ಯುಗಾದಿ ಹಬ್ಬದಂದೇ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್-ದೀಪಿಕಾ ಪಳ್ಳಿಕಲ್ ಮನೆಗೆ ಮಹಾಲಕ್ಷ್ಮಿಯ ಆಗಮನ | RCB Coach Dinesh Karthik and Dipika Pallikal Welcome Baby Girl, Name Her Raha Pallikal Karthik

Sports

oi-Madhusudhan KR

RCB Coach Dinesh Karthik: ಭಾರತದ ಮಾಜಿ ಕ್ರಿಕೆಟರ್ ಹಾಗೂ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ದಂಪತಿಗಳು ತಮ್ಮ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನವಾಗಿದೆ ಎಂದು ಘೋಷಿಸಿದ್ದಾರೆ. ಈ ಮುದ್ದಾದ ಹೆಣ್ಣು ಮಗುವಿಗೆ ‘ರಾಹಾ ಪಳ್ಳಿಕಲ್ ಕಾರ್ತಿಕ್’ ಎಂದು ಹೆಸರಿಡಲಾಗಿದ್ದು, ದಂಪತಿಗಳು ತಮ್ಮ ಸಂತೋಷವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ದೀಪಿಕಾ ಮತ್ತು ದಿನೇಶ್ ದಂಪತಿಗಳಿಗೆ ಈಗಾಗಲೇ ಕಬೀರ್ ಮತ್ತು ಜಿಯಾನ್ ಎಂಬ ಅವಳಿ ಗಂಡು ಮಕ್ಕಳಿದ್ದು, ಈಗ ರಾಹಾ ಅವರ ಆಗಮನದಿಂದ ಕುಟುಂಬದ ಸಂಭ್ರಮ ಇಮ್ಮಡಿಯಾಗಿದೆ. “ನಮ್ಮ ಹೃದಯದಲ್ಲಿ ತುಂಬಿದ ಹರಕೆ ಮತ್ತು ಪದಗಳಿಗೆ ನಿಲುಕದ ಕೃತಜ್ಞತೆಯೊಂದಿಗೆ, ನಮ್ಮ ಅಮೂಲ್ಯ ಮಗುವನ್ನು ನಾವು ಈ ಜಗತ್ತಿಗೆ ಸಂತೋಷದಿಂದ ಬರಮಾಡಿಕೊಳ್ಳುತ್ತಿದ್ದೇವೆ. ಕಬೀರ್ ಮತ್ತು ಜಿಯಾನ್ ತಮ್ಮ ತಂಗಿ ‘ರಾಹಾ ಪಳ್ಳಿಕಲ್ ಕಾರ್ತಿಕ್’ಳನ್ನು ಪರಿಚಯಿಸಲು ಬಹಳ ಉತ್ಸುಕರಾಗಿದ್ದಾರೆ,” ಎಂದು ದೀಪಿಕಾ ಮತ್ತು ದಿನೇಶ್ ಕಾರ್ತಿಕ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

RCB Coach Dinesh Karthik and Dipika Pallikal Welcome Baby Girl Name Her Raha Pallikal Karthik

ದಿನೇಶ್ ಕಾರ್ತಿಕ್ ಕ್ರಿಕೆಟ್‌ ಜೀವನ

ಭಾರತ ತಂಡದ ಪರ ದಿನೇಶ್ ಕಾರ್ತಿಕ್ ಅವರು ವಿಕೆಟ್‌ ಕೀಪರ್ ಹಾಗೂ ಬ್ಯಾಟಿಂಗ್‌ನಲ್ಲಿ ಅತ್ಯಂತ ವಿಶಿಷ್ಟವಾದ ವೃತ್ತಿಜೀವನವನ್ನು ನಡೆಸಿದವರು. ನಿವೃತ್ತಿ ಪಡೆದ ನಂತರ ಅವರು, ತರಬೇತಿ ಮತ್ತು ಕಾಮೆಂಟರಿ ವೃತ್ತಿಗಳಲ್ಲಿ ತೊಡಗಿಸಿಕೊಂಡರು. ಎರಡು ದಶಕಗಳಿಗೂ ಹೆಚ್ಚು ಕಾಲ ಅವರು ಟೆಸ್ಟ್, ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ನಂತರದ ದಿನಗಳಲ್ಲಿ, ಅವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೀಪಿಕಾ ಪಳ್ಳಿಕಲ್ ಸಾಧನೆಗಳು

ಮತ್ತೊಂದೆಡೆ, ಪತ್ನಿ ದೀಪಿಕಾ ಪಳ್ಳಿಕಲ್ ಅವರು ವಿಶ್ವದ ಅಗ್ರ 10 ಶ್ರೇಯಾಂಕದೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಭಾರತೀಯ ಸ್ಕ್ವಾಷ್ ಇತಿಹಾಸದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಅವರು, ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದಾರೆ. ಇಂದಿಗೂ ಅವರು ದೇಶದ ಅತ್ಯಂತ ಗೌರವಾನ್ವಿತ ಮತ್ತು ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ.

ದೀಪಿಕಾ ಅವರು ಕೊನೆಯದಾಗಿ ಅಕ್ಟೋಬರ್ 2023ರಲ್ಲಿ ನಡೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದು, ಅಲ್ಲಿ ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಇದಕ್ಕೂ ಮೊದಲು 2022ರ ಆರಂಭದಲ್ಲಿ ಹೆರಿಗೆ ರಜೆಯ ನಂತರ ಕ್ರೀಡಾಂಗಣಕ್ಕೆ ಮರಳಿದ್ದು, ವಿಶ್ವ ಡಬಲ್ಸ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಅಲ್ಲದೆ, 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

ಆರ್‌ಸಿಬಿಯಲ್ಲಿ ದಿನೇಶ್ ಕಾರ್ತೀಕ್‌ ರೋಲ್

ದಿನೇಶ್ ಕಾರ್ತಿಕ್ ಅವರು ಪ್ರಸ್ತುತ ಆರ್‌ಸಿಬಿ ತಂಡದ ತರಬೇತುದಾರರ ಬಳಗದ ಭಾಗವಾಗಿದ್ದಾರೆ. ಅವರು ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯ ತರಬೇತುದಾರರಾಗಿ ಆಂಡಿ ಫ್ಲವರ್ ಮತ್ತು ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಳ್ವಿ ಅವರನ್ನೊಳಗೊಂಡ ಅತ್ಯಂತ ಅನುಭವಿ ತರಬೇತುದಾರರ ತಂಡದಲ್ಲಿ ಕಾರ್ತಿಕ್ ಕೂಡ ಒಬ್ಬರಾಗಿದ್ದಾರೆ. ಒಟ್ಟಿನಲ್ಲಿ ಇಂದು ಯುಗಾದಿ ಹಬ್ಬದ ದಿನವೇ ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಪಲ್ಲಿಕಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇವರಿಗೆ ಶುಭಹಾರೈಕೆಗಳ ಸುರಿಮಳೆಯೇ ಹರಿದುಬರುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-coach-dinesh-karthik-and-dipika-pallikal-welcome-baby-girl-name-her-raha-pallikal-karthik-447653.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo