ಆಂಧ್ರಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ 16 ಮಂದಿ ಸಾವು: ಹಲವು ರಾಜ್ಯಗಳಲ್ಲಿ ಅಧಿಕಾರಿಗಳಿಂದ ದಾಳಿ | Adulterated Milk Tragedy in Andhra Pradesh East Godavari district 16 Dead Raids in Multiple States

India

oi-Manohara M

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸಂಭವಿಸಿದ ಶಂಕಿತ ಕಲಬೆರಕೆ ಹಾಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರದ ವೇಳೆಗೆ 16ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಕೆ.ವೆಂಕಟೇಶ್ವರ ರಾವ್ ಖಚಿತಪಡಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ವರಲಕ್ಷ್ಮಿ ಮಿಲ್ಕ್ ಡೈರಿಯಿಂದ ಸರಬರಾಜಾದ ಹಾಲನ್ನು ಸೇವಿಸಿದ 106 ಕುಟುಂಬಗಳ ಮೇಲೆ ಈ ವಿಷಕಾರಿ ಪರಿಣಾಮ ಬೀರಿದೆ ಎನ್ನಲಾಗಿದೆ.

ಪೂರ್ವ ಗೋದಾವರಿ ಜಿಲ್ಲೆಯ ಹಾಲಿನ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಮತ್ತು ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿವೆ. ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿರುವ ಬೆನ್ನಲ್ಲೇ ಘಟನೆಯ ಮೂಲ ಪತ್ತೆಹಚ್ಚಲು ಹಿರಿಯ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿದೆ. ಆಹಾರ ಸುರಕ್ಷತಾ ಇಲಾಖೆಯು ಶಂಕಿತ ಡೈರಿ ಘಟಕದ ಮೇಲೆ ದಾಳಿ ನಡೆಸಿದ್ದು, ಅಲ್ಲಿಂದ ಹಾಲು, ಮೊಸರು, ತುಪ್ಪ, ಪನ್ನೀರ್ ಮತ್ತು ನೀರನ್ನು ವಶಪಡಿಸಿಕೊಂಡಿದೆ. ಇವುಗಳನ್ನು ಸೂಕ್ಷ್ಮಜೀವಿ ಮತ್ತು ರಾಸಾಯನಿಕ ವಿಶ್ಲೇಷಣೆಗಾಗಿ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

Adulterated Milk Tragedy

ಏನಿದು ಪ್ರಕರಣ?

ಮೃತ ಮಹಿಳೆಯೊಬ್ಬರ ಪುತ್ರ ನೀಡಿದ ದೂರಿನನ್ವಯ, ಪೊಲೀಸರು ಫೆಬ್ರವರಿ 22ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಂಕಿತ ಹಾಲು ಮಾರಾಟಗಾರನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳಿಗೆ ನೀಡಲಾಗುವ ಮೇವು ಅಥವಾ ನೀರಿನ ಮೂಲಕ ವಿಷಕಾರಿ ಅಂಶ ಹಾಲಿಗೆ ಸೇರಿರಬಹುದೇ ಎಂಬ ಸಂಶಯದ ಮೇಲೆ, ಪಶುಸಂಗೋಪನಾ ಇಲಾಖೆಯು ಮೇವು ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಷಶಾಸ್ತ್ರೀಯ ವಿಶ್ಲೇಷಣೆಗೆ ಒಳಪಡಿಸಿದೆ.

ಹೈದರಾಬಾದ್‌ನಿಂದ ಹಿರಿಯ ಆರೋಗ್ಯ ಅಧಿಕಾರಿಗಳು ಮತ್ತು ವಿಶೇಷ ವೈದ್ಯರ ತಂಡವನ್ನು ರಾಜಮಹೇಂದ್ರವರಂಗೆ ರವಾನಿಸಲಾಗಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೈಕೆಯನ್ನು ಈ ತಂಡವು ಮೇಲ್ವಿಚಾರಣೆ ನಡೆಸುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರಯೋಗಾಲಯದ ಅಂತಿಮ ವರದಿಗಳು ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಫೆಬ್ರವರಿ 22ರಂದು ರಾಜಮಹೇಂದ್ರವರಂನ ಕಿಮ್ಸ್ ಆಸ್ಪತ್ರೆಗೆ ಚೌಡೇಶ್ವರಿನಗರ ಮತ್ತು ಸ್ವರೂಪನಗರದ ಹಲವು ವೃದ್ಧರು ದಾಖಲಾಗುವುದರೊಂದಿಗೆ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿತ್ತು. ದಾಖಲಾದ ರೋಗಿಗಳಲ್ಲಿ ವಾಂತಿ, ಹೊಟ್ಟೆ ನೋವು, ಮೂತ್ರ ವಿಸರ್ಜನೆ ಸ್ಥಗಿತ ಮತ್ತು ತೀವ್ರ ರೀತಿಯ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು ಕಂಡುಬಂದಿದ್ದವು.

ವಿವಿಧೆಡೆ ದಾಳಿ

ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಡೈರಿಯ ಹಾಲಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಹಬ್ಬಗಳ ಸೀಸನ್ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲೂ ಆಹಾರ ಸುರಕ್ಷತಾ ಇಲಾಖೆ ಮತ್ತು ಎಫ್‌ಎಸ್‌ಎಸ್‌ಎಐ ಜಂಟಿಯಾಗಿ ಭಾರಿ ಕಾರ್ಯಾಚರಣೆ ನಡೆಸಿವೆ. ಕಾನ್ಪುರದಲ್ಲಿ ಸುಮಾರು 13,000 ಲೀಟರ್ ಕಲಬೆರಕೆ ಎಣ್ಣೆ ಮತ್ತು 1,000 ಕೆಜಿ ಬಣ್ಣ ಲೇಪಿತ ತ್ಯಾಜ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಕಲ್ಯಾಣಪುರದಲ್ಲಿ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 5.45 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ರಂಜಾನ್ ಮತ್ತು ಹೋಳಿ ಹಬ್ಬದ ಪ್ರಯುಕ್ತ ಲಕ್ನೋದ ಕೋಲ್ಡ್ ಸ್ಟೋರೇಜ್ ಮತ್ತು ಡೈರಿಗಳ ಮೇಲೆ ದಾಳಿ ನಡೆಸಿ 1,320 ಕೆಜಿ ಖರ್ಜೂರ ಹಾಗೂ 1,418 ಕೆಜಿ ಬಣ್ಣದ ಕಚ್ರಿ ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಲಿನ ಡೈರಿಗಳು, ಸ್ವೀಟ್ ಅಂಗಡಿಗಳು ಮತ್ತು ದಾಸ್ತಾನು ಮಳಿಗೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದ್ದು, ಕಲಬೆರಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಖಡಕ್‌ ಆಗಿ ಎಚ್ಚರಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/adulterated-milk-tragedy-in-andhra-pradesh-east-godavari-district-16-dead-raids-in-multiple-states-447957.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo