
Karnataka
oi-Shankrappa Parangi
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಗಿದು ಐದು ತಿಂಗಳು ಕಳೆಯಿತು. ಈ ಹಬ್ಬದ ಆಚರನೆಗಾಗಿ ಖರ್ಚು ಮಾಡಿದ 30 ಕೋಟಿ ರೂಪಾಯಿಗಳ ಲೆಕ್ಕ ನೀಡಲು ಈ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ಇದರರ್ಥವೇನು?. ಖರ್ಚು ವೆಚ್ಚದ ಲೆಕ್ಕ ಕೊಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
ಇನ್ನೈದಾರು ತಿಂಗಳು ಕಳೆದರೆ ಪ್ರಸಕ್ತ ವರ್ಷ 2026ರ ಮೈಸೂರು ದಸರಾ ಸಿದ್ಧತೆಗಳು ಆರಂಭವಾಗುತ್ತವೆ. ಆದರೆ 2025ರ ಮೈಸೂರು ದಸರಾಗಾಗಿ ಮಾಡಿದ್ದ ಖರ್ಚು-ವೆಚ್ಚಗಳ ಬಗ್ಗೆ ಜಿಲ್ಲಾಡಳಿತದ ಬಳಿ ಸರಿಯಾದ ಉತ್ತರವಿಲ್ಲ. ಈ ವಿಳಂಬ, ಹಿಂಜರಿಕೆ ನೋಡಿದರೆ ಭ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಎರಡು ತಿಂಗಳಲ್ಲಿ ನೀಡಬೇಕಿದ್ದ ಲೆಕ್ಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದಸರಾ ಹಬ್ಬದ ಲೆಕ್ಕ ಖರ್ಚು ವೆಚ್ಚದ ಕೊಡಲು ಇಷ್ಟು ಹಿಂಜರಿಕೆ ಏಕೆ? ಈ ಹಿಂದೆ ದಸರಾ ಮುಗಿದ ಒಂದೆರಡು ತಿಂಗಳಲ್ಲಿ ಲೆಕ್ಕ ನೀಡಲಾಗುತ್ತಿತ್ತು. ಈಗ 5 ತಿಂಗಳಾದರೂ ಅಧಿಕಾರಿಗಳು ಇನ್ನೂ “ಲೆಕ್ಕ ಹಾಕುತ್ತಿದ್ದೇವೆ” ಎಂಬ ಕುಂಟು ನೆಪ ಹೇಳುತ್ತಿದ್ದೀರಿ. ಈ ಮೂಲಕ ಯಾರನ್ನು ರಕ್ಷಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
5 ಲಕ್ಷದ ಒಪ್ಪಂದ ಮಾಡಿಕೊಂಡು ಕೇವಲ 1.95 ಲಕ್ಷ ನೀಡಿ ಕಲಾವಿದರನ್ನು ಬೀದಿಗೆ ತಳ್ಳುತ್ತಿರುವುದು ಸರಿಯೇ? ಕಲಾವಿದರ ಶ್ರಮದ ಹಣದಲ್ಲಿ “ಕಮಿಷನ್” ಆಟ ನಡೆಯುತ್ತಿದೆಯೇ? ಸಾರ್ವಜನಿಕ ಹಣಕ್ಕೆ ಹೊಣೆಗಾರಿಕೆ ಇಲ್ಲವೇ? ಜನರ ತೆರಿಗೆ ಹಣ 30 ಕೋಟಿ ರೂಪಾಯಿಗಳ ಲೆಕ್ಕವನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ಯಾಕೆ ಭಯ? ಎಂದು ಕಿಡಿ ಕಾರಿದರು.
ಮೈಸೂರು ದಸರಾ ಕೇವಲ ಹಬ್ಬವಲ್ಲ, ಅದು ನಮ್ಮ ನಾಡಿನ ಸಾಂಸ್ಕೃತಿಕ ಹೆಮ್ಮೆ. ಅದನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಬೇಡಿ. ಸರ್ಕಾರ ಕೂಡಲೇ ಪಾರದರ್ಶಕವಾಗಿ ಪೂರ್ಣ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡಬೇಕು ಮತ್ತು ಬಾಕಿ ಇರುವ ಕಲಾವಿದರ ಸಂಭಾವನೆಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವೇತನ ಸಿಗದೇ ಗ್ರಂಥಾಪಾಲಕಿ ಸಾವು
ಕಳೆದ ಅಕ್ಟೋಬರ್ ನಲ್ಲಿ ಸಕಾಲಕ್ಕೆ ವೇತನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ವ್ಯವಸ್ಥೆಗೆ ಬೇಸತ್ತು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರು
ನೇಣಿಗೆ ಶರಣಾಗಿದ್ದರು. ಇಂತಹ ಹೃದಯವಿದ್ರಾವಕ ಘಟನೆ ನಡೆದ ಮೇಲೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರಿವು ಕೇಂದ್ರಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಕಳೆದ 16 ತಿಂಗಳಿಂದ 5,884 ಗ್ರಂಥಪಾಲಕರಿಗೆ ಪೂರ್ಣ ವೇತನ ನೀಡದೆ ಅವರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದು ಅವರು ಟೀಕಿಸಿದರು.
ಸಿದ್ದರಾಮಯ್ಯನವರೇ ತಮ್ಮ ಪಾಪರ್ ಸರ್ಕಾರದ ದಿವಾಳಿತನಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು ಸ್ವಾಮಿ?/ ಈ ಕೊಡಲೇ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಬಾಕಿ ವೇತನ ಬಿಡುಗಡೆ ಮಾಡಿ. ಇನ್ನು ಮುಂದೆ ಸಕಾಲಕ್ಕೆ ಪೂರ್ತಿ ಸಂಬಳ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/r-ashoka-slams-siddaramaiah-govt-over-missing-rs-30-crore-mysuru-dasara-2025-accounts-448257.html. xn--babytilbehr-pgb.com does not claim ownership of this content. All rights remain with the original publisher.
