
Karnataka
oi-Shankrappa Parangi
ಹಾವೇರಿ: ಇಲ್ಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬ್ಯಾಡಗಿ ಕೆಂಪು ಮೆಣಸಿನಕಾಯಿ ಮಾರುಕಟ್ಟೆಗೆ (ಕೃಷಿ ಉತ್ಪನ್ನ ಮಾರುಕಟ್ಟೆ) ಒಂದೇ ದಿನಕ್ಕೆ ಸಾವಿರಾರು ಕ್ವಿಂಟಾಲ್ ಕೆಂಪು ಮೆಣಸಿನಕಾಯಿ ಚೀಲ ಆವಕವಾಗಿವೆ. ಇದು ಈ ಋತುವಿನಲ್ಲೇ ಆವಕವಾದ ಈವರೆಗಿನ ಗರಿಷ್ಠ ಪ್ರಮಾಣದ ಮೆಣಸಿನಕಾಯಿ ಎನ್ನಲಾಗಿದೆ. ಕೆಲವು ತಿಂಗಳುಗಳಿಂದ ಮೆಣಸಿನಕಾಯಿ ಚೀಲಗಳು ಬಾರದೇ ಬಣಗುಡುತ್ತಿದ್ದ ಮಾರುಕಟ್ಟೆಗೆ ಇರಾನ್-ಇಸ್ರೇಲ್ ಯುದ್ಧದ ಬಿಸಿ ತಟ್ಟಿದ್ದು, ರಫ್ತು ಸಂಪೂರ್ಣ ನಿಂತಿದೆ. ಇದೀಗ ಮಾರುಕಟ್ಟೆ ಚೇತರಿಕೆ ಹಾದಿಯತ್ತ ಸಾಗುತ್ತಿದ್ದು, ವರ್ತಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಡಿಸೆಂಬರ್ನಿಂದ ಮಾರ್ಚ್ವರಗೆ ಪ್ರತಿ ವರ್ಷ ಲಕ್ಷಾಂತರ ಕೆಂಪು ಮೆಣಸಿನಕಾಯಿ ಚೀಲಗಳು ಇಲ್ಲಿಗೆ ಮಾರಾಟಕ್ಕೆ ಬರುತ್ತಿದ್ದವು. ಆದರೆ ಈ ಬಾರಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಈವರೆಗೆ ಮೆಣಸಿನಕಾಯಿ ಅಷ್ಟಾಗಿ ಬಂದರಿಲ್ಲ. ನೆನ್ನೆ ಮಾರ್ಚ್ 17ರಂದು ಮಂಗಳವಾರ ಒಂದೇ ದಿನ ಸುಮಾರು 2.43 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿವೆ. ಇಷ್ಟು ಚೀಲಗಳ ಒಟ್ಟು ತೂಕ ಒಟ್ಟು 60 ಸಾವಿರ ಕ್ವಿಂಟಾಲ್ಗೂ ಅಧಿಕ. ಪ್ರಸಕ್ತ ಹಂಗಾಮಿನಲ್ಲಿ ಈ ವಹಿವಾಟುವಿನಿಂದ ಮಾರುಕಟ್ಟೆಗೆ ಕಳೆ ಬಂದಿದೆ.

ಆವಕದಲ್ಲಿ ಏರಿಕೆ, ದರದಲ್ಲಿ ಯಥಾಸ್ಥಿತಿ
ಯುಗಾದ ಹಬ್ಬದ ಹೊತ್ತಿನಲ್ಲಿ ರಾಜ್ಯದ ವಿಜಯಪುರ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ಗೋಗಾಕ್, ಶಹಪುರ ಸೇರಿದಂತೆ ವಿವಿಧ ಕಡೆಗಳಿಂದ ರೈತರು ಮೆಣಸಿನಕಾಯಿ ಮಾರಾಟಕ್ಕೆ ತಂದಿದ್ದಾರೆ. ಸದ್ಯ ಮೆಣಸಿನಕಾಯಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮಾರುಕಟ್ಟೆಯ ಸಾಮಾನ್ಯ ದಿನಗಳಂತೆ ಯಥಾಸ್ಥಿತಿಯಲ್ಲಿದೆ. ಈ ಬಾರಿ ಕುಂದಗೋಳ, ಗದಗ, ನವಲಗುಂದ, ಹಾವೇರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮೆಣಸಿನಕಾಯಿ ಅಷ್ಟಾಗಿ ಬೆಳೆದಿಲ್ಲ.
ಕಳೆದ ವರ್ಷ ಅಕಾಲಿಕ ಮಳೆಗೆ ಮೆಣಸಿನಕಾಯಿ ಇಳುವರಿ ಉತ್ತಮವಾಗಿ ಬರಲಿಲ್ಲ. ಇದರೊಂದಿಗೆ ನ್ಯಾಯಯುತ ಬೆಲೆ ಮೆಣಸಿನಕಾಯಿ ರೈತರಿಗೆ ಸಿಗದ ಕಾರಣ ಈ ವರ್ಷ ಹೆಚ್ಚಾಗಿ ಬೆಳೆಯಲು ಅವರು ಮನಸ್ಸು ಮಾಡಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಋತುವಿನಲ್ಲಿ ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ಅಗಿಲ್ಲ. ಇದೀಗ ರಾಜ್ಯದ ಬೇರೆ ಬೇರೆ ಭಾಗಗಳಿಂದ ಮೆಣಸಿನಕಾಯಿ ಆವಕವಾಗಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ ಇನ್ನಿತರ ಭಾಗಗಳಿಂದ ಬರುವ ನಿರೀಕ್ಷೆ ಇದೆ.
ಬ್ಯಾಡಗಿ ಕೆಂಪು ಮೆಣಸಿನಕಾಯಿ ದರ ಮಾಹಿತಿ
ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ಗೆ 58 ಸಾವಿರ ರೂಪಾಯಿ, ಗುಂಟೂರು ಮೆಣಸಿನಕಾಯಿಗೆ 17,000, ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ಬರೋಬ್ಬರಿ 62 ರೂಪಾಯಿ ಇದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಕಡ್ಡಿ ಮೆಣಸಿನಕಾಯಿಗೆ 47,000 ರೂ., ಬ್ಯಾಡಗಿ ಡಬ್ಬಿ ಮೆಣಸಿನಕಾಯಿ 49,000 ರೂ. ಇದೆ. ಸದ್ಯಕ್ಕೆ ಮೆಣಸಿನಕಾಯಿ ಬೆಲೆಗಳಲ್ಲಿ ಬದಲಾವಣೆ ಆಗಿಲ್ಲ. ಪೂರೈಕೆ ಕಡಿಮೆ ಆಗಿರುವ ಕಾರಣ ಬೆಲೆ ಉತ್ತಮವಾಗಿದೆ.
ಮಧ್ಯಪ್ರಾಚ್ಯ ಯುದ್ಧ: ಮಾರುಕಟ್ಟೆ ರಫ್ತು ಸ್ಥಗಿತ
ಪ್ರತಿ ವರ್ಷ ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಅನೇಕ ವಿದೇಶಗಳಿಗೆ ಲಕ್ಷಾಂತರ ಚೀಲಗಳು ರಫ್ತಾಗುತ್ತಿದ್ದವು. ಯುದ್ಧದಿಂದಾಗಿ ಮೆಣಸಿನಕಾಯಿ ವಿದೇಶ ರಫ್ತು ಎರಡು ವಾರಗಳಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಮಸಾಲೆ, ಖಾರದ ಪಡಿ ಉದ್ಯಮಕ್ಕೂ ಇದರಿಂದ ಪೆಟ್ಟಾಗಿದೆ. ಈಗಾಗಲೇ ರಫ್ತು ಮಾಡಿದ್ದ ಉತ್ಪನ್ನದ ಸುಮಾರು ಹತ್ತು ಕೋಟಿ ರೂಪಾಯಿ ಹಣ ಬರುವುದು ಬಾಕಿ ಇದೆ. ಬ್ಯಾಡಗಿಯಿಂದ ಥೈಲ್ಯಾಂಡ್, ಸಿಂಗಾಪುರ, ಬಾಲಿ, ಇರಾನ್, ಇಸ್ರೇಲ್, ಇಂಡೋನೇಶಿಯಾ ಸೇರಿ ಮೊದಲಾದ ರಾಷ್ಟ್ರಗಳಿಗೆ ಇಲ್ಲಿಂದಲೇ ಮೆಣಸಿನಕಾಯಿ ರಫ್ತಾಗುತ್ತದೆ. ಯುದ್ಧದ ಹಿನ್ನೆಲೆ ಈ ವಹಿವಾಟು ಸ್ಥಗಿತಗೊಂಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/byadgi-chilli-market-sees-record-2-43-lakh-bags-arrival-in-1-day-export-halted-due-to-iran-war-447531.html. xn--babytilbehr-pgb.com does not claim ownership of this content. All rights remain with the original publisher.
