
Karnataka
oi-Pragathi S
ಬೆಂಗಳೂರು: ಜಾತಿ, ಧರ್ಮದ ಅಡೆತಡೆಗಳನ್ನು ಮೀರಿ ಪ್ರೀತಿಸಿ ಮದುವೆಯಾಗುವ ಜೋಡಿಗಳ ರಕ್ಷಣೆಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ‘ಮರ್ಯಾದೆ’ ಮತ್ತು ‘ಸಂಪ್ರದಾಯ’ದ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ, ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಕೃತ್ಯಗಳಿಗೆ ಶಾಶ್ವತ ಬ್ರೇಕ್ ಹಾಕುವ ಉದ್ದೇಶದಿಂದ ಬುಧವಾರ ವಿಧಾನಸಭೆಯಲ್ಲಿ ‘ಇವ ನಮ್ಮವ, ಇವ ನಮ್ಮವ’ ಮಸೂದೆಯನ್ನು ಮಂಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಮರ್ಯಾದೆಗೇಡು ಹತ್ಯೆ’ ಹೆಸರಿನಲ್ಲಿ ಪ್ರೇಮಿಗಳ ಹಾಗೂ ನವ ದಂಪತಿಯ ಕೊಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದವು. ತಮ್ಮಿಷ್ಟದಂತೆ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಂಡವರನ್ನು ಜಾತಿಯ ಕಾರಣ ನೀಡಿ ಊರಿನಿಂದ ಬಹಿಷ್ಕರಿಸುವ, ಬೆದರಿಕೆ ಹಾಕುವ ಘಟನೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ನಾಗರಿಕರು, ಪ್ರಗತಿಪರರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ, ಇದೀಗ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ-2026’ ಅನ್ನು ಸಿದ್ಧಪಡಿಸಲಾಗಿದೆ. ಇತ್ತೀಚೆಗಷ್ಟೇ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಈ ಕರಡು ಮಸೂದೆಗೆ ಒಮ್ಮತದ ಅನುಮೋದನೆ ಪಡೆಯಲಾಗಿತ್ತು.
ಮಸೂದೆಯ ಪ್ರಮುಖ ಅಂಶಗಳು:
ಕಠಿಣ ಶಿಕ್ಷೆ: ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದೌರ್ಜನ್ಯ ಎಸಗುವ, ಕೊಲೆ ಮಾಡುವ ಅಥವಾ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಅಪರಾಧಿಗಳಿಗೆ ಕನಿಷ್ಠ ಐದು ವರ್ಷಗಳಿಗೆ ಕಡಿಮೆ ಇಲ್ಲದಂತೆ ಕಠಿಣ ಜೈಲು ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಸ್ಪಷ್ಟ ಅವಕಾಶ ಕಲ್ಪಿಸಲಾಗಿದೆ.
ಅಂತರ್ಜಾತಿ ವಿವಾಹಕ್ಕೆ ಮಾನ್ಯತೆ: ಜಾತಿ ಮೀರಿ ಮದುವೆಯಾಗುವ ಜೋಡಿಗಳ ವಿವಾಹವನ್ನು ಕಾನೂನುಬದ್ಧವಾಗಿ ಮಾನ್ಯ ಮಾಡುವುದು ಮತ್ತು ಅವರಿಗೆ ಯಾವುದೇ ರೀತಿಯ ತಾರತಮ್ಯವಾಗದಂತೆ ಸಂಪೂರ್ಣ ರಕ್ಷಣೆ ಒದಗಿಸುವುದು.
ತ್ವರಿತ ನ್ಯಾಯಾಲಯಗಳ ಸ್ಥಾಪನೆ: ಇಂತಹ ಸೂಕ್ಷ್ಮ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ, ನೊಂದವರಿಗೆ ಶೀಘ್ರ ನ್ಯಾಯ ಒದಗಿಸಲು ರಾಜ್ಯದಲ್ಲಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು (Fast-track courts) ಸ್ಥಾಪಿಸಲಾಗುವುದು.
ಜಿಲ್ಲಾ ಮಟ್ಟದ ವೇದಿಕೆಗಳು: ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವುದು ಹಾಗೂ ಪ್ರತಿ ಜಿಲ್ಲೆಯಲ್ಲೂ ನೊಂದವರ ನೆರವಿಗೆ ತಕ್ಷಣ ಧಾವಿಸಲು ‘ಇವ ನಮ್ಮವ’ ವೇದಿಕೆಗಳನ್ನು ಅಸ್ತಿತ್ವಕ್ಕೆ ತರುವುದು ಈ ಕಾಯ್ದೆಯ ಪ್ರಮುಖ ಗುರಿಯಾಗಿದೆ.
ಬಸವಣ್ಣನವರ ವಚನದ ಪ್ರೇರಣೆ
12ನೇ ಶತಮಾನದ ಸಮಾಜ ಸುಧಾರಕ, ವಿಶ್ವಗುರು ಬಸವಣ್ಣನವರ ‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂಬ ಜನಪ್ರಿಯ ವಚನದ ಸಾಲುಗಳನ್ನು ಈ ಮಸೂದೆಗೆ ನಾಮಕರಣ ಮಾಡಲಾಗಿದೆ. ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದ ಬಸವಣ್ಣನವರ ಆಶಯದಂತೆ, ಎಲ್ಲರನ್ನು ಸಮಾನವಾಗಿ ಕಾಣುವ ಮತ್ತು ಪ್ರೀತಿಸುವವರ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಕಾನೂನು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-introduces-iva-nammava-bill-2026-to-stop-honor-killings-and-protect-inter-caste-couples-447687.html. xn--babytilbehr-pgb.com does not claim ownership of this content. All rights remain with the original publisher.
