ಐಸಿಸಿ ಟಿ20 ವಿಶ್ವಕಪ್‌ ಗೆದ್ದ ಖುಷಿಯಲ್ಲಿರುವ ಗೌತಮ್‌ ಗಂಭೀರ್‌ಗೆ ‘ದಾದಾ’ ಸೌರವ್ ಗಂಗೂಲಿ ಎಚ್ಚರಿಕೆ | Sourav Ganguly Sends Warning to Gautam Gambhir After India’s ICC Men’s T20 World Cup 2026 Triumph

Sports

oi-Madhusudhan KR

Sourav Ganguly: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ಇತಿಹಾಸ ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಗಂಭೀರ್ ಖಾತೆಗೆ ಈಗ ಎರಡು ಪ್ರಮುಖ ಐಸಿಸಿ ಟ್ರೋಫಿಗಳು ಸೇರಿವೆ. ಇದೇ ಖುಷಿಯಲ್ಲಿರುವ ಅವರಿಗೆ ಸೌರವ್ ಗಂಗೂಲಿ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

ಗಂಭೀರ್ ಮಾರ್ಗದರ್ಶನದಲ್ಲಿ ಭಾರತವು 2025ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಅಲ್ಲದೆ, ಇದೀಗ ಐಸಿಸಿ ಟಿ20 ವಿಶ್ವಕಪ್‌ 2026 ಗೆದ್ದುಕೊಂಡಿದ್ದು, ಸತತವಾಗಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತ ‘ಬ್ಯಾಕ್-ಟು-ಬ್ಯಾಕ್’ ಚಾಂಪಿಯನ್ ಎನಿಸಿಕೊಂಡಿದೆ. ಈ ಮೂಲಕ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ಭಾರತೀಯ ಕೋಚ್ ಎಂಬ ಹೆಗ್ಗಳಿಕೆಗೆ ಗಂಭೀರ್ ಪಾತ್ರರಾಗಿದ್ದಾರೆ.

Sourav Ganguly Sends Warning to Gautam Gambhir After India s ICC Men s T20 World Cup 2026 Triumph

ಗಂಭೀರ್‌ಗೆ ಗಂಗೂಲಿ ಎಚ್ಚರಿಕೆ ಸಂದೇಶ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಆರಂಭದಲ್ಲಿ ಕೆಲವು ಏರಿಳಿತಗಳನ್ನು ಕಂಡರೂ, ಸರಿಯಾದ ಸಮಯದಲ್ಲಿ ಲಯಕ್ಕೆ ಮರಳಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಇನ್ನೂ ಭಾರತ ತಂಡದ ಈ ಯಶಸ್ಸನ್ನು ಶ್ಲಾಘಿಸುತ್ತಲೇ, ಮಾಜಿ ನಾಯಕ ಸೌರವ್ ಗಂಗೂಲಿ ಅವರು ಗಂಭೀರ್‌ಗೆ ಒಂದು ಮಹತ್ವದ ಎಚ್ಚರಿಕೆ ನೀಡಿದ್ದಾರೆ.

“ಗಂಭೀರ್ ಅವರಿಗೆ ನಿಜವಾದ ಸವಾಲು ಇನ್ನು ಒಂದು ವರ್ಷದ ನಂತರ ಎದುರಾಗಲಿದೆ. ಅದುವೇ 2027ರ ಏಕದಿನ ವಿಶ್ವಕಪ್. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಮಾಡುವುದು ಗಂಭೀರ್ ಪಾಲಿನ ಅಸಲಿ ಪರೀಕ್ಷೆ” ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಪಿಚ್‌ಗಳಲ್ಲಿ 50 ಓವರ್‌ಗಳ ಮಾದರಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಯಾವುದೇ ಕೋಚ್‌ಗೆ ದೊಡ್ಡ ಸವಾಲು ಎಂಬುದು ಗಂಗೂಲಿ ಅವರ ಮಾತಿನ ಅರ್ಥವಾಗಿದೆ.

“ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ನಿಜವಾದ ಪರೀಕ್ಷೆ 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಅಲ್ಲಿನ ಪರಿಸ್ಥಿತಿಗಳು ಅವರಿಗೆ ಸವಾಲೊಡ್ಡಲಿವೆ. ಆದರೆ, ಅವರ ಬಳಿ ಇರುವ ತಂಡದೊಂದಿಗೆ ಅವರು ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತಾರೆ ಎನ್ನುವ ಆತ್ಮವಿಶ್ವಾಸ ನನಗಿದೆ,” ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

2023ರಲ್ಲಿ ಕೈತಪ್ಪಿದ್ದ ಏಕದಿನ ವಿಶ್ವಕಪ್‌

2023ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅತ್ಯಂತ ಅದ್ಭುತವಾಗಿ ಆಡಿತ್ತು. ಲೀಗ್ ಹಂತದಿಂದ ಹಿಡಿದು ಸೆಮಿಫೈನಲ್‌ನವರೆಗೆ ಒಂದೂ ಪಂದ್ಯ ಸೋಲದೆ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದು, ಕ್ರಿಕೆಟ್ ಪ್ರಿಯರಿಗೆ ತೀವ್ರ ನೋವು ತಂದಿತ್ತು. ಅಂದು ಫೈನಲ್‌ನಲ್ಲಿ ಗೆಲುವಿನ ಸನಿಹಕ್ಕೆ ಬಂದರೂ, ಟ್ರೋಫಿ ಕೈತಪ್ಪಿದ್ದು ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಅತೀವ ನಿರಾಸೆ ಮೂಡಿಸಿತ್ತು.

ಗಂಭೀರ್‌ಗೆ ಅಗ್ನಿಪರೀಕ್ಷೆಯ ಟೂರ್ನಿ

2011ರಲ್ಲಿ ಆಟಗಾರನಾಗಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಗೌತಮ್ ಗಂಭೀರ್, ಈಗ ಮುಖ್ಯ ತರಬೇತುದಾರನಾಗಿ ಅದೇ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಿಸಿಕೊಡಬೇಕಾದ ಒತ್ತಡದಲ್ಲಿದ್ದಾರೆ. 2027ರ ಏಕದಿನ ವಿಶ್ವಕಪ್ ಕೇವಲ ತಂಡದ ಪಾಲಿಗೆ ಮಾತ್ರವಲ್ಲ, ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಪಾಲಿಗೂ ಅತ್ಯಂತ ಮಹತ್ವದ್ದಾಗಿದೆ. ಇದು ಈ ಇಬ್ಬರು ದಿಗ್ಗಜರು ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುತ್ತಿಕ್ಕಲು ದೊರೆಯುವ ಕೊನೆಯ ಅವಕಾಶ ಎಂದು ಹೇಳಲಾಗುತ್ತಿದೆ. ಯಾಕಂದ್ರೆ, ಆ ಟೂರ್ನಿ ಬಳಿಕ ಅವರಿಬ್ಬರು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಗೌತಮ್‌ ಗಂಭೀರ್‌ಗೆ ಗಂಗೂಲಿ ಕಿವಿಮಾತು

ಗಂಗೂಲಿ ಈ ಕುರಿತು ಮಾತನಾಡಿದ್ದು, “ಗೌತಮ್ ಗಂಭೀರ್ ಮತ್ತು ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಪ್ರದರ್ಶನವನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮುಖ್ಯ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

“ಟೆಸ್ಟ್ ಕ್ರಿಕೆಟ್‌ನಲ್ಲಿ ಗಂಭೀರ್ ಇನ್ನಷ್ಟು ಸುಧಾರಣೆ ಕಾಣಬೇಕಿದೆ. ಅದಕ್ಕೆ ಪ್ರಮುಖ ಮಾರ್ಗವೆಂದರೆ, ಪಿಚ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದನ್ನು ಬಿಡಬೇಕು. ಪಿಚ್‌ ಹೇಗಿದೆ ಎಂಬ ಚಿಂತನೆಯನ್ನು ಅವರು ತಮ್ಮ ಮನಸ್ಸಿನಿಂದ ಸಂಪೂರ್ಣವಾಗಿ ಹೊರಹಾಕಬೇಕು. ಇಂಗ್ಲೆಂಡ್ ವಿರುದ್ಧದ ಸರಣಿಯನ್ನೇ ನೋಡಿ, ಅಲ್ಲಿ ಪಿಚ್‌ಗಳ ಬಗ್ಗೆ ಅವರು ಏನೂ ಮಾಡಲು ಸಾಧ್ಯವಿರಲಿಲ್ಲ. ಉತ್ತಮವಾಗಿ ಆಡಿದರೆ ಉತ್ತಮ ಫಲಿತಾಂಶಗಳು ತಾನಾಗಿಯೇ ಸಿಗುತ್ತವೆ,” ಎಂದು ಗಂಗೂಲಿ ಖಡಕ್‌ ಆಗಿ ಹೇಳಿದ್ದಾರೆ.

“ಗೌತಮ್ ಒಬ್ಬ ಅತ್ಯುತ್ತಮ ಕೋಚ್. ಬಾರ್ಡರ್ ಗಾವಸ್ಕರ್ ಟ್ರೋಫಿಗೂ ಮುನ್ನವೇ ನಿಮ್ಮ ವೇದಿಕೆಯಲ್ಲಿ ಗಂಭೀರ್‌ಗೆ ಕೆಲಸ ಮಾಡಲು ಸ್ವಲ್ಪ ಸಮಯ ನೀಡಿ ಎಂದು ನಾನು ಹೇಳಿದ್ದೆ. ವಿಶೇಷವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈ ಪರಿಸ್ಥಿತಿಗಳಲ್ಲಿ ಅವರು ತುಂಬಾ ಸಮರ್ಥರಿದ್ದಾರೆ. ಅವರ ಬಳಿ ಒಂದು ಬಲಿಷ್ಠ ತಂಡವಿದೆ ಮತ್ತು ಅವರು ಅತ್ಯುತ್ತಮ ತರಬೇತುದಾರರಾಗಿದ್ದಾರೆ,” ಎಂದು ಹೇಳಿದರು. ಒಟ್ಟಿನಲ್ಲಿ ಹೇಳುವುದಾದ್ರೆ, ಸೌರವ್ ಗಂಗೂಲಿ ಅವರು ಗಂಭಿರ್ ಅವರನ್ನು ಶ್ಲಾಘಿಸುತ್ತಲೇ ಮುಂಬರುವ ಸವಾಲುಗಳನ್ನು ಎದುರಿಸುವ ಬಗ್ಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/sourav-ganguly-sends-warning-to-gautam-gambhir-after-india-s-icc-mens-t20-world-cup-2026-triumph-447089.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo