ತಂದೆಯಂತೆಯೇ ಭಾರೀ ತೂಕದ ಬ್ಯಾಟ್ ಹಿಡಿದ ಅರ್ಜುನ್ ತೆಂಡೂಲ್ಕರ್, ಇದರ ರಹಸ್ಯ ಕೇಳಿ ಅಚ್ಚರಿಪಟ್ಟ ರಿಷಭ್ ಪಂತ್ | Arjun Tendulkar Impresses with Discipline; Rishabh Pant Praises Ahead of Indian Premier League 2026

Sports

oi-Madhusudhan KR

Arjun Tendulkar: ಕೆಲವೇ ದಿನಗಳಲ್ಲಿ ಐಪಿಎಲ್‌ 2026 ಹಬ್ಬ ಶುರುವಾಗಲಿದೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರ ಶಿಸ್ತಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಅರ್ಜುನ್ ಬಳಸುವ ಬ್ಯಾಟ್‌ ಬಗ್ಗೆಯೂ ಚರ್ಚೆಯಾಗಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದಿಂದ 30 ಲಕ್ಷ ರೂಪಾಯಿಗೆ ಎಲ್‌ಎಸ್‌ಜಿ ತಂಡಕ್ಕೆ ಟ್ರೇಡ್ ಮಾಡಿಕೊಳ್ಳಲಾಗಿದೆ. ಇದೀಗ ಎಲ್‌ಎಸ್‌ಜಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪಂತ್ ಅವರು ಅರ್ಜುನ್ ಅವರ ಕೆಲಸದ ಶಿಸ್ತನ್ನು ಕೊಂಡಾಡಿದ್ದಾರೆ.

Arjun Tendulkar Impresses with Discipline Rishabh Pant Praises Ahead of Indian Premier League 2026

ಅರ್ಜುನ್ ತೆಂಡೂಲ್ಕರ್ ಅವರು ಇತ್ತೀಚೆಗಷ್ಟೇ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾಗಿದ್ದು, ಮದುವೆಯಾದ ಮರುದಿನವೇ ಯಾವುದೇ ವಿಶ್ರಾಂತಿ ಪಡೆಯದೆ ತರಬೇತಿಗೆ ಮರಳಿದ್ದರು. ಅರ್ಜುನ್ ಮದುವೆಯ ನಂತರ ಸಮಯ ವ್ಯರ್ಥ ಮಾಡದೆ ತಕ್ಷಣವೇ ಕ್ರಿಕೆಟ್ ಅಭ್ಯಾಸಕ್ಕೆ ಮರಳಿದ್ದನ್ನು ನೋಡಿ ಪಂತ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಶ್ರದ್ಧಾ ಮನೋಭಾವವನ್ನು ಶ್ಲಾಘಿಸಿದ್ದಾರೆ.

‘ನಿನಗೆ ಸಹಾಯ ಮಾಡಲು ನಾನು ಸದಾ ಸಿದ್ಧ’

“ನೀನು ಯುವರಾಜ್ ಸಿಂಗ್ ಜೊತೆ ಕೂಡ ಅಭ್ಯಾಸ ಮಾಡುತ್ತಿದ್ದೆಯಾ.. ಫುಲ್-ಟೈಮ್ ಆಗಿ? ಮದುವೆಯಾದ ಮರುದಿನವೇನಾ? ಮದುವೆಯ ಮರುದಿನವೇ ಅಭ್ಯಾಸಕ್ಕೆ ಬಂದಿದ್ದೀಯಾ? ನೀನು ನಿಜವಾಗಿಯೂ ತುಂಬಾ ಉತ್ಸಾಹಿ ಕಣೋ ಭಾಯ್,” ಎಂದು ರಿಷಭ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, “ನಿನಗೆ ಏನೇ ಬೇಕಿದ್ದರೂ ಕೇಳು, ನಿನಗೆ ಸಹಾಯ ಮಾಡಲು ನಾನು ಸದಾ ಸಿದ್ಧ,” ಎಂದು ಪಂತ್ ಆತ್ಮೀಯವಾಗಿ ಹೇಳಿದರು.

ಅರ್ಜುನ್ ತೆಂಡೂಲ್ಕರ್ ಬಳಸುವ ಬ್ಯಾಟ್ ತೂಕವೆಷ್ಟು?

ಅದೇ ವಿಡಿಯೋದಲ್ಲಿ, ರಿಷಭ್ ಪಂತ್ ಮತ್ತು ಅರ್ಜುನ್ ತೆಂಡೂಲ್ಕರ್ ತಮ್ಮ ಬ್ಯಾಟ್‌ಗಳ ತೂಕದ ಕುರಿತು ಚರ್ಚಿಸುತ್ತಿರುವುದನ್ನು ಕಾಣಬಹುದು. ಅರ್ಜುನ್ ತಮ್ಮ ಬ್ಯಾಟ್ ಸುಮಾರು 1,220 ಗ್ರಾಂ ತೂಕವಿದೆ ಎಂದು ತಿಳಿಸಿದರು. ಇದು ಆಧುನಿಕ ಕ್ರಿಕೆಟ್‌ನಲ್ಲಿ ಆಟಗಾರರು ಬಳಸುವ ಸಾಮಾನ್ಯ ಬ್ಯಾಟ್‌ಗಳಿಗಿಂತ ಹೆಚ್ಚು ತೂಕದ್ದಾಗಿದೆ.

ಅರ್ಜುನ್ ಹೆಚ್ಚು ತೂಕದ ಬ್ಯಾಟ್ ಬಳಸುವುದೇಕೆ?

ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಅವರು ಇನ್ನೂ ಹೆಚ್ಚಿನ ತೂಕದ (1,310 ರಿಂದ 1,315 ಗ್ರಾಂ) ಬ್ಯಾಟ್‌ಗಳನ್ನು ಬಳಸುತ್ತಿದ್ದರು ಎಂದು ನೆನಪಿಸಿಕೊಂಡರು. “ನಾನು 1,200 ಗ್ರಾಂ ಗಿಂತ ಕಡಿಮೆ ತೂಕದ ಬ್ಯಾಟ್ ಬಳಸುವುದಿಲ್ಲ” ಎಂದು ಅರ್ಜುನ್ ಹೇಳಿದರು. ಬಳಿಕ, ರಿಷಭ್ ಪಂತ್ ಪಂತ್ ಅವರು ಭಾರವಾದ ಬ್ಯಾಟ್ ಬಳಸುವುದರಿಂದ ಏನು ಲಾಭ ಎಂದು ಕೇಳಿದಾಗ, “ಬಾಲ್‌ಗೆ ಸುಮ್ಮನೆ ಟಚ್ ಮಾಡಿದರೂ ಸಾಕು, ಅದು ವೇಗವಾಗಿ ಹೋಗುತ್ತದೆ” ಎಂದು ಮುಗುಳ್ನಗುತ್ತಾ ಅರ್ಜುನ್ ಉತ್ತರಿಸಿದರು.

ಎಡಗೈ ವೇಗಿ ಮತ್ತು ಎಡಗೈ ಬ್ಯಾಟರ್ ಆಗಿರುವ ಅರ್ಜುನ್ ತೆಂಡೂಲ್ಕರ್ ಒಬ್ಬ ಬೌಲಿಂಗ್ ಆಲ್‌ರೌಂಡರ್. ಇವರು 2023 ಮತ್ತು 2024ರ ಐಪಿಎಲ್ ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟು ಐದು ಪಂದ್ಯಗಳನ್ನು ಆಡಿದ್ದಾರೆ. ಮತ್ತೊಂದೆಡೆ, 2025ರ ಸೀಸನ್‌ನಲ್ಲಿ ಎಲ್‌ಎಸ್‌ಜಿ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯಲು ವಿಫಲರಾಗಿದ್ದ ರಿಷಭ್ ಪಂತ್, ಈ ಬಾರಿ 27 ಕೋಟಿ ರೂಪಾಯಿಯ ತಮ್ಮ ಭಾರಿ ಮೊತ್ತದ ಬೆಲೆಗೆ ತಕ್ಕಂತೆ ಆಡುವ ಗುರಿ ಹೊಂದಿದ್ದಾರೆ. ಏಪ್ರಿಲ್ 1ರಂದು ಎಲ್‌ಎಸ್‌ಜಿ ತಂಡವು ತನ್ನ ತವರು ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸುವ ಮೂಲಕ ಐಪಿಎಲ್ 2026ರ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಬಾರಿಯಾದರೂ ರಿಷಭ್ ಪಂತ್ ಸಿಡಿದೇಳಲಿದ್ದಾರಾ ಎಂದು ಕಾದುನೋಡಬೇಕಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/arjun-tendulkar-impresses-with-discipline-rishabh-pant-praises-ahead-of-indian-premier-league-2026-447845.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo