ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್‌ ಎನ್‌ಟಿಆರ್‌ | Telugu Actor Jr NTR Speaks In Kannada During Bengaluru Visit Calls Karnataka Like Mothers Home

Entertainment

oi-Manohara M

ಟಾಲಿವುಡ್‌ ನಟ “ಯಂಗ್ ಟೈಗರ್” ಜ್ಯೂನಿಯರ್ ಎನ್‌ಟಿಆರ್ (ತಾರಕ್) ಅವರು ಸಿಲಿಕಾನ್ ಸಿಟಿ ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಇಲ್ಲಿನ ಕನ್ನಡಿಗರ ಪ್ರೀತಿ ಮಿತಿ ಮೀರಿರುತ್ತದೆ. ಭಾನುವಾರ ಮಹದೇವಪುರದಲ್ಲಿರುವ ಕಿಮ್ಸ್‌ (KIMS) ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ, ಕನ್ನಡಿಗರ ಹೃದಯ ಗೆಲ್ಲುವ ಮಾತುಗಳನ್ನಾಡಿದ್ದಾರೆ. ಕನ್ನಡದಲ್ಲೇ ತಮ್ಮ ಭಾಷಣ ಮಾಡಿ ಕನ್ನಡ ನೆಲದ ಬಗ್ಗೆ ಕೊಂಡಾಡಿದ್ದಾರೆ.

ಇಲ್ಲಿಗೆ ಬಂದರೆ ಖುಷಿಯಾಗುತ್ತೆ

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜ್ಯೂನಿಯರ್ ಎನ್‌ಟಿಆರ್, ತಮ್ಮ ಮತ್ತು ಕರ್ನಾಟಕದ ನಡುವಿನ ರಕ್ತಸಂಬಂಧವನ್ನು ನೆನಪಿಸಿಕೊಂಡರು. “ಎಲ್ಲರಿಗೂ ನಮಸ್ಕಾರ, ಕರ್ನಾಟಕಕ್ಕೆ ಬಂದಾಗಲೆಲ್ಲ ನನಗೆ ಅಪಾರ ಖುಷಿ ಸಿಗುತ್ತದೆ. ನನ್ನ ತಾಯಿ ಕುಂದಾಪುರದವರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ, ನಾನು ಬೆಂಗಳೂರು ಅಥವಾ ಕರ್ನಾಟಕದ ಯಾವುದೇ ಭಾಗಕ್ಕೆ ಬಂದರೂ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ. ರಜೆಯ ಮಜಾ ಕಳೆಯಲು ಮಕ್ಕಳು ಊರಿಗೆ ಬಂದಂತಹ ಅನುಭವವಾಗುತ್ತದೆ. ಈ ಕಾರಣಕ್ಕಾಗಿಯೇ ಕರ್ನಾಟಕ ನನಗೆ ಯಾವಾಗಲೂ ತುಂಬಾ ಸ್ಪೆಷಲ್” ಎಂದರು.

Telugu Actor Jr NTR

ಅಭಿಮಾನಿಗಳ ನಿಯಂತ್ರಿಸಲು ಲಾಠಿ ಪ್ರಹಾರ

ತಮ್ಮ ನೆಚ್ಚಿನ ನಟನನ್ನು ನೋಡಲು ಮಹದೇವಪುರದ ಕಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಕಂಡು ಪೊಲೀಸರು ಹೈರಾಣಾದರು. ಎನ್‌ಟಿಆರ್ ಅವರು ತಮ್ಮ ಕಾರಿನ ಸನ್‌ರೂಫ್ ತೆರೆದು ಅಭಿಮಾನಿಗಳತ್ತ ಕೈಬೀಸುತ್ತಿದ್ದಂತೆ, ಜನಸಮೂಹವನ್ನು ನಿಯಂತ್ರಿಸುವುದು ಅಸಾಧ್ಯವಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಬೇಕಾಯಿತು.

ಜ್ಯೂನಿಯರ್ ಎನ್‌ಟಿಆರ್ ಅವರ ಮೆರವಣಿಗೆಯ ಎಂಟ್ರಿ ಮತ್ತು ಅವರು ಕನ್ನಡದಲ್ಲಿ ಮಾತನಾಡಿದ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಅಪ್ಪಟ ಕನ್ನಡದ ಸೊಗಡಿನಲ್ಲೇ ಮಾತನಾಡಿದ ಅವರ ಸರಳತೆಗೆ ಕನ್ನಡಿಗರು ಮತ್ತೊಮ್ಮೆ ಫಿದಾ ಆಗಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ತೆಲುಗು ಮೂಲದ ಜನರು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದರು. ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳ ಅಭಿಮಾನಿಗಳ ಘೋಷಣೆಗಳಿಂದ ಆಸ್ಪತ್ರೆಯ ಆವರಣ ಮೊಳಗಿತು. ನೆರೆದಿದ್ದ ಅಭಿಮಾನಿಗಳಲ್ಲಿ ಕೆಲವರು ತಾರಕ್ ಅವರಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಫೋಟೋ ಫ್ರೇಮ್‌ಗಳು ಮತ್ತು ಚಿತ್ರಪಟಗಳನ್ನು ಉಡುಗೊರೆಯಾಗಿ ನೀಡಿದರು. ಅಭಿಮಾನಿಗಳು ಸೆಲ್ಫಿಗಾಗಿ ನಡೆಸಿದ ಪೈಪೋಟಿಯ ನಡುವೆಯೂ, ನಟ ಕೊಂಚವೂ ಬೇಸರ ಮಾಡಿಕೊಳ್ಳದೆ ನಗುಮುಖದಿಂದಲೇ ಎಲ್ಲರತ್ತ ಕೈಬೀಸಿದರು.

Telugu Actor Jr NTR

ಸಾವಿರಾರು ಜನರ ನೂಕುನುಗ್ಗಲು, ಪೊಲೀಸರ ಲಾಠಿ ಪ್ರಹಾರ ಮತ್ತು ಹೈರಾಣಾಗಿಸುವ ಬಿಸಿಲಿನ ನಡುವೆಯೂ ಎನ್‌ಟಿಆರ್ ತಮ್ಮ ತಾಳ್ಮೆ ಕಳೆದುಕೊಳ್ಳಲಿಲ್ಲ. ಕಾರಿನ ಸನ್‌ರೂಫ್‌ನಿಂದ ಹೊರಬಂದು ಪ್ರತಿಯೊಬ್ಬ ಅಭಿಮಾನಿಯನ್ನೂ ಗೌರವದಿಂದ ಮಾತನಾಡಿಸುತ್ತಾ, ನಗೆ ಬೀರುತ್ತಾ ಸಾಗಿದ ರೀತಿ ಅಲ್ಲಿ ನೆರೆದಿದ್ದವರ ಮನಗೆದ್ದಿತು. ನನ್ನನ್ನು ನೋಡಲು ಇಷ್ಟೊಂದು ಜನ ಬಂದಿರುವುದು ನನ್ನ ಭಾಗ್ಯ ಎಂದು ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಬ್ಯಾನರ್‌ನಲ್ಲಿ ಎನ್‌ಟಿಆರ್‌ ಸಿನಿಮಾ

“ಕೆಜಿಎಫ್” ಮತ್ತು “ಸಲಾರ್” ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ NTR 31 ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಇದು ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಆಗಿರಲಿದ್ದು, ಇದರ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಇದಲ್ಲದೆ ಕೊರಟಾಲ ಶಿವ ನಿರ್ದೇಶನದ “ದೇವರ” ಬಿಡುಗಡೆಯಾದ ನಂತರ, ಅದರ ಮುಂದುವರಿದ ಭಾಗವಾಗಿ “ದೇವರ-2” ಬರಲಿದೆ. ಮೊದಲ ಭಾಗದ ಕಥೆಯ ಮುಂದುವರಿಕೆ ಮತ್ತು ದೇವರ ಹಾಗೂ ವರದ ಪಾತ್ರಗಳ ನಡುವಿನ ಸಂಘರ್ಷ ಈ ಭಾಗದಲ್ಲಿ ಇರಲಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/telugu-actor-jr-ntr-speaks-in-kannada-during-bengaluru-visit-calls-karnataka-like-mothers-home-446383.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo