
Entertainment
oi-Manohara M
ಸ್ಯಾಂಡಲ್ವುಡ್ ನಟಿ ಹಾಗೂ ರಾಜಕಾರಣಿ ರಮ್ಯಾ ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನಗೆ ರಣವೀರ್ ಸಿಂಗ್ ತುಂಬಾ ಇಷ್ಟ. ಧುರಂಧರ ಮೊದಲ ಭಾಗದಲ್ಲಿ ಅವರು ತೋರಿಸಿದ ಅಭಿನಯ ಅವರೊಬ್ಬ ಉತ್ತಮ ನಟ ಎಂಬುದನ್ನು ಸಾಬೀತುಪಡಿಸಿತು. ಆದರೆ ಧುರಂಧರ್-2ರಲ್ಲಿ ಕೋಪ ಮತ್ತು ಹಿಂಸಾಚಾರವೇ ಹೆಚ್ಚು ಕಾಣುತ್ತದೆ. ಅವರ ಪ್ರತಿಭೆಯನ್ನು ತೋರಿಸಲು ಹೆಚ್ಚಿನ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ರಣವೀರ್ ಇನ್ನೂ ಉತ್ತಮ ಪಾತ್ರಗಳಿಗೆ ಅರ್ಹ
ಇದು ತನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಸ್ಪಷ್ಟಪಡಿಸಿರುವ ರಮ್ಯಾ, ಎಲ್ಲರ ಅಭಿಪ್ರಾಯ ಒಂದೇ ಆಗಬೇಕೆಂದಿಲ್ಲ ಎಂದೂ ಹೇಳಿದ್ದಾರೆ. ರಣವೀರ್ ಸಿಂಗ್ ಇನ್ನೂ ಉತ್ತಮ ಪಾತ್ರಗಳಿಗೆ ಅರ್ಹ ನಟ. ಅವರ ಮುಂದಿನ ಚಿತ್ರವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ. ರಮ್ಯಾ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಅಭಿಪ್ರಾಯವನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಧುರಂಧರ-2 ಚಿತ್ರದ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಧುರಂಧರ್-2 ಚಿತ್ರದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಚಿತ್ರ ಬಿಡುಗಡೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಥಿಯೇಟರ್ನಲ್ಲಿ ನೋಡಬೇಡಿ
ರಮ್ಯಾ ತಮ್ಮ ಪೋಸ್ಟ್ನಲ್ಲಿ, “ಒಂದು ಭರವಸೆ ಮೂಡಿಸಿದ ಸಿನಿಮಾವನ್ನು ಹೇಗೆ ಸಹನೆಯ ಪರೀಕ್ಷೆಯನ್ನಾಗಿ ಮಾಡಬೇಕು ಎಂಬುದಕ್ಕೆ ಧುರಂಧರ್-2 ಒಂದು ಮಾಸ್ಟರ್ ಕ್ಲಾಸ್” ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಚಿತ್ರವನ್ನು ನೋಡೋದು ಎಂದರೆ ತುಂಬಾ ಬೋರ್ ವಿಷಯದ ಪಾಠ ಪುಸ್ತಕವನ್ನು ಓದಿದಂತಿದೆ ಎಂದು ಅವರು ಹೇಳಿದ್ದಾರೆ. ಈ ಚಿತ್ರವನ್ನು ಥಿಯೇಟರ್ನಲ್ಲಿ ನೋಡಲು ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ ಎಂದು ರಮ್ಯಾ ಸಲಹೆ ನೀಡಿದ್ದಾರೆ. “ಈ ಸಿನಿಮಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ನೋಡಿದರೆ ಮಾತ್ರ ಒಳ್ಳೆಯದು. ಬೇಸರವಾದರೆ ಪಾಸ್ ಮಾಡಿ, ಮೊಬೈಲ್ ನೋಡಬಹುದು” ಎಂದು ಅವರು ವ್ಯಂಗ್ಯ ಮಾಡಿದ್ದಾರೆ.
ಚಿತ್ರದ ನಿರ್ದೇಶನ, ಸಂಭಾಷಣೆ, ಎಡಿಟಿಂಗ್, ಬ್ಯಾಕ್ಗ್ರೌಂಡ್ ಸ್ಕೋರ್, ಅಭಿನಯ ಎಲ್ಲವೂ ಸರಾಸರಿಗಿಂತ ಕಡಿಮೆ ಮಟ್ಟದಲ್ಲಿದೆ ಎಂದು ಅವರು ಟೀಕಿಸಿದ್ದಾರೆ. ಮಾರ್ಚ್ 19 ಬಿಡುಗಡೆಯ ಡೆಡ್ಲೈನ್ ಇದ್ದದ್ದೇ ಗೊತ್ತಿರಲಿಲ್ಲವೇ ಎಂಬ ಅನುಮಾನ ಬರುತ್ತದೆ ಎಂದು ಕೂಡ ಅವರು ಹೇಳಿದ್ದಾರೆ. ಧುರಂಧರ್ ಮೊದಲ ಭಾಗದಲ್ಲಿ ಪ್ರೇಕ್ಷಕರು ಕೂಗಾಟ, ಚಪ್ಪಾಳೆ, ಉತ್ಸಾಹ ಎಲ್ಲವೂ ಇತ್ತು. ಆದರೆ ಎರಡನೇ ಭಾಗದಲ್ಲಿ ಥಿಯೇಟರ್ನಲ್ಲಿ ನಿರಾಶೆ ಮಾತ್ರ ಕಾಣಿಸುತ್ತಿತ್ತು ಎಂದು ರಮ್ಯಾ ಹೇಳಿದ್ದಾರೆ.
Just watched Dhurandhar 2 and wow! what a masterclass in how to turn something promising into an endurance test.
It’s like reading a textbook of the most boring subject with never-ending chapters and at some point, your brain just gives up and starts laughing out of sheer despair…— Ramya/Divya Spandana (@divyaspandana) March 20, 2026
ನನಗೆ ಕಾಣಿಸಿದ್ದು ರಣವೀರ್ ಕೂದಲು ಮಾತ್ರ
ನಟ ರಣವೀರ್ ಸಿಂಗ್ ಈ ಸಿನಿಮಾವನ್ನು ಹೊತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅವರು ಏನು ಹೊತ್ತಿದ್ದಾರೆ? ನನಗೆ ಕಾಣಿಸಿದ್ದು ಅವರ ಕೂದಲು ಮಾತ್ರ ಎಂದು ರಮ್ಯಾ ವ್ಯಂಗ್ಯ ಮಾಡಿದ್ದಾರೆ. ಮೊದಲ ಭಾಗದಲ್ಲಿ ಅವರ ಪಾತ್ರಕ್ಕೆ ವ್ಯಕ್ತಿತ್ವ ಇತ್ತು, ಆದರೆ ಈ ಭಾಗದಲ್ಲಿ ಅದು ಕಾಣಿಸಲಿಲ್ಲ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಅತಿಯಾದ ಹಿಂಸಾಚಾರ ಇದೆ ಎಂದು ರಮ್ಯಾ ಕಿಡಿಕಾರಿದ್ದಾರೆ. ಸೂಜಿ, ಸ್ಪ್ಯಾನರ್, ಚಾಕು, ಕತ್ತಿ, ಚೈನ್, ಗನ್, ಬಾಂಬ್ ಸಿಕ್ಕದ್ದನ್ನೆಲ್ಲಾ ಆಯುಧ ಮಾಡಿರುವಂತೆ ತೋರುತ್ತದೆ. ಒಂದು ದೃಶ್ಯಕ್ಕಿಂತ ಇನ್ನೊಂದು ದೃಶ್ಯ ಹೆಚ್ಚು ಹಿಂಸಾತ್ಮಕವಾಗಿರಬೇಕು ಎಂಬ ಸ್ಪರ್ಧೆಯಲ್ಲಿ ನಿರ್ದೇಶಕರು ಇದ್ದಂತೆ ಕಾಣುತ್ತದೆ ಎಂದಿದ್ದಾರೆ.

ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರಿಗೆ ಕೂಡ ರಮ್ಯಾ ಟೀಕೆ ಮಾಡಿದ್ದು, “ಜಿಂಗೋಇಜಂ ಮತ್ತು ಪ್ರಚಾರ ಸಿನಿಮಾ ಮಾಡುವ ಕಾಲ ಹೋಗಿದೆ, ಅದನ್ನು ಬಿಡಿ” ಎಂದು ಹೇಳಿದ್ದಾರೆ. ರಮ್ಯಾ ಅವರು ಧುರಂಧರ್-2 ಚಿತ್ರವನ್ನು “ದೊಡ್ಡ ನಿರಾಶೆ” ಎಂದು ಹೇಳಿದ್ದು, ಮೊದಲ ಭಾಗ ಇಷ್ಟಪಟ್ಟವರು ಈ ಭಾಗ ನೋಡಿ ಯಾಕೆ ಈ ಸಿನಿಮಾ ಮಾಡಿದರು ಎಂದು ಪ್ರಶ್ನಿಸುವಂತಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/ramya-slams-dhurandhar-2-says-dont-waste-money-watching-in-theatre-ranveer-singh-starrer-movie-447875.html. xn--babytilbehr-pgb.com does not claim ownership of this content. All rights remain with the original publisher.
