
Karnataka
oi-Pragathi S
ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್ ಗೀಳು ವಿಪರೀತವಾಗಿದೆ. ಅದರಲ್ಲೂ ಶಾಲಾ ಮಕ್ಕಳ ಭವಿಷ್ಯದ ಮೇಲೆ ಸ್ಮಾರ್ಟ್ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ತೀವ್ರ ದುಷ್ಪರಿಣಾಮ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇದೀಗ ಮಹತ್ವದ ಹಾಗೂ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಶಾಲಾ ಮಕ್ಕಳ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ‘ಡಿಜಿಟಲ್ ಕರಡು ನೀತಿ’ಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಜಂಟಿಯಾಗಿ ಈ ಕರಡು ನೀತಿಯನ್ನು ಸಿದ್ಧಪಡಿಸಿವೆ. ಇತ್ತೀಚೆಗಷ್ಟೇ ಮಂಡನೆಯಾದ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿರ್ಬಂಧಿಸುವ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಈಗ ಈ ವಿಸ್ತೃತ ಕರಡು ನೀತಿ ಹೊರಬಿದ್ದಿದ್ದು, ಪೋಷಕರು ಮತ್ತು ಶಾಲೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಕರಡು ನೀತಿಯ ಪ್ರಮುಖ ಅಂಶಗಳು
ದಿನಕ್ಕೆ 1 ಗಂಟೆ ಮಾತ್ರ ಮೊಬೈಲ್: ಶಾಲಾ ಕೆಲಸಗಳು ಹಾಗೂ ಆನ್ಲೈನ್ ಅಭ್ಯಾಸವನ್ನು ಹೊರತುಪಡಿಸಿ, ಕೇವಲ ಮನರಂಜನೆಗಾಗಿ ಮಕ್ಕಳು ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ ಮೊಬೈಲ್ ಬಳಸಬೇಕು ಎಂದು ಈ ನೀತಿಯಲ್ಲಿ ಶಿಫಾರಸು ಮಾಡಲಾಗಿದೆ.
ರಾತ್ರಿ 7ರ ನಂತರ ‘ಟೆಕ್ ಕರ್ಫ್ಯೂ’: ಸಂಜೆ 7 ಗಂಟೆಯ ನಂತರ ಮಕ್ಕಳ ಮೊಬೈಲ್ನಲ್ಲಿ ಇಂಟರ್ನೆಟ್ ಡೇಟಾ ಸಂಪರ್ಕವನ್ನು ಡಿತಗೊಳಿಸಬೇಕು. ಅಲ್ಲದೆ, ರಾತ್ರಿ ನಿದ್ರೆಗೆ ಜಾರುವ ಒಂದು ಗಂಟೆ ಮುನ್ನ ಮನೆಯಲ್ಲಿ ಯಾವುದೇ ಡಿಜಿಟಲ್ ಸಾಧನಗಳನ್ನು ಬಳಸದಂತೆ ‘ಟೆಕ್ ಕರ್ಫ್ಯೂ’ ಜಾರಿಗೊಳಿಸಲು ಸೂಚಿಸಲಾಗಿದೆ.
ಸಾಮಾಜಿಕ ಜಾಲತಾಣ ನಿರ್ಬಂಧ: 16 ವರ್ಷದೊಳಗಿನ ಮಕ್ಕಳು ಫೇಸ್ಬುಕ್, ಇನ್ಸ್ಟಾಗ್ರಾಮ್ನಂತಹ ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ಕಠಿಣ ನಿರ್ಬಂಧ ಹೇರಲು ಸರ್ಕಾರ ಮುಂದಾಗಿದೆ. ನಕಲಿ ಖಾತೆಗಳನ್ನು ತಡೆಯಲು ಹಾಗೂ ವಯಸ್ಸನ್ನು ದೃಢೀಕರಿಸಲು ಆಧಾರ್ ಆಧಾರಿತ ಲಾಗಿನ್ ವ್ಯವಸ್ಥೆ ತರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಶಾಲೆಗಳು ಮತ್ತು ಪೋಷಕರ ಜವಾಬ್ದಾರಿ ಏನು?
ಈ ಕರಡು ನೀತಿ ಕೇವಲ ಸರ್ಕಾರಿ ಆದೇಶವಾಗಿರದೆ, ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರತಿಯೊಂದು ಶಾಲೆಯಲ್ಲೂ ʼಡಿಜಿಟಲ್ ವೆಲ್ನೆಸ್ ಸಮಿತಿʼ ರಚಿಸುವುದು ಕಡ್ಡಾಯವಾಗಿದೆ. ಈ ಸಮಿತಿಯಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಹಾಗೂ ಸೈಬರ್ ಕ್ರೈಂ ಅಧಿಕಾರಿಗಳು ಇರಲಿದ್ದಾರೆ. ಶಾಲಾ ಪಠ್ಯಕ್ರಮದಲ್ಲಿಯೇ ಡಿಜಿಟಲ್ ಸುರಕ್ಷತೆ ಮತ್ತು ಮೊಬೈಲ್ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಪಾಠಗಳನ್ನು ಕಡ್ಡಾಯವಾಗಿ ಸೇರಿಸಲು ಸೂಚಿಸಲಾಗಿದೆ.
ಮನೆಯಲ್ಲಿ ಪೋಷಕರು ಕೂಡ ‘ಟೆಕ್-ಫ್ರೀ ಜೋನ್’ (Tech-free zones) ಗಳನ್ನು ನಿರ್ಮಿಸಬೇಕು. ಅಂದರೆ ಮಲಗುವ ಕೋಣೆ, ಊಟದ ಕೋಣೆ ಮತ್ತು ವಾಹನಗಳಲ್ಲಿ ಮೊಬೈಲ್ ಬಳಸುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ವಾರಕ್ಕೊಮ್ಮೆ ಮನೆಯಲ್ಲಿ ‘ಡಿಜಿಟಲ್ ಫಾಸ್ಟಿಂಗ್’ ಅಂದರೆ ಮೊಬೈಲ್, ಟಿವಿ ಮುಟ್ಟದೆ ಇಡೀ ದಿನ ಕುಟುಂಬದೊಂದಿಗೆ, ಗೆಳೆಯರೊಂದಿಗೆ ಮುಖಾಮುಖಿಯಾಗಿ ಬೆರೆಯುವ ಅಭ್ಯಾಸ ರೂಢಿಸಿಕೊಳ್ಳಲು ಸಲಹೆ ನೀಡಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟಪಡಿಸಿರುವಂತೆ, ಇದು ಸದ್ಯ ಕರಡು ನೀತಿಯಾಗಿದ್ದು, ತಜ್ಞರು, ಪೋಷಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮುಂಬರುವ ಅಧಿವೇಶನದಲ್ಲಿ ಕಾಯ್ದೆಯ ರೂಪದಲ್ಲಿಯೇ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಇಂತಹದೊಂದು ಕ್ರಾಂತಿಕಾರಿ ನಿರ್ಧಾರಕ್ಕೆ ಮುಂದಾಗಿದ್ದು, ಇದು ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಒಂದು ಅತ್ಯುತ್ತಮ ಮಾದರಿಯಾಗುವ ನಿರೀಕ್ಷೆಯಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-drafts-new-digital-policy-1-hour-mobile-limit-and-social-media-ban-for-school-children-448159.html. xn--babytilbehr-pgb.com does not claim ownership of this content. All rights remain with the original publisher.
