Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: “ಟಾಕ್ಸಿಕ್” ಸಿನಿಮಾ ಬಿಡುಗಡೆ ದಿಢೀರ್‌ ಮುಂದೂಡಿಕೆ | Yash Toxic Release Postponed Amid Middle East Uncertainty Movie worldwide New Date Announced June 4

Entertainment

oi-Manohara M

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಕಹಿಸುದ್ದಿ ಬಂದಿದೆ. ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರದ ಬಿಡುಗಡೆ ದಿನಾಂಕವನ್ನು ದಿಢೀರ್‌ ಮುಂದೂಡಲಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತ ಪ್ರಕಟಣೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ (Middle East) ಸದ್ಯ ಉಂಟಾಗಿರುವ ಅನಿಶ್ಚಿತತೆ ಮತ್ತು ಯುದ್ಧದ ವಾತಾವರಣದಿಂದಾಗಿ ಚಿತ್ರವನ್ನು ಜಾಗತಿಕವಾಗಿ ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರೇಕ್ಷಕರ ಮತ್ತು ಪಾಲುದಾರರ ಹಿತದೃಷ್ಟಿಯಿಂದ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿರುವುದಾಗಿ ಚಿತ್ರತಂಡ ತಿಳಿಸಿದೆ.

ಈ ಮೊದಲು ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಈಗ ‘ಟಾಕ್ಸಿಕ್’ ಸಿನಿಮಾ 2026ರ ಜೂನ್ 4ರಂದು ವಿಶ್ವದಾದ್ಯಂತ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ತೆರೆಕಾಣಲಿದೆ ಎಂದು ಕೆವಿಎನ್‌ ಪ್ರೊಡಕ್ಷನ್ಸ್‌ ಅಧಿಕೃತವಾಗಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿರುವುದನ್ನು ಪೋಸ್ಟ್‌ ಮೂಲಕ ಖಚಿತಪಡಿಸಿದೆ. ಯುದ್ಧದ ಬಿಸಿ ಇದೀಗ ಟಾಕ್ಸಿಕ್‌ಗೂ ತಟ್ಟಿದೆ.

Yash Toxic Release Postponed

ಈ ಚಿತ್ರವನ್ನು ಜಾಗತಿಕ ಪ್ರೇಕ್ಷಕರಿಗಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಅಮೆರಿಕ-ಇರಾನ್ ಯುದ್ಧದ ಭೀತಿಯು, ಈಗ ಚಿತ್ರರಂಗದ ಮೇಲೂ ಪ್ರಭಾವ ಬೀರಿದೆ. ಯಶ್ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾ ನೋಡಲು ಇನ್ನೂ 3 ತಿಂಗಳು ಕಾಯಬೇಕಾಗಿದೆ. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಜಾಗತಿಕ ಪ್ರೇಕ್ಷಕರ ದೃಷ್ಟಿಯಿಂದ ಈ ನಿರ್ಧಾರ

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಿಸಲಾದ ಈ ಸಿನಿಮಾ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ನಂಬಿಕೆಯಿಂದ ರೂಪುಗೊಂಡಿದೆ. ವರ್ಷಗಳ ಪರಿಶ್ರಮದ ನಂತರ, ಮಾರ್ಚ್ 19ರಂದು ನಮ್ಮ ಚಿತ್ರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೆವು. ಆದರೆ, ವಿಶೇಷವಾಗಿ ಮಧ್ಯಪೂರ್ವ ಪ್ರದೇಶದಲ್ಲಿ ಉಂಟಾದ ಅನಿಶ್ಚಿತ ಪರಿಸ್ಥಿತಿ, ಜಗತ್ತಿನಾದ್ಯಂತ ಅತ್ಯಂತ ವ್ಯಾಪಕ ಪ್ರೇಕ್ಷಕರನ್ನು ತಲುಪಿ ಸಂಪರ್ಕಿಸುವ ನಮ್ಮ ಗುರಿಗೆ ಪರಿಣಾಮ ಬೀರಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಆದ್ದರಿಂದ, ನಮ್ಮ ಪಾಲುದಾರರು ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ, ಬಿಡುಗಡೆ ದಿನಾಂಕವನ್ನು ಮುಂದೂಡುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ನಿಮ್ಮ ಸಹನೆಗೆ ಧನ್ಯವಾದಗಳು. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ. ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವು ಈಗ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಜಗತ್ತಿನಾದ್ಯಂತ 2026 ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದೆ.

ಯಶ್‌ ಅಭಿಮಾನಿಗಳ ಬೇಸರ

ಯಶ್ ಅವರ ಕೊನೆಯ ಚಿತ್ರ ‘KGF 2’ ಬಿಡುಗಡೆಯಾಗಿ ಸುಮಾರು 4 ವರ್ಷಗಳೇ ಕಳೆದಿವೆ. ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯ ಮೇಲೆ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ಮೂರು ತಿಂಗಳ ವಿಳಂಬವು ದೊಡ್ಡ ನಿರಾಸೆಯನ್ನುಂಟು ಮಾಡಿದೆ. ಕೇವಲ ದಿನಾಂಕ ಬದಲಾಗಿರುವುದು ಮಾತ್ರವಲ್ಲದೆ, ಯುದ್ಧದ ಗಂಭೀರ ಕಾರಣಗಳಿಂದಾಗಿ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿರುವುದು ಅಭಿಮಾನಿಗಳಲ್ಲಿ ಮುಂದಿನ ದಿನಗಳ ಬಗ್ಗೆಯೂ ಆತಂಕ ಮೂಡಿಸಿದೆ. ಪ್ರಕಟಣೆಯಲ್ಲಿ ತಿಳಿಸಿರುವಂತೆ ಮಧ್ಯಪ್ರಾಚ್ಯದ ಪರಿಸ್ಥಿತಿಯೇ ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.

ಮತ್ತೊಂದೆಡೆ ಸಿನಿಮಾ ಬಿಡುಗಡೆ ವಿಳಂಬವಾದಷ್ಟೂ ಅದರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಜಾಗತಿಕ ಪ್ರೇಕ್ಷಕರಿಗಾಗಿ ಸಿನಿಮಾ ಸಿದ್ಧವಾಗುತ್ತಿದೆ ಎಂದು ಚಿತ್ರತಂಡ ಹೇಳಿರುವುದು ಅಭಿಮಾನಿಗಳಲ್ಲಿ ಸಿನಿಮಾ ಇನ್ನೂ ಅದ್ದೂರಿಯಾಗಿ ಮೂಡಿಬರಲಿದೆ ಎಂಬ ಭರವಸೆಯನ್ನೂ ಮೂಡಿಸಿದೆ. ವಿಶ್ವದಾದ್ಯಂತ ಇರುವ ಯಶ್ ಅಭಿಮಾನಿಗಳು ಮಾರ್ಚ್ 19ರಂದು ಸಿನಿಮಾ ನೋಡಲು ಯೋಜನೆಗಳನ್ನು ಹಾಕಿಕೊಂಡಿದ್ದರು. ಈಗ ಈ ಯೋಜನೆಗಳೆಲ್ಲವೂ ಜೂನ್ 4ಕ್ಕೆ ಬದಲಾಗಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಚಿತ್ರತಂಡದ ಈ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವು ಅಭಿಮಾನಿಗಳು ಚಿತ್ರತಂಡದ ನಿರ್ಧಾರವನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಮತ್ತಷ್ಟು ಕಾಯಬೇಕಾದ ಅನಿವಾರ್ಯತೆಯನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಯುದ್ಧದ ವಾತಾವರಣವು ಯಶ್‌ ಅಭಿಮಾನಿಗಳ ಸಂಭ್ರಮಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಆದರೆ, ಜೂನ್ 4ರವರೆಗೆ ಕಾಯಲೇಬೇಕಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yash-toxic-release-postponed-amid-middle-east-uncertainty-movie-worldwide-new-date-announced-june-4-445883.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo