
India
oi-Manohara M
ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಅಡುಗೆ ಅನಿಲ ಬಳಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಮನೆಗಳಲ್ಲಿ ಪಿಎನ್ಜಿ (Piped Natural Gas) ಸಂಪರ್ಕವನ್ನು ಹೊಂದಿರುವ ಗ್ರಾಹಕರು ಇನ್ನು ಮುಂದೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಪೈಪ್ಲೈನ್ ಮೂಲಕ ಅನಿಲ ಸರಬರಾಜು ಪಡೆಯುತ್ತಿರುವವರು ಏಕಕಾಲದಲ್ಲಿ ಸಿಲಿಂಡರ್ ಬಳಸುವುದನ್ನು ತಡೆಯುವುದು ಈ ನಿಯಮದ ಮುಖ್ಯ ಉದ್ದೇಶ ಎಂದು ಹೇಳಿದೆ.
ಪಿಎನ್ಜಿ ಬೇಕಾದ್ರೆ ಎಲ್ಪಿಜಿ ಬಂದ್
ಯಾರಾದರೂ ಪಿಎನ್ಜಿ ಮತ್ತು ಎಲ್ಪಿಜಿ ಎರಡೂ ಸಂಪರ್ಕಗಳನ್ನು ಹೊಂದಿದ್ದರೆ, ಅವರು ಕೂಡಲೇ ತಮ್ಮ ಎಲ್ಪಿಜಿ ಸಂಪರ್ಕವನ್ನು ಹಿಂತಿರುಗಿಸಬೇಕಾಗುತ್ತದೆ. ಹೊಸ ನಿಯಮ ಜಾರಿಗೆ ಬಂದ ನಂತರ, ಪಿಎನ್ಜಿ ಗ್ರಾಹಕರಿಗೆ ಸಿಲಿಂಡರ್ ರೀಫಿಲ್ ಮಾಡಲು ಅವಕಾಶವಿರುವುದಿಲ್ಲ. ಅವರ ಗ್ಯಾಸ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಈ ಬದಲಾವಣೆಯನ್ನು ಅಗತ್ಯ ವಸ್ತುಗಳ ಕಾಯ್ದೆಯ (Essential Commodities Act) ಅಡಿಯಲ್ಲಿ ತರಲಾಗುತ್ತಿದೆ. ಅಧಿಕೃತ ಗೆಜೆಟ್ನಲ್ಲಿ ಈ ನಿಯಮ ಪ್ರಕಟವಾದ ತಕ್ಷಣವೇ ಇದು ಜಾರಿಗೆ ಬರಲಿದೆ. ಈ ಕ್ರಮವು ಅಡುಗೆ ಅನಿಲದ ದುರ್ಬಳಕೆಯನ್ನು ತಡೆಯಲು ಮತ್ತು ಪೈಪ್ಲೈನ್ ಸೌಲಭ್ಯವಿರುವ ಕಡೆಗಳಲ್ಲಿ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಲು ಸಹಕಾರಿ ಎಂದು ಹೇಳಿದೆ.
The Petroleum Ministry has updated LPG rules. Consumers with a PNG connection will no longer be eligible for domestic LPG cylinders. Those holding both PNG and LPG must surrender their LPG, and refills will be prohibited.
The change, under the Essential Commodities Act, will… pic.twitter.com/OOiBkP5RST
— DD News (@DDNewslive) March 15, 2026
ಜನಸಾಮಾನ್ಯರ ಮೇಲೆ ಬೀರುವ ಪರಿಣಾಮಗಳು
ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಈ ಹೊಸ ನಿಯಮವು ನೇರವಾಗಿ ನಗರ ಪ್ರದೇಶದ ಜನಸಾಮಾನ್ಯರ ಮೇಲೆ ಪ್ರಭಾವ ಬೀರಲಿದೆ. ಮುಖ್ಯವಾಗಿ ಇನ್ನು ಮುಂದೆ ಏಕಕಾಲಕ್ಕೆ ಎರಡು ಸಂಪರ್ಕ ಹೊಂದುವಂತಿಲ್ಲ. ಈವರೆಗೆ ಅನೇಕರು ಸುರಕ್ಷತೆಯ ದೃಷ್ಟಿಯಿಂದ ಅಥವಾ ತುರ್ತು ಸಂದರ್ಭಕ್ಕಾಗಿ ಪಿಎನ್ಜಿ (PNG) ಜೊತೆಗೆ ಎಲ್ಪಿಜಿ (LPG) ಸಿಲಿಂಡರ್ ಇಟ್ಟುಕೊಂಡಿದ್ದರು. ಆದರೆ ಇನ್ನು ಮುಂದೆ ಯಾವುದಾದರೂ ಒಂದನ್ನು ಮಾತ್ರ ಆರಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಹೆಚ್ಚುವರಿ ಸಿಲಿಂಡರ್ ಇಟ್ಟುಕೊಳ್ಳುವ ಸೌಲಭ್ಯ ಜನಸಾಮಾನ್ಯರಿಗೆ ತಪ್ಪಲಿದೆ.
ಪಿಎನ್ಜಿ ಸಂಪರ್ಕ ಇರುವವರು ತಮ್ಮ ಎಲ್ಪಿಜಿ ಕನೆಕ್ಷನ್ ಅನ್ನು ತಕ್ಷಣವೇ ಸರೆಂಡರ್ ಮಾಡಬೇಕಾಗುತ್ತದೆ. ಒಂದು ವೇಳೆ ಮಾಡದಿದ್ದರೆ, ಅಧಿಕೃತ ಗೆಜೆಟ್ ಪ್ರಕಟವಾದ ನಂತರ ಗ್ಯಾಸ್ ಏಜೆನ್ಸಿಗಳು ರೀಫಿಲ್ ಬುಕ್ಕಿಂಗ್ ಅನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸಲಿವೆ. ಇದು ಗ್ರಾಹಕರಿಗೆ ಆರಂಭದಲ್ಲಿ ಸ್ವಲ್ಪ ಗೊಂದಲ ಉಂಟುಮಾಡಬಹುದು. ಪಿಎನ್ಜಿ ಸಂಪರ್ಕವು ಸಂಪೂರ್ಣವಾಗಿ ಪೈಪ್ಲೈನ್ ಮೇಲೆ ಅವಲಂಬಿತವಾಗಿರುತ್ತದೆ. ಸಿಲಿಂಡರ್ ಇದ್ದಾಗ ಗ್ಯಾಸ್ ಖಾಲಿಯಾದ ತಕ್ಷಣ ಬದಲಾಯಿಸುವ ಪರ್ಯಾಯ ವ್ಯವಸ್ಥೆ ಇರುತ್ತಿತ್ತು. ಈಗ ಸಿಲಿಂಡರ್ ಇಲ್ಲದ ಕಾರಣ, ಪೈಪ್ಲೈನ್ನಲ್ಲಿ ತಾಂತ್ರಿಕ ದೋಷ ಅಥವಾ ದುರಸ್ತಿ ಕಾರ್ಯ ನಡೆದಾಗ ಗ್ರಾಹಕರು ಪರ್ಯಾಯ ಅಡುಗೆ ವ್ಯವಸ್ಥೆ (ಉದಾಹರಣೆಗೆ ಇಂಡಕ್ಷನ್ ಸ್ಟೌವ್) ಹೊಂದಿರಬೇಕಾಗುತ್ತದೆ.
ಸಾಮಾನ್ಯವಾಗಿ ಎಲ್ಪಿಜಿಗಿಂತ ಪಿಎನ್ಜಿ ಸ್ವಲ್ಪ ಅಗ್ಗವಾಗಿರುತ್ತದೆ. ಹಾಗಾಗಿ ಸಿಲಿಂಡರ್ ಬಿಟ್ಟು ಪಿಎನ್ಜಿಗೆ ಪೂರ್ಣವಾಗಿ ಬದಲಾಗುವುದರಿಂದ ಗ್ರಾಹಕರಿಗೆ ಹಣ ಉಳಿತಾಯವಾಗಬಹುದು. ಎಲ್ಪಿಜಿ ಸಂಪರ್ಕ ಹಸ್ತಾಂತರಿಸಿದಾಗ ಗ್ರಾಹಕರು ಆರಂಭದಲ್ಲಿ ನೀಡಿದ್ದ ಠೇವಣಿ ಹಣ ಮರಳಿ ಸಿಗಲಿದೆ, ಇದು ಜನಸಾಮಾನ್ಯರಿಗೆ ಸಣ್ಣ ಮಟ್ಟದ ಆರ್ಥಿಕ ಸಮಾಧಾನ ನೀಡಲಿದೆ. ಕೆಲವರು ಮನೆಯಲ್ಲಿ ಪಿಎನ್ಜಿ ಬಳಸುತ್ತಾ ಗೃಹಬಳಕೆಯ ಸಿಲಿಂಡರ್ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದ್ದರು. ಈ ನಿಯಮದಿಂದ ಇಂತಹ ದುರ್ಬಳಕೆಗೆ ಬ್ರೇಕ್ ಬೀಳಲಿದೆ, ಇದರಿಂದ ಸರ್ಕಾರಕ್ಕೆ ಆಗುತ್ತಿದ್ದ ನಷ್ಟವೂ ತಪ್ಪಲಿದೆ ಎನ್ನಲಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/lpg-new-rule-india-no-lpg-cylinder-for-homes-with-piped-natural-gas-connection-says-government-447137.html. xn--babytilbehr-pgb.com does not claim ownership of this content. All rights remain with the original publisher.
