
Sports
oi-Madhusudhan KR
T20 World Cup 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ನ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಕಿವೀಸ್ ಪಡೆಯ ಕನಸನ್ನು ನುಚ್ಚುನೂರು ಮಾಡಿ ಸತತ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.
ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ಹೇಳಿಕೆ ತಲೆಕೆಳಗಾಗಿದೆ. ಪಂದ್ಯಕ್ಕೂ ಮುನ್ನ, “ನಾವು ಅಹಮದಾಬಾದ್ ಮೈದಾನದಲ್ಲಿ ಭಾರತೀಯ ಅಭಿಮಾನಿಗಳ ಸದ್ದು ಅಡಗಿಸುತ್ತೇವೆ (ಸೈಲೆಂಟ್ ಮಾಡುತ್ತೇವೆ)” ಎಂದು ಸ್ಯಾಂಟ್ನರ್ ವಿಶ್ವಾಸದಿಂದ ಹೇಳಿದ್ದರು. ಆದರೆ, ಭಾರತೀಯ ಆಟಗಾರರ ಅಬ್ಬರದ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ದಾಳಿ ಮುಂದೆ ಕಿವೀಸ್ ಪಡೆ ಮಂಕಾಗಿದ್ದು, ಸ್ಯಾಂಟ್ನರ್ ಅವರ ಆ ತಂತ್ರ ಮತ್ತು ಹೇಳಿಕೆ ಎರಡೂ ಉಲ್ಟಾ ಹೊಡೆದಂತಾಗಿದೆ.

2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಐತಿಹಾಸಿಕ ಪಂದ್ಯದಲ್ಲಿ ಭಾರತವು ಸತತವಾಗಿ ಎರಡನೇ ಬಾರಿ ಪ್ರಶಸ್ತಿಯನ್ನು ಉಳಿಸಿಕೊಂಡು ವಿಶ್ವದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ತವರಿನ ಅಂಗಳದಲ್ಲಿ ಟಿ20 ವಿಶ್ವಕಪ್ ಗೆದ್ದಿರುವ ಭಾರತ, ಒಟ್ಟಾರೆಯಾಗಿ ಮೂರನೇ ಬಾರಿಗೆ ಈ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಬೃಹತ್ ಮೊತ್ತ ಕಲೆಹಾಕಿದ ಭಾರತ
ಮೊದಲು ಬ್ಯಾಟ್ ಮಾಡಿದ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಇದು ಗರಿಷ್ಠ ಮೊತ್ತವಾಗಿದೆ.
ಸಂಜು ಸ್ಯಾಮ್ಸನ್ 89 ರನ್ ಗಳಿಸಿ ಮಿಂಚಿದರೆ, ಅಭಿಷೇಕ್ ಶರ್ಮಾ ಟೂರ್ನಿಯ ಅತಿ ವೇಗದ ಅರ್ಧಶತಕವನ್ನು ಕೇವಲ 18 ಎಸೆತಗಳಲ್ಲಿ ಸಿಡಿಸಿ ದಾಖಲೆ ನಿರ್ಮಿಸಿದರು. ಇಶಾನ್ ಕಿಶನ್ 54(25), ಶಿವಂ ದುಬೆ ಅಜೇಯ 26(8) ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಭಾರತದ ಬೌಲಿಂಗ್ ದಾಳಿಗೆ ಕಿವೀಸ್ ಧ್ವಂಸ
ಭಾರತದ ಪರ ಬೌಲಿಂಗ್ ಮಾಡಿದ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಿತ್ತು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿ ಕಿವೀಸ್ ಪಡೆಯ ಸೊಕ್ಕು ಅಡಗಿಸಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಹಾಗೂ ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. ಪರಿಣಾಮ ನ್ಯೂಜಿಲೆಂಡ್ ತಂಡವು 19 ಓವರ್ಗಳಲ್ಲಿ ಕೇವಲ 159 ರನ್ ಗಳಿಸಿ ಆಲೌಟ್ ಆಯಿತು.ಈ ಮೂಲಕ ಭಾರತವು ಜಗತ್ತಿನ ಕ್ರಿಕೆಟ್ ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ.
ಟೀಂ ಇಂಡಿಯಾ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ನ್ಯೂಜಿಲೆಂಡ್ ಪ್ಲೇಯಿಂಗ್ 11: ಟಿಮ್ ಸೀಫರ್ಟ್ (ವಿಕೆಟ್ ಕೀಪರ), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಜಾಕೋಬ್ ಡಫಿ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/india-crush-nz-to-win-t20-world-cup-2026-santner-s-silence-ahmedabad-crowd-remark-backfires-446411.html. xn--babytilbehr-pgb.com does not claim ownership of this content. All rights remain with the original publisher.
