Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್‌ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು | Nora Fatehi From Canada to Bollywood dance queen Controversy Over Kannada KD The Devil Song

Entertainment

oi-Manohara M

ಧ್ರುವ ಸರ್ಜಾ ನಟನೆಯ “ಕೆಡಿ” ಚಿತ್ರದ “ಸೆರಗ ಸರ್ಸೆ” ಹಾಡಿಗೆ ಭರ್ಜರಿ ಡ್ಯಾನ್ಸ್‌ ಮಾಡಿರುವ ನಟಿ ನೋರಾ ಫತೇಹಿ (Nora Fatehi) ಸದ್ಯ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಈ ಹಾಡಿನ ಸಾಹಿತ್ಯ ಮತ್ತು ನೋರಾ ಅವರ ಚಿತ್ರೀಕರಣವು ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಸದ್ಯ ಸೆನ್ಸಾರ್ ಮಂಡಳಿ ಮೆಟ್ಟಿಲೇರಿದ್ದು, ನೋರಾ ಡ್ಯಾನ್ಸ್‌ ಹಾಗೂ ಹಾಡಿನ ಸಾಲುಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿವಾದದ ನಡುವೆ, ಈ ಕೆನಡಿಯನ್ ಮೂಲದ ಬಾಲಿವುಡ್ ನಟಿಯ ಅಸಲಿ ಕಥೆ ಇಲ್ಲಿ ತಿಳಿಯಿರಿ.

ಕೆನಡಾದಲ್ಲಿ ಬಾಲ್ಯ

ನೋರಾ ಫತೇಹಿ ಹುಟ್ಟಿದ್ದು ಕೆನಡಾದಲ್ಲಿ (ಫೆಬ್ರವರಿ 6, 1992), ಆದರೆ ಆಕೆಯ ಮೂಲ ಮೊರಾಕ್ಕೊ ದೇಶ. ನೋರಾ ಕೆನಡಾದ ಟೊರಾಂಟೊದಲ್ಲಿ ಬೆಳೆದವರು. ಇವರ ತಂದೆ ಮತ್ತು ತಾಯಿ ಇಬ್ಬರೂ ಮೊರಾಕ್ಕೊ ಮೂಲದವರು. ಆಕೆಯ ಕುಟುಂಬ ಕೆನಡಾಕ್ಕೆ ವಲಸೆ ಹೋಗಿತ್ತು. ಬಾಲ್ಯದಿಂದಲೇ ನೃತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ನೋರಾ, ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಬೆಲ್ಲಿ ಡ್ಯಾನ್ಸ್ ಕಲಿಯುತ್ತಿದ್ದರು. ಟೊರಾಂಟೊದಲ್ಲಿ ವಿದ್ಯಾಭ್ಯಾಸ ಮುಗಿಸಿ, ಯಾರ್ಕ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪದವಿ ವ್ಯಾಸಂಗ ಮಾಡಿದ ನೋರಾ, ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುವ ದೊಡ್ಡ ಕನಸಿನೊಂದಿಗೆ ಭಾರತಕ್ಕೆ ಬಂದರು. ಅವರು ತಮ್ಮ ಅನೇಕ ಸಂದರ್ಶನಗಳಲ್ಲಿ “ನಾನು ಹೃದಯದಿಂದ ಭಾರತೀಯಳು” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Nora Fatehi

ಭಾರತಕ್ಕೆ ಬಂದಾಗ ನೋರಾ ಅವರಿಗೆ ಯಾವುದೇ ಸಿನಿಮೀಯ ಹಿನ್ನೆಲೆ ಅಥವಾ ಗಾಡ್‌ಫಾದರ್ ಇರಲಿಲ್ಲ. ಹಿಂದಿ ಭಾಷೆಯೂ ಅಷ್ಟಾಗಿ ತಿಳಿದಿರಲಿಲ್ಲ. ಆರಂಭದ ದಿನಗಳಲ್ಲಿ ಹಲವಾರು ಬಾರಿ ಅವಮಾನಕ್ಕೊಳಗಾದರು. ಹಲವು ಆಡಿಷನ್‌ಗಳಲ್ಲಿ ತಿರಸ್ಕೃತಗೊಂಡರು. ಅವರು ಕೆಲವು ಚಿಕ್ಕಪುಟ್ಟ ಜಾಹೀರಾತುಗಳಲ್ಲಿ ಮತ್ತು ಮಾಡೆಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2014ರಲ್ಲಿ ಬಿಡುಗಡೆಯಾದ “ರೋರ್: ಟೈಗರ್ಸ್ ಆಫ್ ದಿ ಸುಂದರ್‌ಬನ್ಸ್” ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ನೋರಾ ಅಂಬೆಗಾಲಿಡಲು ಸಹಾಯ ಮಾಡಿತು.

ತೆಲುಗು ಸಿನಿಮಾಗಳಲ್ಲೂ ಮೋಡಿ

ಬಾಲಿವುಡ್‌ನಲ್ಲಿ ಅವಕಾಶಗಳು ಸಿಗುವ ಮೊದಲೇ ನೋರಾ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಗಮನ ಸೆಳೆದರು. ತೆಲುಗಿನ ಸೂಪರ್ ಹಿಟ್ ಚಿತ್ರಗಳಾದ “ಬಾಹುಬಲಿ: ದ ಬಿಗಿನ್ನಿಂಗ್” (Baahubali: The Beginning) ಚಿತ್ರದ ಮನೋಹರಿ ಹಾಡು ಮತ್ತು “ಟೆಂಪರ್” (Temper) ಚಿತ್ರದ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದರು. ನಂತರ ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದರು.

ಬಾಲಿವುಡ್‌ನ ಡ್ಯಾನ್ಸ್‌ ಕ್ವೀನ್

2015ರಲ್ಲಿ ಹಿಂದಿ ಖ್ಯಾತ ರಿಯಾಲಿಟಿ ಶೋ ‘ಬಿಗ್‌ಬಾಸ್’ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 2016ರಲ್ಲಿ ‘ಝಲಕ್ ದಿಖ್ಲಾ ಜಾ’ ಡ್ಯಾನ್ಸ್ ಶೋನಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದರು. 2018ರಲ್ಲಿ ನೋರಾ ಅವರಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ಸಿಕ್ಕಿತು. ಜಾನ್ ಅಬ್ರಹಾಂ ಅಭಿನಯದ “ಸತ್ಯಮೇವ ಜಯತೇ” ಚಿತ್ರದ “ದಿಲ್ಬರ್” (Dilbar) ಹಾಡು ಬಿಡುಗಡೆಯಾದಾಗ ಇಡೀ ದೇಶವೇ ನೋರಾ ಬೆಲ್ಲಿ ಡ್ಯಾನ್ಸ್‌ಗೆ ಮಾರುಹೋಯಿತು. ಯೂಟ್ಯೂಬ್‌ನಲ್ಲಿ ದಾಖಲೆ ಪ್ರಮಾಣದ ವೀಕ್ಷಣೆ ಗಳಿಸಿದ ಈ ಹಾಡು, ನೋರಾ ಅವರನ್ನು ಒಂದೇ ರಾತ್ರಿಯಲ್ಲಿ ದೊಡ್ಡ ತಾರೆಯನ್ನಾಗಿ ಮಾಡಿತು. ನಂತರ “ಕಮರಿಯಾ”, “ಸಾಕಿ ಸಾಕಿ”, “ಕುಸು ಕುಸು” ಮತ್ತು “ಗರಮಿ” ನಂತಹ ಸಾಲು ಸಾಲು ಹಿಟ್ ಐಟಂ ಸಾಂಗ್‌ಗಳ ಮೂಲಕ ಬಾಲಿವುಡ್‌ನ “ಡ್ಯಾನ್ಸ್ ಕ್ವೀನ್” ಎಂಬ ಪಟ್ಟ ಪಡೆದರು.

Nora Fatehi

ಕನ್ನಡದ ಚೊಚ್ಚಲ ಸಿನಿಮಾದಲ್ಲೇ ವಿವಾದ

ಕೆಡಿ ಚಿತ್ರದ ಮೂಲಕ ನೋರಾ ಫತೇಹಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ ತಮ್ಮ ಚೊಚ್ಚಲ ಕನ್ನಡ ಸಿನಿಮಾದಿಂದಲೇ ಈಗ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕೆಡಿ ಚಿತ್ರದ ‘ಸೆರಗ ಸರ್ಸೆ’ ಹಾಡು ಈಗ ನೋರಾ ಅವರ ವೃತ್ತಿಜೀವನದ ಅತಿ ದೊಡ್ಡ ವಿವಾದಗಳಲ್ಲೊಂದಾಗಿದೆ. ಈ ಹಾಡಿನ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬೆನ್ನಲ್ಲೇ, ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಕೇಂದ್ರ ಸರ್ಕಾರದ ಕಠಿಣ ಸೂಚನೆಯಿಂದಾಗಿ ಚಿತ್ರತಂಡ ಮತ್ತು ನೋರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಕೇವಲ ಒಂದು ಹಾಡಿನ ವಿವಾದವಲ್ಲ, ಸಿನಿಮಾ ಮತ್ತು ಹಾಡುಗಳಲ್ಲಿ ಅಶ್ಲೀಲತೆ ಬಳಕೆಯ ಬಗ್ಗೆ ರಾಷ್ಟ್ರಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೆನಡಾದಿಂದ ಭಾರತಕ್ಕೆ ಬಂದು, ಅಪಾರ ಶ್ರಮ ಮತ್ತು ತಾಳ್ಮೆಯಿಂದ ಬಾಲಿವುಡ್‌ನಲ್ಲಿ ತನ್ನದೇ ಆದ ಸ್ಥಾನ ಗಳಿಸಿದ ನೋರಾ ಫತೇಹಿ ಅವರ ಹಾದಿ ಸರಳವಾಗಿರಲಿಲ್ಲ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/nora-fatehi-from-canada-to-bollywood-dance-queen-controversy-over-kannada-kd-the-devil-song-447489.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo