
Karnataka
oi-Shankrappa Parangi
ಬೆಂಗಳೂರು: ಕರ್ನಾಟಕ ರಾಜ್ಯದ ಜನರ ಚಿತ್ತ ಪ್ರಸಕ್ತ ಸಾಲಿನ ‘ಕರ್ನಾಟಕ ಬಜೆಟ್ 2026-27’ (Karnataka Budget 2026) ಮೇಲೆ ನೆಟ್ಟಿದೆ. ಮಾರ್ಚ್ 06ರಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ. ನಾಳೆ ಶುಕ್ರವಾರ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 17ನೇ ಐತಿಹಾಸಿಕ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿಯಿಂದ ಯಶಸ್ಸು ಸಿಕ್ಕಿದೆ ಎನ್ನುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್ಥಿಕ ದಿವಾಳಿ ಆಗಿದೆ ಅನ್ನವು ಆರೋಪವನ್ನೂ ಎದುರಿಸುತ್ತಿದೆ. ಸರ್ಕಾರದ ಬಳಿ ಹಣವಿಲ್ಲ, ಸಾಲದ ಮಾಡಿ ಬಜೆಟ್ ಮಂಡಿಸುತ್ತಿದೆ ಎಂಬೆಲ್ಲ ಆರೋಪ ಕೇಳಿ ಬಂದಿವೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರದ್ದು ಇದೇ ಕೊನೆಯ ಬಜೆಟ್ ಅಂತಲೂ ರಾಜಕೀಯವಾಗಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಬೆಳವಣಿಗೆ ನಡುವೆ ‘ಕರ್ನಾಟಕ ಬಜೆಟ್ 2026’ ಮಂಡನೆ ಆಗಲಿದೆ. ಆರ್ಥಿಕ ಶಿಸ್ತು ಕಾಯ್ದುಕೊಳ್ಳುವಲ್ಲಿ ಹೆಸರುವಾಸಿಯಾದ ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಈ ಬಾರಿ ಅಪಾರ ನಿರೀಕ್ಷೆಗಳು ಇವೆ.

ಕರ್ನಾಟಕ ಬಜೆಟ್ ಗಾತ್ರವೆಷ್ಟು?
ಸಿದ್ದರಾಮಯ್ಯನವರು ಸರ್ಕಾರ ಮಹತ್ವಾಕಾಂಕ್ಷೆಯ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ಹೆಚ್ಚಿನ ಒತ್ತು, ಅನುದಾನ ಒದಗಿಸುವ ಸಾಧ್ಯತೆ ಇದೆ. 2026ರಲ್ಲಿ ಒಟ್ಟು 4.50 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ ಎನ್ನಲಾಗಿದೆ. ಕಳೆದ ವರ್ಷದ ರಾಜ್ಯ ಬಜೆಟ್-2025 ಗಾತ್ರ 04 ಲಕ್ಷ ಕೋಟಿ ರೂ.ದಾಟಿತ್ತು. ಸದರಿ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಅಬಕಾರಿ ಸೆಸ್, ಇಂಧನ ಸೆಸ್ ಹೆಚ್ಚಿಸುವ ನಿರೀಕ್ಷೆಗಳು ಇವೆ. ಈಗಾಗಲೇ ಸಾರ್ವಜನಿಕರು ಗ್ಯಾರಂಟಿಯಿಂದಾಗಿ ಸರ್ಕಾರ ‘ಕೈ’ ಖಾಲಿ ಆಗಿದೆ. ಹಣ ಇಲ್ಲ. ಬಸ್, ಮೆಟ್ರೋ ಟಿಕೆಟ್ ದರ ಇನ್ನಿತರ ವಸ್ತುಗಳ ದರ ಏರಿಕೆ ಆಗಿವೆ. ಇದೀಗ ರಾಜ್ಯ ಬಜೆಟ್ ಮೂಲಕ ನಮ್ಮ ಮೇಲೆ ಮತ್ತಷ್ಟು ಹೊರೆ ಹಾಕದಿದ್ದಾರೆ ಸಾಕು ಎಂದು ಕೇಳಿಕೊಳ್ಳುತ್ತಿದ್ದಾರೆ.
ಕರ್ನಾಟಕ ಬಜೆಟ್ 2026 ಲೈವ್ ವೀಕ್ಷಣೆ ಎಲ್ಲಿ?
ಶಕ್ತಿಸೌಧದಲ್ಲಿ ಸಿಎಂ ಮಂಡಿಸುವ ಕರ್ನಾಟಕ ಬಜೆಟ್ ಮಂಡನೆಯ ನೇರಪ್ರಸಾರವನ್ನು ನೀವು ಮನೆಯಲ್ಲಿಯೇ ಕೂತು ವೀಕ್ಷಿಸಬಹುದಾಗಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ https://webcast.gov.in/karassembly ನಲ್ಲಿ ವೀಕ್ಷಿಸಬಹುದು. ಮಾತ್ರವಲ್ಲದೇ ಕರ್ನಾಟಕ ಕಾಂಗ್ರೆಸ್ https://x.com/INCKarnataka ಎಕ್ಸ್ ಖಾತೆಯಲ್ಲಿ ಲೈವ್ ನೋಡಬಹುದು. ಇದರೊಂದಿಗೆ ವಿವಿಧ ಖಾಸಗಿ ಟಿವಿ ವಾಹಿನಿಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಲೈವ್ ವೀಕ್ಷಣೆ ಇರಲಿದ್ದು, ಗಮನಿಸಬಹುದು.
ಕಳೆದ ವರ್ಷದ ರಾಜ್ಯ ಬಜೆಟ್ ಸಂಕ್ಷಿಪ್ತ ವಿವರ
ಸಿಎಂ ಸಿದ್ದರಾಮಯ್ಯ ಅವರು 2024-25ರಲ್ಲಿ ರಾಜ್ಯ ಸರ್ಕಾರ ಒಟ್ಟು 3.71 ಲಕ್ಷ ಕೋಟಿ ಗಾತ್ರದ ಹಾಗೂ 2025-26ರಲ್ಲಿ 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿಯ ಬಜೆಟ್ ಗಾತ್ರ 4.5ಲಕ್ಷ ಕೋಟಿ ಎನ್ನಲಾಗಿದೆ. ಇನ್ನೂ ಕಳೆದ ವರ್ಷ 2025-26ರಲ್ಲಿ ವಿತ್ತೀಯ ಕೊರತೆ 90,428 ಕೋಟಿ ಹಾಗೂ ರಾಜ್ಯದ ಸಾಲ 7,64,655 ಕೋಟಿ ಇದೆ.
ಇನ್ನೂ ಈ ವರ್ಷ ಬಜೆಟ್ ಮಂಡನೆ ಹೊತ್ತಿಗೆ ರೂ.8.14 ಲಕ್ಷ ಕೋಟಿ ಆಗಲಿದೆ. ಈ ಬಾರಿ 1.15 ಲಕ್ಷ ಕೋಟಿ ರೂ. ಸಾಲ, ಸಿಎಂ ಸಿದ್ದರಾಮಯ್ಯನವರಿಂದ ಸಾಲದ ಬಜೆಟ್ ಮಂಡನೆ ಆಗಲಿದೆ ಎಂದು ವಿಪಕ್ಷಗಳು ಟೀಕಿಸಿವೆ.
ಬಜೆಟ್ 2025ರ ಪ್ರಮುಖ ಘೋಷಣೆಗಳು
ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಘೋಷಿಸಿದ್ದರು. ಅಕ್ಕಮಹಾದೇವಿ ಸಹಕಾರ ಸಂಘ ಸ್ಥಾಪನೆ, ಪರಿಶಿಷ್ಟ ಸಮುದಾಯದ ಏಳಿಗೆಗಾಗಿ 42,018 ಕೋಟಿ ರೂ. ಹಂಚಿಕೆ, 328 ದೇವಸ್ಥಾನಗಳ ಆಸ್ತಿ ಒತ್ತುವರಿ ತೆರವಿಗೆ ಕ್ರಮ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 4,500 ಕೋಟಿ ರೂ. ಘೋಷಣೆ, ಕ್ರೈಸ್ತರ ಅಭಿವೃದ್ಧಿಗೆ 250 ಕೋಟಿ ರೂ., ಜೈನ್ ಬೌದ್ಧ ಮತ್ತು ಸಿಖ್ರ ಅಭಿವೃದ್ಧಿಗೆ 100 ಕೋಟಿ ರೂ. ಸೇರಿ ಒಂದಷ್ಟು ಹೊಸ ಘೋಷಣೆ ಮಾಡಿದ್ದರು. ಒಟ್ಟು 3 ಗಂಟೆ 25 ನಿಮಿಷಗಳ ಬಜೆಟ್ ಓದಿ ಮುಗಿಸಿದ್ದರು.
ಈ ಭಾರಿ ಯಾವೆಲ್ಲ ಘೋಷಣೆಗಳನ್ನು ಅವರು ಮಾಡಲಿದ್ದಾರೆ. ಯಾವುದೆಲ್ಲ ದುಬಾರಿ ಆಗಲಿದೆ, ಯಾವ ಜಿಲ್ಲೆಗೆ, ಯಾವ ಸಮುದಾಯಕ್ಕೆ ಶುಭ ಸುದ್ದಿ ಸಿಗಲಿದೆ ಎಂಬ ಆಲೋಚನೆಗಳು ಜನರಲ್ಲಿ ಮೂಡಿವೆ. ಇದಕ್ಕೆಲ್ಲ ಮಾರ್ಚ್ 6ರಂದು ಶುಕ್ರವಾರ ಸಿದ್ದರಾಮಯ್ಯ ಅವರು ಉತ್ತರಿಸಲಿದ್ದಾರೆ. ನಂತರ ಬಜೆಟ್ ಮೇಲೆ ಮಾರ್ಚ್ 27ರವರೆಗೆ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ಚರ್ಚಿಸಲಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-budget-2026-live-cm-siddaramaiah-present-historic-17th-budget-on-march-6-at-11-am-446049.html. xn--babytilbehr-pgb.com does not claim ownership of this content. All rights remain with the original publisher.
