
Sports
oi-Madhusudhan KR
RCB Yash Dayal: ಕಳೆದ ಬಾರಿ 2025ರಲ್ಲಿ ಆರ್ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಡಗೈ ವೇಗಿ ಯಶ್ ದಯಾಳ್, 19ನೇ ಸೀಸನ್ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಈ ಸುದ್ದಿಯನ್ನು ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಸ್ಆರ್ಎಚ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಆದರೆ, ದಯಾಳ್ ಅವರ ಮೇಲಿರುವ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಮತ್ತು ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳಿಂದಾಗಿ ಅವರು ತಂಡವನ್ನು ಸೇರಿಕೊಳ್ಳುತ್ತಿಲ್ಲ. “ಅವರು ಒಪ್ಪಂದದಲ್ಲಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ ಅವರು ಆಡುವುದು ತಂಡದ ಹಿತದೃಷ್ಟಿಯಿಂದ ಸರಿಯಲ್ಲ” ಎಂದು ಬೊಬಾಟ್ ತಿಳಿಸಿದ್ದಾರೆ.

ಗಂಭೀರ ಆರೋಪಗಳನ್ನ ಎದುರಿಸುತ್ತಿರುವ ದಯಾಳ್
* ಗಾಜಿಯಾಬಾದ್ ಪ್ರಕರಣ: 5 ವರ್ಷಗಳ ಕಾಲ ಮದುವೆಯಾಗುವುದಾಗಿ ನಂಬಿಸಿ ಶೋಷಣೆ ಮಾಡಿದ ಆರೋಪ. (ಇಲ್ಲಿ ಅಲಹಾಬಾದ್ ಹೈಕೋರ್ಟ್ ಬಂಧನಕ್ಕೆ ತಡೆ ನೀಡಿದೆ).
* ಜೈಪುರ ಪೋಕ್ಸೋ ಪ್ರಕರಣ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ. 2025ರ ಐಪಿಎಲ್ ವೇಳೆ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಜೈಪುರ ನ್ಯಾಯಾಲಯವು ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದೆ.
ಆರ್ಸಿಬಿ ಅಭಿಮಾನಿಗಳಿಗೆ ಮತ್ತೊಂದು ಬೇಸರದ ಸಂಗತಿಯೆಂದರೆ, ಯಶ್ ದಯಾಳ್ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಲು ಫ್ರಾಂಚೈಸಿಗೆ ಅವಕಾಶವಿಲ್ಲ. ಏಕೆಂದರೆ ದಯಾಳ್ ಇನ್ನೂ ತಂಡದೊಂದಿಗೆ ಒಪ್ಪಂದದಲ್ಲಿದ್ದಾರೆ. ಹೀಗಾಗಿ, ಲಭ್ಯವಿರುವ ಬೌಲರ್ಗಳನ್ನೇ ಬಳಸಿಕೊಂಡು ಆರ್ಸಿಬಿ ತನ್ನ ಅಭಿಯಾನ ಆರಂಭಿಸಬೇಕಿದೆ.
ಮೊ ಬೊಬಾಟ್ ಹೇಳಿದ್ದೇನು?
ಯಶ್ ದಯಾಳ್ ಪ್ರಸ್ತುತ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವಿಷಯದಲ್ಲಿ ನಾವು ಅವರಿಗೆ ಮೊದಲಿನಿಂದಲೂ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದೇವೆ. ಆಟಗಾರರನ್ನು ಉಳಿಸಿಕೊಳ್ಳುವ ಅಥವಾ ಬಿಡುಗಡೆ ಮಾಡುವ ಅವಕಾಶವಿದ್ದಾಗ, ನಾವು ಅವರ ಮೇಲೆ ನಂಬಿಕೆಯಿಟ್ಟು ಅವರನ್ನು ತಂಡದಲ್ಲೇ ಉಳಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ಮೊ ಬೊಬಾಟ್ ಹೇಳಿದ್ದಾರೆ.
“ನಾವು ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದ್ದೆವು. ಅವರು ಸದ್ಯ ಫ್ರಾಂಚೈಸಿಯೊಂದಿಗೆ ಒಪ್ಪಂದದಲ್ಲಿದ್ದಾರೆ ಮತ್ತು ಮುಂದಿನ ಅಲ್ಪಾವಧಿಯವರೆಗೂ ಅವರು ಒಪ್ಪಂದದ ಅಡಿಯಲ್ಲೇ ಇರಲಿದ್ದಾರೆ. ನಾವು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಇಂದು ಬೆಳಿಗ್ಗೆ ಕೂಡ ನಾನು ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ತಂಡವನ್ನು ಸೇರಿಕೊಳ್ಳುವುದು ಅವರ ಹಿತದೃಷ್ಟಿಯಿಂದಾಗಲಿ ಅಥವಾ ಫ್ರಾಂಚೈಸಿಯ ಹಿತದೃಷ್ಟಿಯಿಂದಾಗಲಿ ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ,” ಎಂದು ತಿಳಿಸಿದ್ದಾರೆ.
“ನಮ್ಮ ಬೆಂಬಲ ಅವರಿಗೆ ಯಾವಾಗಲೂ ಇರುತ್ತದೆ ಮತ್ತು ಅವರು ಫ್ರಾಂಚೈಸಿಯೊಂದಿಗೆ ಒಪ್ಪಂದದಲ್ಲೇ ಮುಂದುವರಿಯಲಿದ್ದಾರೆ. ಅವರು ಎದುರಿಸುತ್ತಿರುವ ಈ ವೈಯಕ್ತಿಕ ಸನ್ನಿವೇಶದ ಸಮಯದಲ್ಲಿ ನಾವು ಅವರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿರುತ್ತೇವೆ,” ಎಂದು ಮೊ ಬೊಬಾಟ್ ಅವರು ತಿಳಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/yash-dayal-ruled-out-of-ipl-2026-as-royal-challengers-bengaluru-confirm-absence-ahead-of-opener-448203.html. xn--babytilbehr-pgb.com does not claim ownership of this content. All rights remain with the original publisher.
