Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್‌ ಸಿನಿಮಾ ಹಾಡುಗಳು | Prem Controversies From Prem Adda Movie Melukote Hudugi to Seraga Sarse Song Row in KD The Devil

Entertainment

oi-Manohara M

ಕನ್ನಡ ನಿರ್ದೇಶಕ ಪ್ರೇಮ್ ಅವರು ತಮ್ಮ ಸಿನಿಮಾಗಳ ಮೂಲಕ ಎಷ್ಟು ಹೆಸರು ಮಾಡಿದ್ದಾರೋ, ಅಷ್ಟೇ ವಿವಾದಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ‘ಜೋಗಿ’ ಸಿನಿಮಾದಲ್ಲಿ ತಾಯಿಯ ಬಾಂಧವ್ಯದ ಬಗ್ಗೆ ಅದ್ಭುತ ಹಾಡುಗಳನ್ನು ನೀಡಿದ್ದ ಪ್ರೇಮ್, ಈಗ ‘ಐಟಂ ಸಾಂಗ್’ ಹಾಗೂ ಹೆಣ್ಣುಮಕ್ಕಳ ಸೆರಗಿನ ಪದಬಳಕೆಗೆ ಇಳಿದಿರುವುದು ಅವರ ಅಭಿಮಾನಿಗಳಿಗೇ ಬೇಸರ ತರಿಸಿದೆ. ‘ಕೆಡಿ’ ಚಿತ್ರದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡಿನ ಅಶ್ಲೀಲ ಸಾಹಿತ್ಯದ ವಿರುದ್ಧ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ. ಹೆಣ್ಣುಮಕ್ಕಳನ್ನು ಅವಮಾನಿಸುವಂತಹ ಪದಬಳಕೆ ಮಾಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ನಿರ್ದೇಶಕ ಪ್ರೇಮ್ ಅವರ ಹಿಂದಿನ ಕೆಲವು ವಿವಾದಗಳು ಈಗ ಮುನ್ನೆಲೆಗೆ ಬಂದಿವೆ. ತಮ್ಮದೇ ಸಿನಿಮಾದ ಹಾಡಿಗೆ ಈ ಹಿಂದೆಯೂ ಜನರಿಂದ ವಿರೋಧ ವ್ಯಕ್ತವಾಗಿತ್ತು.

ನಿರ್ದೇಶಕ ಪ್ರೇಮ್ ಅವರು ಕೇವಲ ‘ಕೆಡಿ’ ಚಿತ್ರದ ಮೂಲಕ ಮಾತ್ರವಲ್ಲ, ಈ ಹಿಂದೆಯೂ ತಮ್ಮ ಸಿನಿಮಾದ ಸಾಹಿತ್ಯದಿಂದ ದೊಡ್ಡ ಮಟ್ಟದ ಜನಾಕ್ರೋಶ ಎದುರಿಸಿದ್ದರು. 2012ರಲ್ಲಿ ತೆರೆಕಂಡ ‘ಪ್ರೇಮ್ ಅಡ್ಡ’ ಸಿನಿಮಾದ “ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ…” ಎಂಬ ಹಾಡು ಅಂದು ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು. ಪ್ರೇಮ್‌ ನಿರ್ದೇಶಿಸಿ ತಾನೇ ನಾಯಕನಾಗಿ ನಟಿಸಿದ್ದ ಪ್ರೇಮ್‌ ಅಡ್ಡ ಸಿನಿಮಾದ ಹಾಡು ಕೂಡ ವಿವಾದಕ್ಕೆ ಸಿಲುಕಿತ್ತು. ಪ್ರೇಮ್ ಅವರ ಸಿನಿಮಾದ ಹಾಡೊಂದರಲ್ಲಿ ‘ಮೇಲುಕೋಟೆ ಹುಡುಗಿ’ ಎಂಬ ಸಾಲುಗಳನ್ನು ಬಳಸಿದಾಗ, ಅಲ್ಲಿನ ಸಂಪ್ರದಾಯಸ್ಥರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಾಡು ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟನೆಗಳು ಕೂಡ ನಡೆದಿದ್ದವು.

Prem

ಮೇಲುಕೋಟೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಸಾಹಿತ್ಯ

ಮಳವಳ್ಳಿ ಸಾಯಿಕೃಷ್ಣ ಅವರು ರಚಿಸಿದ್ದ ಈ ಹಾಡಿನಲ್ಲಿ, ಮೇಲುಕೋಟೆಯಂತಹ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರವೊಂದರ ಹೆಸರನ್ನು ಬಳಸಿ ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿತ್ತು. ಮುಖ್ಯವಾಗಿ ಹಾಡಿನಲ್ಲಿನ “ಮಂಡಿ ತನ್ಕ ಲಂಗ ಎತ್ಕೊಂಡ್ ತಳುಕು ಬಳುಕು ಸೊಂಟ ತೋರಿಸ್ಕೊಂಡ್” ಎಂಬ ಸಾಲುಗಳು ಮತ್ತು ಸೊಂಟದ ಕೆಳಗಿನ ಸಾಹಿತ್ಯದ ಬಳಕೆ ಮೇಲುಕೋಟೆ ಜನರ ಕೆಂಗಣ್ಣಿಗೂ ಗುರಿಯಾಗಿತ್ತು.

ಈ ಹಾಡಿನಿಂದಾಗಿ ಮೇಲುಕೋಟೆಯ ಹೆಣ್ಣುಮಕ್ಕಳು ದಾರಿಯಲ್ಲಿ ಹೋಗುವಾಗ ಪಡ್ಡೆಗಳು ಇದೇ ಹಾಡನ್ನು ಹಾಡಿ ಕಿಚಾಯಿಸುತ್ತಾರೆ. ಇದು ಅಲ್ಲಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನೆಗಳು ತೀವ್ರಗೊಂಡವು. ಅಂದು ಮೇಲುಕೋಟೆ ಜನತೆ ಒಂದು ದಿನದ ಬಂದ್‌ಗೆ ಕರೆ ನೀಡಿ, ತಹಸೀಲ್ದಾರ್ ಅವರಿಗೂ ದೂರು ಸಹ ನೀಡಿದ್ದರು. “ಹಾಡನ್ನು ಚಿತ್ರದಿಂದ ತೆಗೆದುಹಾಕದಿದ್ದರೆ ಕೇಸ್ ದಾಖಲಿಸುತ್ತೇವೆ” ಎಂದು ಚಿತ್ರತಂಡಕ್ಕೆ ಎಚ್ಚರಿಕೆಯೂ ನೀಡಿದ್ದರು.

ಸ್ಪಷ್ಟನೆ ನೀಡಿದ್ದ ಚಿತ್ರತಂಡ

ವಿವಾದ ಅತಿರೇಕಕ್ಕೆ ಹೋದಾಗ ಸ್ಪಷ್ಟನೆ ನೀಡಿದ್ದ ಚಿತ್ರತಂಡ, “ನಮಗೆ ಮೇಲುಕೋಟೆಯನ್ನಾಗಲಿ ಅಥವಾ ಅಲ್ಲಿನ ಹೆಣ್ಣುಮಕ್ಕಳನ್ನಾಗಲಿ ಕೀಳಾಗಿ ಚಿತ್ರಿಸುವ ಉದ್ದೇಶವಿಲ್ಲ. ಕೇವಲ ಹುಡುಗಿಯ ಅಂದವನ್ನು ವರ್ಣಿಸಲು ಈ ಹೆಸರನ್ನು ಬಳಸಿದ್ದೇವೆ” ಎಂದು ಸಮಜಾಯಿಷಿ ನೀಡಿತ್ತು. ಅಂತಿಮವಾಗಿ ಜನರ ಆಕ್ರೋಶಕ್ಕೆ ಮಣಿದ ಪ್ರೇಮ್, ಹಾಡಿನಲ್ಲಿನ ‘ಮೇಲುಕೋಟೆ’ ಎಂಬ ಪದವನ್ನು ಕೈಬಿಟ್ಟು, ಅದರ ಬದಲಿಗೆ ‘ಏಳುಕೋಟೆ’ ಎಂಬ ಪದವನ್ನು ಬಳಸಲು ನಿರ್ಧರಿಸಿದ್ದರು. ಕೈಲಾಶ್ ಖೇರ್ ಮತ್ತು ರಾಜು ತಾಳಿಕೋಟೆ ಅವರ ಧ್ವನಿಯಲ್ಲಿ ಮೂಡಿಬಂದಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಅಂದು ಸೂಪರ್ ಹಿಟ್ ಆಗಿತ್ತು. ಆದರೆ, ಪ್ರಚಾರಕ್ಕಾಗಿ ಪದೇ ಪದೇ ಇಂತಹ ವಿವಾದಾತ್ಮಕ ಮತ್ತು ಅಶ್ಲೀಲ ಸಾಹಿತ್ಯವನ್ನು ಬಳಸುವುದು ಪ್ರೇಮ್ ಅವರ ಸಿನಿಮಾಗಳಲ್ಲಿ ಸರಣಿಯಂತೆ ಮುಂದುವರಿಯುತ್ತಿದೆ ಎಂದು ಕನ್ನಡಿಗರು ದೂರುತ್ತಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/prem-controversies-from-prem-adda-movie-melukote-hudugi-to-seraga-sarse-song-row-in-kd-the-devil-447367.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo