
Karnataka
oi-Hitesh Y
ಕನ್ನಡಿಗರ ಬೇಡಿಕೆಗೆ ಕಿವಿಗೊಡದೇ ಇದ್ದರೆ ಕರ್ನಾಟಕದಲ್ಲಿ ರೈಲು ವ್ಯವಸ್ಥೆಯನ್ನೇ ಸ್ಥಗಿತಗೊಳಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಎಚ್ಚರಿಸಿದ್ದಾರೆ. ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು ನೀಡಿರುವುದಾಗಿ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಭಾರತ ರೈಲ್ವೆ ಇಲಾಖೆ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ಇದಕ್ಕೆ ನೂರೆಂಟು ಸಾಕ್ಷಿಗಳು ಇವೆ. ರೈಲ್ವೆ ಪದೋನ್ನತಿ ಹುದ್ದೆಗಳ ಪರೀಕ್ಷೆ ಸಂದರ್ಭದಲ್ಲಿ ಕನ್ನಡವನ್ನು ಕೈಬಿಟ್ಟು ರೈಲ್ವೆ ಅಧಿಕಾರಿಗಳು ಕರ್ನಾಟಕದಲ್ಲಿ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇವೆ ಎಂಬಂತೆ ವರ್ತಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡಿದೆ.

ಆದರೆ ರೈಲ್ವೆ ಇಲಾಖೆಯಿಂದ ಆಗುತ್ತಿರುವ ಎಲ್ಲ ಅನ್ಯಾಯಗಳ ಕುರಿತು ನಾವು ಧ್ವನಿ ಎತ್ತಬೇಕಿದೆ. ಕನ್ನಡಿಗರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಎಂದು ಕೇಳಬೇಕಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತೀಯ ರೈಲ್ವೆಯಿಂದ ಕನ್ನಡಿಗರಿಗೆ ಆಗಿರುವ ವಂಚನೆಗಳ ಸರಮಾಲೆಯನ್ನು ಸಾರ್ವಜನಿಕರ ಮುಂದೆ ತೆರೆದು ಇಡಬೇಕಿದೆ. ಈ ದ್ರೋಹ ಈಗಲಾದರೂ ಕೊನೆಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯ ಬೇಡಿಕೆಗಳು ಹೀಗಿವೆ
೧. ರೈಲ್ವೆ ಇಲಾಖೆಯ ಕರ್ನಾಟಕ ಭಾಗದ ಎಲ್ಲ ಹಂತದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು.
೨. ರೈಲ್ವೆ ಇಲಾಖೆಯ ಎಲ್ಲ ಹಂತದ ಹುದ್ದೆಗಳ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲೂ ನಡೆಯಬೇಕು.
೩. ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ರೈಲು ಯೋಜನೆಗಳು ಆದಷ್ಟು ಬೇಗ ಜಾರಿಯಾಗಬೇಕು.
೪. ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳಲ್ಲಿ, ರೈಲ್ವೆ ಕಚೇರಿಗಳಲ್ಲಿ ಕನ್ನಡೀಕರಣ ಪ್ರಕ್ರಿಯೆ ನಡೆಯಬೇಕು. ನಾಮಫಲಕಗಳು, ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿರಬೇಕು. ಕನ್ನಡ ಭಾಷೆಯಲ್ಲಿ ಸಂವಹನಗಳು ನಡೆಯಬೇಕು.
೫. ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು.
ಈ ಬೇಡಿಕೆಗಳನ್ನು ಈಡೇರಿಸುವ ಬದ್ಧತೆಯನ್ನು ಭಾರತ ಸರ್ಕಾರ, ರೈಲ್ವೆ ಇಲಾಖೆ ಪ್ರದರ್ಶಿಸಬೇಕು. ಕರ್ನಾಟಕದ ಜನತೆಗೆ ತನ್ನ ವಾಗ್ದಾನವನ್ನು ನೀಡಬೇಕು. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ರೈಲ್ವೆ ಇಲಾಖೆಗೆ ಏ.15ರವರೆಗೆ ಗಡುವು ನೀಡುತ್ತಿದೆ. ಒಂದು ವೇಳೆ ನಮ್ಮ ಬೇಡಿಕೆಗಳ ಕುರಿತು ಅವರು ತಾತ್ಸಾರ ತೋರಿದರೆ, ಪ್ರತಿಕ್ರಿಯೆ ನೀಡದಿದ್ದರೆ ಇಡೀ ಕರ್ನಾಟಕದ ಎಲ್ಲ ಸ್ವರೂಪದ ರೈಲುಗಳನ್ನು, ರೈಲು ನಿಲ್ದಾಣಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು. ಕರ್ನಾಟಕದ ಇಡೀ ರೈಲು ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಭಾರತ ಸರ್ಕಾರ ನಮ್ಮ ಅಹವಾಲುಗಳಿಗೆ ಕಿವಿ ತೆರೆಯುತ್ತದೆ ಎಂದು ಭಾವಿಸುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-rakshana-vedike-sets-april-15-deadline-railways-ta-narayana-gowda-warns-statewide-train-sh-447591.html. xn--babytilbehr-pgb.com does not claim ownership of this content. All rights remain with the original publisher.
