
Karnataka
oi-Pragathi S
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸುತ್ತಿರುವ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಗಳು ಬರದಿಂದ ಸಾಗುತ್ತಿವೆ. ಇಂದು (ಮಾರ್ಚ್ 25, 2026) ರಾಜ್ಯಾದ್ಯಂತ ಸಾವಿರಾರು ಪರೀಕ್ಷಾ ಕೇಂದ್ರಗಳಲ್ಲಿ ‘ದ್ವಿತೀಯ ಭಾಷೆ ಇಂಗ್ಲೀಷ್’ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ 10:00 ಗಂಟೆಗೆ ಆರಂಭವಾದ ಪರೀಕ್ಷೆ ಮಧ್ಯಾಹ್ನ 1:15ರವರೆಗೆ ನಡೆಯಿತು. ಹಾಗಾದರೆ ಈ ಬಾರಿಯ ಇಂಗ್ಲೀಷ್ ಪ್ರಶ್ನೆಪತ್ರಿಕೆ ಹೇಗಿತ್ತು? ಯಾವ ವಿಭಾಗ ಕಠಿಣವಾಗಿತ್ತು? ಹೆಚ್ಚು ಅಂಕ ಗಳಿಸಲು ಸಾಧ್ಯವೇ? ಎಂಬ ಬಗ್ಗೆ ವಿದ್ಯಾರ್ಥಿಗಳು ಹಾಗೂ ವಿಷಯ ತಜ್ಞರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
ಒಟ್ಟಾರೆ ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ಅಂಕ ಹಂಚಿಕೆ
ಈ ಬಾರಿಯ ದ್ವಿತೀಯ ಭಾಷೆ ಇಂಗ್ಲೀಷ್ ಪ್ರಶ್ನೆಪತ್ರಿಕೆಯು ಒಟ್ಟು 80 ಅಂಕಗಳಿಗೆ ಸೀಮಿತವಾಗಿತ್ತು (ಉಳಿದ 20 ಅಂಕಗಳು ಶಾಲಾ ಮಟ್ಟದ ಆಂತರಿಕ ಮೌಲ್ಯಮಾಪನಕ್ಕೆ ಸೇರಿವೆ). ವಿದ್ಯಾರ್ಥಿಗಳು ಒಟ್ಟು 38 ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಮಂಡಳಿಯು ಈ ಹಿಂದೆ ಬಿಡುಗಡೆ ಮಾಡಿದ್ದ ಅಧಿಕೃತ ಬ್ಲೂಪ್ರಿಂಟ್ ಪ್ರಕಾರವೇ ಪ್ರಶ್ನೆಗಳನ್ನು ಕೇಳಲಾಗಿದ್ದು, ಯಾವುದೇ ಗೊಂದಲಗಳಿಗೆ ಜಾಗವೇ ಇರಲಿಲ್ಲ.

ಪ್ರಶ್ನೆಪತ್ರಿಕೆಯನ್ನು ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿತ್ತು.
1. ಗದ್ಯ ವಿಭಾಗ (Prose): 20 ಅಂಕಗಳು (8 ಪ್ರಶ್ನೆಗಳು)
2. ಪದ್ಯ ವಿಭಾಗ (Poetry): 16 ಅಂಕಗಳು (8 ಪ್ರಶ್ನೆಗಳು)
3. ಪೂರಕ ಓದು (Supplementary Reading): 4 ಅಂಕಗಳು (2 ಪ್ರಶ್ನೆಗಳು)
4. ವ್ಯಾಕರಣ ಮತ್ತು ಬರವಣಿಗೆ (Grammar and Composition): ಅತಿ ಹೆಚ್ಚು ಅಂದರೆ 40 ಅಂಕಗಳನ್ನು ಈ ವಿಭಾಗಕ್ಕೆ ಮೀಸಲಿಡಲಾಗಿತ್ತು.
ಪ್ರಶ್ನೆಗಳ ಮಾದರಿಯನ್ನು ಗಮನಿಸುವುದಾದರೆ,
1 ಅಂಕದ 4 ಬಹುಆಯ್ಕೆ ಪ್ರಶ್ನೆಗಳು (MCQs)
1 ಅಂಕದ 12 ಸಂಕ್ಷಿಪ್ತ ಉತ್ತರದ ಪ್ರಶ್ನೆಗಳು
2 ಅಂಕದ 8 ಪ್ರಶ್ನೆಗಳು
3 ಅಂಕದ 9 ಪ್ರಶ್ನೆಗಳು
4 ಅಂಕದ 3 ಪ್ರಶ್ನೆಗಳು (ಪ್ರಬಂಧ, ಸಾರಾಂಶ ಸೇರಿ)
5 ಅಂಕದ 1 ಪತ್ರ ಲೇಖನ (Letter Writing)ವನ್ನು ಪ್ರಶ್ನೆ ಪತ್ರಿಕೆ ಒಳಗೊಂಡಿತ್ತು.
ವ್ಯಾಕರಣ ವಿಭಾಗವೇ ನಿರ್ಣಾಯಕ
ಶಿಕ್ಷಣ ತಜ್ಞರ ವಿಶ್ಲೇಷಣೆಯ ಪ್ರಕಾರ, ಒಟ್ಟು 80 ಅಂಕಗಳಲ್ಲಿ ಭರ್ತಿ 40 ಅಂಕಗಳು (ಶೇ. 50ರಷ್ಟು) ಕೇವಲ ವ್ಯಾಕರಣ ಹಾಗೂ ಬರವಣಿಗೆ ಕೌಶಲ್ಯದಿಂದಲೇ ಬಂದಿವೆ. ಇದರಲ್ಲಿ ಎಡಿಟಿಂಗ್, ಪ್ರೊಫೈಲ್ ರೈಟಿಂಗ್, ಚಿತ್ರ ನೋಡಿ ವಿವರಿಸುವುದು, ಕಥೆ ಬರೆಯುವುದು, ಪ್ರಬಂಧ, ಪತ್ರ ಲೇಖನ ಹಾಗೂ ಅಪರಿಚಿತ ಗದ್ಯ ಸೇರಿವೆ. ಈ ವಿಭಾಗದಲ್ಲಿ ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸುಲಭವಾಗಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಿದೆ.
ವಿದ್ಯಾರ್ಥಿಗಳ ಪ್ರತಿಕ್ರಿಯೆ
ಪರೀಕ್ಷೆ ಮುಗಿಸಿ ಹೊರಬಂದ ಬಹುತೇಕ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ‘ಸುಲಭದಿಂದ ಸಾಧಾರಣ’ ಮಟ್ಟದಲ್ಲಿತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕದೊಳಗಿನ ಪ್ರಶ್ನೆಗಳು ಬಹಳ ನೇರವಾಗಿದ್ದವು. ಗದ್ಯ ಮತ್ತು ಪದ್ಯ ವಿಭಾಗದಿಂದ (ಉದಾಹರಣೆಗೆ ‘A Hero’, ‘There is a Girl by the Tracks!’, ‘Quality of Mercy’) ನಿರೀಕ್ಷಿತ ಪ್ರಶ್ನೆಗಳೇ ಬಂದಿದ್ದವು. ಆದರೆ, ಕೆಲವು ವಿದ್ಯಾರ್ಥಿಗಳಿಗೆ ವ್ಯಾಕರಣದ (Grammar) ವಿಭಾಗದಲ್ಲಿನ ಕೆಲವೊಂದು ಅನ್ವಯಿಕ ಪ್ರಶ್ನೆಗಳು ತುಸು ಯೋಚಿಸುವಂತೆ ಮಾಡಿವೆ. ಒಟ್ಟಾರೆಯಾಗಿ, ಕೊಟ್ಟಿರುವ 3 ಗಂಟೆಗಳ ಕಾಲಾವಧಿಯಲ್ಲಿ ಪೂರ್ಣ ಪತ್ರಿಕೆಯನ್ನು ಬರೆದು ಮುಗಿಸಲು ಸಾಧ್ಯವಾಯಿತು ಎಂಬುದು ಪರೀಕ್ಷಾರ್ಥಿಗಳ ಮಾತು.
ಮುಂದಿನ ಪರೀಕ್ಷೆ ಯಾವುದು?
ಇಂಗ್ಲೀಷ್ ಪರೀಕ್ಷೆ ಯಶಸ್ವಿಯಾಗಿ ಮುಗಿದಿದ್ದು, ವಿದ್ಯಾರ್ಥಿಗಳು ಈಗ ತಮ್ಮ ಮುಂದಿನ ಪ್ರಮುಖ ಪರೀಕ್ಷೆಗಳತ್ತ ಗಮನ ಹರಿಸಬೇಕಿದೆ. ಮಾರ್ಚ್ 28 ರಂದು ಶನಿವಾರ ಗಣಿತ (Mathematics) ಹಾಗೂ ಸಮಾಜಶಾಸ್ತ್ರ (Sociology) ಪರೀಕ್ಷೆಗಳು ನಡೆಯಲಿವೆ. ಗಣಿತ ಪರೀಕ್ಷೆಗೆ ಹೆಚ್ಚಿನ ಅಭ್ಯಾಸದ ಅಗತ್ಯವಿರುವುದರಿಂದ, ವಿದ್ಯಾರ್ಥಿಗಳು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವತ್ತ ಹಾಗೂ ಸೂತ್ರಗಳನ್ನು ಕರಗತ ಮಾಡಿಕೊಳ್ಳುವತ್ತ ಗಮನ ಹರಿಸುವುದು ಸೂಕ್ತ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-sslc-english-exam-analysis-2026-students-find-paper-easy-to-moderate-check-review-here-448293.html. xn--babytilbehr-pgb.com does not claim ownership of this content. All rights remain with the original publisher.
