಋಣ ತೀರಿಸುವುದು ನನ್ನ ಕರ್ತವ್ಯ’
ಗ್ರಾಮದೊಂದಿಗೆ ಇರುವ ಬಾಂಧವ್ಯವದ ಬಗ್ಗೆ ಮಾತನಾಡಿದ ಅವರು, “ಈ ಮಣ್ಣಿನ ಋಣ ತೀರಿಸುವುದು ನನ್ನ ಕರ್ತವ್ಯ. ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ಬೆಳೆಯಬೇಕು ಎಂಬುದು ನನ್ನ ಆಶಯ. ಇದು ಕೇವಲ ಆರಂಭ ಮಾತ್ರ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಾಗುವುದು ಎಂದು ಸೂಚಿಸಿದರು.
ವಿವಾಹದ ಸಂಭ್ರಮವನ್ನು ಸಾಮಾಜಿಕ ಸೇವೆಗೆ ಕೊಂಡೊಯ್ದಿರುವ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾನ್ಯವಾಗಿ ಮದುವೆ ಬಳಿಕ ಪ್ರವಾಸ ಅಥವಾ ಖಾಸಗಿ ಆಚರಣೆಗಳಲ್ಲಿ ತೊಡಗುವ ಸೆಲೆಬ್ರಿಟಿಗಳ ನಡುವೆ, ಶಿಕ್ಷಣಕ್ಕೆ ಆದ್ಯತೆ ನೀಡಿರುವ ಈ ಜೋಡಿ ಮಾದರಿಯಾಗಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕಷ್ಟದ ಸಮಯದಲ್ಲಿ ನೆರವು
ಕೊವಿಡ್ ಅವಧಿಯಲ್ಲಿ ಸಾವಿರಾರು ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿ ಮತ್ತು ಆರ್ಥಿಕ ನೆರವು ಒದಗಿಸುವ ಕಾರ್ಯವನ್ನು ಇವರ ಫೌಂಡೇಶನ್ ಮಾಡಿತ್ತು. ಸಂಕಷ್ಟದಲ್ಲಿದ್ದ ಜನರಿಗೆ ತ್ವರಿತ ಸಹಾಯ ತಲುಪಿಸುವ ಉದ್ದೇಶದಿಂದ ಈ ಉಪಕ್ರಮ ಪ್ರಾರಂಭಿಸಲಾಯಿತು. ಶಿಕ್ಷಣ ಕ್ಷೇತ್ರಕ್ಕೂ ವಿಜಯ್ ದೇವರಕೊಂಡ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುತ್ತಿದ್ದಾರೆ. ಯುವಕರ ಸ್ವಾವಲಂಬನೆಗಾಗಿ ತರಬೇತಿ, ಮಾರ್ಗದರ್ಶನ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಲು ಸಹ ಅವರು ಮುಂದಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳ ಮೂಲಕ ಆತ್ಮವಿಶ್ವಾಸ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/vijay-deverakonda-announces-scholarships-for-44-govt-schools-during-visit-to-hometown-after-wedding-445829.html. xn--babytilbehr-pgb.com does not claim ownership of this content. All rights remain with the original publisher.
