
Sports
oi-Madhusudhan KR
RCB IPL Ticket Booking: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಂದು ಆರಂಭವಾಗಲಿದ್ದು, ಎಂ.ಚಿನ್ನಸ್ವಾಮಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ವೀಕ್ಷಣೆ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದ್ರೆ, ಟಿಕೆಟ್ ಬುಕಿಂಗ್ ಮಾಡುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ವರ್ಷ ಜೂನ್ 3ರಂದು ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ಮರುದಿನ, ಅಂದರೆ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು. ಆದರೆ, ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು.

ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳನ್ನು ಆಡಿಸಂದತೆ ಹಾಗೂ ದೊಡ್ಡ ಮಟ್ಟದ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ಹೊರಡಿಸಿತ್ತು. ಈ ಕಾರಣದಿಂದಲೇ ಕಳೆದ 10 ತಿಂಗಳಿನಿಂದ ಇಲ್ಲಿ ಯಾವುದೇ ಪಂದ್ಯಗಳನ್ನು ಆಯೋಜನೆ ಮಾಡಿರಲಿಲ್ಲ. ಇದೀಗ 2026ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಸರ್ಕಾರವು ಈ ಅಮಾನತು ಆದೇಶವನ್ನು ತೆರವುಗೊಳಿಸಿದ್ದು, ಮಾರ್ಗಸೂಚಿಗಳನ್ವಯ ಪಂದ್ಯ ನಡೆಸಲು ನಿರ್ಧರಿಸಿದೆ.
ಆಸನಗಳ ಸಂಖ್ಯೆ ಕಡಿತ
ಈ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ 35,000 ಇತ್ತು. ಆದರೆ ಸುರಕ್ಷತಾ ದೃಷ್ಟಿಯಿಂದ ಈ ಬಾರಿ ಕೇವಲ 28,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅಂದರೆ ಸುಮಾರು 7,000 ಸೀಟುಗಳು ಕಡಿಮೆಯಾಗಲಿವೆ. ಸ್ಟೇಡಿಯಂ ಸುತ್ತಮುತ್ತಲಿನ ಟ್ರಾಫಿಕ್ ಜಾಮ್ ತಪ್ಪಿಸಲು ಪಂದ್ಯದ ದಿನಗಳಂದು ಪಂದ್ಯದ ಟಿಕೆಟ್ ಹೊಂದಿರುವ ಅಭಿಮಾನಿಗಳಿಗೆ ಮೆಟ್ರೋ ಪ್ರಯಾಣ ಉಚಿತ ಇರಲಿದೆ. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ದೊಡ್ಡ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ. ಕ್ರೀಡಾಂಗಣಕ್ಕೆ ತಲುಪಲು ಕಬ್ಬನ್ ಪಾರ್ಕ್ ಮತ್ತು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣಗಳು ಹತ್ತಿರದಲ್ಲಿವೆ.
ಟಿಕೆಟ್ ಪರಿಶೀಲನೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ
ಟಿಕೆಟ್‌ಗಳು ಕೇವಲ ಒಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿರುತ್ತವೆ. ಇದನ್ನು ಬಿಟ್ಟು ಬೇರೆ ಯಾವುದೇ ವೆಬ್‌ಸೈಟ್ ಅಥವಾ ವ್ಯಕ್ತಿಗಳ ಬಳಿ ಟಿಕೆಟ್ ಖರೀದಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ. ಅನಧಿಕೃತವಾಗಿ ಅಥವಾ ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಫ್ರಾಂಚೈಸಿ ಎಚ್ಚರಿಸಿದೆ. ಅಲ್ಲದೆ, ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಟಿಕೆಟ್‌ಗಳನ್ನು ಪರಿಶೀಲಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದೆ.
ಯಾವುದೇ ಕ್ಷಣದಲ್ಲಾದರೂ ಟಿಕೆಟ್ ಲಭ್ಯವಾಗುವ ಸಾಧ್ಯತೆ
ಐಪಿಎಲ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದರೂ, ಟಿಕೆಟ್ ಬಿಡುಗಡೆಯ ನಿಖರವಾದ ದಿನಾಂಕವನ್ನು ಆರ್‌ಸಿಬಿ ಫ್ರಾಂಚೈಸಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಪಂದ್ಯಕ್ಕೆ ಇನ್ನು ಕೇವಲ 8 ದಿನಗಳು ಮಾತ್ರ ಬಾಕಿ ಇರುವುದರಿಂದ, ಟಿಕೆಟ್‌ಗಳು ಯಾವುದೇ ಕ್ಷಣದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಅಭಿಮಾನಿಗಳು ಅಧಿಕೃತ ಅಪ್‌ಡೇಟ್‌ಗಳನ್ನು ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ. ಮುಂದಿನ 24 ರಿಂದ 48ಗಂಟೆಗಳಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗುವ ನಿರೀಕ್ಷೆಯಿದೆ ಎನ್ನುವ ಮಾಹಿತಿಯಿದೆ.
ಕಳೆದ ಬಾರಿ ಚಾಂಪಿಯನ್ ಆಗಿರುವ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಅವರ ಕ್ರೇಜ್‌ನಿಂದಾಗಿ ಟಿಕೆಟ್‌ಗಳಿಗೆ ಭಾರಿ ಪೈಪೋಟಿ ಇರಲಿದೆ. ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗುವ ಸಾಧ್ಯತೆಯಿದೆ. ಯಾವುದೇ ಅಕ್ರಮ ಅಥವಾ ನಕಲಿ ಟಿಕೆಟ್ ಜಾಲಕ್ಕೆ ಸಿಲುಕದಂತೆ, ಆರ್‌ಸಿಬಿ ತಂಡದ ಅಧಿಕೃತ ಸಾಮಾಜಿಕ ಜಾಲತಾಣಗಳು ಮತ್ತು ವೆಬ್‌ಸೈಟ್‌ಗಳನ್ನು ಪರಿಶೀಲಿಸಲು ಅಭಿಮಾನಿಗಳಿಗೆ ಸಲಹೆ ನೀಡಲಾಗಿದೆ.
ಆರ್‌ಸಿಬಿ-ಎಸ್‌ಆರ್‌ಎಚ್ ಪಂದ್ಯದ ಟಿಕೆಟ್‌ನ ಅಂದಾಜು ಬೆಲೆ
* Basic Seating: ₹2,300 – ₹2,800
* Mid-Range Seats: ₹3,500 – ₹7,500
* Premium (Pavilion/Terrace): ₹8,000 – ₹15,000
* VIP/Corporate Hospitality: ₹30,000+
ಟಿಕೆಟ್ ಬುಕ್ ಮಾಡುವುದು ಹೇಗೆ?
ಇನ್ನು ಟಿಕೆಟ್ ಬೆಲೆಗಳು ಬೇಡಿಕೆ ಅವಲಂಬಿಸಿ ಬದಲಾಗಬಹುದು. ಯಾವುದೇ ಕ್ಷಣದಲ್ಲಾದರೂ ಟಿಕೆಟ್ ಬುಕಿಂಗ್ ಆರಂಭವಾಗಲಿದ್ದು, ಅಧಿಕೃತ ವೆಬ್‌ಸೈಟ್ shop.royalchallengers.com ಹಾಗೂ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ಅಧಿಕೃತ RCB Official App ಮೂಲಕವೇ ಟಿಕೆಟ್ ಬುಕ್ ಮಾಡಬಹುದು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-vs-srh-ipl-2026-tickets-booking-details-prices-and-m-chinnaswamy-stadium-new-rules-explained-447793.html. xn--babytilbehr-pgb.com does not claim ownership of this content. All rights remain with the original publisher.
