SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ | karnataka KSRTC Free Bus For SSLC Students During 2026 Board Exams: Check Full Travel Details Here

Karnataka

oi-Pragathi S

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಕಾವು ದಿನೇ ದಿನೇ ಏರುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬಹುಮುಖ್ಯ ಘಟ್ಟವಾಗಿರುವ ಹತ್ತನೇ ತರಗತಿ ಪರೀಕ್ಷೆಗಳು ಇದೇ ಮಾರ್ಚ್ 18 ರಿಂದ ಆರಂಭವಾಗಲಿವೆ. ಹಗಲಿರುಳು ಓದಿನಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ.

ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ, ಸುಗಮವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪ್ರಕಟಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮವು, ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಮತ್ತು ಪರೀಕ್ಷೆ ಮುಗಿದ ಬಳಿಕ ಮನೆಗೆ ಹಿಂದಿರುಗಲು ಯಾವುದೇ ಪ್ರಯಾಣ ದರವನ್ನು ಪಾವತಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

KSRTC Free Bus

ಉಚಿತ ಪ್ರಯಾಣಕ್ಕೆ ಏನೆಲ್ಲಾ ನಿಯಮಗಳಿವೆ?

ಈ ಬಾರಿಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 18, 2026 ರಿಂದ ಏಪ್ರಿಲ್ 02, 2026ರವರೆಗೆ ನಡೆಯಲಿವೆ. ಈ ಸಂಪೂರ್ಣ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳು ಉಚಿತ ಬಸ್ ಸೌಲಭ್ಯವನ್ನು ಪಡೆಯಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ಬಸ್ ಹತ್ತುವಾಗ ನಿರ್ವಾಹಕರಿಗೆ (ಕಂಡಕ್ಟರ್) ತಮ್ಮ ಶಾಲೆಯಿಂದ ನೀಡಲಾದ ಅಧಿಕೃತ “ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಪ್ರವೇಶ ಪತ್ರ”ವನ್ನು ಕಡ್ಡಾಯವಾಗಿ ತೋರಿಸಬೇಕು. ಪ್ರವೇಶ ಪತ್ರವೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಆಗಿ ಕಾರ್ಯನಿರ್ವಹಿಸಲಿದೆ.

ಯಾವೆಲ್ಲಾ ಬಸ್ಸುಗಳಲ್ಲಿ ಈ ಸೌಲಭ್ಯ ಲಭ್ಯ?

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಹುತೇಕ ಎಲ್ಲಾ ಸಾಮಾನ್ಯ ಬಸ್ಸುಗಳಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕೆಎಸ್‌ಆರ್‌ಟಿಸಿ ನಿಗಮದ ವ್ಯಾಪ್ತಿಗೆ ಬರುವ ನಗರ (City), ಹೊರವಲಯ (Suburban), ಸಾಮಾನ್ಯ (Ordinary) ಹಾಗೂ ವೇಗದೂತ (Express) ಬಸ್ಸುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ, ಹಳ್ಳಿಗಳಿಂದ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಸಾಮಾನ್ಯ ಬಸ್ಸುಗಳಲ್ಲಿ ಈ ನಿಯಮ ಅನ್ವಯವಾಗಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳು ಸಾಮಾನ್ಯವಾಗಿ ತಾಲೂಕು ಕೇಂದ್ರಗಳಲ್ಲಿ ಅಥವಾ ಹೋಬಳಿ ಮಟ್ಟದ ದೊಡ್ಡ ಶಾಲೆಗಳಲ್ಲಿ ಇರುತ್ತವೆ. ಹೀಗಾಗಿ, ಕುಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಪ್ರತಿದಿನ ಎಂಟತ್ತು ಕಿಲೋಮೀಟರ್ ಪ್ರಯಾಣ ಮಾಡುವುದು ಅನಿವಾರ್ಯ. ಇಂತಹ ಸಮಯದಲ್ಲಿ ಬಸ್ ಚಾರ್ಜ್‌ಗಾಗಿ ಪೋಷಕರು ಪರದಾಡುವುದನ್ನು ತಪ್ಪಿಸಲು ಹಾಗೂ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿ ತಲುಪಲು ಈ ಉಚಿತ ಪ್ರಯಾಣದ ವ್ಯವಸ್ಥೆ ಅತ್ಯಂತ ಸಹಕಾರಿಯಾಗಲಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯ ಈ ನಡೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ.

ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಸಾರಿಗೆ ಇಲಾಖೆಯು ತನ್ನ ಚಾಲಕರು ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ನಿಗದಿತ ಬಸ್ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಬಸ್ ನಿಲ್ಲಿಸುವುದು, ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದು ಹಾಗೂ ಅವರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರ್ದೇಶನ ನೀಡಲಾಗಿದೆ. ಯಾವುದೇ ಕಾರಣಕ್ಕೂ ಹಾಲ್ ಟಿಕೆಟ್ ಹೊಂದಿರುವ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವಂತಿಲ್ಲ ಎಂದು ಎಚ್ಚರಿಸಲಾಗಿದೆ.

ಒಟ್ಟಿನಲ್ಲಿ, ರಾಜ್ಯ ಸರ್ಕಾರದ ಈ ವಿದ್ಯಾರ್ಥಿ ಸ್ನೇಹಿ ನಿರ್ಧಾರವು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲಿ ಎಂಬುದು ಎಲ್ಲರ ಆಶಯವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-ksrtc-free-bus-for-sslc-students-during-2026-board-exams-check-full-travel-details-here-447279.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo