
India
oi-Manohara M
2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಇಂದು (ಮಾರ್ಚ್ 15) ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ಚಾಲನೆ ನೀಡಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ತಮಿಳುನಾಡಿನ ಒಟ್ಟು 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದರು.
ಚುನಾವಣಾ ವೇಳಾಪಟ್ಟಿಯ ವಿವರ
ಅಧಿಸೂಚನೆ ಪ್ರಕಟ: ಮಾರ್ಚ್ 27
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಏಪ್ರಿಲ್ 3
ಮತದಾನದ ದಿನಾಂಕ: ಏಪ್ರಿಲ್ 23
ಮತ ಎಣಿಕೆ ಮತ್ತು ಫಲಿತಾಂಶ: ಮೇ 4

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಶ್ ಕುಮಾರ್ ಅವರು, ತಮಿಳುನಾಡು ಸೇರಿದಂತೆ ಒಟ್ಟು ಐದು ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ಒಟ್ಟು 17.4 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದು, ಸುಗಮ ಮತದಾನಕ್ಕಾಗಿ ಸುಮಾರು 2.19 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು. ತಮಿಳುನಾಡು ವಿಧಾನಸಭೆಯ ಅವಧಿಯು ಮೇ 10ಕ್ಕೆ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ತಮಿಳುನಾಡಿನಾದ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಕ್ರಮ ಹಣದ ಹರಿವು ಮತ್ತು ಉಡುಗೊರೆಗಳ ಹಂಚಿಕೆಯ ಮೇಲೆ ಕಣ್ಣಿಡಲು ಆಯೋಗವು ವಿಶೇಷ ತಂಡಗಳನ್ನು ನಿಯೋಜಿಸಿದೆ. ಎಲ್ಲಾ ಮತದಾನ ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡುವ ಮೂಲಕ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ.
ತ್ರಿಕೋನ ಸ್ಪರ್ಧೆಯ ಕಣ
ಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದಿದೆ. ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಎನ್ಡಿಎ ಒಕ್ಕೂಟವು (ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾತುಕತೆಯ ನಡುವೆ) ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ವಿಶೇಷವಾಗಿ, ತಮಿಳು ಚಿತ್ರರಂಗದ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದು ರಾಜಕೀಯ ಲೆಕ್ಕಾಚಾರಗಳನ್ನು ಕುತೂಹಲಕಾರಿಯಾಗಿಸಿದೆ.
2021ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ಇಬ್ಬರು ದೈತ್ಯ ನಾಯಕರಾದ ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ನಡೆದ ಮೊದಲ ಮಹಾಚುನಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಪಕ್ಷವು ಭರ್ಜರಿ ಜಯಗಳಿಸುವ ಮೂಲಕ ಹತ್ತು ವರ್ಷಗಳ ವನವಾಸ ಮುಗಿಸಿ ಅಧಿಕಾರಕ್ಕೆ ಮರಳಿತು. ಡಿಎಂಕೆ ಏಕಾಂಗಿಯಾಗಿ 133 ಸ್ಥಾನಗಳನ್ನು ಗೆದ್ದರೆ, ಅದರ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ 18 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ಡಿಎಂಕೆ ಮೈತ್ರಿಕೂಟವು ಒಟ್ಟು 159 ಸ್ಥಾನಗಳನ್ನು ಗೆದ್ದು ಸುಭದ್ರ ಸರ್ಕಾರ ರಚಿಸಿತು. ಈ ಚುನಾವಣೆಯಲ್ಲಿ ಶೇಕಡಾ 76.6ರಷ್ಟು ದಾಖಲೆ ಮತದಾನವಾಗಿತ್ತು.

ಇನ್ನೊಂದೆಡೆ, ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ (AIADMK) ಮೈತ್ರಿಕೂಟವು 75 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಎಐಎಡಿಎಂಕೆ ಪಕ್ಷವು 66 ಸ್ಥಾನಗಳನ್ನು ಗೆದ್ದರೆ, ಅದರೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ 4 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೀರ್ಘಕಾಲದ ನಂತರ ತಮಿಳುನಾಡು ವಿಧಾನಸಭೆಯನ್ನು ಪ್ರವೇಶಿಸಿತು. ಜಯಲಲಿತಾ ಅವರ ನಿಧನದ ನಂತರ ಪಕ್ಷದೊಳಗಿನ ಭಿನ್ನಮತ ಮತ್ತು ಮೈತ್ರಿಕೂಟ ಎಐಎಡಿಎಂಕೆ ಹಿನ್ನಡೆಗೆ ಪ್ರಮುಖ ಕಾರಣಗಳಾಗಿದ್ದವು.
ಕಳೆದ ಎರಡು ಚುನಾವಣೆಗಳನ್ನು ಗಮನಿಸಿದರೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ನೇರ ಹಣಾಹಣಿ ಇರುತ್ತಿತ್ತು. ಆದರೆ, ಈ ಬಾರಿ ಏಪ್ರಿಲ್ 23ಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಕಳೆದ ಬಾರಿ 4 ಸೀಟು ಗೆದ್ದಿದ್ದ ಬಿಜೆಪಿ ಈ ಬಾರಿ ನಟ ವಿಜಯ್ ಅವರ ಟಿವಿಎಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದೆ. ವಿಜಯ್ ಅವರ ರಾಜಕೀಯ ಪ್ರವೇಶವು ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳ ಸಾಂಪ್ರದಾಯಿಕ ಮತಬ್ಯಾಂಕ್ಗೆ ಕನ್ನ ಹಾಕುವ ಸಾಧ್ಯತೆ ಇರುವುದರಿಂದ, ಈ ಬಾರಿಯ ಫಲಿತಾಂಶ ತಮಿಳುನಾಡು ರಾಜಕೀಯದ ದಿಕ್ಸೂಚಿಯನ್ನೇ ಬದಲಿಸುವ ನಿರೀಕ್ಷೆಯಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/tamil-nadu-assembly-election-2026-voting-on-april-23-results-may-4-announced-by-election-commission-447177.html. xn--babytilbehr-pgb.com does not claim ownership of this content. All rights remain with the original publisher.
