Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್‌ನಲ್ಲಿ ಚಳಿ | Karnataka weather Heat Rises in Ballari Records highest temperature While Bidar Sees Cool Weather

Karnataka

oi-Manohara M

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಕಂಡುಬಂದಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದೆ. ರಾಜ್ಯದ ಬಳ್ಳಾರಿಯಲ್ಲಿ 39.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಮತ್ತೊಂದೆಡೆ, ರಾಜ್ಯದ ಬಯಲು ಸೀಮೆಯಾದ ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಕೊರೆಯುವ ಚಳಿಯ ಅನುಭವವಾಗಿದೆ.

ರಾಜ್ಯದ ಒಳನಾಡಿನ ಒಂದು ಅಥವಾ ಎರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1.6-3 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದೆ. ಪ್ರಮುಖವಾಗಿ ಕಲಬುರಗಿ, ಕೊಪ್ಪಳ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿದೆ.

Karnataka weather

ಕರಾವಳಿ ಕರ್ನಾಟಕದ ಹಲವೆಡೆ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಿದ್ದರೆ, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿದಿದೆ. ಉತ್ತರ ಒಳನಾಡಿನ ಒಂದು ಅಥವಾ ಎರಡು ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ದಟ್ಟವಾದ ಮಂಜು ಮುಸುಕಿದ ವಾತಾವರಣವಿತ್ತು ಎಂದು ವರದಿ ತಿಳಿಸಿದೆ. ರಾಜ್ಯದ ಒಟ್ಟಾರೆ ಗರಿಷ್ಠ ತಾಪಮಾನದಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲವಾದರೂ, ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದು ಕಂಡುಬಂದಿದೆ.

ಜಿಲ್ಲಾವಾರು ತಾಪಮಾನದ ವಿವರ

ವಿಜಯಪುರ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಆಗುಂಬೆ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಿದ್ದು, ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಬೆಳಗಾವಿ, ಬೀದರ್, ಬಾಗಲಕೋಟೆ, ಬೆಂಗಳೂರು ನಗರ, ಚಿತ್ರದುರ್ಗ, ಹಾಸನ, ಚಿಂತಾಮಣಿ, ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಕೊಂಚ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೊನ್ನಾವರ, ಕಾರವಾರ, ಮಂಗಳೂರು ಮತ್ತು ಶಕ್ತಿನಗರದಲ್ಲಿ ತಾಪಮಾನವು ಸ್ಥಿರವಾಗಿದೆ.

ರಾಜ್ಯದ ಹವಾಮಾನದಲ್ಲಿ ಕಳೆದ 24 ಗಂಟೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ಕೆಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದ್ದರೆ, ಮಾರುತಗಳ ದಿಕ್ಕಿನ ಬದಲಾವಣೆಯಿಂದಾಗಿ ಉತ್ತರ ಒಳನಾಡಿನ ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಬೆಳಗಾವಿ ವಿಮಾನ ನಿಲ್ದಾಣ, ಬೀದರ್, ಬಾಗಲಕೋಟೆ, ಧಾರವಾಡ ಮತ್ತು ರಾಯಚೂರು ಸೇರಿದಂತೆ ಹಲವೆಡೆ ಕನಿಷ್ಠ ತಾಪಮಾನವು 14-18.5 ಡಿಗ್ರಿ ಸೆಲ್ಸಿಯಸ್‌ ನಡುವೆ ದಾಖಲಾಗಿದೆ.

ವಿಜಯಪುರ, ಕಲಬುರಗಿ, ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತಾಪಮಾನವು 18.6-23.4 ಡಿಗ್ರಿ ಸೆಲ್ಸಿಯಸ್‌ವರೆಗೆ ಇತ್ತು. ಕರಾವಳಿ ಜಿಲ್ಲೆಗಳಾದ ಕಾರವಾರ ಮತ್ತು ಮಂಗಳೂರಿನಲ್ಲಿ 23-25 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. ಬೀದರ್‌ನಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ತೀವ್ರವಾಗಿ ಕುಸಿದಿದ್ದರೆ, ರಾಯಚೂರು ಮತ್ತು ಚಿಂತಾಮಣಿಯಲ್ಲಿ ಕೂಡ ಸರಾಸರಿಗಿಂತ ಕಡಿಮೆ ತಾಪಮಾನ ಕಂಡುಬಂದಿದೆ.

ವಾಯುಭಾರ ಕುಸಿತ

ಒಡಿಶಾ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಮುಂದುವರಿದಿದೆ. ವಾಯುಭಾರ ಕುಸಿತದ ಪ್ರಭಾವ ಈ ಸುಳಿಗಾಳಿಯು ಒಡಿಶಾದಿಂದ ತೆಲಂಗಾಣ ಮತ್ತು ಕರ್ನಾಟಕದ ಒಳನಾಡಿನ ಮೂಲಕ ಹಾದು ಕರಾವಳಿ ಕರ್ನಾಟಕದವರೆಗೆ ವಿಸ್ತರಿಸಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 0.9 ಕಿ.ಮೀ ಎತ್ತರದಲ್ಲಿ ಬೀಸುತ್ತಿದೆ. ಈ ಹವಾಮಾನ ವೈಪರೀತ್ಯಗಳ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-weather-heat-rises-in-ballari-records-highest-temperature-while-bidar-sees-cool-weather-446333.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo