Gulf: ನಾವಿಲ್ಲಿ ಸುರಕ್ಷಿತ: ಕತಾರ್ ಸರ್ಕಾರದ ನೆರವು ನೆನೆದ ಕನ್ನಡಿಗರು | Ground Reality from Gulf: Indian Expat Assures Safety Amid US-Iran-Israel Tensions We safe here: Kannadigas Says

International

oi-Hitesh Y

Gulf: ಅಮೆರಿಕ, ಇರಾನ್ vs ಇಸ್ರೇಲ್ ನಡುವಿನ ಯುದ್ಧದ ಬಿಸಿಯು ಇದೀಗ ಗಲ್ಫ್‌ ರಾಷ್ಟ್ರಗಳಿಗೂ ಮುಟ್ಟಿದೆ. ಆದರೆ ಅಲ್ಲಿನ ಪರಿಸ್ಥಿತಿ ಬೇರೆಯೇ ಇದೆ. ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿರುವಂತೆ ಇಲ್ಲಿ ಪರಿಸ್ಥಿತಿ ಇಲ್ಲ ಎಂದು ಕನ್ನಡಿಗ Almeida Gladson ಅವರ ಬರಹ ಇಲ್ಲಿದೆ.

ಕಳೆದ ಕೆಲದಿನಗಳಿಂದ ಗಲ್ಫ್ ದೇಶಗಳಾದ ಕತಾರ್, ಯುಎಇ, ಕುವೆಯ್ಟ್, ಒಮಾನ್, ಬಹರೈನ್, ಸೌದಿ ಅರೇಬಿಯಾದಲ್ಲಿರುವ ನಮ್ಮಂಥ ಅನಿವಾಸಿ ಭಾರತೀಯರ ಬಗ್ಗೆ, ನಮ್ಮ ಸುರಕ್ಷತೆಯ ಬಗ್ಗೆ ಆತಂಕಗೊಂಡಿರುವ, ಚಿಂತೆಗೊಳಗಾಗಿ, ನಮ್ಮನ್ನು ಸಂಪರ್ಕಿಸಿರುವ ಎಲ್ಲರಿಗೂ ನಾನು ಹೇಳುವುದಿಷ್ಟೆ. ನಾವು ಇಲ್ಲಿ ಅತ್ಯಂತ ಸುರಕ್ಷಿತವಾಗಿದ್ದೇವೆ. ನಾವು ಎಂದಿನಂತೆ ಜೀವಿಸುತ್ತಿದ್ದೇವೆ. ನಾವು ಇಲ್ಲಿ ಸೇಫಾಗಿಲ್ಲ ಎಂದು ಹೇಳುತ್ತಿರುವ ಕೆಲವು ಕನ್ನಡ ಹಾಗೂ ಇತರ ನ್ಯೂಸ್ ಚಾನಲ್‍ಗಳು ಸುಳ್ಳು ಹೇಳುತ್ತಿವೆ. ನಾನಿರುವ ಕತಾರ್ ಆಗಲಿ, ಅಕ್ಕಪಕ್ಕದ ಬಹರೈನ್, ಕುವೆಯ್ಟ್, ಯುಎಇ, ಸೌದಿ ಅರೇಬಿಯಾ ಅಥವಾ ಒಮಾನ್ ಎಲ್ಲೆಲ್ಲಿಯೂ ಇಲ್ಲಿರುವ ಜನರು, ಅವರು ಇಲ್ಲಿನ ನಾಗರಿಕರಾಗಿರಲಿ, ಇಲ್ಲ ನಮ್ಮಂಥ ನಿವಾಸಿಗಳಾಗಿರಲಿ ಇಲ್ಲ ಸ್ವಲ್ಪ ಸಮಯಕ್ಕೆ ವಿಸಿಟ್ ವೀಸಾನೋ ಇಲ್ಲ ಟೂರಿಸ್ಟ್ ವೀಸಾದಲ್ಲಿ ಇಲ್ಲಿ ಬಂದಿರುವವರು, ಎಲ್ಲರೂ ಸುರಕ್ಷಿತರಾಗಿದ್ದಾರೆ.

Ground Reality from Gulf Indian Expat Assures Safety Amid US-Iran-Israel Tensions We safe here Kannadigas Says

ಹೌದು ಒಂದು ವಾರದ ಮೊದಲಿದ್ದ ಹಾಗೆ ಇಲ್ಲ ಪರಿಸ್ಥಿತಿ. ಆಕಾಶದ ಮೇಲೆ ದಿನಕೊಂದು ನಾಲ್ಕು ಬಾರಿ ಕ್ಷಿಪಣಿಗಳು, ಡ್ರೋನ್‍ಗಳು, ಅಪರೂಪಕ್ಕೊಮ್ಮೆ ಫೈಟರ್ ಜೆಟ್‍ಗಳು ಈ ದೇಶಗಳಲ್ಲಿರುವ ಅಮೇರಿಕನ್ ಮಿಲಿಟರಿ, ವಿಮಾನ ಬೇಸ್‍ಗಳು ಹಾಗೂ ಇತರ ಅಮೇರಿಕನ್ asset ಗಳನ್ನು ಗುರಿಯಾಗಿಸಿ ಹಾರಾಡುತ್ತಿವೆ. ಆದರೆ ಅದರಲ್ಲಿ ಶೇ 95 ಕ್ಷಿಪಣಿ, ಡ್ರೋನ್‍ಗಳನ್ನು ಗಾಳಿಯಲ್ಲಿ ಹೊಡೆದುರುಳಿಸಲಾಗಿದೆ. ಒಂದೆರಡು ಕ್ಷಿಪಣಿ, ಡ್ರೋನ್‍ಗಳು ಅವರ ಉದ್ದೇಶಿತ ಗುರಿಯನ್ನು ತಲುಪಿವೆ. ಆದರೆ ನಾಗರಿಕ ವಸತಿ ಪ್ರದೇಶಗಳಾಗಲಿ, ನಾಗರಿಕರಾಗಲಿ ಇದರಿಂದ ತೊಂದರೆ ಅಥವಾ ಅಪಾಯಕ್ಕೆ ಸಿಲುಕಿಲ್ಲ.

ಇಲ್ಲಿ ಮಾಲ್‍, ಹೈಪರ್, ಸೂಪರ್ ಮಾರ್ಕೆಟ್‍ಗಳು, ಅಂಗಡಿ-ಮುಗ್ಗಟ್ಟುಗಳು, ಹೊಟೇಲ್, ರೆಸ್ಟೋರೆಂಟ್‍ಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಅದರಲ್ಲೂ ಮೊನ್ನೆಯಿಂದ ಕೆಲ ಮಾಲ್‍, ಮಾರ್ಕೆಟ್‌ಗಳು 24/7 ಕಾರ್ಯಾಚರಿಸುತ್ತಿವೆ. ಕೆಲಸಕ್ಕೆ ಹೋಗುವ ಜನರು ಕೆಲಸಕ್ಕೆ ಹೋಗುತ್ತಿದ್ದಾರೆ. Remote, online ಕೆಲಸ ಸಾಧ್ಯವಿದ್ದಲ್ಲಿ ಅದೂ ನಡೆಯುತ್ತಿದೆ. ಶಾಲೆಗಳು offline ಹೋಗಿ online ಆಗಿದ್ದರೂ ಎಂದಿನಂತೆ ಕಾರ್ಯಾಚರಿಸುತ್ತಿವೆ. ಅಂಗಡಿ, ಮಾರುಕಟ್ಟೆಗಳಲ್ಲಿ ದಿನನಿತ್ಯದ ಸಾಮಾನುಗಳು, ದಿನಸಿ, ಹಾಲು-ಹಣ್ಣು- ತರಕಾರಿಗಳು ಎಲ್ಲವೂ ಎಂದಿನಂತೆ ಸಿಗುತ್ತಿವೆ. ಕೆಲ ದೇಶಗಳಲ್ಲಿ ಮುಂದಿನ ಒಂದು ತಿಂಗಳು ಯಾವುದೇ ದಿನಸಿ, ಸಾಮಾನಿನ ಬೆಲೆ ಹೆಚ್ಚಿಸಬಾರದೆಂದು ಸರ್ಕಾರ ಆದೇಶನೂ ಹೊರಡಿಸಿದೆ, ರಮ್ಜಾನ್ ಆಚರಿಸುತ್ತಿವ ಮುಸ್ಲೀಮ್ ಬಾಂಧವರಿಗೂ, ಇಲ್ಲಿರುವ ಎಲ್ಲರಿಗೂ ಯಾವುದೇ ತೊಂದರೆಯಾಗಬಾರದೆನ್ನುವ ದೃಷ್ಟಿಯಿಂದ.

ಹೌದು! ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿಲ್ಲ. ಇಲ್ಲಿಂದ ಆಗಮಿಸುವ ಹಾಗೂ ನಿರ್ಗಮಿಸುವ ಹೆಚ್ಚಿನ ವಿಮಾನಗಳಿಗೆ ಇರಾನ್ ಏರ್-ಸ್ಪೇಸ್ ಮುಖ್ಯ. ಸದ್ಯ ಅಲ್ಲಿ ಪ್ರಕ್ಷುಬ್ದ ವಾತಾವರಣ ಇರುವುದರಿಂದ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಾಸ ಉಂಟಾಗಿರುವುದು ನಿಜ. ಆದರೂ ನಿನ್ನೆ-ಮೊನ್ನೆಯಿಂದ ಇಲ್ಲಿ ಸಿಲುಕಿರುವ ಟ್ರಾನ್ಸಿಟ್ ಅಥವಾ ವಿಸಿಟ್/ಟೂರಿಸ್ಟ್ ವೀಸಾಗಳಲ್ಲಿ ಬಂದಿರುವ ಜನರನ್ನು ಅವರ ದೇಶಕ್ಕೆ ತಲುಪಿಸುವ ನಿಟ್ಟಿನಲ್ಲಿ ಕೆಲ ವಿಮಾನಗಳು ಸಂಚಾರ ಆರಂಭಿಸಿವೆ.

ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿಲ್ಲವಾದರೂ, ವಿಮಾನಗಳು ಕ್ಯಾನ್ಸಲ್ ಆಗಿದ್ದರೂ, ಪ್ರಯಾಣಿಸಬೇಕಾಗಿದ್ದ ಜನರಿಗೆ, ಟ್ರಾನ್ಸಿಟ್ ವೀಸಾದಲ್ಲಿದ್ದವರಿಗೆ, ವಿಸಿಟರ್ಸ್, ಪ್ರವಾಸಿಗಳಿಗೆ ಇಲ್ಲಿನ ಸರ್ಕಾರ ಅಲ್ಲೇ ವಿಮಾನ ನಿಲ್ದಾಣಗಳಲ್ಲಿ ಬಿಟ್ಟು ಹಾಕಿಲ್ಲ. ಅವರೆಲ್ಲರನ್ನೂ ನಗರ ಭಾಗಗಳಲ್ಲಿರುವ ಅತ್ಯುತ್ತಮ ಹೊಟೇಲುಗಳಿಗೆ ಶಿಫ್ಟ್ ಮಾಡಿ ಅವರಿಗೆ ಉಚಿತ ವಸತಿ, ಊಟ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ, ಅವರ ಸುರಕ್ಷತೆಗಾಗಿ ಎಲ್ಲವನ್ನೂ ಮಾಡಲಾಗಿದೆ. ಕತಾರ್ ಸರ್ಕಾರ ಟ್ರಾನ್ಸಿಟ್, ವಿಸಿಟ್ ಹಾಗೂ ಬೇರೆ ಅಲ್ಪಕಾಲದ ವೀಸಾಗಳ ಅವಧಿಯನ್ನು ವಿಸ್ತರಿಸಿದೆ, ಅದೂ ಉಚಿತವಾಗಿ.

ಇಲ್ಲಿನ ಸರ್ಕಾರಗಳು ಎಲ್ಲರ, ಅಂದರೆ ಪ್ರತಿಯೊಬ್ಬರ ರಕ್ಷಣೆ, ಸುರಕ್ಷತೆಗಾಗಿ ಹಗಲಿರುಳೂ ಶ್ರಮಿಸುತ್ತಿವೆ. ಇಲ್ಲಿ ಧರ್ಮ, ಜಾತಿ, ದೇಶ, ಬಣ್ಣ ನೋಡಿ ಜನರನ್ನು ಪ್ರತ್ಯೇಕಿಸಲ್ಲ. ಎಲ್ಲರನ್ನು ಸಮಾನವಾಗಿ ಕಂಡು, ಎಲ್ಲರ ಸುರಕ್ಷತೆಗಾಗಿ ಏನು, ಅಲ್ಲ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತಿವೆ. ನಾವು ಇಲ್ಲಿನ ಜನರಿಗಾಗಿ ಏನೆಲ್ಲಾ ಮಾಡುತ್ತಿವೆ ಎಂದು ಅವರು ಬೊಂಬ್ಡಿ ಹೊಡೆಯದ ಕಾರಣ, ಇಲ್ಲಿನ ಪ್ರಧಾನಿ, ಎಮಿರ್‌ಗಳು ತಮ್ಮ ಪಟ ಹಾಕಿ ಜನರಿಗಾಗಿ ನಾವು ಅದನ್ನು ಮಾಡಿದ್ದೇವೆ. ಇದನ್ನು ಮಾಡಿದ್ದೇವೆ ಎಂದು ಪಿಆರ್ ಸ್ಟಂಟ್ ಮಾಡದ ಕಾರಣ ಇಲ್ಲಿ ಜನರು ಸುರಕ್ಷಿತರಾಗಿಲ್ಲವೆಂದಲ್ಲ. ಇಂಥ ಪರಿಸ್ಥಿತಿಯಲ್ಲಿ ಇಲ್ಲಿರುವಷ್ಟು ಸುರಕ್ಷತೆ, ಭದ್ರತೆ ಇನ್ನೆಲ್ಲಿಯೂ ಸಾಧ್ಯವಿಲ್ಲ.

ಹೌದು ಜನರು ಸ್ವಲ್ಪ ಹೆದರಿದ್ದಾರೆ. ಇಲ್ಲಿರುವ ಬಹುಪಾಲು ಭಾರತೀಯರಾಗಲಿ, ಬೇರೆಯವರಾಗಲಿ, ಯುದ್ಧವನ್ನು ಕಂಡವರಲ್ಲ. ನಾವು ಭಾರತೀಯರಂತೂ ಯುದ್ಧ ಬಿಡಿ, ಸಣ್ಣ Skirmish, Insurgency ಕೂಡಾ ಅನುಭವಿಸಿದವರಲ್ಲ. ಹಾಗಾಗಿ ಕ್ಷಿಪಣಿ, ಡ್ರೋನ್‍ಗಳ interception ಆಗಿ ದೊಡ್ಡ ಶಬ್ದ, ಗಾಳಿಯಲ್ಲಿ ಸ್ಫೋಟವಾದಾಗ ಒಮ್ಮೆ ಹೆದರುವುದು ಸಹಜ. ನ್ಯೂಸ್ ಚಾನಲ್‍ಗಳಲ್ಲಿ ಇಲ್ಲಿನ ಒಂದು ಜಾಗದ ವಿಡಿಯೋವನ್ನು ಹತ್ತಾರು ಆಂಗಲ್‍ಗಳಲ್ಲಿ ತೋರಿಸಿ ಇಲ್ಲಿ ಎಲ್ಲೆಲ್ಲಿ ಹೊತ್ತಿ ಉರಿಯುತ್ತಿದೆ, ಸ್ಫೋಟಿಸುತ್ತಿದೆ ಎಂದು ತೋರಿಸುತ್ತಿರುವವರು ಯುದ್ಧದಾಹಿಗಳು, ಯುದ್ಧೋನ್ಮಾದಿಗಳು. ಎಲ್ಲಿ ಕಾಣುತ್ತಿರುವ ಹೊಗೆ, ಸ್ಫೋಟಗಳು ಕ್ಷಿಪಣಿ, ಡ್ರೋನ್ ಬಿದ್ದು ಆಗಿರುವಂತವಲ್ಲ ಬದಲಾಗಿ ಅವುಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದಾಗ ಅದರಿಂದ ನೆಲಕ್ಕೆ ಬಿದ್ದ ಅವಶೇಷಗಳು ಇಲ್ಲ ಕಿಡಿ ಬಿದ್ದು ಹೊತ್ತಿಕೊಂಡಿರುವ ಬೆಂಕಿ. ಅದರ ಹೊರತಾಗಿ ಎಲ್ಲಿ ಎಲ್ಲವೂ, ಎಲ್ಲರೂ ಸುರಕ್ಷಿತ.

ಎರಡ್ಮೂರು ದಿನಗಳ ಹಿಂದೆ ನಿಮಗೆ ಕೆಲ ಭಾರತೀಯರು ರೀಲ್ ಇಲ್ಲ ವಿಡಿಯೋ ಮಾಡಿ ನಾವಿಲ್ಲಿ ಸಿಲುಕಿಕೊಂಡಿದ್ದೇವೆ. ಹೆದರಿಕೆ ಆಗುತ್ತಿದೆಯೆನ್ನುವುದನ್ನು ನೋಡಿದಿದ್ದರೆ, ಅದೂ ಸುಳ್ಳಲ್ಲ. ಅವರೆಲ್ಲರೂ ವಿಸಿಟ್, ಟೂರಿಸ್ಟ್ ಇಲ್ಲ ಬೇರೆ ಅಲ್ಪಕಾಲದ ವೀಸಾದ ಮೇಲೆ ಬಂದಿರುವವರು. ಮೊನ್ನೆ ದಾಳಿ ಆರಂಭವಾದ ದಿನ ಇಲ್ಲ ಅದರ ನಂತರದ ದಿನಗಳಲ್ಲಿ ವಾಪಾಸ್ಸು ಭಾರತಕ್ಕೆ ಹೋಗಿ ತಮ್ಮ ಮನೆ, ಕುಟುಂಬ ಸೇರಬೇಕಾಗಿದ್ದವರು. ಅವರಲ್ಲಿ ತುಸು ಗಾಬರಿ, ಆತಂಕವಿರುವುದು ಸಹಜ. ಅವರಿಗೆ ಇದೊಂದು ಹೊಸ ದೇಶ, ಇಲ್ಲಿನ ಜನರು ಅಪರಿಚಿತರು. ಅವರು ಇಲ್ಲಿನ ನಿವಾಸಿಗಳಲ್ಲ.

ಕೆಲವರು ಅವತ್ತು ವಿಮಾನ ನಿಲ್ದಾಣದಲ್ಲಿದ್ದರು, ಕೆಲವರ ವೀಸಾ ಅವಧಿ ಮುಗಿಯಲಿತ್ತು. ಹಾಗಾಗಿ ಮುಂದೆ ಏನಾಗಬಹುದೆಂದು ಅವರಿಗೆ ಆತಂಕವಿದ್ದದ್ದು ಸಹಜ. ಆದರೆ ಇಲ್ಲಿನ ಸರ್ಕಾರಗಳು ಅವರನ್ನೂ ಬಿಟ್ಟಾಕಿಲ್ಲ. ಅವರಿಗೆ ಉಚಿತ ಊಟ, ವಸತಿ ಕಲ್ಪಿಸಿ ಅವರ ವೀಸಾ ಅವಧಿಯನ್ನೂ ಉಚಿತವಾಗಿ ವಿಸ್ತರಿಸಿದ ನಂತರ ಅವರೂ ಈಗ ನಿರಾಳವಾಗಿದ್ದಾರೆ, ತಮ್ಮ ಮನೆ, ಕುಟುಂಬಸ್ಥರೊಡನೆ ಸಂಪರ್ಕದಲ್ಲಿದ್ದಾರೆ.

ನಮ್ಮ ಸುರಕ್ಷತೆಯ ಬಗ್ಗೆ, ನಮ್ಮ ಬಗ್ಗೆ ಕಾಳಜಿ ಇರುವ ಎಲ್ಲಾ ಕುಟುಂಬಸ್ಥರು, ಮಿತ್ರರು, ಪರಿಚಯದವರಿಗೆ ಇದರ ಮೂಲಕ ಹೇಳಬಯಸುವುದೇನೆಂದರೆ, ನಮ್ಮ ಬಗ್ಗೆ ಕಾಳಿಜಿಯಿದ್ದರೆ ಕನ್ನಡ ನ್ಯೂಸ್ ಚಾನಲ್‍ಗಳಿಂದ ದೂರವಿರಿ. ಅವರು ದಗಲ್ಬಾಜಿಗಳು, ಸುಳ್ಳುಕೋರರು ಹಾಗೂ ಯುದ್ಧದಾಹಿಗಳು. ಮಿಕ್ಕೆಲ್ಲವೂ ಸರಿಹೋಗಲಿದೆ ಎನ್ನುವ ಆಶಯ ನಮಗಿದೆ. ಇಲ್ಲಿಯವರೆಗೆ ಎಲ್ಲವೂ ಸೇಫ್ ಆಂಡ್ ಸೌಂಡ್. ಮುಂದಿನ ದಿನಗಳಲ್ಲಿ ಎಲ್ಲವೂ ನಾರ್ಮಲ್ ಆಗಲಿದೆ ಎನ್ನುವ ವಿಶ್ವಾಸ ನಮಗಿದೆ.

ಇಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು, ಇತರ ಭಾರತೀಯ ಸಂಘಸಂಸ್ಥೆಗಳು ಯಾರೂ Panic ಆಗಿಲ್ಲ. ಅದರ ಅಗತ್ಯವಿಲ್ಲವೆಂದು ಇಲ್ಲಿರುವವರಿಗೆ, ಇಲ್ಲಿ ವರುಷಗಳಿಂದ ನೆಲೆಸಿರುವವರಿಗೆ ತಿಳಿದಿದೆ. ಇಲ್ಲಿಂದ ಭಾರತೀಯರನ್ನು ಸದ್ಯ ಕರೆತರುವ, Evacuation ಮಾಡುವ ಯಾವ ಅಗತ್ಯನೂ ಇಲ್ಲ, ಸಂದರ್ಭನೂ ಇಲ್ಲ. ಭಾರತೀಯ ಸರ್ಕಾರವಾಗಲಿ, ಇಲ್ಲಿನ ರಾಯಭಾರ ಕಚೇರಿಗಳಾಗಲಿ ಅದರ ಬಗ್ಗೆ ಮಾತಾನಾಡಿಲ್ಲ. ನಮ್ಮ ಸರ್ಕಾರಕ್ಕೂ ಇಲ್ಲಿನ ರಾಯಭಾರ ಕಚೇರಿಗಳಿಗೂ ಇಲ್ಲಿರುವ ಭಾರತೀಯರು ಸೇಫಾಗಿದ್ದಾರೆ, ಅತ್ಯಂತ ಸುರಕ್ಷಿತರಾಗಿದ್ದಾರೆಂದು ತಿಳಿದಿದೆ. ಹಾಗಾಗಿ ಸರ್ಕಾರ, ವಿದೇಶಾಂಗ ಇಲಾಖೆಯವರನ್ನು ಬಿಟ್ಟು ಇನ್ನು ಯಾರೋ ಯೂಟ್ಯೂಬ್‍ ಚಾನಲ್‍ನಲ್ಲಿ, ನ್ಯೂಸ್ ಚಾನಲ್‍ನಲ್ಲಿ evacuation ಬಗ್ಗೆ ಮಾತಾನಾಡಿದರೆ, ನಾನು ಹೇಳುವುದು ಇಷ್ಟೆ! ‘Father forgive them, they know not what they do’.

ಸದ್ಯ ಶಾಂತಿ ನೆಲೆಸಬೇಕಾಗಿರುವುದು ನಮ್ಮ ನ್ಯೂಸ್ ರೂಮ್‍ಗಳಲ್ಲಿ. ಅಲ್ಲಿರುವಷ್ಟು ಅಸುರಕ್ಷತೆ, ಪ್ರಕ್ಷುಬ್ದ ವಾತಾವರಣ ಇಲ್ಲಿಲ್ಲ. ಆದರೆ ನಮ್ಮ ಮಾಧ್ಯಮಗಳ ಯುದ್ಧೋನ್ಮಾದ ಕಡಿಮೆಯಾಗಿಲ್ಲವೆಂದರೆ ಒಂದೆರಡು ದಿನಗಳಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ತಮ್ಮ ದಾಳಿಯನ್ನು ನಿಲ್ಲಿಸಿ, ಅದನ್ನು ಮುಂದುವರಿಸಲು ಭಾರತೀಯ ಮಾಧ್ಯಮಗಳಿಗೆ ಕೇಳಿಕೊಂಡರೆ ಅಚ್ಚರಿಪಡಬೇಕಾಗಿಲ್ಲ.

ನಾನು ಇಲ್ಲಿ ಕೂತು ಹತ್ತಾರು ದೇಶಗಳ ಮಾಧ್ಯಮಗಳನ್ನು ಫಾಲೋ ಮಾಡುತ್ತಿದ್ದೇನೆ. ಆದರೆ ಭಾರತೀಯ ಮಾಧ್ಯಮಗಳಲ್ಲಾಗುತ್ತಿರುವಷ್ಟು ಭೀಕರ ಯುದ್ಧ, ಇಲ್ಲಿ ಗ್ರೌಂಡ್ ಲೆವೆಲಲ್ಲೂ ಆಗುತ್ತಿಲ್ಲ, ಇನ್ಯಾವ ದೇಶದ ಮಾಧ್ಯಮಗಳಲ್ಲೂ ಆಗುತ್ತಿಲ್ಲ. ಹಾಗಾಗಿ ನಮ್ಮ ಮಾಧ್ಯಮಗಳನ್ನು ನಂಬಬೇಡಿ. ಅವರು ಸುದ್ದಿ ವಾಚಕರಲ್ಲ, ವಾಚಾಳಿಗಳು, ಸುದ್ದಿ ವಾಹಕರಲ್ಲ, ಸುದ್ದಿ ಭಯೋತ್ಪಾದಕರು. ಅವರಲ್ಲಿ ಹೆಚ್ಚಿನವರ ಹೆಸರಿನ ಹಿಂದೆ, ಮುಂದೆ ಪತ್ರಕರ್ತ ಎನ್ನುವ ಬೋರ್ಡು, ಕೈಯಲ್ಲೊಂದು ಮೈಕು, ಕ್ಯಾಮಾರವಿದ್ದಿಲ್ಲವೆಂದರೆ ಅವರು ಸುಪಾರಿ ತೆಗೆದುಕೊಂಡು ಜೀವನೋಪಾಯ ಕಂಡುಕೊಳ್ಳುವ ಯಾವುದೇ ಮಾಫೀಯಾದ henchmen ಆಗಿರುತ್ತಿದ್ದರು.

ನಾನಿಲ್ಲಿ 15 ವರುಷಗಳಿಂದ ಇಲ್ಲಿದ್ದೇನೆ. ಅವತ್ತಿನಿಂದ ಇವತ್ತಿನವರೆಗೆ ಒಂದು ಸೆಕೆಂಡಿಗೂ ನಾನು ಇಲ್ಲಿ ಸೇಫಾಗಿಲ್ಲವೆಂದು ನನಗೆ ಯಾವತ್ತೂ ಅನಿಸಿಲ್ಲ. ಮುಂದೆಯೂ ಹಾಗೆಯೇ. ಇದು ನನ್ನಂತ ಇಲ್ಲಿ ನೆಲೆಸಿರುವ ಎಲ್ಲರ ಅನಿಸಿಕೆಯೂ ಹೌದು! ಇಲ್ಲಿನ ಸರ್ಕಾರ ನಮ್ಮನ್ನು ಹಾಗೂ ಇಲ್ಲಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿಡಲಿದೆ ಎನ್ನುವ ನಂಬಿಕೆ ನಮಗಿದೆ. ಇದು ನಮ್ಮ ಜನ್ಮಭೂಮಿಯಲ್ಲದಿದ್ದರೂ, ನಮ್ಮ ಕರ್ಮಭೂಮಿ. ನಮ್ಮ ಜನ್ಮಭೂಮಿಯಷ್ಟೆ ಸುರಕ್ಷಿತ ನಾವಿಲ್ಲಿ ಎನ್ನುವ ಭಾವನೆ ಎಂದೆಂದಿಗೂ ನಮಗಿದೆ. ನಮಗೆ ಉದ್ಯೋಗ, ಜೀವನ, ವಸತಿ ಕಲ್ಪಿಸಿರುವ ಈ ದೇಶ, ನಮಗೆ ಭದ್ರತೆ, ಸುರಕ್ಷತೆಯನ್ನೂ ಒದಗಿಸಿದೆ, ಮುಂದೆಯೂ ಒದಗಿಸಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/ground-reality-from-gulf-indian-expat-assures-safety-amid-us-iran-israel-tensions-we-safe-here-kan-445945.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo