
Entertainment
oi-Manohara M
ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ “ಸೆರಗ ಸರ್ಸೆ” ಹಾಡು ಇತ್ತೀಚೆಗೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಹಾಗೂ ನಿರ್ಮಾಪಕಿ ಪುಷ್ಪ ಅರುಣ್ಕುಮಾರ್ ಅವರು ಪ್ರೇಮ್ ಪರವಾಗಿ ಮಾತನಾಡಿದ್ದಾರೆ.
ನಮ್ಮವರೇ ನಮ್ಮವರ ಕಾಲೆಳೆಯುವುದು ಸರಿಯಲ್ಲ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುಷ್ಪ ಅರುಣ್ಕುಮಾರ್, ಕನ್ನಡ ಚಿತ್ರರಂಗದ ಒಳಗಿನ ಈ ಬೆಳವಣಿಗೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ನಾವು ಕನ್ನಡಿಗರಾಗಿ ನಮ್ಮವರನ್ನೇ ಕಾಲೆಳೆಯುವುದು ಅಥವಾ ಬ್ಲೇಮ್ ಮಾಡುವುದು ಸರಿಯಲ್ಲ. ಚಿತ್ರರಂಗದಲ್ಲಿ ಒಬ್ಬರು ಬೆಳೆಯುತ್ತಿದ್ದರೆ ಅವರಿಗೆ ಪ್ರೋತ್ಸಾಹ ನೀಡಬೇಕು. ಅದನ್ನು ಬಿಟ್ಟು ಸಣ್ಣ ವಿಷಯ ಹಿಡಿದು ವಿವಾದ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕುಟುಂಬದವರನ್ನು ಎಳೆದು ತರಬೇಡಿ
ಪ್ರೇಮ್ ವಿವಾದದ ಬಗ್ಗೆ ನೇರವಾಗಿ ಮಾತನಾಡಿದ ಅವರು, “ಕಾನೂನು ಪ್ರಕಾರ ಆ ಹಾಡಿನಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ತೆಗೆಯಲಿ ಅಥವಾ ಪ್ರೇಮ್ ಅವರಿಗೆ ಒಪ್ಪಿಗೆ ಇದ್ದರೆ ಬದಲಾವಣೆ ಮಾಡಲಿ. ಆದರೆ, ಒಬ್ಬ ವ್ಯಕ್ತಿಯ ಸಿನಿಮಾ ಅಥವಾ ಕೆಲಸವನ್ನು ಟೀಕಿಸುವ ಭರದಲ್ಲಿ ಅವರ ತಾಯಿ, ಪತ್ನಿ ಅಥವಾ ಕುಟುಂಬದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಎಷ್ಟು ಸರಿ? ಇದು ಅತ್ಯಂತ ಕೆಟ್ಟ ಬೆಳವಣಿಗೆ” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪ್ರೇಮ್ ಸಾಧನೆ ನೆನಪಿಸಿದ ಪುಷ್ಪ
ನಿರ್ದೇಶಕ ಪ್ರೇಮ್ ಅವರ ಈ ಹಿಂದಿನ ಸಾಧನೆಗಳನ್ನು ಸ್ಮರಿಸಿದ ಅವರು, “ಪ್ರೇಮ್ ಎಷ್ಟೋ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ‘ಜೋಗಿ’ ಸಿನಿಮಾ ನೋಡಿದ ಮೇಲೆ ಸಾಕ್ಷಾತ್ ರಜನಿಕಾಂತ್ ಮತ್ತು ಅಣ್ಣಾವ್ರು (ರಾಜ್ಕುಮಾರ್) ಕಣ್ಣಲ್ಲಿ ನೀರು ಹಾಕಿದ್ದರಂತೆ. ಅಂತಹ ಭಾವನಾತ್ಮಕ ಸಿನಿಮಾಗಳನ್ನು ಕೊಟ್ಟ ಪ್ರತಿಭೆ ಅವರದ್ದು. ಅವರು ಮಾಡಿರುವ ಸಾವಿರಾರು ಒಳ್ಳೆಯ ಕೆಲಸಗಳ ಬಗ್ಗೆ ಯಾರೂ ಮಾತನಾಡಲ್ಲ, ಆದರೆ ಒಂದು ಸಣ್ಣ ತಪ್ಪು ಸಿಕ್ಕರೆ ಸಾಕು ಬೀದಿಯಲ್ಲಿ ನಿಂತು ಜಗಳ ಮಾಡುತ್ತಾರೆ. ನಮ್ಮವರು ನಮ್ಮನ್ನೇ ಹಾಳು ಮಾಡೋಕೆ ಹೋಗುತ್ತಿದ್ದಾರೆ ಎನ್ನುವುದು ಬೇಸರದ ಸಂಗತಿ” ಎಂದು ಚಿತ್ರರಂಗದ ಇಂದಿನ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ಈ ವಿವಾದದ ಕೇಂದ್ರಬಿಂದು ಈ ಹಾಡಿನ ಸಾಹಿತ್ಯ. “ಸೆರಗ ಸರ್ಸೆ” ಎಂಬ ಪದಬಳಕೆ ಮತ್ತು ಹಾಡಿನ ಉದ್ದಕ್ಕೂ ಬರುವ ಕೆಲವು ಸಾಲುಗಳು ಸ್ತ್ರೀ ವಿರೋಧಿಯಾಗಿವೆ ಮತ್ತು ಅಶ್ಲೀಲತೆಯಿಂದ ಕೂಡಿವೆ ಎಂದು ಅನೇಕರು ಆರೋಪ ಮಾಡಿದ್ದಾರೆ. ಮಹಿಳೆಯನ್ನು ಕೇವಲ ಭೋಗದ ವಸ್ತುವಾಗಿ ಬಿಂಬಿಸಲಾಗಿದೆ ಮತ್ತು ಸಂಪ್ರದಾಯಬದ್ಧವಾದ ‘ಸೆರಗು’ ಎಂಬ ಪದಕ್ಕೆ ಅಪಮಾನ ಮಾಡಲಾಗಿದೆ ಎಂದು ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಹಿಂದೆ ‘ಜೋಗಿ’ಯಂತಹ ತಾಯಿ ಸೆಂಟಿಮೆಂಟ್ ಸಿನಿಮಾಗಳನ್ನು ನೀಡಿದ ಪ್ರೇಮ್ ಅವರಿಂದ ಇಂತಹ ಸಾಹಿತ್ಯವನ್ನು ನಿರೀಕ್ಷಿಸಿರಲಿಲ್ಲ. ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾದ ನಿರ್ದೇಶಕರು ಈ ರೀತಿ ಕೀಳುಮಟ್ಟದ ಸಾಹಿತ್ಯಕ್ಕೆ ಸಮ್ಮತಿ ನೀಡಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kd-seraga-sarse-song-controversy-yash-mother-pushpa-arun-kumar-supports-director-prem-sandalwood-447977.html. xn--babytilbehr-pgb.com does not claim ownership of this content. All rights remain with the original publisher.
