CBSE ಉತ್ತರಪತ್ರಿಕೆ ಮೌಲ್ಯಮಾಪನ: ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳದಂತೆ ಶಿಕ್ಷಕರಿಗೆ ಸಿಬಿಎಸ್‌ಇ ಎಚ್ಚರಿಕೆ | CBSE Class 10 and 12 Exam Evaluation 2026: Board Warns Teachers Against Fake Social Media Rumours

India

oi-Pragathi S

ನವದೆಹಲಿ: 2026ರ ಸಾಲಿನ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಭರದಿಂದ ಸಾಗುತ್ತಿದ್ದು, ಈ ನಡುವೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದೆ. ಉತ್ತರಪತ್ರಿಕೆ ತಪಾಸಣೆ ಅಥವಾ ಮೌಲ್ಯಮಾಪನ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಸೂಕ್ಷ್ಮ ಮಾಹಿತಿಯನ್ನು, ವೈಯಕ್ತಿಕ ಅನುಭವಗಳನ್ನು ಅಥವಾ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು, ಮೌಲ್ಯಮಾಪನ ಕಾರ್ಯದಲ್ಲಿ ನಿರತರಾಗಿರುವ ಕೆಲವರು ಫೇಸ್‌ಬುಕ್, ಎಕ್ಸ್‌ (ಟ್ವಿಟರ್) ಅಥವಾ ಇನ್‌ಸ್ಟಾಗ್ರಾಮ್‌ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು, ಉತ್ತರಪತ್ರಿಕೆ ತಪಾಸಣೆಯ ಅನುಭವಗಳನ್ನು ಪೋಸ್ಟ್ ಮಾಡುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ಮೌಲ್ಯಮಾಪನ ಪ್ರಕ್ರಿಯೆಯ ಕುರಿತು ತಪ್ಪು ಮಾಹಿತಿ, ಆಧಾರರಹಿತ ವದಂತಿಗಳು ಹಾಗೂ ವಾಸ್ತವಕ್ಕೆ ದೂರವಾದ ಸಂಗತಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇಂತಹ ಪೋಸ್ಟ್‌ಗಳು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಅನಗತ್ಯ ಗೊಂದಲ, ಆತಂಕ ಸೃಷ್ಟಿಸಲು ಕಾರಣವಾಗುತ್ತಿವೆ ಮತ್ತು ಇದು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರಬಹುದು ಎಂದು ಸಿಬಿಎಸ್‌ಇ ಕಳವಳ ವ್ಯಕ್ತಪಡಿಸಿದೆ.

CBSE

ಗೌಪ್ಯತೆ ಕಾಪಾಡುವುದು ಕಡ್ಡಾಯ

ಶಿಕ್ಷಕರಿಗೆ ರವಾನಿಸಿರುವ ಸುತ್ತೋಲೆಯಲ್ಲಿ ಬೋರ್ಡ್ ಸ್ಪಷ್ಟವಾಗಿ ತಿಳಿಸಿದ್ದು, “ಮೌಲ್ಯಮಾಪನ ಪ್ರಕ್ರಿಯೆಯು ಅತ್ಯಂತ ಗೌಪ್ಯವಾದ ವಿಚಾರವಾಗಿದೆ ಮತ್ತು ಇದು ಕಟ್ಟುನಿಟ್ಟಿನ ಶಿಷ್ಟಾಚಾರಗಳಿಗೆ ಒಳಪಟ್ಟಿರುತ್ತದೆ. ಸಾರ್ವಜನಿಕ ವೇದಿಕೆಗಳಲ್ಲಿ ಮೌಲ್ಯಮಾಪನಕ್ಕೆ ಸಂಬಂಧಿಸಿದ ಯಾವುದೇ ತಪ್ಪು ಮಾಹಿತಿ, ಸ್ವಂತ ಅನುಭವಗಳು ಅಥವಾ ಅನಿಸಿಕೆಗಳನ್ನು ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ಹೇಳಿದೆ.

ಯಾವುದೇ ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಯ ಬಗ್ಗೆ ವದಂತಿಗಳನ್ನು ಹರಡಲು ಪ್ರಯತ್ನಿಸಿದರೆ ಅಥವಾ ವಾಸ್ತವವನ್ನು ತಿರುಚಲು ಯತ್ನಿಸಿದರೆ, ಅದನ್ನು ವೃತ್ತಿಪರ ನಡವಳಿಕೆಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಮಂಡಳಿ ಎಚ್ಚರಿಸಿದೆ. ಹೀಗಾಗಿ, ತಪಾಸಣಾ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಶಿಕ್ಷಕರು ಸಂಯಮ ಕಾಯ್ದುಕೊಳ್ಳಬೇಕು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮಂಡಳಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನಕಲಿ ಸುದ್ದಿಗಳ ವಿರುದ್ಧ ಕಾನೂನು ಕ್ರಮ

ಶಿಕ್ಷಕರಷ್ಟೇ ಅಲ್ಲದೆ, ಮೌಲ್ಯಮಾಪನ ಪ್ರಕ್ರಿಯೆಗೆ ಯಾವುದೇ ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳು ಕೂಡ ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುತ್ತಿರುವುದನ್ನು ಸಿಬಿಎಸ್‌ಇ ಗಮನಿಸಿದೆ. ಈ ಬಗ್ಗೆ ಪ್ರತ್ಯೇಕ ಪ್ರಕಟಣೆ ಹೊರಡಿಸಿರುವ ಮಂಡಳಿ, “ಸಿಬಿಎಸ್‌ಇ ಪರೀಕ್ಷೆಗಳು ಅಥವಾ ಮೌಲ್ಯಮಾಪನ ಕಾರ್ಯವಿಧಾನಗಳ ಬಗ್ಗೆ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಪ್ರಸಾರ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಸಿಬಿಎಸ್‌ಇ (CBSE) ಹೆಸರು, ಮಂಡಳಿಯ ಲೋಗೋ ಅಥವಾ ಸಿಬಿಎಸ್‌ಇ ಕಟ್ಟಡಗಳ ಚಿತ್ರಗಳನ್ನು ಬಳಸಿಕೊಂಡು ನಕಲಿ ಪೋಸ್ಟ್‌ಗಳನ್ನು ಸೃಷ್ಟಿಸುವಂತಿಲ್ಲ. ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ.

ಇದೇ ವೇಳೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಪರಿಶೀಲಿಸದ, ಆಧಾರರಹಿತ ಪೋಸ್ಟ್‌ಗಳನ್ನು ನಂಬಬೇಡಿ ಎಂದು ಮಂಡಳಿಯು ವಿದ್ಯಾರ್ಥಿಗಳು, ಪೋಷಕರು ಒತ್ತಾಯಿಸಿದೆ. ಪರೀಕ್ಷೆಗಳು, ಮೌಲ್ಯಮಾಪನ ಪ್ರಕ್ರಿಯೆ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ನವೀಕರಣಗಳನ್ನು ಕೇವಲ ಸಿಬಿಎಸ್‌ಇಯ ಅಧಿಕೃತ ಸಂವಹನ ವಾಹಿನಿಗಳು ಹಾಗೂ ಮಂಡಳಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಅದನ್ನು ಮಾತ್ರವೇ ನಂಬಬೇಕು ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/cbse-class-10-and-12-exam-evaluation-2026-board-warns-teachers-against-fake-social-media-rumours-447287.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo